ಫೆ.15ರವರೆಗೂ ಶಾಲಿವಾಹನ ರಸ್ತೆ ಸಂಚಾರ ನಿರ್ಬಂಧ
ಮೈಸೂರು

ಫೆ.15ರವರೆಗೂ ಶಾಲಿವಾಹನ ರಸ್ತೆ ಸಂಚಾರ ನಿರ್ಬಂಧ

January 3, 2020

ಮೈಸೂರು,ಜ.2(ಎಂಕೆ)-ಮೈಸೂರು ಮೃಗಾಲಯದ ಮುಂಭಾಗದಲ್ಲಿ ಅಂಡರ್ ಪಾಸ್ ನಿರ್ಮಿಸುತ್ತಿರುವ ಹಿನ್ನೆಲೆ ಜ.2 ರಿಂದ ಫೆ.15ರವರೆಗೆ ಶಾಲಿವಾಹನ ರಸ್ತೆ ಸಂಚಾರ ನಿರ್ಬಂಧಿಸಿ, ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗಿದೆ.

ಮೃಗಾಲಯದ ಎದುರಿನ ಶಾಲಿವಾಹನ ರಸ್ತೆಯ ಪಶ್ಚಿಮ ಭಾಗದಲ್ಲಿರುವ ವಾಹನಗಳ ನಿಲುಗಡೆ ಸ್ಥಳದಿಂದ ರಸ್ತೆಯ ಪೂರ್ವ ಭಾಗದಲ್ಲಿರುವ ಮೃಗಾಲಯದ ಆವರಣಕ್ಕೆ ಸಾರ್ವಜನಿಕರ ಸುರಕ್ಷಿತವಾಗಿ ಪ್ರವೇಶಿಸಲು ಅಂಡರ್‍ಪಾಸ್ ನಿರ್ಮಿ ಸಲು ಉದ್ದೇಶಿಸಿರುವುದರಿಂದ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.

ವಾಹನ ಸಂಚಾರದ ನಿರ್ಬಂಧ: ಶಾಲಿವಾಹನದ ರಸ್ತೆಯಲ್ಲಿ ಅರುಣಾಚಲಂ ಸ್ಟ್ರೀಟ್ ಜಂಕ್ಷನ್‍ನಿಂದ ದಕ್ಷಿಣಕ್ಕೆ ಹೊಸಬೀದಿ 5ನೇ ತಿರುವು ರಸ್ತೆಯ ಜಂಕ್ಷನ್‍ವರೆಗೆ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿದೆ. ಶಾಲಿವಾಹನ ರಸ್ತೆಯಲ್ಲಿ ಅರುಣಾಚಲಂ ಸ್ಟ್ರೀಟ್ ಜಂಕ್ಷನ್‍ನಿಂದ ಉತ್ತರಕ್ಕೆ ಲಿಂಗಣ್ಣ ವೃತ್ತ (ಚಿರಾಗ್ ಜಂಕ್ಷನ್) ವರೆಗೆ, ಉತ್ತರದಿಂದ ದಕ್ಷಿಣಕ್ಕೆ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿದೆ. ಈ ಭಾಗದ ರಸ್ತೆಯಲ್ಲಿ ದಕ್ಷಿಣದಿಂದ ಉತ್ತರಕ್ಕೆ ಏಕಮುಖ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಮಾನಸರ ರಸ್ತೆಯಲ್ಲಿ ಜ್ವಾಲಾಮುಖಿ ವೃತ್ತದಿಂದ ಲೋಕರಂಜನ್ ರಸ್ತೆ ಜಂಕ್ಷನ್‍ವರೆಗೆ ದಕ್ಷಿಣದಿಂದ ಉತ್ತರಕ್ಕೆ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿದ್ದು, ಈ ಭಾಗದ ರಸ್ತೆಯಲ್ಲಿ ಉತ್ತರದಿಂದ ದಕ್ಷಿಣಕ್ಕೆ ಏಕಮುಖ ವಾಹನ ಸಂಚಾರವಿರಲಿದೆ. ಟ್ಯಾಂಕ್‍ಬಂಡ್ ರಸ್ತೆಯಲ್ಲಿ ಶಾಲಿವಾಹನ ರಸ್ತೆ ಜಂಕ್ಷನ್‍ನಿಂದ ಜ್ವಾಲಾಮುಖಿ ವೃತ್ತದವರೆಗೆ ಪೂರ್ವದಿಂದ ಪಶ್ಚಿಮಕ್ಕೆ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿದ್ದು, ರಸ್ತೆಯಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ಏಕಮುಖ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಬದಲಿ ಮಾರ್ಗ: ಶಾಲಿವಾಹನ ರಸ್ತೆಯಲ್ಲಿ ಲಿಂಗಣ್ಣ ವೃತ್ತ (ಚಿರಾಗ್ ಜಂಕ್ಷನ್) ನಿಂದ ಉತ್ತರದಿಂದ ದಕ್ಷಿಣಕ್ಕೆ ಸಂಚರಿಸುತ್ತಿದ್ದ ವಾಹನಗಳು ಲೋಕರಂಜನ್ ರಸ್ತೆಯಲ್ಲಿ ಪಶ್ಚಿಮಕ್ಕೆ ಸಾಗಿ ಮಾನಸರ ರಸ್ತೆಯ ಜಂಕ್ಷನ್‍ನಲ್ಲಿ ದಕ್ಷಿಣಕ್ಕೆ ಸಾಗಿ ಮಾನಸರ ರಸ್ತೆ ಮೂಲಕ ಜ್ವಾಲಾಮುಖಿ ವೃತ್ತ ತಲುಪಿ ಮುಂದೆ ಸಾಗಬೇಕು. ಮಾನಸರ ರಸ್ತೆಯಲ್ಲಿ ಜ್ವಾಲಾಮುಖಿ ವೃತ್ತದಿಂದ ಲೋಕರಂಜನ್ ರಸ್ತೆ ಜಂಕ್ಷನ್‍ವರೆಗೆ ಸಂಚರಿಸುತ್ತಿದ್ದ ವಾಹನಗಳು ಜ್ವಾಲಾಮುಖಿ ವೃತ್ತದಿಂದ ಟ್ಯಾಂಕ್‍ಬಂಡ್ ರಸ್ತೆಯಲ್ಲಿ ಪೂರ್ವಕ್ಕೆ ಸಾಗಿ ಶಾಲಿವಾಹನ ರಸ್ತೆ ತಲುಪಿ ಮುಂದೆ ಸಾಗಬೇಕು.

ಟ್ಯಾಂಕ್‍ಬಂಡ್ ರಸ್ತೆಯಲ್ಲಿ ಶಾಲಿವಾಹನ ರಸ್ತೆ ಜಂಕ್ಷನ್‍ನಿಂದ ಪಶ್ಚಿಮಕ್ಕೆ ಜ್ವಾಲಾಮುಖಿ ವೃತ್ತದವರೆಗೆ ಸಂಚರಿಸುತ್ತಿದ್ದ ವಾಹನಗಳು ಶಾಲಿವಾಹನ ರಸ್ತೆಯಲ್ಲಿ ಉತ್ತರಕ್ಕೆ ಸಾಗಿ ಲೋಕರಂಜನ್ ರಸ್ತೆ ತಲುಪಿ ಮುಂದೆ ಸಾಗಬೇಕು. ಮೃಗಾಲಯಕ್ಕೆ ಬರುವ ವಾಹನಗಳು ಲಭ್ಯವಿರುವ ಪರ್ಯಾಯ ಮಾರ್ಗಗಳ ಮೂಲಕ ರೇಸ್‍ಕೋರ್ಸ್ ವೃತ್ತ ತಲುಪಿ ಶಾಲಿವಾಹನ ರಸ್ತೆಯಲ್ಲಿ ಉತ್ತರಕ್ಕೆ ಸಾಗಿ ಹೊಸಬೀದಿಯ 5ನೇ ತಿರುವು ರಸ್ತೆಯ ಬಳಿಯಿರುವ ಮೃಗಾಲಯದ ವಾಹನ ನಿಲುಗಡೆ ಸ್ಥಳವನ್ನು ತಲುಪಬೇಕು. ರೇಸ್‍ಕೋರ್ಸ್ ವೃತ್ತದಿಂದ ಶಾಲಿವಾಹನ ರಸ್ತೆಯಲ್ಲಿ ಹೊಸಬೀದಿ 5ನೇ ತಿರುವು ರಸ್ತೆಯ ನಂತರ ಸಂಚರಿಸುತ್ತಿದ್ದ ವಾಹನಗಳು ಎಸ್.ಆರ್.ಟಿ ಗ್ಯಾರೇಜ್ ಜಂಕ್ಷನ್‍ನಲ್ಲಿ ಎಡತಿರುವು ಪಡೆದು ಮಾನಸರ ರಸ್ತೆ ಮೂಲಕ ಅಥವಾ ರೇಸ್‍ಕೋರ್ಸ್ ವೃತ್ತದಿಂದ ಲಲಿತ ರಸ್ತೆ ಮೂಲಕ ಕಾರಂಜಿಕೆರೆ ರಸ್ತೆ ತಲುಪಿ ಮುಂದೆ ಸಾಗಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Translate »