ಲಾಕ್ ಡೌನ್ ನಡುವೆಯೂ ಪ್ರಾಣಿಗಳ ಹಿತಕಾಯುತ್ತಿರುವ ಮೃಗಾಲಯದ ಸಿಬ್ಬಂದಿ
ಮೈಸೂರು

ಲಾಕ್ ಡೌನ್ ನಡುವೆಯೂ ಪ್ರಾಣಿಗಳ ಹಿತಕಾಯುತ್ತಿರುವ ಮೃಗಾಲಯದ ಸಿಬ್ಬಂದಿ

March 30, 2020

*ಮಾಸ್ಕ್ ಧರಿಸಿ, ಸ್ಯಾನಿಟೈಸರ್ ನಿಂದ ಕೈ ತೊಳೆದರೆ ಮಾತ್ರ ಪ್ರವೇಶ

* ಪ್ರತಿದಿನ 200ಕ್ಕೂ ಹೆಚ್ಚು ಸಿಬ್ಬಂದಿಯಿಂದ ಪ್ರಾಣಿ-ಪಕ್ಷಿಗಳ ಪಾಲನೆ

ಮೈಸೂರು,ಮಾ.30( MTY) – ನೊವೆಲ್ ಕೊರೊನಾ ಸೋಂಕು ಹರಡುವಿಕೆ ತಡೆಯಲು ಏ.14ರವರೆಗೂ ಇಡೀ ದೇಶವೇ ಲಾಕ್ ಡೌನ್ ಆಗಿ ಸ್ತಬ್ದವಾಗಿದ್ದರೂ, ಮೈಸೂರು ಮೃಗಾಲಯದಲ್ಲಿ ಅಗತ್ಯ ಮುನ್ನಚ್ಚರಿಕೆಯೊಂದಿಗೆ ಪ್ರಾಣಿ-ಪಕ್ಷಿಗಳ ಹಿತಕಾಯುವ ಸೇವೆಯನ್ನು 200ಕ್ಕೂ ಹೆಚ್ಚು ಸಿಬ್ಬಂದಿ ಮಾಡುತ್ತಿದ್ದಾರೆ.

ಕೊರೊನಾ ವೈರಸ್ ವ್ಯಾಪಿಸಿದ ಪರಿಣಾಮ ಮೊದಲ ಹಂತದಲ್ಲಿ ಮಾ.15ರಿಂದ 23ರವರೆಗೆ ಮೈಸೂರು ಮೃಗಾಲಯವನ್ನು ಬಂದ್ ಮಾಡಲಾಗಿತ್ತು. ಅದರೂ ಎಲ್ಲೆಡೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದನ್ನು ಮನಗಂಡು ಎರಡನೆ ಹಂತದಲ್ಲಿ ಮಾ.31ರವರೆಗೂ ಬಂದ್ ವಿಸ್ತರಿಸಲಾಗಿತ್ತು. ಇದೀಗ ಏ.14ರವರೆಗೂ ಇಡಿ ದೇಶವನ್ನೇ ಲಾಕ್ ಡೌನ್ ಮಾಡಲು ಪ್ರದಾನಿ ಮೋದಿ ಆದೇಶಿಸಿರುವುದರಿಂದ ಮೃಗಾಲಯಕ್ಕೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧವಿದೆ. ಆದರೆ ಪ್ರತಿದಿನವೂ ಮೃಗಾಲಯದ ಪ್ರಾಣಿ, ಪಕ್ಷಿ ಪಾಲಕರು ಸದ್ದಿಲ್ಲದೆ ಸೇವೆ ಸಲ್ಲಿಸುತ್ತಿದ್ದಾರೆ.

ಮೈಸೂರು ಮ್ರಗಾಲಯದಲ್ಲಿ ಸುಮಾರು 200ಕ್ಕೂ ಹೆಚ್ಚು ಮಂದಿ ನೌಕರರಿದ್ದಾರೆ. ಕಚೇರಿ ಕೆಲಸ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಅಲ್ಲಿನ ಸಿಬ್ಬಂದಿಗಳಿಗೆ ರಜೆ ನೀಡಲಾಗಿದೆ. ಆದರೆ ಪ್ರಾಣಿ ಮತ್ತು ಪಕ್ಷಿಗಳ ಪಾಲಕರ ಸೇವೆ ಅನಿವಾರ್ಯವಾಗಿರುವುದರಿಂದ ಲಾಕ್ ಡೌನ್ ನಡುವೆಯೂ ಕೆಲಸಕ್ಕೆ ಹಾಜರಿಯಾಗುತ್ತಿದ್ದಾರೆ.

*ಕಡ್ಡಾಯವಾಗಿ ಸ್ಯಾನಿಟೈಸರ್ ನಿಂದ ಸ್ವಚ್ಚಗೊಂಡರೆ ಮಾತ್ರ: ಕೋವಿಡ್-19 ಹಾಗೂ ಹಕ್ಕಿಜ್ವರದ ಹಿನ್ನೆಲೆಯಲ್ಲಿ ಮೃಗಾಲಯದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಮೃಗಾಲಯದ ಪ್ರವೇಶ ದ್ವಾರದಲ್ಲಿ ವೈರಾಣು ನಾಶ ಮಾಡುವ ರಾಸಾಯನಿಕ ದ್ರಾವಣದಲ್ಲಿ ಮ್ಯಾಟ್ ಹಾಕಲಾಗಿದೆ. ಕಾರ್ಯನಿರ್ವಾಹಕ ನಿರ್ದೇಶಕರು ಒಳಗೊಂಡಂತೆ ಎಲ್ಲಾ ಸಿಬ್ಬಂದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿ ರಾಸಾಯನಿಕ ದ್ರಾವಣದಲ್ಲಿರುವ ಮ್ಯಾಟ್ ಮೇಲೆ ಪಾದವೂರಿ ಒಳ ಪ್ರವೇಶಿಸಬೇಕು. ನಂತರ ಅಲ್ಲಿಯೇ ಟೇಬಲ್ ಮೇಲಿಡಲಾಗಿರುವ ಸ್ಯಾನಿಟೈಸರ್ ನಿಂದ ಕೈ ಶುದ್ದ ಮಾಡಿಕೊಂಡರೆ ಮಾತ್ರ ಮೃಗಾಲಯದ ಒಳಗೆ ಬಿಡಲಾಗುತ್ತದೆ. ಪ್ರತಿದಿನ ಬೆಳಿಗ್ಗೆ 8.30 ರಿಂದ 9 ಗಂಟೆಯೊಳಗೆ ಎಲ್ಲಾ ಸಿಬ್ಬಂದಿಗಳು ಆಗಮಿಸಲಿದ್ದಾರೆ. ಜಿಲ್ಲಾಡಳಿತದ ಸೂಚನೆ ಮೇರೆಗೆ ಬಯೋಮೆಟ್ರಿಕ್ ಸ್ಥಗಿತಗೊಳಿಸಲಾಗಿದೆ.

ಸಾಮಾಜಿಕ ಅಂತರ ಕಾಯ್ದುಕೊಂಡು ಮೃಗಾಲಯ ಪ್ರವೇಶಿಸುವಂತೆ ಸೂಚನೆ ನೀಡಲಾಗಿದೆ. ಅಲ್ಲದೆ ಸಿಬ್ಬಂದಿಗೆ ನೀಡುವ ಕಾಫಿ, ಟಿ ಹಾಗೂ ಊಟದ ಸಮಯದಲ್ಲೂ ಅಂತರ ಕಾಯ್ದುಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಸಿಬ್ಬಂದಿಗಳು ಸೂಚನೆಯನ್ನು ಚಾಚು ತಪ್ಪದೆ ಪಾಲಿಸುತ್ತಿದ್ದಾರೆ. ಹೊರಗಿನಿಂದ ಹುಲ್ಲು, ಹಣ್ಣು- ತರಕಾರಿ ತರುವ ವಾಹನಗಳ ಟೈರ್ ಗೆ ರಾಸಾಯನಿಕ ದ್ರಾವಣ ಸಿಂಪಡಿಸಿದ ನಂತರವಷ್ಟೇ ಮೃಗಾಲಯಕ್ಕೆ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ.

ವಿನಾಯಿತಿ ಏಕಿಲ್ಲ: ಲಾಕ್ ಡೌನ್ ನಿಂದಾಗಿ ಕಾರ್ಖಾನೆ, ಕಚೇರಿ ಹಾಗೂ ವಿವಿಧ ಉದ್ಯಮದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ವಿನಾಯಿತಿ ಇದೆ. ಆದರೆ 200ಕ್ಕೂ ಹೆಚ್ಚು ಸಿಬ್ಬಂದಿಗಳಿರುವ ಮೃಗಾಲಯದ ಸಿಬ್ಬಂದಿಗಳಿಗೆ ರಜೆ ನೀಡದಿರುವ ಬಗ್ಗೆ ಪ್ರಶ್ನೆ ಸಹಜವಾಗಿ ಹುಟ್ಟಲಿದೆ. ಆದರೆ ಎಲ್ಲಾ ಪ್ರಾಣಿ ಹಾಗೂ ಪಕ್ಷಿಗಳ ಪಾಲನೆ ಹಾಗೂ ಪೋಷಣೆ ಪ್ರತಿದಿನ ಮಾದಲೇಬೇಕಾಗಿದೆ. ಅವುಗಳಿಗೆ ಆಹಾರ ನೀಡುವುದು. ನೀರು ಕುಡಿಸುವುದು. ಅವುಗಳ ಬೋನ್, ಪಂಜರವನ್ನು ಸ್ವಚ್ಚಗೊಳಿಸುವ ಕೆಲಸ ದಿನವೂ ಮಾಡಲೇಬೇಕಾಗಿದೆ. ಅಲ್ಲದೆ ಪ್ರಾಣಿಗಳು ತಮ್ಮ ಪಾಲಕರೊಂದಿಗೆ ಬಾಂಧವ್ಯ ಹೊಂದಿರುವುದರಿಂದ ಹೊಸಬರ ಮಾತನ್ನು ಕೇಳುವುದಿಲ್ಲ. ಇದನ್ನು ಮನಗಂಡು ಸಿಬ್ಬಂದಿಗಳೇ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ.

ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ: ಈ ಕುರಿತಂತೆ ‘ ಮೈಸೂರು ಮಿತ್ರ’ ನೊಂದಿಗೆ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ ಮಾತನಾಡಿ, ಪ್ರಾಣಿ ಪಕ್ಷಿಗಳ ಪಾಲನೆ ಮಾಡಬೇಕಾಗಿರುವುದರಿಂದ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಲ್ಲರಿಗೂ ಕೋವಿಡ್ -19 ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚನೆ ನೀಡಲಾಗಿದೆ. ಗೇಟ್ಸ್‌ ನಲ್ಲಿ ಸ್ಯಾನಿಟೈಸರ್ ಇಡಲಾಗಿದ್ದು, ಎಲ್ಲರೂ ಕೈ ತೊಳೆದುಕೊಂಡು ಬರುವಂತೆ ಹೇಳಿದ್ದೇವೆ. ಪ್ರಾಣಿ ಪಕ್ಷಿಗಳೊಂದಿಗೆ ಸಿಬ್ಬಂದಿಗಳ ಹಿತಕಾಯಲು ಕ್ರಮ ಕೈಗೊಳ್ಳಲಾಗಿದೆ ಎಂದರು.

Translate »