ವಿಧಾನಸೌಧವೇ ಭ್ರಷ್ಟಾಚಾರದ ಗಂಗೋತ್ರಿ
ಅಂಕಣಗಳು, ಪ್ರಚಲಿತ

ವಿಧಾನಸೌಧವೇ ಭ್ರಷ್ಟಾಚಾರದ ಗಂಗೋತ್ರಿ

June 14, 2018

ಮಾನವೀಯತೆ ಜೊತೆಗೆ ಹೆಂಗರುಳು ಇರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಬಡವರು-ಕಷ್ಟದಲ್ಲಿರುವವರನ್ನು ಕಂಡರೆ ಮನ ಕರಗಿ ಕಣ್ಣೀರು ಬರುತ್ತೆ. ದೇಹಿ ಎಂದು ಬಂದವರಿಗೆ ಕೈಲಾಗುವ ನೆರವು ನೀಡುವುದು, ಅಧಿಕಾರದಲ್ಲಿದ್ದಷ್ಟು ಕಾಲ ಜನ ಮೆಚ್ಚುವ ಕೆಲಸ ಮಾಡುವ ಕಳಕಳಿ ಇದ್ದಂತೆ ಕಾಣುತ್ತಿದೆ. ಗ್ರಾಮೀಣ ಜನರ ಜೀವನ ಹಾಗೂ ನಾಡಿ-ಮಿಡಿತಬಲ್ಲ ಅವರಿಗೆ ಸಹಾಯ ಮಾಡುವ ಹೃದಯ ಶ್ರೀಮಂತಿಕೆಯು ಇದೆ.

ಶಕ್ತಿ ಕೇಂದ್ರವೆಂದು ಕರೆಯುವ ವಿಧಾನಸೌಧ ಹಾಗೂ ಅದರ ಸುತ್ತ ಮುತ್ತ ಇರುವ ಸರ್ಕಾರಿ ಕಛೇರಿ ಗಳು ಭ್ರಷ್ಟಾಚಾರದ ಗಂಗೋತ್ರಿ ಇದ್ದಂತೆ. ವಿಧಾನಸೌಧ ಒಂದು ರೀತಿಯಲ್ಲಿ ಲಂಚದಿಂದ ತುಂಬಿದ ಕೊಡದಂತೆ! ನೂತನ ಮುಖ್ಯ ಮಂತ್ರಿ ಕುಮಾರಸ್ವಾಮಿಯವರೇ ಈ ಮಾತನ್ನು ಹೇಳಿರುವುದರಿಂದ ಇದು ಉತ್ಪ್ರೇಕ್ಷೆಯಲ್ಲ. ವಾಸ್ತವಾಂಶಕ್ಕೆ ಹಿಡಿದ ಕನ್ನಡಿ. ಆದರೆ, ಭ್ರಷ್ಟಾಚಾರ ವನ್ನು ತಾವು ಕಂಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರತಿಕ್ರಿಯೆ ಆಶ್ಚರ್ಯದ ಸಂಗತಿ.

ದೇವಸ್ಥಾನಕ್ಕೆ ಬರುವವರು ತೀರ್ಥ ಪಡೆದು, ಪುಣ್ಯ ಕಟ್ಟಿಕೊಳ್ಳುವಂತೆ ವಿಧಾನಸೌಧಕ್ಕೆ ಬರುವವರು ಇಲ್ಲಿಯೂ ತಮ್ಮ ಶಕ್ತಿಗೆ ಅನುಸಾರ ವಾಗಿ ತುಂಬಿದ ಕೊಡದಿಂದ ತೀರ್ಥ ಕುಡಿದು ಮೈಕೈಗೆ ಸಿಂಪಡಿಸಿಕೊಳ್ಳ ಬಹುದು. ಹೆಚ್ಚಿನ ಶಕ್ತಿ- ಸಂಪರ್ಕ- ವಿವಿಧ ಕಲೆಗಳನ್ನು ಕರಗತ ಮಾಡಿ ಕೊಂಡಿರುವವರು ಬಾಟಲಿ (ಬ್ಯಾಗ್) ತಂದು ತೀರ್ಥ ತುಂಬಿಕೊಂಡು ಹೋಗಲು ಅವಕಾಶವಿದೆ.

ಶಕ್ತಿ ಸೌಧದಿಂದ ಉಗಮವಾಗುವ ಈ ಲಂಚ ಗಂಗೋತ್ರಿ ಪಕ್ಕದ ವಿಕಾಸಸೌಧ, ಕೆ.ಆರ್. ಸರ್ಕಲ್ ನಲ್ಲಿರುವ ವಿವಿಧ ಕಛೇರಿಗಳು, ಕರ್ನಾಟಕ ಲೋಕಸೇವಾ ಆಯೋಗ (ಕೆ.ಪಿ.ಎಸ್.ಸಿ)- ಹೀಗೆ ನಗರ ಹಾಗೂ ರಾಜ್ಯದ ಎಲ್ಲಾ ಸರ್ಕಾರಿ ಕಛೇರಿ ಗಳಲ್ಲಿ ರಭಸವಾಗಿ ಹರಿಯುತ್ತಾಳೆ. ಉದಾಹರಣೆಗೆ ಪೆÇಲೀಸ್ ಇಲಾಖೆ, ಅಬ್ಕಾರಿ, ಕಂದಾಯ, ಸಹಕಾರ, ಹಣಕಾಸು (ತೆರಿಗೆ), ನೀರಾವರಿ, ಲೋಕೋಪಯೋಗಿ, ಆರೋಗ್ಯ (ಆಸ್ಪತ್ರೆ)- ಇಲ್ಲೆಲ್ಲ ಲಂಚದ ಹಾವಳಿ ಇದೆಯೋ? ಇಲ್ಲವೋ? ಈ ಕಛೇರಿ ಗಳಿಗೆ ಅಲೆದಾಡುವ ಗ್ರಾಮೀಣ ಜನರಿಗೆ ಲಂಚಾವತಾರದ ದಿವ್ಯ ದರ್ಶನ ಆಗುತ್ತದೆ. ಅವರ ಗೋಳಿಗೆ ಕೊನೆ ಎಂದು?

ಮಾನವೀಯತೆ ಜೊತೆಗೆ ಹೆಂಗರುಳು ಇರುವ ಮುಖ್ಯಮಂತ್ರಿ ಕುಮಾರ ಸ್ವಾಮಿಯವರಿಗೆ ಬಡವರು-ಕಷ್ಟ ದಲ್ಲಿರುವವರನ್ನು ಕಂಡರೆ ಮನ ಕರಗಿ ಕಣ್ಣೀರು ಬರುತ್ತೆ. ದೇಹಿ ಎಂದು ಬಂದವರಿಗೆ ಕೈಲಾಗುವ ನೆರವು ನೀಡುವುದು, ಅಧಿಕಾರದಲ್ಲಿದ್ದಷ್ಟು ಕಾಲ ಜನ ಮೆಚ್ಚುವ ಕೆಲಸ ಮಾಡುವ ಕಳಕಳಿ ಇದ್ದಂತೆ ಕಾಣುತ್ತಿದೆ. ಗ್ರಾಮೀಣ ಜನರ ಜೀವನ ಹಾಗೂ ನಾಡಿ-ಮಿಡಿತ ಬಲ್ಲ ಅವರಿಗೆ ಸಹಾಯ ಮಾಡುವ ಹೃದಯ ಶ್ರೀಮಂತಿಕೆಯು ಇದೆ.

ಭ್ರಷ್ಟಾಚಾರವು ರಾಜಕಾರಣಿಗಳು, ಐಎಎಸ್/ಐಪಿಎಸ್ ಅಧಿಕಾರಿಗಳು ಹಾಗೂ ಸರ್ಕಾರಿ ನೌಕರರಲ್ಲಿ ಅರ್ಬುದ ರೋಗದಂತೆ ವ್ಯಾಪಿಸಿದೆ, ಇದನ್ನು ಸಂಪೂರ್ಣವಾಗಿ ತಡೆಯಲಾಗದಿದ್ದರೂ ನಿಯಂತ್ರಿಸಬೇಕೆಂಬ ಸಿಎಂ ಅವರ ಕಳಕಳಿ ಮೆಚ್ಚುವಂತದ್ದು. ಆದರೆ ಇವರಿಗೆ ಕಡಿವಾಣ ಹಾಕಲು ಹೋದರೆ ಅವ ರೆಲ್ಲಾ ಒಗ್ಗಟಾಗಿ ನನ್ನ ಕುರ್ಚಿಗೆ ಕಂಟಕ ತರುತ್ತಾರೆಂಬ ಸಿಎಂ ಅವರ ಅಂಜಿಕೆ ಮಾತುಗಳು ಅವರ ಸ್ಥಾನಕ್ಕೆ ಶೋಭೆ ತರುವಂಥದಲ್ಲ. ಏನೇ ಅಡ್ಡಿ ಆತಂಕ ಬಂದರೂ ಕುಗ್ಗದೇ, ಹಿಮ್ಮೆಟ್ಟದೇ ದಿಟ್ಟ ಹೆಜ್ಜೆ ಇಡುವ ಧೈರ್ಯ ಮಾಡಬೇಕು.

ಈಗಿರುವುದು ಸಮ್ಮಿಶ್ರ ಸರ್ಕಾರ. ಇದರಿಂದ ರಾಜಕಾರಣಿಗಳಿಗೆ ಹಾಗೂ ಅಧಿಕಾರಿಗಳಿಗೆ ಹಬ್ಬ. ಹುಚ್ಚರ ಮದುವೆ ಯಲ್ಲಿ ಮೊದಲು ಉಂಡವರೇ ಜಾಣರು ಎಂಬಂತೆ ಆದಷ್ಟು ಬೇಗ ಸಿಕ್ಕಿದಷ್ಟನ್ನು ಬಾಚಿಕೊಳ್ಳುವ ಪ್ರವೃತ್ತಿ ಈಗ ಹೆಚ್ಚು ಇರುತ್ತದೆ. ಹೀಗಾಗಿ ಶಕ್ತಿ ಕೇಂದ್ರದ ಕಾರಿ ಡಾರ್‍ನಲ್ಲಿ ದಲ್ಲಾಳಿಗಳ-ಪುಢಾರಿಗಳ ದರ್ಬಾರ್, ಕಾರು-ಬಾರು ಮಿತಿ ಮೀರಿರು ತ್ತದೆ. ಇದಕ್ಕೆಲ್ಲ ಸಿಎಂ ಹೇಗೆ ಕಡಿವಾಣ ಹಾಕುತ್ತಾರೋ ಕಾದು ನೋಡಬೇಕು.

ದೇವಸ್ಥಾನಗಳಲ್ಲಿ ದಲ್ಲಾಳಿಗಳಿರು ವಂತೆ ಇಲ್ಲಿಯೂ ವಿವಿಧ ವೇಷಧಾರಿ ಗಳು ಬಣ್ಣದ ಮಾತುಗಳನ್ನಾಡುತ್ತಾ ವರ್ಗಾವಣೆ-ಬಡ್ತಿಗಾಗಿ ಬರುವ ಗಿರಾಕಿ ಗಳಿಗಾಗಿ ಕಾಯುತ್ತಿರುತ್ತಾರೆ. ಶಾಸಕರು, ಸಚಿವರು ಹಾಗೂ ಅಧಿಕಾರಿಗಳಿಗೆ ಹಣ-ಹೆಂಡ- ಹೆಣ್ಣು- ಮುಂತಾದ ಆಮಿಷ ತೋರಿಸುತ್ತಾರೆ. ಇಲ್ಲವೆ ಆ ವ್ಯಕ್ತಿಗಳ ದೌರ್ಬಲ್ಯ ತಿಳಿದುಕೊಂಡು ಅವರ ಮನವೊಲಿಸಿಕೊಳ್ಳುವ ತಂತ್ರ ರೂಪಿಸಿ, ಕೊನೆಗೂ ತಮ್ಮ ಬಲೆಗೆ ಬೀಳಿಸಿಕೊಳ್ಳುತ್ತಾರೆ. ಅವರ ಆತಿಥ್ಯದ ರುಚಿಗಳನ್ನು ಅನುಭವಿಸಿದ ಮೇಲೆ ಅದನ್ನೇ ಮೈಗೂಡಿಸಿಕೊಳ್ಳುವ ಇವರು ಕೊನೆಗೆ ಇದನ್ನೇ ಚಟವನ್ನಾಗಿ ಮಾಡಿ ಕೊಳ್ಳುತ್ತಾರೆ. ನಿತ್ಯ ಈ ಎಲ್ಲಾ ಶೋಕಿಯ ನಶೆ ಇಲ್ಲದಿದ್ದರೆ ನಿದ್ದೆಯೇ ಬರುವು ದಿಲ್ಲ ಎಂಬಂತಾಗುತ್ತಾರೆ. ಕೊನೆಗೆ ಸ್ವಾಭಿಮಾನ-ಮಾನ, ಮರ್ಯಾದೆ ಎಲ್ಲವನ್ನು ಕಳೆದುಕೊಂಡು ಲಂಚಕ್ಕಾಗಿ ನರರಾಕ್ಷಸರಾಗುತ್ತಾರೆ.

ಒಂದು ಸಾರಿ ವಿಧಾನಸೌಧದ ಮೆಟ್ಟಿ ಲೇರಿದರೆಂದರೆ ಅವರ ಜೀವನ ಶೈಲಿಯೇ ಬದಲಾಗುತ್ತದೆ. ಆಗರ್ಭ ಶ್ರೀಮಂತ ರಂತೆ ಫೆÇೀಸು ಕೊಡುತ್ತಾ, ಬಿಳಿ ಗರಿಗರಿ ಉಡುಪು ಧರಿಸಿ; ತರತರದ ವಾಚ್, ಮೊಬೈಲ್, ಕನ್ನಡಕ, ಕೈಬೆರಳುಗಳ ತುಂಬಾ ಉಂಗುರಗಳು, ಕಾರು, ಹಿಂದೆ- ಮುಂದೆ ಜೈಕಾರ ಹಾಕುವ ಪಟಾಲಂ- ದಂಡು ಸೃಷ್ಟಿಯಾಗುತ್ತದೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ ನಿವೇಶನ, ಭವ್ಯ ಬಂಗಲೆ, ಶಿಕ್ಷಣ ಸಂಸ್ಥೆ, ನರ್ಸಿಂಗ್ ಹೋಮ್, ರಿಯಲ್ ಎಸ್ಟೇಟ್ ದಂಧೆ ಗಳಲ್ಲಿ ತೊಡಗಿ ತಮ್ಮ ಬಹು ದಿನಗಳ ಕನಸು ನನಸು ಮಾಡಿಕೊಳ್ಳುತ್ತಾರೆ. ಇದಕ್ಕೆಲ್ಲ ಭ್ರಷ್ಟಾಚಾರದ ಹಣವೇ ಮೂಲ ಧನ.

ರಾಜಕಾರಿಣಿಗಳು, ಐಎಎಸ್/ಐಪಿಎಸ್ ಅಧಿಕಾರಿಗಳು, ಶ್ರೀಮಂತ ಉದ್ಯಮಿಗಳಿಗೆ ಮೀಸಲಾದ ಮೋಜಿನ ತಾಣಗಳಾದ ಕ್ಲಬ್‍ಗಳು, ವಿಧಾನ ಸೌಧದ ಆಜು-ಬಾಜಿನಲ್ಲಿಯೇ ಇದ್ದು, ಕೈಬಿಸಿ ಕರೆಯುತ್ತವೆ. ದೊಡ್ಡ ವ್ಯವಹಾರ ಗಳು, ಡೀಲ್‍ಗಳು ಕುದುರುವುದೇ ಇಲ್ಲಿ. ಇದಕ್ಕೂ ಮಿಗಿಲಾಗಿ ಪಂಚತಾರ ಹೋಟೆಲ್‍ಗಳಲ್ಲಿ ದಲ್ಲಾಳಿಗಳು ಶಾಶ್ವತ ವಾಗಿ ಖಾಸಗಿ ರೂಂ ಪಡೆದಿರುತ್ತಾರೆ. ಅಂದರೆ ಮೋಜು-ಮಸ್ತಿ-ಮಸಾಜ್ ಹೀಗೆ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಿ ಅವರನ್ನು ಸಂತೃಪ್ತಿಗೊಳಿಸಿ ತಮ್ಮ ಕೆಲಸ ಮಾಡಿಸಿಕೊಳ್ಳುತ್ತಾರೆ. ಇನ್ನು ಕೆಲವು ದಲ್ಲಾಳಿಗಳು ಹೈದ್ರಾಬಾದ್, ಕೇರಳ, ಮುಂಬೈ, ದೆಹಲಿಯಲ್ಲಿ ತಮ್ಮ ಅಡ್ಡೆಗಳನ್ನು ಮಾಡಿಕೊಂಡಿರುತ್ತಾರೆ.

ಇಲ್ಲದಿದ್ದರೆ ದೇಶದಲ್ಲಿ ಪ್ರತಿ ಓಟ್‍ಗೆ- ನೋಟು ನೀಡಲು ಇವರಿಗೆ ಎಲ್ಲಿಂದ ಹಣ ಬರುತ್ತದೆ? ಅಲ್ಲದೇ ಚುನಾವಣೆಗೆ ಮೊದಲು ಮತದಾರರಿಗೆ ಗೃಹೋಪ ಯೋಗಿ ಗಿಫ್ಟ್‍ಗಳನ್ನು ಕೊಡಲು ಹೇಗೆ ಸಾಧ್ಯ? ಎಲ್ಲೂ ಸಲ್ಲದವರು ಹಾಗೂ ಮೂರು ಬಿಟ್ಟವರು ಮಾತ್ರ ರಾಜ ಕೀಯದಲ್ಲಿ ಸಲ್ಲುತ್ತಾರೆ ಎಂಬ ಮಾತಿದೆ. ವರ್ಗಾವಣೆ-ಬಡ್ತಿ-ವಿವಿಧ ಫೈಲ್‍ಗಳ ವಿಲೇವಾರಿ ಇವೆಲ್ಲವೂ ದಲ್ಲಾಳಿಗಳಿಗೆ ಬಂಡವಾಳವಿಲ್ಲದ ಉದ್ಯಮವಾದರೆ, ಉಳಿದವರು ಬಂಡವಾಳ ಹೂಡಿ ನಂತರ ಚಕ್ರಬಡ್ಡಿ ಸಮೇತ ವಾಪಸ್ಸು ಪಡೆ ಯಲು ರಾಜಕೀಯಕ್ಕೆ ಬರುತ್ತಾರೆ.

ವಿಪರ್ಯಾಸದ ಸಂಗತಿ ಎಂದರೆ ಭ್ರಷ್ಟಾಚಾರದ ವಿರುದ್ಧ ಸಭೆ-ಸಮಾ ರಂಭಗಳಲ್ಲಿ ಮಾತನಾಡುವವರೆಲ್ಲರೂ ದೊಡ್ಡ ಭ್ರಷ್ಟಾಚಾರಿಗಳೇ ಎಂಬುದು ನಗ್ನಸತ್ಯ. ಆದರೂ ಅದನ್ನು ನಿಯಂತ್ರಿ ಸಲು ಮುಂದಾಗಿರುವ ಸಿಎಂ ಕಳಕಳಿ ನಿಜವೇ ಆಗಿದ್ದರೆ, ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಹಾಗೂ ಲೋಕಾಯುಕ್ತ ಸಂಸ್ಥೆಗಳನ್ನು ಬಲಪಡಿಸಬೇಕು. ಜೊತೆಗೆ ಜಸ್ಟೀಸ್ ಸಂತೋಷ ಹೆಗಡೆ ನೇತೃತ್ವ ದಲ್ಲಿ ನಿವೃತ್ತ ಪ್ರಾಮಾಣಿಕ ಅಧಿಕಾರಿಗಳು, ಸಮಾಜ ಸೇವಕರು ಮುಂತಾದವರನ್ನು ಒಳಗೊಂಡ ಮಂಡಳಿಯೊಂದನ್ನು ರಚಿಸಬೇಕು. ರಾಜಕಾರಣಿಗಳು ಹಾಗೂ ಅಧಿಕಾರಿಗಳ ಕಾರು ಚಾಲಕರು, ಸಿಬ್ಬಂದಿ ವರ್ಗ, ಅಡುಗೆ ಸಿಬ್ಬಂದಿ ಅವರಿಂದ ಭ್ರಷ್ಟಾಚಾರಿಗಳ ಬಗ್ಗೆ ರಹಸ್ಯ ಮಾಹಿತಿ ಪಡೆದು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಅವರ ಬೇನಾಮಿ ಆಸ್ತಿ ಬಹಿರಂಗಪಡಿಸುವ ಮೂಲಕ ಅವರ ಬಣ್ಣ ಬಯಲು ಮಾಡಬೇಕು.

ರಾಜಕಾರಣಿಗಳು ಹಾಗೂ ಅಧಿಕಾರಿ ಗಳು ಪ್ರತಿ ವರ್ಷ ಆಸ್ತಿ-ಪಾಸ್ತಿ ಘೋಷಣೆ ಕಡ್ಡಾಯವಿದ್ದರೂ ಪರಿಣಾಮಕಾರಿ ಯಾಗಿಲ್ಲ. ಆಸ್ತಿ ವಿವರ ಸಲ್ಲಿಸದವರಿಗೆ ಸೂಕ್ತ ಶಿಕ್ಷೆಯಾಗಬೇಕು. ಬೇರೆ ರಾಜ್ಯ ಗಳ ಅಧಿಕಾರಿಗಳು ತಮ್ಮ ತವರೂರಿ ನಲ್ಲಿ ಮಾಡಿರುವ ಅಕ್ರಮ ಸಂಪತ್ತನ್ನು ಪತ್ತೆ ಹಚ್ಚಬೇಕು. ರಾಜಕಾರಣಿಗಳಿಗೆ 5 ವರ್ಷ ಅಧಿಕಾರದ ಅವಧಿಯಾದರೆ ತಮಗೆ 30-35 ವರ್ಷ ಅಧಿಕಾರವಿರು ತ್ತದೆ ಎಂಬುದು ಈ ಅಧಿಕಾರಿಗಳ ದರ್ಪಕ್ಕೆ ಕಾರಣ. ಹೀಗಾಗಿ ಇವ ರೆಲ್ಲಾ ಭೂಲೋಕದಲ್ಲಿಯೇ ಸ್ವರ್ಗ ಸುಖ ಅನುಭವಿಸುತ್ತಾರೆ.

ಸಚಿವರು ತಮ್ಮ ಇಲಾಖೆ ಬಗ್ಗೆ, ಶಾಸಕರು ವಿವಿಧ ಯೋಜನೆಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ಅಧಿಕಾರಿಗಳಿಗೆ ಸರಿಯಾದ ಮಾರ್ಗ ದರ್ಶನ ಮಾಡಬೇಕು. ಅವರ ಅಕ್ರಮಗಳಿಗೆ ಕಡಿವಾಣ ಹಾಕಬೇಕು. ಅದನ್ನು ಬಿಟ್ಟು, ಜನಪ್ರತಿನಿಧಿಗಳು ತಮ್ಮ ಕೈಕೆಳಗಿರುವ ಅಧಿಕಾರಿಗಳಿಗೆ ‘ಜೀ-ಹುಜೂರು’ ಅನ್ನಬಾರದು. ಈ ಅಧಿಕಾರಿಗಳ ನಡೆ-ನುಡಿ-ಉಡುಪು ನೋಡಿದರೆ ಸರಳ ಸಜ್ಜನ ರಂತೆ ಕಾಣುತ್ತಾರೆ, ವಾಸ್ತವದಲ್ಲಿ ಅವರ ಲೀಲೆಗಳೇ ಬೇರೆ.

ಒಳ್ಳೆಯ ರಾಜಕಾರಣಿಗಳು ಹಾಗೂ ಪ್ರಾಮಾಣಿಕ ಅಧಿಕಾರಿಗಳು ಇಲ್ಲವೆ ಇಲ್ಲ ಎನ್ನುವಂತಿಲ್ಲ. ಉದಾಹರಣೆಗೆ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಎಸ್. ನಿಜಲಿಂಗಪ್ಪ, ಕಡಿದಾಳ ಮಂಜಪ್ಪ, ಕೆಂಗಲ್ ಹನು ಮಂತಯ್ಯ, ವೀರೇಂದ್ರ ಪಾಟೀಲ್, ಸಚಿವರಾಗಿದ್ದ ಎಸ್.ಕೆ. ಕಾಂತಾ, ಕೆ.ಎಚ್. ರಂಗನಾಥ್, ಏಕಾಂತಯ್ಯ, ಡಾ|| ವಿ.ಎಸ್ ಆಚಾರ್ಯ ಇವ ರೆಲ್ಲಾ ಅಪರೂಪದ ವ್ಯಕ್ತಿಗಳು. ಇವರಂತೆ ಜೆ.ಸಿ. ಲಿನ್, ಶಂಕರ ನಾರಾಯಣ್, ಎಸ್.ಬಿ. ಮುದ್ದಪ್ಪ, ಎಸ್.ವಿ. ರಂಗನಾಥ- ಅವರಂಥ ಅಧಿಕಾರಿಗಳಲ್ಲಿ ಪ್ರಾಮಾಣಿಕತೆಗೆ ಕೊರತೆ ಇರಲಿಲ್ಲ.

ಈಗಿನ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಆತ್ಮಸಾಕ್ಷಿಯಿಂದ ಎದೆ ಮುಟ್ಟಿಕೊಂಡು ತಾವು ಲಂಚ ಮುಟ್ಟಿಲ್ಲ, ಆಮಿಷಗಳಿಗೆ ಬಲಿ ಯಾಗಿಲ್ಲ, ರಾಗ-ದ್ವೇಷ ಇಲ್ಲದೆ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದೇವೆಂದು ಬಹಿರಂಗ ವಾಗಿ ಹೇಳುವ ಧೈರ್ಯ ಮಾಡಲಿ ನೋಡೋಣ. ಇಲ್ಲವಾದರೆ ಇವರೆಲ್ಲ ಭ್ರಷ್ಟಾಚಾರಿಗಳು ಎಂದರ್ಥ.

ಆದ್ದರಿಂದ ಇಂಥ ರಾಜಕಾರಣಿ ಗಳು ಹಾಗೂ ಅಧಿಕಾರಿಗಳಿಗೆ ಪಿಂಚಣಿ ಕೊಡುವ ಅಗತ್ಯವಿಲ್ಲ. ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ, ರೈತರಿಗೆ, ಕೂಲಿ ಕಾರ್ಮಿಕರಿಗೆ ಇಲ್ಲದ ಈ ಪಿಂಚಣಿ ಸೌಲಭ್ಯ ಸರ್ಕಾರಿ ನೌಕರ ರಿಗೆ ಮಾತ್ರ ಏಕೆ? ಅಧಿಕಾರದಲ್ಲಿ ದ್ದಾಗ ತಿಂದು-ತೇಗಿ, ಸಾಕಷ್ಟು ಆಸ್ತಿ ಮಾಡಿದವರಿಗೆ ಈ ಪಿಂಚಣಿ ಎಂಬ ಪಾಕೆಟ್‍ಮನಿ ಏಕೆ? ಇವ ರಲ್ಲೂ ಆರ್ಥಿಕವಾಗಿ ತೊಂದರೆ ಯಲ್ಲಿದ್ದು ಜೀವನ ಸಾಗಿಸುವುದು ಕಷ್ಟವಾಗುವ ಪ್ರಾಮಾಣಿಕರನ್ನು ಪತ್ತೆ ಹಚ್ಚಿ, ಅಂಥವರಿಗೆ ಈ ಸೌಲಭ್ಯ ನೀಡಲಿ. ನೂತನ ಮುಖ್ಯಮಂತ್ರಿ ಗಳು ಈ ದಿಟ್ಟ ಹೆಜ್ಜೆ ಇಟ್ಟು ಒಳ್ಳೆಯ ಹೆಸರು ಪಡೆಯಲಿ.

 

Translate »