ಮುಗಿಯುತ್ತಿರುವ ಸಾಲ ಮನ್ನಾ ಗಡುವು ಶೀಘ್ರ ನಿರ್ಧಾರ ಪ್ರಕಟಿಸಲು ರೈತಸಂಘ ಸಿಎಂಗೆ ಒತ್ತಾಯ
ಮೈಸೂರು

ಮುಗಿಯುತ್ತಿರುವ ಸಾಲ ಮನ್ನಾ ಗಡುವು ಶೀಘ್ರ ನಿರ್ಧಾರ ಪ್ರಕಟಿಸಲು ರೈತಸಂಘ ಸಿಎಂಗೆ ಒತ್ತಾಯ

June 14, 2018

ಮೈಸೂರು:  ರಾಜ್ಯ ಸರ್ಕಾರ ರೈತರ ಸಂಪೂರ್ಣ ಸಾಲ ಮನ್ನಾ ಕುರಿತು ತೆಗೆದುಕೊಂಡಿದ್ದ ಕಾಲಾವಕಾಶ ಮುಗಿಯುತ್ತಿದ್ದು, ಸರ್ಕಾರ ತಕ್ಷಣ ತನ್ನ ನಿಲುವನ್ನು ಪ್ರಕಟಿಸಬೇಕು ಎಂದು ರಾಜ್ಯ ರೈತಸಂಘ ಮತ್ತು ಹಸಿರುಸೇನೆ ಪ್ರಧಾನ ಕಾರ್ಯ ದರ್ಶಿ ಬಡಗಲಪುರ ನಾಗೇಂದ್ರ ಒತ್ತಾಯಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾಲ ಮನ್ನಾ ಸಂಬಂಧ ಮುಖ್ಯಮಂತ್ರಿ ಕೇಳಿದ್ದ 15 ದಿನಗಳ ಕಾಲಾವಕಾಶ ಇನ್ನೆರಡು ದಿನಗಳಲ್ಲಿ ಮುಗಿಯಲಿದ್ದು, ಈ ಕುರಿತಂತೆ ನಿರ್ಧಾರ ತೆಗೆದುಕೊಳ್ಳಲು ಇನ್ನೂ ಮೀನಾಮೇಷ ಎಣಿಸುತ್ತಿರುವುದನ್ನು ಗಮನಿಸಿದರೆ, ಇದು ಕೇವಲ ಕಾಲಹರಣ ತಂತ್ರ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದರು.

ಮುಂಗಾರು ಸಾಲ ಪಡೆಯಲು ಸಹಕಾರಿ ಬ್ಯಾಂಕ್‍ಗಳಲ್ಲಿರುವ ಸಾಲವನ್ನು ಜೂ.16ರೊಳಗೆ ನವೀಕರಣ ಅಥವಾ ಕಟ್ಟದಿದ್ದರೆ ಶೇ.12 ಬಡ್ಡಿ ಭರಿಸಬೇಕಾಗಿದೆ. ಇದನ್ನು ಮನಗಂಡು ಸರ್ಕಾರ ತನ್ನ ನಿರ್ಧಾರವನ್ನು ತಕ್ಷಣ ಪ್ರಕಟಿಸಬೇಕು. ಶೀಘ್ರವೇ ಭತ್ತ ಖರೀದಿ ಕೇಂದ್ರ ಘೋಷಿಸ ಬೇಕು ಎಂದು ಆಗ್ರಹಿಸಿದರು. ಸರ್ಕಾರ ತನ್ನ ನಿರ್ಲಕ್ಷ್ಯ ಧೋರಣೆ ಮುಂದುವರೆಸಿದರೆ ರಾಜ್ಯಾದ್ಯಂತ ರೈತರು ಹೋರಾಟಕ್ಕಿಳಿಯ ಬೇಕಾಗುತ್ತದೆ ಎಂದು ಎಚ್ಚರಿಸಿದರು.

ಉನ್ನತ ಶಿಕ್ಷಣ ಖಾತೆ ಹೊಂದಿರುವ ಜಿ.ಟಿ.ದೇವೇಗೌಡರು ಅದನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ಅವರಿಗಿದೆ. ಹಿಂಜರಿಕೆ, ಕೀಳರಿಮೆ ತೊರೆದು ಅವರು ಅಧಿಕಾರಿಗಳ ಮಾರ್ಗದರ್ಶನದಂತೆ ಕಾರ್ಯಕ್ರಮ ರೂಪಿಸಿ ಖಾತೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಂತೆ ಸಲಹೆ ನೀಡಿದರು. ಮೈಸೂರು ಜಿಲ್ಲೆಗೆ ಹೆಚ್ಚುವರಿಯಾಗಿ ಇನ್ನೊಂದು ಸಚಿವ ಸ್ಥಾನ ನೀಡುವಂತೆಯೂ ಇದೇ ಸಂದರ್ಭದಲ್ಲಿ ಸರ್ಕಾರವನ್ನು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ರೈತಸಂಘದ ಹೊಸೂರು ಕುಮಾರ್, ಹೊಸಕೋಟೆ ಬಸವರಾಜು, ಲೋಕೇಶ್‍ರಾಜ್ ಅರಸ್, ವಿದ್ಯಾಸಾಗರ್ ಉಪಸ್ಥಿತರಿದ್ದರು.

Translate »