ಉಪ ಸಮರ: ಶನಿವಾರ ಮತದಾನಕ್ಕೆ ಸಿದ್ಧತೆ
ಮೈಸೂರು

ಉಪ ಸಮರ: ಶನಿವಾರ ಮತದಾನಕ್ಕೆ ಸಿದ್ಧತೆ

November 1, 2018

ಬೆಂಗಳೂರು: ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದ ಮೇಲೆ ಭಾರೀ ಪರಿಣಾಮ ಬೀರಬಹುದೆಂದು ನಿರೀಕ್ಷಿಸಲಾಗಿರುವ ಐದು ಕ್ಷೇತ್ರಗಳ ಉಪಚುನಾವಣೆ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದ್ದು, ಶನಿವಾರ ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಸಂಜೀವ್‍ಕುಮಾರ್ ತಿಳಿಸಿದ್ದಾರೆ.

ಬಿಜೆಪಿ, ಅದರಲ್ಲೂ ಆ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಮಣಿಸಲು ಕಳೆದ 15 ದಿನಗಳಿಂದ ಮೈತ್ರಿ ಪಕ್ಷಗಳಾದ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಹಗಲಿರುಳೆನ್ನದೆ ಪ್ರಚಾರ ಕೈಗೊಂಡಿದ್ದರು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಸಚಿವ ಡಿ.ಕೆ.ಶಿವಕುಮಾರ್, ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಸರ್ಕಾರದ ಬಹುತೇಕ ಸಚಿವರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಯಡಿಯೂರಪ್ಪ ಅವರಿಗೆ ಮಾಜಿ ಮುಖ್ಯ ಮಂತ್ರಿಗಳಾದ ಜಗದೀಶ್ ಶೆಟ್ಟರ್, ಸದಾನಂದಗೌಡ, ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ, ಮಾಜಿ ಸಚಿವ ಶ್ರೀರಾಮುಲು ಪ್ರಚಾರ ಕಾರ್ಯದಲ್ಲಿ ಸಾಥ್ ನೀಡಿದ್ದರು.

ಯಡಿಯೂರಪ್ಪ ಹೊರತುಪಡಿಸಿ ಉಳಿದ ಯಾವುದೇ ನಾಯಕರು ಕ್ಷೇತ್ರದ ಮತದಾರರಲ್ಲದ ಕಾರಣ ಚುನಾವಣೆ ನಡೆಯುವ ಕ್ಷೇತ್ರಗಳಿಂದ ಹೊರನಡೆಯಲಿದ್ದಾರೆ. ಬಹಿರಂಗ ಪ್ರಚಾರ ಅಂತ್ಯಗೊಂಡ ನಂತರ ಅಭ್ಯರ್ಥಿ ಪರವಾಗಿ ಮನೆ-ಮನೆಗೆ ತೆರಳಿ ಮತಯಾಚನೆ ಮಾಡಬಹುದಾಗಿದೆ. ಶಿವಮೊಗ್ಗ, ಮಂಡ್ಯ ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರಗಳಿಗೆ ಕೇವಲ ಐದು ತಿಂಗಳ ಅವಧಿಗೆ ಉಪ ಚುನಾವಣೆ ನಡೆಯುತ್ತಿದೆ.

ಇನ್ನು ರಾಮನಗರ ಹಾಗೂ ಜಮಖಂಡಿ ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆಯನ್ನು
ಪ್ರಮುಖ ಮೂರು ರಾಜಕೀಯ ಪಕ್ಷಗಳು ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ. ಚುನಾ ವಣೆಯಲ್ಲಿ ಗೆದ್ದರೆ ಕುಮಾರಸ್ವಾಮಿ ಸರ್ಕಾರ ಪತನದ ಹಾದಿಗೆ ತಲುಪುತ್ತದೆ ಎಂಬುದು ಬಿಜೆಪಿ ಲೆಕ್ಕಾಚಾರವಾದರೆ, ಕಾಂಗ್ರೆಸ್-ಜೆಡಿಎಸ್ ಪ್ರತಿಪಕ್ಷ ಬಿಜೆಪಿಯನ್ನು ಮಣಿಸಿದರೆ ಐದು ವರ್ಷಗಳ ಪೂರ್ಣಾವಧಿ ಆಡಳಿತ ಹಾದಿ ಸುಗಮವಾಗಲಿದೆ. ಇದಕ್ಕಾಗಿಯೇ ಮೈತ್ರಿ ಪಕ್ಷಗಳ ಘಟಾನುಘಟಿ ನಾಯಕರು ತಮ್ಮಲ್ಲಿನ ಸುದೀರ್ಘ ವೈಮನಸ್ಸು ಮರೆತು ಮತದಾರರ ಓಲೈಕೆಗೆ ಮುಂದಾಗಿದ್ದರು. ಇದು ಎಷ್ಟರ ಮಟ್ಟಿಗೆ ಫಲ ನೀಡುತ್ತದೆ ಎಂಬುದು ದೀಪದ ಹಬ್ಬ ದೀಪಾವಳಿಯಂದು ತಿಳಿದುಬರಲಿದೆ.

ಮತದಾನಕ್ಕೆ ಸಿದ್ಧತೆ: ರಾಜ್ಯದ ಮೂರು ಲೋಕಸಭಾ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನಕ್ಕೆ ಚುನಾವಣಾ ಆಯೋಗ ಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಲೋಕಸಭಾ ಕ್ಷೇತ್ರಗಳಾದ ಮಂಡ್ಯ, ಶಿವಮೊಗ್ಗ, ಬಳ್ಳಾರಿ ಹಾಗೂ ರಾಮನಗರ ಮತ್ತು ಜಮಖಂಡಿ ವಿಧಾನಸಭಾ ಕ್ಷೇತ್ರಗಳಲ್ಲಿ ನವೆಂಬರ್ 3ರಂದು ಮತದಾನ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್, ಐದೂ ಕ್ಷೇತ್ರಗಳಲ್ಲಿ ಕಾನೂನು-ಸುವ್ಯವಸ್ಥೆ ಕಾಯ್ದುಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಬಿಗಿ ಪೊಲೀಸ್ ಪಹರೆ ಏರ್ಪಡಿಸಲಾಗಿದೆ ಎಂದರು. ನವೆಂಬರ್ 6ರಂದು ಮತ ಎಣಿಕೆ ನಡೆದು ಅಂದೇ ಫಲಿತಾಂಶ ಪ್ರಕಟವಾಗಲಿದೆ ಎಂದು ತಿಳಿಸಿದರು.

Translate »