ಗುಂಡ್ಲುಪೇಟೆ: ಕೃಷಿ ಇಲಾಖೆಯಲ್ಲಿ ದೊರಕುವ ಮಾಹಿತಿ ಹಾಗೂ ಸವಲತ್ತುಗಳನ್ನು ಸದ್ಬಳಕೆ ಮಾಡಿ ಕೊಂಡು ರೈತರು ಅಭಿವೃದ್ಧಿ ಹೊಂದಬೇಕು ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ಹೇಳಿದರು.ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಕೃಷಿ ಇಲಾಖೆಯ ಸಮಗ್ರ ಕೃಷಿ ಅಭಿಯಾನ ರಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತಾಲೂಕಿನ 4 ಹೋಬಳಿಗಳಲ್ಲಿಯೂ ನಾಲ್ಕು ದಿನಗಳ ಕಾಲ ಸಂಚರಿಸುವ ಈ ಕೃಷಿ ಅಭಿಯಾನ ರಥವು ಆಧುನಿಕ ಹಾಗೂ ಸುಧಾರಿತ ಕೃಷಿ ಧಾನ್ಯಗಳನ್ನು ಮತ್ತು ಇಲಾಖೆಯಿಂದ ದೊರಕುವ ಸವಲತ್ತುಗಳ ಬಗ್ಗೆ ಸಮಗ್ರ ಮಾಹಿತಿ ನೀಡಲಿದೆ. ರಾಸಾಯನಿಕ ಗೊಬ್ಬರಗಳ ಬಳಕೆ ಬದಲು ಸಾವಯವ ಗೊಬ್ಬರಗಳ ಬಳಕೆಗೆ ಆದ್ಯತೆ ನೀಡಿ ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಬೆಳೆ ಬೆಳೆಯಲು ಮುಂದಾಗಬೇಕು ಎಂದು ರೈತರಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಪಿ.ಗಿರೀಶ್, ಮಂಡಲಾಧ್ಯಕ್ಷ ಎನ್.ಮಲ್ಲೇಶ್, ಪುರಸಭೆ ಸದಸ್ಯ ಎಸ್. ಗೋವಿಂದರಾಜನ್, ಮುಖಂಡರಾದ ಸಿ.ಹುಚ್ಚೇಗೌಡ, ದೊಡ್ಡ ಹುಂಡಿ ಜಗದೀಶ್, ಸಿ.ಮಹದೇವಪ್ರಸಾದ್, ಸಿದ್ದರಾಮಪ್ಪ, ರೇವಣ್ಣ, ಪ್ರಭಾಕರ್ ಇತರರು ಇದ್ದರು.