ವಿಶ್ವದ ಅತ್ಯಂತ ಎತ್ತರದ ಸರ್ದಾರ್ ವಲ್ಲಭ ಭಾಯ್ ಪಟೇಲರ `ಏಕತಾ ಪ್ರತಿಮೆ’ ಲೋಕಾರ್ಪಣೆ
ಮೈಸೂರು

ವಿಶ್ವದ ಅತ್ಯಂತ ಎತ್ತರದ ಸರ್ದಾರ್ ವಲ್ಲಭ ಭಾಯ್ ಪಟೇಲರ `ಏಕತಾ ಪ್ರತಿಮೆ’ ಲೋಕಾರ್ಪಣೆ

November 1, 2018

ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಗಳಲ್ಲಿ ಒಂದಾದ ಸರ್ದಾರ್ ವಲ್ಲಭ ಭಾಯ್ ಪಟೇಲರ `ಏಕತಾ ಪ್ರತಿಮೆ’ಯನ್ನು ಬುಧವಾರ ಲೋಕಾರ್ಪಣೆ ಮಾಡಲಾಯಿತು.

ಗುಜರಾತ್‍ನ ಕೆವಾಡಿಯಾದ ನರ್ಮದಾ ತಟದಲ್ಲಿ ನಿರ್ಮಿಸಲಾಗಿರುವ ವಿಶ್ವದ ಅತ್ಯಂತ ಎತ್ತರದ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದರು. ದೇಶದ ಮೊದಲ ಉಪ ಪ್ರಧಾನಿ ಪಟೇಲ್ ಅವರು ಭಾರತದ ಏಕೀಕರಣದಲ್ಲಿ ನಿರ್ಣಾಯಕ ಪಾತ್ರ ವಹಿಸಿ ದ್ದರು. ಹೀಗಾಗಿ ಪ್ರತಿಮೆಗೆ `ಏಕತೆಯ ಪ್ರತಿಮೆ’ ಎಂದು ನಾಮಕರಣ ಮಾಡಲಾಗಿದೆ.

ಸರ್ದಾರ್ ಪಟೇಲ್ ಅವರ ಪ್ರತಿಮೆಯ ಮೂಲಕ ಪ್ರಧಾನಿ ಮೋದಿ ಅವರು ಮತ್ತೊಮ್ಮೆ `ಏಕೀಕರಣ’ದ ಸಂದೇಶ ಸಾರಿದ್ದಾರೆ.

ಪ್ರಧಾನಿ ಮೋದಿ ಹಾಗೂ ಇತರ ಗಣ್ಯರು ಪ್ರತಿಮೆಗೆ ಕುಂಭಾಭಿಷೇಕ ಮಾಡುವ ಮೂಲಕ, ಅದನ್ನು ಲೋಕಾರ್ಪಣೆ ಮಾಡಿದರು. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ, ಉಪ ಮುಖ್ಯಮಂತ್ರಿ ನಿತಿನ್ ಪಟೇಲ್, ಮಧ್ಯಪ್ರದೇಶ ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಕರ್ನಾಟಕ ರಾಜ್ಯಪಾಲ ವಜುಬಾಯ್ ವಾಲಾ ಮುಂತಾದವರು ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಈ ಕಾರ್ಯಕ್ರಮವನ್ನು ಸುಮಾರು 20ಕ್ಕೂ ಹೆಚ್ಚು ಡ್ರೋಣ್ ಕ್ಯಾಮರಾ ಮೂಲಕ ಸೆರೆ ಹಿಡಿಯುವ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೇ ಪ್ರತಿಮೆಯ ಅನಾವರಣದ ಬೆನ್ನಲ್ಲೇ ಐಎಎಫ್ ಪ್ಲೇನ್‍ಗಳು ಪ್ರತಿಮೆ ಬಳಿ ತ್ರಿವರ್ಣ ಧ್ವಜವನ್ನು ಗಾಳಿಯಲ್ಲೇ ಸೃಷ್ಟಿಸಿದ್ದವು. ಇದಾದ ಬಳಿಕ 29 ರಾಜ್ಯಗಳು ಹಾಗೂ 2 ಕೇಂದ್ರಾಡಳಿತ ಪ್ರದೇಶಗಳ ಕಲಾವಿದರು ನೃತ್ಯ, ಸಂಗೀತ ಕಲಾ ಪ್ರದರ್ಶನ ನೀಡಿದರು.

ಮೋದಿ ಟಾಂಗ್: ಪ್ರತಿಮೆ ಅನಾವರಣ ನಂತರ

ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಚಿಂತನೆಗಳು ಈಗಲೂ ಪ್ರಸ್ತುತವಾಗಿದ್ದು, 500ಕ್ಕೂ ಪ್ರತ್ಯೇಕ ಸಂಸ್ಥಾನಗಳನ್ನು ಒಂದಾಗಿಸುವ ಪಟೇಲರ ಚಿಂತನೆ ಇಂದು ಭಾರತವನ್ನು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಒಂದಾಗಿಸಿದೆ ಎಂದು ಹೇಳಿದರು.

ದೇಶದ ಅದ್ಭುತ ಶಿಲ್ಪಿಗಳು ಪಟೇಲರ ಅದ್ಭುತ ವಿಗ್ರಹವನ್ನು ಪೂರ್ಣಗೊಳಿಸಿದ್ದಾರೆ. ಈ ಮೂರ್ತಿ ಆದಿವಾಸಿಗಳ ಯೋಗದಾನವಾಗಿದ್ದು, ಇದು ನಿರ್ಮಾಣವಾಗಲು ಪ್ರತ್ಯಕ್ಷ, ಪರೋಕ್ಷವಾಗಿ ಸಹಕರಿಸಿದ ಎಲ್ಲರ ಕಾರ್ಯ ಇತಿಹಾಸದ ಪುಟ ಸೇರಲಿದೆ. ಇದು ಭಾರತದ ಇತಿಹಾಸಲ್ಲಿ ಅರ್ಥಪೂರ್ಣ ದಿನವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಟೇಲರ ಪ್ರತಿಮೆ ಅನಾವರಣ ಮಾಡಿದ್ದು ನನ್ನ ಜೀವನದ ಮಹತ್ವದ ಕ್ಷಣವಾಗಿದ್ದು, ಇದು ನಿಮ್ಮ ಆರ್ಶೀವಾದದಿಂದ ಆಗಿದೆ. ಈ ಪ್ರತಿಮೆ ಶ್ರಮವಹಿಸಿದ ಪ್ರತಿಯೊಬ್ಬರಿಗೂ ಇದರ ಗೌರವವನ್ನು ಸಲ್ಲಿಸುತ್ತೇನೆ. ಪಟೇಲರ ದೂರದೃಷ್ಟಿ ಮತ್ತು ಕಠಿಣ ನಿಲುವುಗಳೇ ಭಾರತದ ಏಕೀಕರಣಕ್ಕೆ ಕಾರಣ. ಒಂದೊಮ್ಮೆ ಅವರ ಆ ನಿಲುವು ತೆಗೆದುಕೊಳ್ಳದಿದ್ದರೆ ಹೈದರಾಬಾದ್ ಚಾರ್ ಮಿನಾರ್ ಹಾಗೂ ಸೋಮನಾಥ ದೇವಾಲಯವನ್ನು ನೋಡಲು ವೀಸಾ ತೆಗೆದುಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗುತ್ತಿತ್ತು ಎಂದು ಹೇಳಿದರು.

ಇದೇ ವೇಳೆ ದೇಶಕ್ಕೆ ಸೇವೆ ಸಲ್ಲಿಸಿದ ಮಹಾನ್ ನಾಯಕರನ್ನು ನೆನೆದರೆ ಕೆಲವರು ತಮ್ಮ ರಾಜಕೀಯ ದೃಷ್ಟಿಯಿಂದ ಇದನ್ನು ಕ್ರೈಂ ಎಂದು ಟೀಕೆ ಮಾಡಿದ್ದಾರೆ. ಇದನ್ನು ನೋಡಿದರೆ ನನಗೆ ಅಚ್ಚರಿಯಾಗುತ್ತಿದೆ. ಒಬ್ಬ ಮಹಾನ್ ದೇಶ ಪ್ರೇಮಿಯನ್ನು ನೆನೆಯುವುದು ಅಪರಾಧವಾಗುತ್ತದೆಯೇ ಎಂದು ಪ್ರಶ್ನೆ ಮಾಡಿ ಪಟೇಲರ ಸ್ಮಾರಕ ನಿರ್ಮಾಣ ಕುರಿತು ಕೇಳಿ ಬಂದ ಟೀಕೆಗಳಿಗೆ ತಿರುಗೇಟು ನೀಡಿದರು. ನಾನು ಸಿಎಂ ಆಗಿದ್ದ ವೇಳೆ ಏಕತಾ ಪ್ರತಿಮೆ ನಿರ್ಮಾಣದ ಕನಸು ಕಂಡಿದ್ದೆ, ಇದಕ್ಕೆ ಲಕ್ಷಾಂತರ ರೈತರು ಕಬ್ಬಿಣವನ್ನು ನೀಡುವ ಮೂಲಕ ಬೆಂಬಲ ನೀಡಿದರು. ಇಂತಹ ದಿನಗಳನ್ನು ದೇಶದ ಚರಿತ್ರೆಯಿಂದ ತೆಗೆದು ಹಾಕುವುದು ಕಷ್ಟಸಾಧ್ಯವಾಗುತ್ತದೆ. ಭಾರತೀಯರಿಗೆ ಇದು ಪ್ರೇರಣೆಯ ಸಂಕೇತವಾಗಿ ನಿಲ್ಲಲಿದೆ ಎಂದು ತಿಳಿಸಿದರು.

ಭೂಕಂಪ, ಬಿರುಗಾಳಿಗೂ ಜಗ್ಗಲ್ಲ 182 ಮೀಟರ್ ಎತ್ತರದ ಪ್ರತಿಮೆ!

ಗಾಂಧಿನಗರ: 182 ಮೀಟರ್ ಎತ್ತರದ ಜಗತ್ತಿನ ಅತೀ ಎತ್ತರದ್ದು ಎನಿಸಿಕೊಂಡಿ ರುವ ಉಕ್ಕಿನ ಮನುಷ್ಯ ಎಂದೇ ಪ್ರಸಿದ್ಧರಾದ ಸರ್ದಾರ್ ವಲ್ಲಭ ಬಾಯ್ ಪಟೇಲರ ಈ ಮೂರ್ತಿ ಹಲವು ವೈಶಿಷ್ಟ್ಯತೆಗಳಿಂದ ಗಮನ ಸೆಳೆಯುತ್ತಿದೆ. 2013ರ ಅ. 31ರಂದು ಮೋದಿ ಶಂಕುಸ್ಥಾಪನೆ ಮಾಡುವ ಮೂಲಕ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆತಿತ್ತು. ಗುಜರಾತಿನ ನರ್ಮದಾ ಡ್ಯಾಂ ಸಮೀಪದಲ್ಲಿ ನಿರ್ಮಾಣವಾಗಿರುವ ಪಟೇಲರ ಪ್ರತಿಮೆ ಮುಂದೆ ಜಗತ್ತಿನ ಎಲ್ಲಾ ಪ್ರತಿಮೆಗಳೂ ಕುಬ್ಜವಾಗಿ ಕಾಣಿಸುತ್ತವೆ.
ವೇಗವಾಗಿ ನಿರ್ಮಾಣ: ಕೇವಲ 33 ತಿಂಗಳಲ್ಲಿ ಕೆಲಸ ಮುಗಿಸಿ ಅನಾವರಣಕ್ಕೆ ಸಜ್ಜಾಗಿತ್ತು. ಚೀನಾದಲ್ಲಿನ ಸ್ಪ್ರಿಂಗ್ ಟೆಂಪಲ್ ಬುದ್ಧ ಪ್ರತಿಮೆ ನಿರ್ಮಾಣಕ್ಕೆ ಹನ್ನೊಂದು ವರ್ಷ ತಗುಲಿತ್ತು.

ವೆಚ್ಚ: ಎಲ್ ಆಂಡ್ ಟಿ ಕಂಪನಿ ಈ ಮೂರ್ತಿ ನಿರ್ಮಾಣದ ಹೊಣೆ ಹೊತ್ತು ಕೊಂಡಿತ್ತು. 2,989 ಕೋಟಿ ವೆಚ್ಚದಲ್ಲಿ ಕೆಲಸ ಪೂರ್ಣಗೊಂಡಿದೆ. 2,000 ಟನ್ ಕಂಚು ಈ ಮೂರ್ತಿ ನಿರ್ಮಾಣಕ್ಕೆ ಬಳಕೆಯಾಗಿದೆ.

ಆಳೆತ್ತರದ ಮೂರ್ತಿ: ನಿಮ್ಮ ಎತ್ತರ 5.6 ಅಡಿ ಆಗಿದ್ದಲ್ಲಿ ಈ ಮೂರ್ತಿ ನಿಮಗಿಂತ ನೂರು ಪಟ್ಟು ಎತ್ತರವಾಗಿ ಕಾಣಿಸುತ್ತದೆ. ಏಕಕಾಲಕ್ಕೆ ಈ ಮೂರ್ತಿ ಒಳಭಾಗಕ್ಕೆ 200 ಪ್ರವಾಸಿಗರು ಪ್ರವೇಶಿಸಬಹುದು. ಮೂರ್ತಿಯ ಎದೆಯ ಭಾಗದಿಂದ ನರ್ಮದಾ ಡ್ಯಾಂ ಸಂಪೂರ್ಣವಾಗಿ ಕಾಣಿಸುತ್ತದೆ. ಏಕತಾ ಮೂರ್ತಿಯ ಸಮೀಪದಲ್ಲಿ ತ್ರೀ-ಸ್ಟಾರ್ ಹೋಟೆಲ್, ಮ್ಯೂಸಿಯಂ, ಆಡಿಯೋ-ವಿಶ್ಯುವಲ್ ಗ್ಯಾಲರಿಗಳನ್ನು ತೆರೆಯಲಾಗಿದೆ. ಗುಜರಾತ್ ಪ್ರವಾಸೋದ್ಯಮದ ಉತ್ತೇಜನವೂ ಇದರ ಪ್ರಮುಖ ಉದ್ದೇಶ.

ಸವಾಲಿನ ಕೆಲಸ: ಏಕತಾ ಮೂರ್ತಿ ನಿರ್ಮಾಣವನ್ನು ಇಂಜಿನಿಯರಿಂಗ್ ಅದ್ಭುತ ಎನ್ನಲಾಗುತ್ತಿದೆ. ಇದಕ್ಕೆ ಕಾರಣ ನಿರ್ಮಾಣ ಹಂತದಲ್ಲಿದ್ದ ಸವಾಲುಗಳು. ನರ್ಮದಾ ನದಿಯ ಮಧ್ಯಭಾಗದಲ್ಲಿ ನಿರ್ಮಾಣ ಮಾಡುವುದು ನಿಜಕ್ಕೂ ಸವಾಲಿನ ಕೆಲಸವಾಗಿತ್ತು.

ಭೂಕಂಪ, ಬಿರುಗಾಳಿಗೂ ಬಗ್ಗಲ್ಲ!: ರಿಕ್ಟರ್ ಮಾಪಕದ 6.5ರ ಪ್ರಮಾಣದ ಭೂಕಂಪ ಹಾಗೂ ಗಂಟೆಗೆ 180 ಕಿ.ಮೀ ವೇಗದ ಗಾಳಿಗೂ ಈ ಮೂರ್ತಿ ಒಂಚೂರು ಅಲುಗಾಡುವುದಿಲ್ಲ. ಅಷ್ಟೊಂದು ಬಲಿಷ್ಠವಾಗಿ ನಿರ್ಮಾಣ ಮಾಡಲಾಗಿದೆ.

ಮೂರ್ತಿಯ ವಿನ್ಯಾಸ: ನೋಯ್ಡಾ ಮೂಲದ ಶಿಲ್ಪಿ ರಾಮ್ ವಿ. ಸುತರ್ ಈ ಮೂರ್ತಿಯ ವಿನ್ಯಾಸ ಕಾರ್ಯ ಮಾಡಿದ್ದಾರೆ. ವಿನ್ಯಾಸ ಕಾರ್ಯಕ್ಕೆ ಸುಮಾರು ಎರಡು ಸಾವಿರಕ್ಕೂ ಅಧಿಕ ಪಟೇಲರ ಫೋಟೋಗಳನ್ನು ವೀಕ್ಷಿಸಲಾಗಿದೆ. ಜೊತೆಯಲ್ಲಿ ಪಟೇಲರನ್ನು ನೋಡಿದ್ದ ಹಲವಾರು ಇತಿಹಾಸಕಾರರನ್ನು ಭೇಟಿ ಮಾಡಲಾಗಿದೆ.

ನಾಲ್ಕು ಸಾವಿರ ಕಾರ್ಮಿಕರ ಶ್ರಮ: ಸುಮಾರು ನಾಲ್ಕು ಸಾವಿರ ಕಾರ್ಮಿಕರು ಹಗಲು-ರಾತ್ರಿ ಶ್ರಮವಹಿಸಿ ಈ ಮೂರ್ತಿ ನಿರ್ಮಾಣ ಮಾಡಿದ್ದಾರೆ. ಈ ಮೂರ್ತಿ ನಿರ್ಮಾಣಕ್ಕೆ ದೇಶಾದ್ಯಂತ ಕಂಚು ಸಂಗ್ರಹಣೆಯನ್ನೂ ಮಾಡಲಾಗಿದೆ.

ಹೈವೇ ನಿರ್ಮಾಣ: ಗುಜರಾತ್ ಸರ್ಕಾರ 3.5 ಕಿ.ಮೀ. ಉದ್ದದ ಹೈವೇ ನಿರ್ಮಾಣಕ್ಕೂ ಮುಂದಾಗಿದೆ. ಈ ಹೈವೇ ಮೂರ್ತಿ ಇರುವ ಕೆವಾಡಿಯಾ ನಗರವನ್ನು ಸಂಪರ್ಕಿಸುತ್ತದೆ.

ಬೋಟ್ ರೈಡ್, ಸೆಲ್ಫಿ ಪಾಯಿಂಟ್?: ಮೂರ್ತಿಯ ಕೆಳಭಾಗಕ್ಕೆ ತಲುಪಲು ಸೇತುವೆ ಇದ್ದು ಜೊತೆಗೆ ಬೋಟಿಂಗ್ ವ್ಯವಸ್ಥೆ ಸಹ ಇರಲಿದೆ. ಏಕತಾ ಮೂರ್ತಿಯ ಸಮೀಪದಲ್ಲಿ ಸೆಲ್ಫಿ ಪಾಯಿಂಟ್ ಸಹ ನಿರ್ಮಿಸಲಾಗಿದೆ.

Translate »