ಕಾವೇರಿ ವಿಚಾರದಲ್ಲಿ ವಿವಾದಾತ್ಮಕ ಹೇಳಿಕೆ ರಜನಿಕಾಂತ್ ವಿರುದ್ಧ ಮೈಸೂರಲ್ಲಿ ಪ್ರತಿಭಟನೆ
ಮೈಸೂರು

ಕಾವೇರಿ ವಿಚಾರದಲ್ಲಿ ವಿವಾದಾತ್ಮಕ ಹೇಳಿಕೆ ರಜನಿಕಾಂತ್ ವಿರುದ್ಧ ಮೈಸೂರಲ್ಲಿ ಪ್ರತಿಭಟನೆ

June 7, 2018

ಮೈಸೂರು: ನಟ ರಜನಿಕಾಂತ್ ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಕರ್ನಾಟಕದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಮೈಸೂರು ಕನ್ನಡ ವೇದಿಕೆ ವತಿಯಿಂದ ಮೈಸೂರಿನ ಕಾಡಾ ಕಚೇರಿ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಎರಡೂ ರಾಜ್ಯಗಳ ನಡುವೆ ಸೌಹಾರ್ದತೆ ಹಾಗೂ ಸಾಮರಸ್ಯ ಕಾಯ್ದುಕೊಳ್ಳುವುದು ಮುಖ್ಯ. ಆದರೆ ಈ ಹಿಂದೆ ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಕಾವೇರಿ ವಿಚಾರವನ್ನು ಬಳಿಸಿಕೊಂಡರು. ಇದೀಗ ನಟ ರಜನಿಕಾಂತ್ ಅದೇ ರೀತಿ ವರ್ತಿಸುತ್ತಿದ್ದು, ಆ ಮೂಲಕ ತಮಿಳುನಾಡಿನ ಸಿಎಂ ಆಗುವ ಹಗಲುಗನಸು ಕಾಣುತ್ತಿದ್ದಾರೆ ಎಂದು ಖಂಡಿಸಿದರು.

ಇನ್ನಾದರೂ ರಜನಿಕಾಂತ್ ತಮ್ಮ ಧೋರಣೆಯನ್ನು ಬದಲಾಯಿಸಿಕೊಳ್ಳಬೇಕು. ಇಲ್ಲವಾದರೆ, ಅವರ ಹೊಸ ಸಿನಿಮಾ `ಕಾಲಾ’ ಸೇರಿದಂತೆ ಯಾವುದೇ ಚಿತ್ರಗಳ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು. ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ಕಾರ್ಯಕರ್ತರಾದ ನಾಲಾಬೀದಿ ರವಿ, ಬೋಗಾಧಿ ಸಿದ್ದೇಗೌಡ, ಗುರುಬಸಪ್ಪ, ಪ್ಯಾಲೇಸ್ ಬಾಬು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಕ್ಯಾಪ್ಶನ್

Translate »