ಬೆಂಗಳೂರು, ಅ.29: ಉಪಚುನಾವಣೆಯಲ್ಲಿ ಬಿಜೆಪಿ ಮಣಿಸಿ, ಮೈತ್ರಿ ಸರ್ಕಾರವನ್ನು ಮತ್ತಷ್ಟು ಗಟ್ಟಿಗೊಳಿಸುವ ಗುರಿ ಹಿನ್ನೆಲೆಯಲ್ಲಿ, ಹಾವು-ಮುಂಗುಸಿಯಂತಿದ್ದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ 13 ವರ್ಷಗಳ ನಂತರ ಒಂದೇ ವೇದಿಕೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದಾರೆ.
ಬಿಜೆಪಿ ವಿರುದ್ಧ ರಾಷ್ಟ್ರ ಮಟ್ಟದಲ್ಲಿ ಪ್ರತಿಪಕ್ಷಗಳನ್ನು ಒಂದು ಮಾಡಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲೂ ಮೈತ್ರಿಯೊಂದಿಗೆ ಕಣಕ್ಕಿಳಿ ಯುವ ಉದ್ದೇಶದಿಂದ ತಮ್ಮೆಲ್ಲಾ ವೈಮನಸ್ಸನ್ನು ಬದಿಗಿರಿಸಿ ಮತದಾರರ ಮನವೊಲಿಸಲು ಹೊರಟಿದ್ದಾರೆ.
ದೇವೇಗೌಡರ ಕುಟುಂಬದ ವಿರುದ್ಧ ಸದಾ ವಾಗ್ದಾಳಿ ನಡೆಸುತ್ತಿದ್ದ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ಪರ ಇಂದು ಬಳ್ಳಾರಿಯ ಕೂಡ್ಲಿಗಿಯಲ್ಲಿ ಜಂಟಿಯಾಗಿ ಚುನಾವಣಾ ಪ್ರಚಾರ ಮಾಡಿದರು. ಇದು ಇಂದಿಗೆ ಮುಗಿದಿಲ್ಲ, ನಾಳೆ ಶಿವಮೊಗ್ಗದಲ್ಲಿ ಎರಡು ದಿನಗಳ ಕಾಲ ಈ ನಾಯಕರು ಜಂಟಿಯಾಗಿ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಪರ ಮತಯಾಚನೆ ಮಾಡಲಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನಗೊಳಿಸಲು ರಾಜ್ಯ ಬಿಜೆಪಿ ನಾಯಕರು ಆಗಿಂದಾಗ್ಯೆ ನಡೆಸುತ್ತಿರುವ ಕಸರತ್ತಿಗೆ ಕಡಿವಾಣ ಹಾಕುವುದು, ಮುಂದಿನ ಲೋಕಸಭಾ ಚುನಾವಣೆಗೆ ಮೈತ್ರಿ ಗಟ್ಟಿ ಮಾಡಿಕೊಳ್ಳುವುದೇ ಇದರ ಉದ್ದೇಶ. ಉಭಯ ನಾಯಕರು ಎರಡು ಪ್ರಮುಖ ಸಮುದಾಯಗಳ ಪ್ರಭಾವಿಗಳು, ಇವರು ಒಂದಾಗಿ ರಾಜ್ಯದ ಐದು ಕ್ಷೇತ್ರಗಳಲ್ಲಿ ಹೋರಾಟ ನಡೆಸುವುದರಿಂದ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಿ, ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಬಹುದೆಂಬ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಲಹೆಯಂತೆ ತಮ್ಮ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಮರೆತು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ಕಳೆದ 2004ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯ ಹಾಗೂ ಜೆಡಿಎಸ್‍ನ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು ಅಂದು ಕಾಂಗ್ರೆಸ್ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಸಿ ನಂತರ ಅದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದರು. ನಂತರ ಉಭಯ ನಾಯಕರಲ್ಲಿ ರಾಜಕೀಯ ಭಿನ್ನಾಭಿಪ್ರಾಯ ತಲೆದೋರಿದ್ದರಿಂದ ದೇವೇಗೌಡ ಅವರು, ತಮ್ಮ ವಿರುದ್ಧ ತಿರುಗಿಬಿದ್ದ ಸಿದ್ದರಾಮಯ್ಯ ಮತ್ತು ಸಿ.ಎಂ.ಇಬ್ರಾಹಿಂ ಅವರನ್ನು ಪಕ್ಷದಿಂದ ಹೊರಹಾಕಿದ್ದರು. ಅಂದಿನಿಂದ ಇಂದಿನವರೆಗೂ ಉಭಯ ನಾಯಕರು ಒಂದೇ ವೇದಿಕೆ ಹಂಚಿಕೊಂಡಿರಲಿಲ್ಲ. 13 ವರ್ಷಗಳ ನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಒಂದಾಗಿ ಕಾಣಿಸಿಕೊಂಡಿದ್ದಾರೆ.
ರಾಹುಲ್ ಸಲಹೆ ಚುನಾವಣಾ ಫಲಿತಾಂಶದ ಮೇಲೆ ಅನುಕೂಲ ವಾತಾವರಣ ಉಂಟು ಮಾಡುವುದೇ ಎಂದು ಕಾದುನೋಡಬೇಕು. ಈ ಮೈತ್ರಿ ಯಶಸ್ವಿಯಾದರೆ ಬಿಜೆಪಿಗೆ ರಾಷ್ಟ್ರಮಟ್ಟದಲ್ಲಿ ಪ್ರಬಲ ಪ್ರತಿಪಕ್ಷ ನಿರ್ಮಿಸಲು ಸಹಕಾರಿಯಾಗಲಿದೆ.