ತ್ಯಾಜ್ಯ ಸೇವಿಸಿ ಎರಡು ಸೀಮೆ ಹಸು ಸಾವು
ಹಾಸನ

ತ್ಯಾಜ್ಯ ಸೇವಿಸಿ ಎರಡು ಸೀಮೆ ಹಸು ಸಾವು

May 22, 2019

ಅರಸೀಕೆರೆ: ತ್ಯಾಜ್ಯ ಸೇವಿಸಿ ಎರಡು ಸಿಂಧಿ ಹಸುಗಳು ಸಾವನ್ನಪ್ಪಿರುವ ಘಟನೆ ನಗರದ ಎಪಿಎಂಸಿ ಪ್ರಾಂಗಣದಲ್ಲಿ ನಡೆದಿದೆ.

ಇಲ್ಲಿನ ಬಸವೇಶ್ವರನಗರದ ನಿವಾಸಿ ಚಂದ್ರಮ್ಮ ಹಾಗೂ ಸುಭಾಷ್‍ನಗರದ ನಿವಾಸಿ ಮಂಜಣ್ಣ ಎಂಬುವರಿಗೆ ಸೇರಿದ ಎರಡು ಸೀಮೆ ಹಸುಗಳು ಸಾವನ್ನಪ್ಪಿದ್ದು, ಇದರಿಂದ ಆಕ್ರೋಶಗೊಂಡ ಜಾನುವಾರುಗಳ ಮಾಲೀಕರು ಹಾಗೂ ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಮತ್ತಿತರರು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದರು. ಗುತ್ತಿಗೆದಾರರು ಹಾಗೂ ಎ.ಪಿ.ಎಂ.ಸಿ. ಆಡಳಿತ ವರ್ಗದ ನಿರ್ಲಕ್ಷ್ಯದ ವಿರುದ್ಧ ಘೋಷಣೆ ಕೂಗಿದರು.

ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಮಾತನಾಡಿ, ಕಳೆದ ಮೂರು ತಿಂಗಳಲ್ಲಿ ಸುಮಾರು 30 ಹಸುಗಳು, 80ಕ್ಕೂ ಹೆಚ್ಚು ಕುರಿ ಹಾಗೂ ಮೇಕೆಗಳು ಸಾವನ್ನಪ್ಪಿದೆ. ಇದಕ್ಕೆ ಕಾರಣ ಏನು ಎಂಬ ಬಗ್ಗೆ ಕೃಷಿ ಉತ್ಪನ್ನ ಮಾರುಕಟ್ಟೆಯ ಆಡಳಿತ ಮಂಡಳಿ ಅಥವಾ ಸಿಬ್ಬಂದಿ ವರ್ಗ ಗಮನ ಹರಿಸದೇ ನಿರ್ಲಕ್ಷ್ಯವಹಿಸಿದ್ದಾರೆ. ಇದರಿಂದ ರೈತರು ಹಾಗೂ ಬಡ ಜನತೆಯ ಜೀವನಾಧಾರವಾಗಿದ್ದ ಜಾನುವಾರುಗ¼ನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.

ಹತ್ತಾರು ಎಕರೆ ಸ್ಥಳದಲ್ಲಿ ವಿಸ್ತಾರವಾಗಿರುವ ಕೃಷಿ ಉತ್ಪನ್ನ ಮಾರುಕಟ್ಟೆಯ ಆವರಣವನ್ನು ಸ್ವಚ್ಛವಾಗಿಡಲು ಖಾಸಗಿಯವರಿಗೆ ಸಮಿತಿ ಗುತ್ತಿಗೆ ನೀಡಿದೆ. ಅಲ್ಲದೇ ಗುತ್ತಿಗೆದಾರರಿಗೆ ಮಾಸಿಕ ಲಕ್ಷಾಂತರ ಹಣವನ್ನು ಸಹ ನೀಡುತ್ತಿದೆ. ಆದರೆ, ಎಪಿಎಂಸಿ ಆವರಣದಲ್ಲಿ ನೈರ್ಮಲ್ಯತೆಯ ಆಗರವಾಗಿದೆ. ಮೇವು ಇಲ್ಲದೇ ಜಾನುವಾರುಗಳು ಇಲ್ಲಿ ಕಲುಷಿತ ಮೇವುಗ¼ನ್ನು ಸೇವನೆ ಮಾಡಿ ತಮ್ಮ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುತ್ತಿದೆ. ಈ ಬಗ್ಗೆ ಅರಿವಿದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮೌನದಿಂದಿರುವುದು ಏಕೆ ಎಂದು ಪ್ರಶ್ನಿಸಿದ ಅವರು, ಜಾನುವಾರುಗಳನ್ನು ಕಳೆದುಕೊಂಡ ಮಾಲೀಕರಿಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸೂಕ್ತ ಪರಿಹಾರ ನೀಡಬೇಕು ಹಾಗೂ ಸ್ವಚ್ಛತೆಯ ಗುತ್ತಿಗೆ ಪಡೆದಿರುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇತ್ತೀಚೆಗೆ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಜಾನುವಾರುಗಳು ಹಸು ನೀಗುತ್ತಿರುವುದು ನನ್ನ ಗಮನಕ್ಕೂ ಬಂದಿದ್ದು ಈ ಸಂಬಂಧ ಸಮಿತಿ ಹಾಗೂ ಸಿಬ್ಬಂದಿ ವರ್ಗದ ಸಭೆ ಕರೆದು ಚರ್ಚಿಸಿ ಕ್ರಮಕೈಗೊಳ್ಳಲಾಗುವುದು -ಜೈರಾಮ್, ಅಧ್ಯಕ್ಷರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಅರಸೀಕೆರೆ

Translate »