ವಿಜಯನಗರ ಶೂಟೌಟ್ ಪ್ರಕರಣದ ಹಿನ್ನೆಲೆ: ರೌಡಿಶೀಟರ್ ಬಳಿ ಇತ್ತು ಪರವಾನಗಿ ಪಡೆದ ಗನ್
ಮೈಸೂರು

ವಿಜಯನಗರ ಶೂಟೌಟ್ ಪ್ರಕರಣದ ಹಿನ್ನೆಲೆ: ರೌಡಿಶೀಟರ್ ಬಳಿ ಇತ್ತು ಪರವಾನಗಿ ಪಡೆದ ಗನ್

July 18, 2018

ಮೈಸೂರು: ಮೈಸೂರಿನ ಪೊಲೀಸ್ ಠಾಣೆಯೊಂದರಲ್ಲಿ ರೌಡಿಶೀಟ್ ತೆರೆದಿರುವ ವ್ಯಕ್ತಿ, ಮತ್ತೊಂದು ಠಾಣೆಯಿಂದ ಎನ್‍ಓಸಿ ಪಡೆದು, ಗನ್ ಲೈಸೆನ್ಸ್ ಪಡೆದಿದ್ದ ವಿಷಯ ಇದೀಗ ಬೆಳಕಿಗೆ ಬಂದಿದೆ.

ಇತ್ತೀಚೆಗೆ ವಿಜಯನಗರ 4ನೇ ಹಂತದಲ್ಲಿ ಗುಂಡು ಹಾರಿಸಿ, ಟ್ಯಾಕ್ಸಿ ಚಾಲಕನಿಗೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಬಂಧಿತನಾಗಿರುವ ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಸತೀಶ್ ಗೌಡ ಕೆಆರ್ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದರೂ ಅದನ್ನು ಮರೆಮಾಚಿ ಕುವೆಂಪುನಗರ ಠಾಣೆಯಿಂದ ಎನ್‍ಓಸಿ ಪಡೆದು ನಗರ ಪೊಲೀಸ್ ಕಮೀಷ್ನರ್ ಕಚೇರಿಯಲ್ಲಿ ಗನ್ ಲೈಸೆನ್ಸ್ ಗಿಟ್ಟಿಸಿದ್ದಾರೆ ಎಂಬುದು ತನಿಖೆಯಿಂದ ತಿಳಿದು ಬಂದಿದೆ.

ಇಂತಹ ಅಚಾತುರ್ಯ ಮರುಕಳಿಸದಿರಲು ಮೈಸೂರು ನಗರ ಕಮೀಷ್ನರ್ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ ಅವರು ಮೈಸೂರು ನಗರದಲ್ಲಿರುವ ಗನ್ ಲೈಸೆನ್ಸ್ ಹೊಂದಿರುವವರ ಹಿನ್ನೆಲೆ, ಚಾರಿತ್ರ್ಯ ಹಾಗೂ ನಡವಳಿಕೆಗಳ ಬಗ್ಗೆ ಪರಿಶೀಲಿಸಿ, ಎರಡು ವಾರದೊಳಗಾಗಿ ವರದಿ ನೀಡುವಂತೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಎನ್.ವಿಷ್ಣುವರ್ಧನ್ ಅವರಿಗೆ ಸೂಚನೆ ನೀಡಿದ್ದಾರೆ. ಗನ್‍ಗಳನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಪ್ಪಿಸಲು ಗನ್ ಲೈಸೆನ್ಸ್‍ದಾರರ ಹೆಸರು, ವಿಳಾಸ, ವೃತ್ತಿ, ಹಿನ್ನೆಲೆ, ಇತಿಹಾಸ, ಪ್ರಸ್ತುತ ಅವರ ಚಲನ-ವಲನಗಳ ಬಗ್ಗೆ ಪರಿಶೀಲಿಸಿ ಪೂರ್ಣ ಮಾಹಿತಿಯೊಂದಿಗೆ ಸಮಗ್ರ ವರದಿ ನೀಡುವಂತೆ ನಿರ್ದೇಶನ ನೀಡಿದ್ದೇನೆ ಎಂದು ಪೊಲೀಸ್ ಕಮೀಷ್ನರ್ ಡಾ.ಸುಬ್ರಹ್ಮಣ್ಯೇಶ್ವರರಾವ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ಈ ಹಿನ್ನೆಲೆಯಲ್ಲಿ ತಾವು ವಿಶೇಷ ಕಾರ್ಯಾಚರಣೆ ಆರಂಭಿಸಿದ್ದು, ಮೈಸೂರು ನಗರದ ಎಲ್ಲಾ ಪೊಲೀಸ್ ಠಾಣೆಗಳಿಗೆ ಪತ್ರ ಬರೆದು ತಮ್ಮ ವ್ಯಾಪ್ತಿಯ ಗನ್ ಲೈಸೆನ್ಸ್‍ದಾರರ ಚಲನ-ವಲನ, ಅವರ ವಿರುದ್ಧ ಯಾವುದಾದರು ಪ್ರಕರಣಗಳು ದಾಖಲಾಗಿವೆಯೇ ಎಂಬುದರ ಬಗ್ಗೆ ಪರಿಶೀಲಿಸಿ ಮಾಹಿತಿ ನೀಡುವಂತೆ ಆಯಾ ಇನ್ಸ್‍ಪೆಕ್ಟರ್ ಗಳಿಗೆ ತಿಳಿಸಿದ್ದೇನೆ ಎಂದು ಡಿಸಿಪಿ ಎನ್.ವಿಷ್ಣುವರ್ಧನ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು. ಮೈಸೂರು ನಗರದಲ್ಲಿ ಒಟ್ಟು 1098 ಗನ್ ಲೈಸೆನ್ಸ್ ನೀಡಲಾಗಿದ್ದು, 1959ರ ಶಸ್ತ್ರಾಸ್ತ್ರ ಕಾಯ್ದೆಯ ಷರತ್ತು ಉಲ್ಲಂಘನೆಯಾಗಿದೆಯೇ ಎಂಬುದನ್ನು ಪರಿಶೀಲಿಸಿ, ನಿಯಮ ಬಾಹಿರವಾಗಿ ಪಡೆದಿದ್ದರೆ ಅಂತಹವರ ಲೈಸೆನ್ಸ್ ರದ್ದು ಮಾಡಲು ಕಮೀಷ್ನರ್ ಕ್ರಮ ವಹಿಸುತ್ತಾರೆ ಎಂದು ವಿಷ್ಣುವರ್ಧನ್ ತಿಳಿಸಿದರು.

ಶೂಟೌಟ್ ಪ್ರಕರಣದಲ್ಲಿ ಸತೀಶ್ ಗೌಡ ವಿರುದ್ಧ ಕಾವೇರಿ ಗಲಾಟೆ ಸಂದರ್ಭ ಕೆಆರ್ ಪೊಲೀಸ್ ಠಾಣೆಯಲ್ಲಿ ರೌಡಿಶೀಟ್ ತೆರೆಯಲಾಗಿದೆಯಾದರೂ ಆತನಿಗೆ ಗನ್ ಲೈಸೆನ್ಸ್ ನೀಡಲಾಗಿದೆ. ರೌಡಿಶೀಟ್ ಓಪನ್ ಆಗುತ್ತಿದ್ದಂತೆಯೇ ಸಂಬಂಧಪಟ್ಟ ಠಾಣಾ ಇನ್ಸ್‍ಪೆಕ್ಟರ್ ಮಾಹಿತಿ ಒದಗಿಸಬೇಕಿತ್ತು. ಈ ಲೋಪದ ಬಗ್ಗೆಯೂ ತನಿಖೆ ನಡೆಯಲಿದೆ ಎಂದು ತಿಳಿಸಿದರು. ಒಂದು ವೇಳೆ ಪೊಲೀಸ್ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದ್ದರೆ ವಿಜಯನಗರ 4ನೇ ಹಂತದ ಶೂಟೌಟ್ ಪ್ರಕರಣ ನಡೆಯುತ್ತಿರಲಿಲ್ಲ. ಅಪರಾಧ ಹಿನ್ನೆಲೆ ಹೊಂದಿ ರುವವರಿಗೆ ಗನ್ ಲೈಸೆನ್ಸ್ ನವೀಕರಿಸಿಕೊಡುವುದು ಕಾನೂನಿಗೆ ವಿರುದ್ಧವಾದುದು ಎಂದು ತಿಳಿಸಿದರು.

Translate »