ಸಾರಿಗೆ ಬಸ್-ಟಿಪ್ಪರ್ ಡಿಕ್ಕಿ: ಸ್ಟಾಫ್ ನರ್ಸ್ ಸಾವು
ಮೈಸೂರು

ಸಾರಿಗೆ ಬಸ್-ಟಿಪ್ಪರ್ ಡಿಕ್ಕಿ: ಸ್ಟಾಫ್ ನರ್ಸ್ ಸಾವು

October 30, 2018

ಹುಣಸೂರು, ಅ. 29: ಇಂದು ಬೆಳಿಗ್ಗೆ ಸಾರಿಗೆ ಬಸ್ ಮತ್ತು ಜಲ್ಲಿ ತುಂಬಿದ ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿ, ಈ ಭೀಕರ ಅಪಘಾತದಲ್ಲಿ ಸ್ಟಾಫ್ ನರ್ಸ್ ಒಬ್ಬರು ಸಾವನ್ನಪ್ಪಿದ್ದಾರೆ. ಇತರ 20 ಮಂದಿ ಗಾಯಗೊಂಡಿದ್ದು, ಈ ಘಟನೆ ಹುಣಸೂರು ಹೆದ್ದಾರಿಯಲ್ಲಿ ಬಿಳಿಕೆರೆ ಬಳಿ ಸಂಭವಿಸಿದೆ.

ಪಿರಿಯಾಪಟ್ಟಣ ತಾಲೂಕು ಭೋಗನಹಳ್ಳಿ ಗ್ರಾಮದ ನಸ್ರುಲ್ಲಾ ಷರೀಫ್ ಪುತ್ರಿ ಸುನೇರ ಬಾನು(28) ಸಾವನ್ನಪ್ಪಿದ ಸ್ಟಾಫ್ ನರ್ಸ್. ಘಟನೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಮಲ್ಲಿಕಾರ್ಜುನ(35), ಕಂಡಕ್ಟರ್ ಸಮಂತ(28), ಬಸ್ ಪ್ರಯಾಣಿಕರಾದ ಹುಣಸೂರು ತಾಲೂಕಿನ ಅಡಗನಹಳ್ಳಿ ನಿವಾಸಿ ಜಯರಾಂ(55), ಪಿರಿಯಾಪಟ್ಟಣ ತಾಲೂಕಿನ ಮಾಗೋಡು ಗ್ರಾಮದ ಜಯಣ್ಣ ಅವರ ಪತ್ನಿ ಶ್ರೀಮತಿ ಮಲ್ಲಿಗೆ(40), ಪುತ್ರ ಸಚಿನ್(17), ಮಾರೂರು ಗ್ರಾಮದ ಮಂಜುಳಾ(27), ನಾಗರಾಜ್ ಅವರ ಪತ್ನಿ ಶ್ರೀಮತಿ ಲಕ್ಷ್ಮಿ(38), ಹೂಟ ಗಳ್ಳಿಯ ಕೆ.ಜಿ. ರಾಜಶೇಖರಾಚಾರಿ ಅವರ ಪತ್ನಿ ಶ್ರೀಮತಿ (42) ಸೇರಿ ಒಟ್ಟು 20 ಮಂದಿ ಗಾಯಗೊಂಡಿದ್ದಾರೆ.

9 ಮಂದಿ ಮೈಸೂರಿನ ಕೆಆರ್. ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಉಳಿದ ಗಾಯಾಳುಗಳು ಬೇರೆ ಬೇರೆ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪಘಾತದಲ್ಲಿ ಸಾವಿಗೀಡಾದ ಸ್ಟಾಫ್‍ನರ್ಸ್ ಸುನೇರ ಬಾನು.

ಘಟನೆಯ ವಿವರ: ಪಿರಿಯಾಪಟ್ಟಣದಿಂದ ಮೈಸೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ (ಕೆಎಂ9, ಎಫ್5118) ಬಸ್ಸು ಮಲ್ಲಿನಾಥಪುರ ಬಳಿ ಬಿಳಿಕೆರೆ ಬಸ್ ನಿಲ್ದಾಣ ದತ್ತ ಹೋಗಲು ಬಲಕ್ಕೆ ತಿರುವು ಪಡೆಯುವಾಗ ಮೈಸೂರು ಕಡೆಯಿಂದ ವೇಗವಾಗಿ ಬಂದ ಜಲ್ಲಿ ತುಂಬಿದ ಟಿಪ್ಪರ್ ಬಸ್ಸಿನ ಎಡಭಾಗಕ್ಕೆ ಡಿಕ್ಕಿ ಹೊಡೆದಿದೆ. ನಂತರ ಟಿಪ್ಪರ್ ಕಂದಕಕ್ಕೆ ಉರುಳಿ ಬಿದ್ದಿದೆ. ಆ ವೇಳೆ ಬಸ್ ಚಾಲಕ ನಿಯಂತ್ರಣ ಕಳೆದುಕೊಂಡು ಬಸ್ಸಿನಿಂದ ಹೊರಕ್ಕೆ ಎಸೆಯಲ್ಪಟ್ಟಿದ್ದಾರೆ. ಚಾಲಕನಿಲ್ಲದೇ ಬಸ್ ಚಲಿಸುತ್ತಿದ್ದುದನ್ನು ಗಮನಿಸಿದ ಪ್ರಯಾಣಿಕ ಪಿರಿಯಾಪಟ್ಟಣದ ದಿಲೀಪ್ ಎಂಬುವವರು ಡ್ರೈವರ್ ಸೀಟ್‍ನಲ್ಲಿ ಕುಳಿತು ಸ್ಟೇರಿಂಗ್ ಹಿಡಿದು ಬಸ್ಸನ್ನು ನಿಯಂತ್ರಿಸಿದ್ದಾರೆ. ಆದರೂ ಬಸ್ಸು ರಸ್ತೆ ಬದಿ ಹಳ್ಳಕ್ಕೆ ಇಳಿದು ನಿಂತಿದೆ. ಒಂದು ವೇಳೆ ಬಸ್ ಮುಂದೆ ಸಾಗಿದ್ದರೆ ಇನ್ನಿತರೆ ವಾಹನಗಳಿಗೆ ಡಿಕ್ಕಿ ಹೊಡೆದು ಭಾರೀ ಅನಾಹುತವೇ ಸಂಭವಿಸುತ್ತಿತ್ತು. ಬಸ್ಸಿನ ಎಡಬದಿ ಸೀಟಿನಲ್ಲಿ ಕುಳಿತಿದ್ದ ಸುನೇರ ಬಾನು ಅವರಿಗೆ ತೀವ್ರ ಗಾಯಗಳಾಗಿ ತೀವ್ರ ರಕ್ತಸ್ರಾವವಾದ ಕಾರಣ ಆಸ್ಪತ್ರೆಗೆ ಕರೆತರುವಾಗ ಮಾರ್ಗಮಧ್ಯೆಯೇ ಸಾವನ್ನಪ್ಪಿದರು ಎಂದು ಕೆ.ಆರ್.ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಗಾಯಗಳಿಂದ ಒದ್ದಾಡುತ್ತಿದ್ದ ಬಸ್ ಪ್ರಯಾಣಿಕರನ್ನು ಸಾರ್ವಜನಿಕರ ನೆರವಿನಿಂದ ಬಿಳಿಕೆರೆ ಠಾಣೆ ಪೊಲೀಸರು ಮೈಸೂರಿನ ಆಸ್ಪತ್ರೆಗಳಿಗೆ ಕರೆತಂದು ದಾಖಲು ಮಾಡಿದರು.

ಟಿಪ್ಪರ್ ಚಾಲಕ ಮತ್ತು ಕ್ಲೀನರ್‌ಗೂ ಗಾಯಗಳಾಗಿದೆ ಎಂದು ತಿಳಿದು ಬಂದಿದ್ದು, ಅವರು ಯಾವ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಎಸ್ಪಿ ಅಮಿತ್‍ಸಿಂಗ್, ಡಿವೈಎಸ್ಪಿ ಬಾಸ್ಕರ್, ಸರ್ಕಲ್ ಇನ್‍ಸ್ಪೆಕ್ಟರ್ ಕೆ.ಸಿ.ಪೂವಯ್ಯ, ಸಬ್‍ಇನ್‍ಸ್ಪೆಕ್ಟರ್ ಎಂ.ನಾಯಕ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿದರು.

ಬಿಳಿಕೆರೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕ್ರೇನ್ ಮೂಲಕ ಬಸ್ ಮತ್ತು ಟಿಪ್ಪರ್‍ಗಳನ್ನು ಮೇಲಕ್ಕೆತ್ತಿ ವಾಹನ ಸಂಚಾರ ಸುಗಮಗೊಳಿಸಿದರು. ವಿಷಯ ತಿಳಿಯುತ್ತಿದ್ದಂತೆಯೇ ಕೆಎಸ್‌ಆರ್‌ಟಿಸಿ ವಿಭಾಗೀಯ ಸಂಚಾರ ಅಧಿಕಾರಿ ಶ್ರೀನಿವಾಸ ಹಾಗೂ ಟ್ರಾಫಿಕ್ ಕಂಟ್ರೋಲರ್ ಅವರು ಕೆ.ಆರ್.ಆಸ್ಪತ್ರೆಗೆ ಧಾವಿಸಿ, ಮೃತ ಸುನೇರ ಬಾನು ಅವರ ಕುಟುಂಬಕ್ಕೆ 15000 ರೂ. ತಕ್ಷಣದ ಸಹಾಯ ಧನವನ್ನು ಅಂತ್ಯ ಸಂಸ್ಕಾರಕ್ಕೆ ನೀಡಿದರು. ಅಪಘಾತ ನಡೆದ ಸ್ಥಳದಲ್ಲಿ ಈ ಹಿಂದೆ ರಸ್ತೆ ಡುಬ್ಬವಿತ್ತು. ವಾಹನ ಸವಾರರ ವಿರೋಧದಿಂದಾಗಿ ಆ ಡುಬ್ಬವನ್ನು ತೆರವುಗೊಳಿಸಿ, ಸಣ್ಣ ಸಣ್ಣ ಹತ್ತು ಡುಬ್ಬಗಳನ್ನು ನಿರ್ಮಿಸಲಾಗಿತ್ತು. ಈ ರಸ್ತೆಯಲ್ಲಿ ಚಲಿಸುವ ಲಘು ವಾಹನಗಳು ಸಣ್ಣ ಡುಬ್ಬಗಳ ಮೇಲೆ ನಿಧಾನವಾಗಿ ಚಲಿಸುತ್ತವೆಯಾದರೂ, ಬಸ್, ಲಾರಿ ಮುಂತಾದ ಭಾರೀ ವಾಹನಗಳ ಚಾಲಕರು ಸಣ್ಣ ಡುಬ್ಬಗಳನ್ನು ಲೆಕ್ಕಿಸದೇ ಅತೀ ವೇಗವಾಗಿ ಚಾಲನೆ ಮಾಡುವ ಪರಿಣಾಮ ಈ ಅಪಘಾತಕ್ಕೆ ಕಾರಣವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಪ್ರಯಾಣಿಕನ ಸಮಯಪ್ರಜ್ಞೆ ಸಾಹಸ: ತಪ್ಪಿದ ಭಾರೀ ಅನಾಹುತ

ಹುಣಸೂರು ತಾಲೂಕು ಬಿಳಿಕೆರೆ ಹೆದ್ದಾರಿಯಲ್ಲಿ ಇಂದು ಸಂಭವಿಸಿದ ಅಪಘಾತದಲ್ಲಿ ಬಸ್ ಪಯಾಣಿಕ ತೋರಿದ ಸಮಯ ಪ್ರಜ್ಞೆಯಿಂದಾಗಿ ನಡೆಯಬಹುದಾಗಿದ್ದ ಭಾರೀ ದುರಂತ ತಪ್ಪಿದಂತಾಗಿದೆ.

ದಿಲೀಪ್

ಕೆಎಸ್‌ಆರ್‌ಟಿಸಿ ಬಸ್‍ಗೆ ಜಲ್ಲಿ ತುಂಬಿದ ಲಾರಿ ಡಿಕ್ಕಿ ಹೊಡೆದು ಕಂದಕಕ್ಕೆ ಉರುಳಿ ಬಿದ್ದಾಗ, ಬಸ್ ಚಾಲಕ ಡ್ರೈವರ್ ಸೀಟ್‍ನಿಂದ ಹೊರಗೆ ಎಸೆಯಲ್ಪಟ್ಟು, ಚಾಲಕನಿಲ್ಲದ ಬಸ್ ಹೆದ್ದಾರಿಯಲ್ಲಿ ಯದ್ವಾ ತದ್ವಾ ಚಲಿಸಲಾರಂಭಿಸಿದೆ. ವಾಹನ ದಟ್ಟಣೆ ಹೆಚ್ಚಾಗಿರುವ ಹೆದ್ದಾರಿಯಲ್ಲಿ ಚಾಲಕನೇ ಇಲ್ಲದೆ ವೇಗವಾಗಿ ಚಲಿಸುತ್ತಿದ್ದ ಬಸ್‍ನಿಂದಾಗಿ ಭಾರೀ ಅನಾಹುತ ಸಂಭವಿಸುತ್ತಿತ್ತು. ಬಸ್‍ನಲ್ಲಿ ಪಯಾಣಿಸುತ್ತಿದ್ದ ಪ್ರಯಾಣಿಕರ ಜೀವಕ್ಕೂ ಅಪಾಯ ಉಂಟಾಗುತ್ತಿತ್ತು.

Translate »