ಹಾಸನ: ಪುರಾಣ ಪ್ರಸಿದ್ಧ ಹಾಸನದ ಅಧಿದೇವತೆ ಹಾಸನಾಂಬ ದೇವಾಲಯದ ಬಾಗಿಲು ನಾಳೆ (ನ.1) ಬೆಳಿಗ್ಗೆ 11.30ಕ್ಕೆ ತೆರೆಯಲಿದೆ. ಸ್ವಚ್ಛತೆ, ಅಲಂಕಾರ, ಪೂಜಾ ವಿಧಿ-ವಿಧಾನಗಳು ನಡೆಯಲಿರುವುದರಿಂದ ಮೊದಲ ದಿನ ಭಕ್ತಾದಿ ಗಳಿಗೆ ದೇವಿಯ ದರ್ಶನವಿರುವುದಿಲ್ಲ. ನ.9ರಂದು ಮಧ್ಯಾಹ್ನ ದೇವಾಲಯದ ಬಾಗಿಲು ಮುಚ್ಚಲಾ ಗುತ್ತದೆ. ಅಂದೂ ಕೂಡ ಭಕ್ತಾದಿಗಳಿಗೆ ದೇವಿ ದರ್ಶನಕ್ಕೆ ಅವಕಾಶವಿಲ್ಲ. ನ.2ರಿಂದ 8ರವರೆಗೆ 7 ದಿನಗಳ ಕಾಲ ಭಕ್ತಾದಿಗಳು ಹಾಸನಾಂಬೆ ದೇವಿಯ ದರ್ಶನ ಪಡೆಯಬಹುದಾಗಿದೆ.
ನಾಳೆ ಬೆಳಿಗ್ಗೆ ಹಾಸನಾಂಬ ದೇವಸ್ಥಾನ ಬಾಗಿಲು ತೆರೆಯುವ ವೇಳೆ ಎಲ್ಲಾ ತಳವಾರ ಮನೆತನದವರು ಹಾಜರಿದ್ದು, ದೇವಿಯ ಗರ್ಭ ಗುಡಿಯ ಮುಂದೆ ನೆಡಲಾದ ಬಾಳೆ ಕಂದನ್ನು ಅರಸು ಮನೆತನದವರು ಕತ್ತರಿಸಿದ ನಂತರವೇ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ಮೊದಲನೇ ದಿನ ದೇವಿಗೆ ಯಾವುದೇ ರೀತಿಯ ಆಭರಣ ಹಾಗೂ ವಸ್ತ್ರ ತೊಡಿಸಲಾಗುವುದಿಲ್ಲ.
ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸಮ್ಮುಖದಲ್ಲಿ ನಾಳೆ ದೇವಾಲಯದ ಬಾಗಿಲು ತೆರೆಯಲಿದ್ದು, ಈ ವೇಳೆ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಮಾಡಲಾಗುತ್ತದೆ. ಹಾಸನಾಂಬೆ ದೇವಾಲಯದ ಬಾಗಿಲು ವರ್ಷಕ್ಕೆ ಒಮ್ಮೆ ಮಾತ್ರ ತೆರೆಯಲಿದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ನ್ಯಾಯಾಧೀಶರುಗಳು, ಹಿರಿಯ ರಾಜಕಾರಣಿಗಳು ಸೇರಿದಂತೆ ಲಕ್ಷಾಂತರ ಭಕ್ತರು ದೇವಿ ದರ್ಶನ ಪಡೆದು ಪುನೀತರಾಗುವರು.
ಹಾಸನಾಂಬೆ ಜಾತ್ರೆಗೆ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ವಿಕಲ ಚೇತನರು, ವಯೋವೃದ್ಧರು ಹಾಗೂ 300 ರೂ. ಮತ್ತು 1000 ರೂ. ಪಾಸ್ ಪಡೆದವರಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಸಾವಿರಾರು ವಾಹನಗಳಲ್ಲಿ ಭಕ್ತರು ಆಗಮಿಸಲಿರುವುದರಿಂದ ನಗರ ಸಭೆ ಆವರಣದಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಜಾತ್ರೆ ನಡೆಯುವ ದಿನಗಳಂದು ಹಾಸನಕ್ಕೆ ರಾಜ್ಯದ ವಿವಿಧೆಡೆಯಿಂದ ಕೆಎಸ್‍ಆರ್‍ಟಿಸಿ ವತಿಯಿಂದ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ನಗರಸಭೆ ಆವರಣದಲ್ಲಿಯೇ ವಿಶೇಷ ಬಸ್‍ಗಳಿಗಾಗಿ ತಾತ್ಕಾಲಿಕ ಬಸ್ ನಿಲ್ದಾಣ ವ್ಯವಸ್ಥೆಯನ್ನೂ ಮಾಡಲಾಗಿದೆ. ದೇವಸ್ಥಾನದ ಸುತ್ತ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಅಲ್ಲದೇ ಕೆಲವು ರಸ್ತೆಗಳನ್ನು ಏಕ ಮುಖ ಸಂಚಾರ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ.
ಮೊದಲನೇ ದಿನ ಸ್ವಚ್ಛತೆ ಹಾಗೂ ಪೂಜಾ ವಿಧಿ-ವಿಧಾನಗಳು ನಡೆಯಲಿದ್ದು, ಎರಡನೇ ದಿನದಂದು ದೇವಿಯ ಆಭರಣವಿರುವ ಪೆಟ್ಟಿಗೆಯನ್ನು ಜಿಲ್ಲಾ ಖಜಾನೆಯಿಂದ ಪಲ್ಲಕ್ಕಿಯಲ್ಲಿ ದೇವಸ್ಥಾನಕ್ಕೆ ತಂದು ಆಭರಣಗಳಲ್ಲಿ ದೇವಿಯನ್ನು ಅಲಂಕರಿಸಿ, ಪೂಜೆ ಮಾಡಿ, ನೈವೇದ್ಯ ಅರ್ಪಿಸಲಾಗುವುದು. ಭಕ್ತರ ಅನುಕೂಲಕ್ಕಾಗಿ ದೇವಸ್ಥಾನ ಪ್ರವೇಶಿಸಲು ಬ್ಯಾರಿಕೇಡ್‍ಗಳನ್ನು ನಿರ್ಮಿಸಲಾಗಿದೆ.
ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಅಲ್ಲಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಪ್ರತೀ ದಿನ ಬೆಳಿಗ್ಗೆ 6ರಿಂದ ಮಧ್ಯಾಹ್ನ 2 ಗಂಟೆ, ಮಧ್ಯಾಹ್ನ 2ರಿಂದ ರಾತ್ರಿ 10 ಗಂಟೆ ಮತ್ತು ರಾತ್ರಿ 10ರಿಂದ ಬೆಳಿಗ್ಗೆ 6 ಗಂಟೆಯವರೆಗೆ 3 ಪಾಳಿಯಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಬಂದೋಬಸ್ತ್‍ಗಾಗಿ ನಿಯೋಜಿಸಲಾಗಿದೆ. ಪ್ರತೀ ಪಾಳಿಯಲ್ಲೂ ಒಬ್ಬರು ಡಿವೈಎಸ್‍ಪಿ, ಇಬ್ಬರು ಪೊಲೀಸ್ ಇನ್ಸ್‍ಪೆಕ್ಟರ್, 7 ಸಬ್ ಇನ್ಸ್‍ಪೆಕ್ಟರ್, 20 ಎಎಸ್‍ಐ, 100 ಕಾನ್‍ಸ್ಟೇಬಲ್, 25 ಮಹಿಳಾ ಪೊಲೀಸ್ ಸಿಬ್ಬಂದಿ ಮತ್ತು 25 ಗೃಹ ರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ ಎಂದು ಜಿಲ್ಲಾ ಎಸ್ಪಿ ಪ್ರಕಾಶ್ ಗೌಡ ತಿಳಿಸಿದ್ದಾರೆ.