ಕೊರೊನಾ ಅಂಟುವ ಭೀತಿ; ಸರ್ಕಾರಿ ಅಸ್ಪತ್ರೆಗೆ ಹೋಗೊಕು ಹಿಂದೇಟು ಹಾಕುತ್ತಿರುವ ಮಂಡ್ಯದ ಜನ
ಮಂಡ್ಯ

ಕೊರೊನಾ ಅಂಟುವ ಭೀತಿ; ಸರ್ಕಾರಿ ಅಸ್ಪತ್ರೆಗೆ ಹೋಗೊಕು ಹಿಂದೇಟು ಹಾಕುತ್ತಿರುವ ಮಂಡ್ಯದ ಜನ

March 30, 2020

* ಕೊರೊನಾ ಭೀತಿಯಿಂದ ಕ್ಲಿನಿಕ್ ಗಳ ಭಾಗಿಲನ್ನೇ ತೆರೆಯದ ಖಾಸಗಿ ವೈದ್ಯರು

ಮಂಡ್ಯ,ಮಾ.29 ; ಇಡೀ ದೇಶವನ್ನೇ ಲಾಕ್ ಡೌನ್ ಮಾಡುವಷ್ಟರ ಮಟ್ಟಿಗೆ ತನ್ನ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ವೈರಸ್ ಇದೀಗ ರೋಗಿಗಳ ಪಾಲಿನ ದೇವಸ್ಥಾನಗಳೆನಿಸಿ ಕೊಂಡಿರುವ ಆಸ್ಪತ್ರೆಗಳಿಗೂ ಕಂಠಕ ತಂದಿಟ್ಟಿದೆ.
ಹೌದು, ಇದೀಗ ಆಸ್ಪತ್ರೆಗಳಿಗೂ “ಕೊರೊನಾ’’ ದೊಡ್ಡ ತಲೆನೋವು ತಂದಿಟ್ಟಿದೆ, ಕೊರೊನಾ ಸೋಂಕಿತರಿಗೂ ಚಿಕಿತ್ಸೆಗಾಗಿ ಆಸ್ಪತ್ರೆಯೊಳಗೇ “ ಕೇಂದ್ರ ‘’ತೆರೆದಿರುವುದರಿಂದ ಕೊರೊನಾ ಅಂಟುವ ಭೀತಿಯಿಂದ ಇತರೆ ರೋಗಿಗಳು ಮಂಡ್ಯದ ಸರ್ಕಾರಿ ಆಸ್ಪತ್ರೆಯತ್ತ ಕಾಲಿಡೋದಕ್ಕೂ ಭಯ ಪಡುತ್ತಿದ್ದಾರೆ.

ಇದುವರೆಗೂ ಯಾವುದೇ ಅಂಟುಜಾಡ್ಯಗಳಿಗೂ ಹೆದರದಿದ್ದ ಜನ ಇದೀಗ ಕೊರೊನಾ ವೈರಸ್ ನಂತಹ ಅಂಟು ಜಾಡ್ಯಕ್ಕೆ ಬೆಚ್ಚಿಬಿದ್ದಾರೆ.ಅರಿವಿಗೆಬಾರದಂತೆಯೇ ತನ್ನ ಅಟ್ಟಹಾಸ ಮೆರೆಯುತ್ತಿರುವ ಕೊರೊನಾದಿಂದ ಜನರ ಜೀವರಕ್ಷಕ ಕೇಂದ್ರಗಳಾದ ಆಸ್ಪತ್ರೆಗಳನ್ನೇ ಅನುಮಾನ,ಆತಂಕದಿಂದ ನೋಡುವ ಪರಿಸ್ಥಿತಿ ಬಂದೊದಗಿದೆ.

ಮಂಡ್ಯದ ಸರ್ಕಾರಿ ಜಿಲ್ಲಾಸ್ಪತ್ರೆಗೆ ನಿತ್ಯವೂ ಸಾವಿರಾರು ರೋಗಿಗಳು ವಿವಿಧ ಕಾಯಿಲೆಗಳ ಮೇಲೆ ಚಿಕಿತ್ಸೆಗೆ ಬಂದು,ಹೋಗುತ್ತಾರೆ, ಆದರೆ ಕೊರೊನಾ ಸೋಂಕಿತರಿಗೆ ಚಿಕಿತ್ಸಾ ಕೇಂದ್ರ ಓಪನ್ ಆದ ನಂತರ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ಹೋಗೊದು ಹೇಗಪ್ಪ ಅಂತ ಇತರೆ ಕಾಯಿಲೆಗಳ ರೋಗಿಗಳು ಆತಂಕಪಡುವ ಸ್ಥಿತಿ ಎದುರಾಗಿದೆ.

ಕೊರೊನಾ ಚಿಕಿತ್ಸಾ ಕೇಂದ್ರಗಳಿರುವ ಸರ್ಕಾರಿ ಆಸ್ಪತ್ರೆಗಳಿಗೆ ಹೋದರೆ ತಮಗೂ ಎಲ್ಲಿ,ಯಾವ ಕಡೆಯಿಂದ ,ಅದ್ಯಾವ ರೂಪದಲ್ಲಿ ಕೊರೊನಾ ಅಂಟಿಕೊಳ್ಳುವುದೋ ಎಂಬ ಭೀತಿ, ಇತರೆ ಕಾಯಿಲೆಗಳ ರೋಗಿಗಳು ಮಾತ್ರವಲ್ಲ ಸಾಮಾನ್ಯ ಜನರಲ್ಲಿಯೂ ಸಹಜವಾಗಿಯೇ ಆವರಿಸಿಕೊಂಡಿದೆ.

ಮಂಡ್ಯ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಹೊಂದಿಕೊಂಡಂತೆಯೇ ಇರುವ ಕಟ್ಟಡದಲ್ಲಿ ಕೊರೊನಾ ಶಂಕಿತರ ತಪಾಸಣಾ ಕೇಂದ್ರವನ್ನು ತೆರೆಯಲಾಗಿದೆ,ಆಸ್ಪತ್ರೆಯ ಇತರೆ ರೋಗಿಗಳಿ ರುವ ವಾರ್ಡ್ ಗಳಿಗೆ ಲೀಲಾಜಾಲವಾಗಿ ಹೋಗಿಬರುವ ಜನ ,ಕೊರೊನಾ ತಪಾಸಣಾ ಕೇಂದ್ರ ಆ ಕಡೆಯಿದೆ ಅಂತ ಹೆಸರು ಕೇಳಿದ ತಕ್ಷಣವೇ ಅತ್ತ ಅಪ್ಪಿ ತಪ್ಪಿಯೂ ಕಾಲಿಡದೆ ಮೂಗು ಬಾಯಿ ಮುಚ್ಚಿಕೊಂಡು ವಾಪಸ್ಸಾಗುವ ದೃಶ್ಯ ಕಂಡುಬಂತು.

ಭಾಗಿಲನ್ನೇ ತೆರೆಯದ ಖಾಸಗಿ ಕ್ಲಿನಿಕ್ ಗಳು;
ಸರ್ಕಾರಿ ಆಸ್ಪತ್ರೆಗೆ ಇತರೆ ರೋಗಿಗಳು ಮತ್ತು ಅವರ ಪೋಷಕರು ಭೇಟಿಕೊಡೋಕು ಭಯಪಡುವುತ್ತಿರುವುದು ಒಂದೆಡೆಯಾದರೆ ಮತ್ತೊಂದೆಡೆ ಕೊರೊನಾ ಶಂಕಿತರಿಗೆ ಚಿಕಿತ್ಸೆ ನೀಡಬೇಕಾಗುತ್ತದೆಂಬ ಭೀತಿಯಿಂದ ಕೆಲವು ವೈದ್ಯರೇ ಖಾಸಗಿ ಕ್ಲಿನಿಕ್ ಗಳನ್ನು ಬಂದ್ ಮಾಡಿರುವುದು ಕಂಡು ಬಂದಿದೆ.

ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಿನ್ನೆಯ ಸುದ್ದಿಗೋಷ್ಠೀಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲುರವರೇ ಖುದ್ದು ಖಾಸಗಿ ವೈದ್ಯರು ಮುಚ್ಚಿರುವ ಕ್ಲಿನಿಕ್ ಗಳನ್ನು ತೆರೆದು ರೋಗಿಗಳಿಗೆ ಚಿಕಿತ್ಸೆ ನೀಡುವಂತೆ ಮನವಿ ಮಾಡಿದ್ದುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಕೊರೊನಾ ತಪಾಸಣೆಗೆ ಪ್ರತ್ಯೇಕ ವ್ಯವಸ್ಥೆಮಾಡಿ ; ಕರ್ನಾಟಕ ರಾಜ್ಯದಾಧ್ಯಂತ ಕೊರೋನಾ ರೋಗ ಮಹಾಮಾರಿಯಂತೆ ಹಬ್ಬುತ್ತಿದ್ದು, ಮುಂದಿನ ದಿನಗಳಲ್ಲಿ ಇದು ಮತ್ತಷ್ಟೂ ತೀವ್ರ ಸ್ವರೂಪ ಪಡೆಯುವ ಮುನ್ಸೂಚನೆಯನ್ನು ನೀಡುತ್ತಿದೆ,ಆದ್ದರಿಂದ, ಕೇಂದ್ರ ಮತ್ತು ರಾಜ್ಯ ಸರ್ಕಾರ ಜನವಸತಿತಾಣಗಳಿಂದ ದೂರವಿರುವ ಕಲ್ಯಾಣ ಮಂಟಪಗಳು, ಸರ್ಕಾರಿ ಶಾಲೆಗಳು, ಖಾಸಗಿ ಶಾಲಾ ಕಾಲೇಜುಗಳ ಕಟ್ಟಡಗಳು, ಹಾಸ್ಟೆಲ್ ಗಳು, ಡಾರ್ಮೆಂಟರಿಗಳು, ಲಾಡ್ಜ್ ಗಳನ್ನು ವಶಕ್ಕೆ ತೆಗೆದುಕೊಂಡು ತಾತ್ಕಾಲಿಕವಾಗಿ ಅವುಗಳನ್ನು ಕೊರೋನಾ ಸೋಂಕಿತರ ಆಸ್ಪತ್ರೆಯಾಗಿ ಪರಿವರ್ತಿಸಿ, ಪ್ರತ್ಯೇಕವಾದ ಚಿಕಿತ್ಸೆ ನೀಡಬೇಕು ಎಂದು ಮಂಡ್ಯ ಜಿಲ್ಲಾ ಬಿಇಡಿ.,ಬಿಪಿಇಡಿ ಮತ್ತು ಸ್ನಾತಕೋತ್ತರ ಪದವೀಧರರ ಸಂಘ(ರಿ)ದ ಅಧ್ಯಕ್ಷ ಎಂ.ಇ.ಶಿವಣ್ಣಮಂಗಲ ಅವರು ಆಗ್ರಹಿಸಿದ್ದಾರೆ.

ಅಂಟುಜಾಡ್ಯವಾಗಿರುವ ಕೊರೊನಾ ಶಂಕಿತರಿಗೂ ಸರ್ಕಾರಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡುವ ಬದಲಾಗಿ ಕೇವಲ ಇತರ ಕಾಯಿಲೆಗಳಿಂದ ನರಳುತ್ತಿರುವವರಿಗೆ ಮಾತ್ರ ಚಿಕಿತ್ಸೆ ನೀಡಬೇಕು.ಏಕೆಂದರೆ ಸಣ್ಣ ಪುಟ್ಟ ಕಾಯಿಲೆಗಳನ್ನು ಹೊಂದಿರುವ ಅದೆಷ್ಟೋ ಮಂದಿ ಕೊರೋನಾ ರೋಗದ ಭಯದಿಂದ ಆಸ್ಪತ್ರೆಗಳಿಗೆ ಹೋಗಿ, ಚಿಕಿತ್ಸೆ ಪಡೆಯದೇ ಹಿಂದೇಟು ಹಾಕುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Translate »