ರಾಜ್ಯ, ಹೊರ ರಾಜ್ಯಗಳಿಂದ ಸುಮಾರು 500 ಲೋಗೋ ಸ್ವೀಕೃತಿ, ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ನಂತರ ಆಯ್ಕೆ ಸಮಿತಿಯಿಂದ ಪ್ರಕ್ರಿಯೆಗೆ ಮರು ಚಾಲನೆ
ಮೈಸೂರು: ಸಾಂಸ್ಕøತಿಕ ನಗರಿ ಮೈಸೂರಿಗೆ ಅಚ್ಚಳಿಯದೇ ಉಳಿಯುವ ಪ್ರಸಿದ್ಧ ಹಾಗೂ ಖಾಯಂ ಲಾಂಛನವೊಂದನ್ನು ರೂಪಿಸಬೇಕೆಂಬ ಜಿಲ್ಲಾಡಳಿತದ ಮಹತ್ವದ ಯೋಜನೆ ಕೊಂಚ ವಿಳಂಬವಾಗಿದೆ.ಮೈಸೂರು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳ ಸಹಕಾರದಿಂದ ಬ್ರಾಂಡ್ ಮೈಸೂರು ಲೋಗೋ ಮತ್ತು ಟ್ಯಾಗ್ ಲೈನ್ ಸಿದ್ಧಪಡಿಸಲು ಯೋಜನೆ ರೂಪಿಸಲಾಗಿತ್ತು.
ಲೋಗೋ ಮತ್ತು ಟ್ಯಾಗ್ ಲೈನ್ ಸಿದ್ಧಪಡಿಸಲು ಪ್ರತಿಭಾನ್ವಿತರು ಹಾಗೂ ಕಲಾವಿದರಿಂದ ಪ್ರವಾಸೋದ್ಯಮ ಇಲಾಖೆಯು ಕರೆ ನೀಡಿತ್ತು. ಮೈಸೂರಿನ ಕಲೆ, ಸಂಸ್ಕøತಿ, ರಾಜಮನೆತನದ ಹಿನ್ನೆಲೆ, ಪರಂಪರೆಯನ್ನು ಪ್ರತಿಬಿಂಬಿಸುವಂತೆ ಲಾಂಛನ ಸಿದ್ಧಪಡಿಸಿ ನೋಡಿದ ತಕ್ಷಣವೇ ಮೈಸೂರಿನ ಪ್ರತಿಬಿಂಬ ಕಣ್ಣೆದುರು ಬರುವ ಹಾಗೆ ಅತ್ಯಂತ ಆಕರ್ಷಣ ೀಯ ಮತ್ತು ಸಾಂಪ್ರದಾಯಿಕ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯುವಂತೆ ಮಾಡಬೇಕೆಂದು ಸೂಚನೆ ನೀಡಲಾಗಿತ್ತು.
ಈ ಹಿಂದಿನ ಜಿಲ್ಲಾಧಿಕಾರಿಗಳಾಗಿದ್ದ ಡಿ.ರಂದೀಪ್ ಅವರು ಬ್ರಾಂಡ್ ಮೈಸೂರು ಲಾಂಛನವನ್ನು ಬೆಂಗಳೂರು ಮಾದರಿಯಲ್ಲಿ ಸಿದ್ಧಪಡಿಸಲು ಉತ್ಸುಕರಾಗಿದ್ದರು. ಅದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಲಾಂಛನ ಆಯ್ಕೆ ಸಮಿತಿಯನ್ನೂ ರಚಿಸಲಾಗಿತ್ತು. ಸಂಸದರು, ಶಾಸಕರು, ಮೇಯರ್, ಜಿಲ್ಲಾಧಿಕಾರಿ, ಮೈಸೂರು ನಗರ ಪೊಲೀಸ್ ಕಮೀಷ್ನರ್, ಮುಡಾ-ಪಾಲಿಕೆ ಕಮೀಷ್ನರ್ ಸೇರಿದಂತೆ ಹಲವು ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಮಿತಿಯ ಸದಸ್ಯರಾಗಿದ್ದಾರೆ.
2018ರ ಜನವರಿ 29ರಂದು ಲೋಗೊ ಮತ್ತು ಟ್ಯಾಗ್ಲೈನ್ ಮಾಡಿಕೊಡಲು ಆಹ್ವಾನಿಸಲಾಗಿತ್ತು. ಫೆಬ್ರವರಿ 9ರಂದು ನಿಗದಿಯಾಗಿದ್ದ ಕಡೇ ದಿನವನ್ನು ಫೆಬ್ರವರಿ 15ಕ್ಕೆ ವಿಸ್ತರಿಸಲಾಗಿತ್ತು. ಈವರೆಗೆ ಮೈಸೂರು, ಬೆಂಗಳೂರು, ಬಾಂಬೆ ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ 500 ಮಂದಿ ತಾವು ಸಿದ್ಧಪಡಿಸಿರುವ `ಬ್ರಾಂಡ್ ಮೈಸೂರು’ ಲಾಂಛನ ಹಾಗೂ ಟ್ಯಾಗ್ಲೈನ್ ಅನ್ನು ಕಳುಹಿಸಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಜನಾರ್ಧನ್ ಅವರು `ಮೈಸೂರು ಮಿತ್ರ’ನಿಗೆ ತಿಳಿಸಿದರು.
ಈ ನಡುವೆ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹಾಗೂ ಅದರ ಬೆನ್ನಲ್ಲೇ ವಿಧಾನ ಪರಿಷತ್ ಚುನಾವಣೆ ಬಂದಿರುವುದರಿಂದ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಲೋಗೋ ಆಯ್ಕೆ ಪ್ರಕ್ರಿಯೆ ವಿಳಂಬವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಅವರ ಅಧ್ಯಕ್ಷತೆಯಲ್ಲಿ ಲೋಗೋ ಆಯ್ಕೆ ಸಮಿತಿ ಸಭೆ ಆಯೋಜಿಸಲು ಜಿಲ್ಲಾಧಿಕಾರಿಗಳು ಉತ್ಸುಕರಾಗಿದ್ದಾರೆ ಎಂದೂ ತಿಳಿಸಿದರು.
ಆಯ್ಕೆ ಸಮಿತಿ ಮುಂದೆ ನಮಗೆ ಬಂದಿರುವ ಬ್ರಾಂಡ್ ಮೈಸೂರು ಲೋಗೋಗಳನ್ನು ಇಡುತ್ತೇವೆ. ಅವುಗಳನ್ನು ಪರಿಶೀಲಿಸಿ ಸಮಿತಿ ಸದಸ್ಯರು ಕ್ರಮ ವಹಿಸುತ್ತಾರೆ. ಸಭೆಯಲ್ಲಿ ತೀರ್ಮಾನವಾದ ಬಳಿಕ ಅವರ ನಿರ್ದೇಶನದಂತೆ ನಾವು ಪ್ರಕ್ರಿಯೆ ಮುಂದುವರಿಸುತ್ತೇವೆ ಎಂದು ಜನಾರ್ಧನ ತಿಳಿಸಿದರು.ಆಯ್ಕೆಯಾದ ಲಾಂಛನಕ್ಕೆ ಪೂರ್ವ ನಿಗದಿಯಂತೆ 50,000 ರೂ. ನಗದು ಬಹುಮಾನವನ್ನು ಕೊಡಬೇಕಾಗುತ್ತದೆ. ಇದೀಗ ತಾನೆ ಹೊಸ ಸರ್ಕಾರ ರಚನೆಯಾಗಿ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿರುವುದರಿಂದ ಈ ಪ್ರಕ್ರಿಯೆಗೆ ಶೀಘ್ರ ಚಾಲನೆ ದೊರೆಯಲಿದೆ.