ಮೈಸೂರು ಮೃಗಾಲಯದಲ್ಲಿ ಭಯಂಕರ ಕಾದಾಟ: ಜಾಗ್ವಾರ್-ನಾಗರಹಾವು ಸಾವು
ಮೈಸೂರು

ಮೈಸೂರು ಮೃಗಾಲಯದಲ್ಲಿ ಭಯಂಕರ ಕಾದಾಟ: ಜಾಗ್ವಾರ್-ನಾಗರಹಾವು ಸಾವು

October 30, 2018

ಮೈಸೂರು: ಅದೊಂದು ಅತೀ ಭಯಂಕರ ಕಾದಾಟ! ಹೆಸರೇಳಿದರೆ ಸಾಕು ಮನುಷ್ಯರು ಬೆಚ್ಚಿ ಬೀಳುವ ಕ್ರೂರ ಪ್ರಾಣಿಗಳು ಸೆಣಸಾಟದಲ್ಲಿ ಜೀವ ಬಿಟ್ಟಿವೆ. ಈ ಕಾಳಗವನ್ನು ಕಣ್ಣಾರೆ ಕಂಡ ನೂರಾರು ಪ್ರವಾಸಿಗರು ಬೆಚ್ಚಿ ಬಿದ್ದಿದ್ದಾರೆ. ಮೈಸೂರು ಮೃಗಾಲಯದಲ್ಲಿ ಹಾಡಹಗಲೇ ಜಾಗ್ವಾರ್ (ಆಫ್ರಿಕನ್ ಚಿರತೆ) ಹಾಗೂ ನಾಗರಹಾವಿನ ನಡುವೆ ನಡೆದ ಭಾರೀ ಕದನದಲ್ಲಿ ಪಾಪ, ಎರಡೂ ಪ್ರಾಣ ಬಿಟ್ಟಿವೆ.

ಜಾಗ್ವಾರ್ ಆವರಣ ಪ್ರವೇಶಿಸಿರುವ ನಾಗರ ಹಾವು, ತನಗೆ ಎದುರಾದ ರಾಜು ಹೆಸರಿನ 14 ವರ್ಷದ ಜಾಗ್ವರ್ ಕಂಡು ಹೆಡೆ ಎತ್ತಿ, ಬುಸುಗುಟ್ಟಿದೆ. ಗಾಬರಿಗೊಂಡ ಜಾಗ್ವಾರ್, ನಾಗರಹಾವಿನ ಮೇಲೆ ದಾಳಿ ನಡೆಸಿದೆ. ಆಗ ಪ್ರತಿದಾಳಿ ನಡೆಸಿದ ಹಾವು ಜಾಗ್ವಾರ್ ಕಚ್ಚಲು ಮುಂದಾಗಿದೆ. ಈ ವೇಳೆ ಭೀಕರ ಕಾದಾಟವೇ ನಡೆದಿದೆ. ನೂರಾರು ಮಂದಿ ಪ್ರವಾಸಿಗರು ಕುತೂಹಲ ಹಾಗೂ ಆತಂಕ ದಿಂದ ಆ ಕಾಳಗ ಕಂಡು ಬೆಚ್ಚಿದ್ದಾರೆ. ಕೆಲವರು ಕಿರುಚಾಡಿ ಜಾಗ್ವಾರ್ ಅನ್ನು ಹಾವಿನಿಂದ ದೂರ ಓಡಿಸುವ ಪ್ರಯತ್ನ ಮಾಡಿದರಾ  ಯಾವುದೇ ಪ್ರಯೋಜನವಾಗಿಲ್ಲ. ಸಮೀಪದಲ್ಲಿಯೇ ಇದ್ದ ಮೃಗಾಲಯದ ಸಿಬ್ಬಂದಿ ವಿಷಯವನ್ನು ಮೃಗಾಲಯದ ಮೇಲಾಧಿಕಾರಿಗಳು ಹಾಗೂ ಪಶುವೈದ್ಯರಿಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಅಧಿ ಕಾರಿಗಳು ಜಾಗ್ವಾರ್ ರಾಜುನನ್ನು ಬೋನ್‍ಗೆ ಸೇರಿಸಿದ್ದಾರೆ. ಅಷ್ಟರಲ್ಲಾಗಲೇ ಹಾವು ಕಚ್ಚಿ ವಿಷ ದೇಹ ಸೇರಿ ತೀವ್ರ ಅಸ್ವಸ್ಥಗೊಂಡಿತ್ತು. ಈ ಮಧ್ಯೆ ಕಾದಾಟದಲ್ಲಿ ನಾಗರಹಾವು ಅಲ್ಲೇ ಮೃತಪಟ್ಟಿರುವುದು ಕಂಡುಬಂತು.

ಮೃಗಾಲಯದ ಪಶು ಆಸ್ಪತ್ರೆಯಲ್ಲಿ ತೀವ್ರ ನಿತ್ರಾಣಗೊಂಡಿದ್ದ ರಾಜು(ಜಾಗ್ವಾರ್)ವಿಗೆ ಚಿಕಿತ್ಸೆ ನೀಡಲಾಯಿತಾದರೂ ಕೆಲವೇ ಗಂಟೆ ಯಲ್ಲಿ ಅದು ಅಸುನೀಗಿತು. ಮೃಗಾಲಯ ದಲ್ಲಿ ಹಾವು ಕಚ್ಚಿ ಜಾಗ್ವಾರ್ ಮೃತಪಟ್ಟಿರು ವುದು ಇದೇ ಮೊದಲು ಎನ್ನಲಾಗಿದೆ. ಈ ಹಿಂದೆ ಜಿಂಕೆ ಸೇರಿದಂತೆ ಸಣ್ಣ-ಪುಟ್ಟ ಪ್ರಾಣಿಗಳು ಹಾವು ಕಚ್ಚಿ ಮೃತಪಟ್ಟಿದ್ದವು.

Translate »