ಮೈಸೂರಿನಲ್ಲಿ ಮತ್ತೆ ನಾಲ್ವರಲ್ಲಿ ಕೊರೊನಾ ಸೋಂಕು ಪತ್ತೆ: ಸೋಂಕಿತರ ಸಂಖ್ಯೆ 12ಕ್ಕೆ ಏರಿಕೆ
ಮೈಸೂರು

ಮೈಸೂರಿನಲ್ಲಿ ಮತ್ತೆ ನಾಲ್ವರಲ್ಲಿ ಕೊರೊನಾ ಸೋಂಕು ಪತ್ತೆ: ಸೋಂಕಿತರ ಸಂಖ್ಯೆ 12ಕ್ಕೆ ಏರಿಕೆ

March 31, 2020

* ಕ್ವಾರಂಟೇನ್ ನಲ್ಲಿರುವವರಿ ಮನೆಯಿಂದ ಹೊರಗೆ ಬಂದರೆ ಕ್ರಿಮಿನಲ್ ಪ್ರಕರಣ ದಾಖಲು

* ಸಚಿವ ವಿ.ಸೋಮಣ್ಣ ಎಚ್ಚರಿಕೆ

ಮೈಸೂರು,ಮಾ.30( MTY ) – ನಂಜನಗೂಡಿನ ಜ್ಯುಬಿಲಿಯಂಟ್ ಕಾರ್ಖಾನೆಯ ಮತ್ತೆ ನಾಲ್ವರು ನೌಕರರಿಗೆ ಕೊರೊನಾ ಸೋಂಕು ಇರುವುದು ದೃಡಪಟ್ಟಿದೆ, ಸೋಂಕು ಹರಡುವುದನ್ನು ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳಲಾಗಿದ್ದು ನಿಯಮ ಉಲ್ಲಂಘಿಸಿ ಕ್ವಾರಂಟೇನ್ ನಲ್ಲಿರುವವರು ಹೊರಗೆ ಬಂದರೆ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಮೈಸೂರು ಜಿಲ್ಲ‍ಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಎಚ್ಚರಿಸಿದ್ದಾರೆ.

ಮೈಸೂರು ಜಿ.ಪಂ ಸಭಾಂಗಣದಲ್ಲಿ ಸೋಮವಾರ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕೋವಿಡ್-19 ತಡೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಚರ್ಚಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವದ ಹಲವು ರಾಷ್ಟ್ರಗಳನ್ನು ಕಾಡುತ್ತಿರುವ ನೊವೆಲ್ ಕೊರೊನಾ ವೈರಸ್ ವಿರುದ್ಧ ಸಮಾರೋಪಾದಿಯಲ್ಲಿ ಹೋರಾಟ ನಡೆಯುತ್ತಿದೆ. ಮೈಸೂರಲ್ಲೂ ಕೊರೊನಾ ವೈರಸ್ ವ್ಯಾಪಿಸದಂತೆ ಜಿಲ್ಲಾಡಳಿತ ಸಮಪರ್ಕವಾಗಿ ಕಾರ್ಯನಿರ್ವಹಿಸಿದೆ. ಇದರಿಂದ ದೊಡ್ಡ ಮಟ್ಟದ ಸಮಸ್ಯೆ ಉಂಟಾಗಿಲ್ಲ ಎಂದು ಶ್ಲಾಘಿಸಿದರು.

ಮೈಸೂರು ನಗರ ಸೇರಿದಂತೆ ಜಿಲ್ಲೆಯಲ್ಲಿ ಇದುವರೆಗೂ 2500ಕ್ಕೂ ಹೆಚ್ಚು ಮಂದಿಯನ್ನು ನಿಗಾದಲ್ಲಿಡಲಾಗಿತ್ತು. ಅವರಲ್ಲಿ 821 ಮಂದಿ 14 ದಿನಗಳ ಹೋಮ್ ಕ್ವಾರಂಟೇನ್ ಮುಗಿಸಿ, ಆರೋಗ್ಯವಂತರಾಗಿ ಹೊರ ಬಂದಿದ್ದಾರೆ. 1701 ಮಂದಿ ಹೋಮ್ ಕ್ವಾರಂಟೇನ್ ನಲ್ಲಿದ್ದಾರೆ. ಇಂದು ಬೆಳಿಗ್ಗೆಯಷ್ಟೇ ಜ್ಯುಬಿಲಿಯಂಟ್ ಕಾರ್ಖಾನೆಯ ನಾಲ್ವರಿಗೆ ಕೊರೊನಾ ಸೋಂಕು ದೃಡಪಟ್ಟಿದೆ. ಒಟ್ಟು 12 ಮಂದಿ ಸೋಂಕಿತರಲ್ಲಿ 6 ಮಂದಿಯನ್ನು ಈಗಾಗಲೆ ಕೆ.ಆರ್.ಎಸ್ ರಸ್ತೆಯಲ್ಲಿರುವ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಉಳಿದ ಆರು ಮಂದಿಯನ್ನು ಸಂಜೆಯೊಳಗೆ ಕೆ.ಆರ್.ಆಸ್ಪತ್ರೆಯಿಂದ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತದೆ ಎಂದರು.

ದಾಖಲಾಗಿರುವ 12 ಪಾಸಿಟಿವ್ ಪ್ರಕರಣದಲ್ಲಿ 2 ವಿದೇಶದಿಂದ ಬಂದವರಾಗಿದ್ದು, ಉಳಿದ 10 ಪ್ರಕರಣ ಜ್ಯುಬಿಲಿಯಂಟ್ ಕಾರ್ಖಾನೆ ನೌಕರರಾಗಿದ್ದಾರೆ. ಹೋಮ್ ಕ್ವಾರಂಟೇನ್ ನಲ್ಲಿದ್ದವರಲ್ಲಿ 1443 ಮಂದಿ ವಿದೇಶ ಹಾಗೂ ಹೊರ ರಾಜ್ಯದಿಂದ ಬಂದವರಾಗಿದ್ದರೆ, 1087 ಮಂದಿ(ಜ್ಯುಬಿಲಿಯಂಟ್ ನೌಕರರು ಒಳಗೊಂಡಂತೆ) ಸ್ಥಳೀಯರಾಗಿದ್ದಾರೆ. 821 ಮಂದಿ ಕ್ವಾರಂಟೇನ್ ಮುಗಿಸಿ ಸುರಕ್ಷಿತವಾಗಿ ಬಂದಿರುವುದು ಸಾಧನೆಯಾಗಿದೆ ಎಂದರು.

ಕ್ರಿಮಿನಲ್ ಪ್ರಕರಣ: ಜ್ಯುಬಿಲಿಯಂಟ್ ಕಾರ್ಖಾನೆ ನೌಕರರ ಸೇರಿದಂತೆ ನಂಜನಗೂಡು ತಾಲೂಕಲ್ಲಿ 753 ಮಂದಿ ಹೋಮ್ ಕ್ವಾರಂಟೇನ್ ನಲ್ಲಿದ್ದಾರೆ. ಕೆಲವರು ಮನೆಯಿಂದ ಹೊರಗೆ ಬಂದು ಓಡಾಡುತ್ತಿರುವ ಬಗ್ಗೆ ದೂರು ಬಂದಿದೆ. ಇಷ್ಟು ದಿನ ವಿನಯವಾಗಿ ಹೇಳಿದ್ದಾಗಿದೆ. ಮನೆಯಿಂದ ಹೊರಬಂದ ಕ್ವಾರಂಟೇನ್ ನಲ್ಲಿರುವವರು ಕಂಡು ಬಂದರೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ. ಆ ಮೂಲಕ ಇನ್ನಷ್ಟು ನೋವು ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪೊಲೀಸ್ ಕಾವಲು: ನಂಜನಗೂಡಲ್ಲಿ ಕ್ವಾರಂಟೇನ್ ನಲ್ಲಿರುವ 10 ಮಂದಿಗೆ ಒಬ್ಬ ಪೊಲೀಸರನ್ನು ನಿಯೋಜಿಸಲಾಗಿದೆ. ಇವರು ಪ್ರತಿದಿನ ಕ್ವಾರಂಟೇನ್ ನಲ್ಲಿರುವವರನ್ನು ಮನೆಯಿಂದ ಈಚೆ ಬರದಂತೆ ನೋಡಿಕೊಳ್ಳಲಿದ್ದಾರೆ. ಸಂಕಷ್ಟದಲ್ಲಿರುವ ಜನರು ಗಟ್ಟಿ ಮನಸ್ಸು ಮಾಡಿ 14 ದಿನಗಳ ಕ್ವಾರಂಟೇನ್ ಮುಗಿಸುವಂತೆ ಕೋರಿದರು.

250 ಹಾಸಿಗೆ ಸೌಲಭ್ಯ ಕಾಯ್ದಿರಿಸಲಾಗಿದೆ: ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿದ ಸಚ್ಚಾಗಿದೆ. ಮೈಸೂರಲ್ಲಿ 17 ವೆಂಟಿಲೇಟರ್ ಇದೆ. ಮೂರು ಖಾಸಗಿ ಆಸ್ಪತ್ರೆ ಸೇರಿದಂತೆ 250 ಹಾಸಿಗೆ ವ್ಯವಸ್ಥೆ ಕಾಯ್ದಿರಿಸಲಾಗಿದೆ. ಒಂದು ಸಾವಿರ ಮಂದಿಗೆ ಕ್ವಾರಂಟೇನ್ ಮಾಡಲು ವ್ಯವಸ್ಥೆ ಮಾಡಲಾಗಿದೆ.

ಮಾಸ್ಕ್ ಸೇರಿದಂತೆ ಚಿಕಿತ್ಸೆ ನೀಡಲು ಬೇಕಾದ ಕಿಟ್ ತರಲಾಗಿದೆ. ಮಂಗಳವಾರ ಜಿಲ್ಲೆಯ ಎಲ್ಲಾ ತಾಲೂಕಿಗೂ ಅಗತ್ಯಕ್ಕನುಗುಣವಾಗಿ ಮಾಸ್ಕ್ ಹಾಗೂ ಕಿಟ್ ವಿತರಿಸಲಾಗುತ್ತದೆ ಎಂದರು.

ಫ್ಲೈಯಿಂಗ್ ಸ್ಕ್ವಾಡ್ ರಚನೆ: ಸೋಂಕು ಹರಡುವುದನ್ನು ತಡೆಗಟ್ಟಲು ಸಾಮಾಜಿಕ ಅಂತರ(ಸೋಷಿಯಲ್ ಡಿಸ್ಟೆನ್ಸ್) ಕಾಪಾಡಿಕೊಳ್ಳುವುದು ಮುಖ್ಯ. ಈ ಹಿನ್ನೆಲೆಯಲ್ಲಿ ತಾಲೂಕು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಗುಂಪುಗೂಡದಂತೆ ಜಾಗೃತಿ ಮೂಡಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳ ನೈತೃತ್ವದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ರಚಿಸಲಾಗಿದೆ. ಈ ತಂಡ ಪಂಚಾಯ್ತಿ ಹಾಗೂ ಇನ್ನಿತರೆಡೆಗಳಲ್ಲಿ ಅರಿವು ಮೂಡಿಸಲಿದೆ ಎಂದು ತಿಳಿಸಿದರು.

ಪಡಿತರ ವಿತರಣೆ: ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಸ್ತು ಪಡೆಯಲು ಕೆಲವರಿಗೆ ತೊಡಕಾಗುತ್ತಿದೆ ಎಂಬ ದೂರು ಕೇಳಿ ಬಂದಿವೆ. ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡದಿರುವುದೇ ಸಮಸ್ಯೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಆಧಾರ್ ಕಾರ್ಡ್ ಇರಲೀ, ಇಲ್ಲದಿರಲೀ ಪಡಿತರ ವಸ್ತುಗಳನ್ನು ನೀಡುವಂತೆ ಸೂಚಿಸಿದ್ದೇನೆ. ಅಲ್ಲದೆ ವಸತಿಹೀನರು, ಅಲೆಮಾರಿಗಳ ಕುಟುಂಬಗಳಿಗೂ ಮುಂದಿನ 15 ದಿನದವರೆಗೂ ದಿನಸಿ ಹಾಗೂ ಅಗತ್ಯ ವಸ್ತುಗಳನ್ನು ಪೂರೈಸಲು ಸೂಚಿಸಿದ್ದೇನೆ ಎಂದು ವಿವರಿಸಿದರು.

ನೌಕರರಿಗೆ ಹಣ ನೀಡಲು ಕ್ರಮ: ಜ್ಯುಬಿಲಿಯಂಟ್ ಕಾರ್ಖಾನೆಯ ನೌಕರರನ್ನು ಹೋಮ್ ಕ್ವಾರಂಟೇನ್ ನಲ್ಲಿಡಲಾಗಿರುವಿದರಿಂದ ಅವರ ವೇತನದಲ್ಲಿ ಶೇ. 30 – 40ರಷ್ಟು ಹಣವನ್ನು ನೌಕರರ ಕುಟುಂಬಕ್ಕೆ ಕೊಡಿಸುವಂತೆ ಸಲಹೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಕಾರ್ಖಾನೆ ಆಡಳಿತ ಮಂಡಳಿಯೊಂದಿಗೆ ಜಿಲ್ಲಾಧಿಕಾರಿಗಳು ಮಾತನಾಡಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಸದ ಪ್ರತಾಪ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಜಿ.ಟಿ.ದೇವೇಗೌಡ, ಡಾ.ಯತೀಂದ್ರ ಸಿದ್ದರಾಮಯ್ಯ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಎಸ್ ಪಿ ಸಿ.ಬಿ.ರಿಷ್ಯಂತ್ ಹಾಗೂ ಇನ್ನಿತರರು ಇದ್ದರು.

Translate »