ಗ್ರಾಮಸ್ಥರಿಗೆ ಕಂಟಕವಾಗಿದ್ದ ಹುಲಿ ಸೆರೆ
ಮೈಸೂರು

ಗ್ರಾಮಸ್ಥರಿಗೆ ಕಂಟಕವಾಗಿದ್ದ ಹುಲಿ ಸೆರೆ

October 30, 2018

ಮೇಟಿಕುಪ್ಪೆ,ಅ.29: ಕಾಡಂಚಿನ ಗ್ರಾಮಗಳ ಜಾನು ವಾರುಗಳನ್ನು ತಿಂದು, ಗ್ರಾಮಸ್ಥರಲ್ಲಿ ಭಯದ ವಾತಾವರಣ ಉಂಟು ಮಾಡಿದ್ದ ಹೆಣ್ಣು ಹುಲಿಯೊಂದು ಅರಣ್ಯ ಇಲಾಖೆಯ ಬೋನ್‍ಗೆ ಬಿದ್ದಿದೆ. ಹೆಚ್.ಡಿ.ಕೋಟೆ ತಾಲೂಕಿನ ನಾಗರಹೊಳೆ ಅಭಯಾರಣ್ಯ ಮೇಟಿಕುಪ್ಪೆ ವಲಯದ ಅಗಸನಹುಂಡಿ ಗ್ರಾಮದ ಬಳಿ ಸೆರೆಸಿಕ್ಕ ಈ ಹುಲಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಮತ್ತೆ ನಾಗರಹೊಳೆ ಅಭಯಾ ರಣ್ಯದಲ್ಲೇ ಬಿಡುಗಡೆ ಮಾಡಲಾಗಿದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮೇಟಿಕುಪ್ಪೆ ವಲಯ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಕಳೆದ ಆರು ತಿಂಗಳಿಂದ ಜಾನುವಾರುಗಳನ್ನು ತಿಂದು ಉಪಟಳ ನೀಡುತ್ತಿದ್ದ ಹುಲಿಯನ್ನು ಸೆರೆ ಹಿಡಿಯಲು ಗ್ರಾಮಸ್ಥರು ಮನವಿ ಮಾಡಿ, ಕೊನೆಗೆ ಪ್ರತಿಭಟನೆ ನಡೆಸಿದ್ದರು. ಇದು ಅರಣ್ಯ ಇಲಾಖೆಗೆ ಭಾರೀ ತಲೆ ನೋವಾಗಿ ಪರಿಣಮಿಸಿತ್ತು. ಹಾಡಹಗಲೇ, ಇಲ್ಲವೆ ಸಂಜೆ ವೇಳೆ ಗ್ರಾಮಗಳ ಬಳಿ ಪ್ರತ್ಯಕ್ಷವಾಗುತ್ತಿದ್ದ ಹುಲಿ, ರೈತರ ಭೂಮಿಯಲ್ಲಿ ಮೇಯುತ್ತಿದ್ದ ಜಾನುವಾರುಗಳ ಮೇಲೆ ದಾಳಿ ನಡೆಸಿ, ಪರಾರಿಯಾಗು ತ್ತಿತ್ತು. ಇಲ್ಲಿವರೆಗೆ ಕಾಡಂಚಿನ ಗ್ರಾಮಗಳಲ್ಲಿ 10 ಹಸು ಹಾಗೂ 20 ಮೇಕೆಗಳನ್ನು ಈ ಹುಲಿ ಬಲಿ ಪಡೆದಿತ್ತು. ಗ್ರಾಮಸ್ಥರ ಉಗ್ರ ಪ್ರತಿಭಟನೆ ಯಿಂದಾಗಿ ಅಂತಿಮವಾಗಿ ಅರಣ್ಯ ಇಲಾಖೆ ಕಳೆದ ವಾರ ಅಗಸನಹುಂಡಿ ಗ್ರಾಮದ ಸೋಮೇಗೌಡ ಎಂಬುವರ ಜಮೀನಿನಲ್ಲಿ ಬೋನ್ ಇಟ್ಟು, ಹುಲಿಯನ್ನು ಸೆರೆ ಹಿಡಿಯಲು ನಿರ್ಧರಿಸಿತ್ತು. ಕಳೆದ ರಾತ್ರಿ ಆಹಾರ ಅರಸಿ ಬಂದ ಹುಲಿ ಬೋನಿನಲ್ಲಿಡಲಾಗಿದ್ದ ಮಾಂಸ ತಿನ್ನಲು ಮುಂದಾಗಿ, ಸೆರೆ ಸಿಕ್ಕಿದೆ. ಬೋನ್‍ನಲ್ಲಿ ಆರ್ಭಟಿಸುತ್ತಿದ್ದ ಹುಲಿಯ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸಿದ್ದಾರೆ.

ಚಿಕ್ಕವಯಸ್ಸಿನ ಹೆಣ್ಣು ಹುಲಿ: ಬೋನ್‍ಗೆ ಬಿದ್ದಿದ್ದ ಹೆಣ್ಣು ಹುಲಿ, ಮೂರು ವರ್ಷ ಪ್ರಾಯದ್ದಿರಬಹುದು ಎಂದು ಅಂದಾಜಿಸಲಾಗಿದೆ. ಇಂತಹ ಹುಲಿ ಗಳು ಕಾಡಿನಿಂದ ಹೊರಗೆ ಬರುವುದು ಅಪರೂಪ. ಕಾದಾಟದಲ್ಲಿ ಗಾಯ ಗೊಂಡಿದ್ದರೆ, ವಯಸ್ಸಾಗಿದ್ದರೆ ಹಾಗೂ ಬೇಟೆಯಾಡುವ ಶಕ್ತಿ ಕಳೆದುಕೊಂಡಿದ್ದರೆ ಮಾತ್ರ ಕಾಡಂಚಿನ ಗ್ರಾಮಗಳಿಗೆ ಬಂದು ಸುಲಭವಾಗಿ ಸಿಗುವ ಜಾನುವಾರುಗಳನ್ನು ಬೇಟೆಯಾಡುತ್ತವೆ. ಆದರೆ ಇಂದು ಬೋನಿಗೆ ಬಿದ್ದಿದ್ದ ಹೆಣ್ಣು ಹುಲಿ 4ರಿಂದ 5 ವರ್ಷದ್ದಾಗಿದ್ದು, ಗ್ರಾಮಗಳಿಗೆ ಬರುತ್ತಿದ್ದದ್ದು ಆಶ್ಚರ್ಯ ಉಂಟು ಮಾಡಿದೆ.

ಪ್ರಾಥಮಿಕ ಚಿಕಿತ್ಸೆ: ಸೆರೆ ಸಿಕ್ಕ ಹುಲಿಗೆ ಇಂದು ಬೆಳಿಗ್ಗೆ ಅರವಳಿಕೆ ಮದ್ದು ನೀಡಿ, ತಪಾಸಣೆ ನಡೆಸಲಾಯಿತು. ಹಲ್ಲು, ಕಾಲು ಹಾಗೂ ದೇಹದ ಇನ್ನಿತರೆ ಭಾಗಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಯಿತು. ಈ ವೇಳೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಪಶುವೈದ್ಯರು, ತಜ್ಞರೊಂದಿಗೆ ಚರ್ಚಿಸಿ, ಹುಲಿಯನ್ನು ಕಾಡಿಗೆ ಬಿಡುವುದು ಸೂಕ್ತ ಎಂದು ಅಭಿಪ್ರಾಯಪಡಲಾಯಿತು. ಅಲ್ಲದೆ ಅರವಳಿಕೆ ಮದ್ದಿನ ಮಂಪರು ಕಡಿಮೆಯಾಗಲು ಚಿಕಿತ್ಸೆ ನೀಡಲಾಯಿತು. ಸ್ಥಳಕ್ಕೆ ನಾಗರಹೊಳೆ ಹುಲಿ ಯೋಜನೆಯ ನಿರ್ದೇಶಕ ನಾರಾಯಣಸ್ವಾಮಿ ಸೇರಿದಂತೆ ಇನ್ನಿತರರು ಭೇಟಿ ನೀಡಿ, ಪರಿಶೀಲಿಸಿದರು.

ಕಾಡಿಗೆ ಬಿಡದಂತೆ ಗ್ರಾಮಸ್ಥರ ಒತ್ತಾಯ: ಸೆರೆಸಿಕ್ಕ ಹುಲಿಯನ್ನು ಮೃಗಾಲಯಕ್ಕೆ ಕೊಂಡೊಯ್ಯುವಂತೆ ಅಗಸನಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಆಗ್ರಹಿಸಿದರು. ಹುಲಿಯನ್ನು ನೋಡಲು ವಿವಿಧ ಗ್ರಾಮಗಳ ಸಾವಿರಾರು ಗ್ರಾಮಸ್ಥರು ಕುತೂಹಲದಿಂದ ಸ್ಥಳಕ್ಕೆ ಧಾವಿಸಿದ್ದರು. ಅಲ್ಲದೆ ಕಾಡಿಗೆ ಬಿಟ್ಟರೆ ಮತ್ತೆ ಗ್ರಾಮಕ್ಕೆ ಬಂದು ಉಪಟಳ ನೀಡುತ್ತದೆ ಎಂದು ಆತಂಕ ವ್ಯಕ್ತಪಡಿಸುತ್ತಿದ್ದರು.

Translate »