ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ರೈತರ ಸಾಲ ಮನ್ನಾ ಜೊತೆಗೆ ಜನಪರ ಯೋಜನೆಗಳ ಜಾರಿಗೆ ರೈತರ ಮನವಿ
ಮೈಸೂರು

ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ರೈತರ ಸಾಲ ಮನ್ನಾ ಜೊತೆಗೆ ಜನಪರ ಯೋಜನೆಗಳ ಜಾರಿಗೆ ರೈತರ ಮನವಿ

May 27, 2018

ಮೈಸೂರು:  ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿರುವಂತೆ ರೈತರ ಸಾಲ ಮನ್ನಾಕ್ಕೆ ಕ್ರಮ ಕೈಗೊಳ್ಳುವ ಜೊತೆಗೆ ಜನಪರ ಯೋಜನೆಗಳನ್ನು ಜಾರಿಗೊಳಿಸಬೇಕೆಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮನವಿ ಸಲ್ಲಿಸಿದೆ.

ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಸಂಘದ ಪರವಾಗಿ ಮನವಿ ಸಲ್ಲಿಸಿದ್ದು, ಚುನಾವಣಾ ಪೂರ್ವದಲ್ಲಿ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಭರವಸೆ ನೀಡಿರುವಂತೆ ರೈತರ ಸಾಲ ಮನ್ನಾ ಮಾಡಲು ಕೂಡಲೇ ಕ್ರಮ ಕೈಗೊಳ್ಳಬೇಕು. ರೈತ ಸಮುದಾಯದ ಸಂಕಷ್ಟ ಪರಿಹಾರಕ್ಕೆ ಸಾಲಮನ್ನಾ ಮಾತ್ರ ಪರಿಹಾರವಲ್ಲ. ಈ ಹಿನ್ನೆಲೆಯಲ್ಲಿ ಕೃಷಿ ಸಂಕಷ್ಟಗಳ ಪರಿಹಾರಕ್ಕೆ ದೂರದೃಷ್ಟಿಯುಳ್ಳ ಯೋಜನೆಗಳನ್ನು ರೂಪಿಸಿ ಯಶಸ್ವಿ ಅನುಷ್ಠಾನಕ್ಕೆ ಒತ್ತು ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಸರಳ ಸಾಲ ನೀತಿ ಜಾರಿ ಮೂಲಕ ರೈತ ಸಮುದಾಯಕ್ಕೆ ಬಡ್ಡಿರಹಿತ ಸಾಲ ಸೌಲಭ್ಯ ದೊರೆಯುವಂತೆ ಮಾಡುವ ಜೊತೆಗೆ ಸಾಲ ಮರುಪಾವತಿಗೆ ಶಕ್ತಿ ತುಂಬುವಂತಹ ಕಾರ್ಯಕ್ರಮಗಳನ್ನು ರೂಪಿಸಬೇಕು. ಗ್ರಾಮೀಣ ಕುಟುಂಬವನ್ನು ಒಂದು ಘಟಕವೆಂದು ಪರಿಗಣ ಸಿ ಅವರ ಆರ್ಥಿಕ, ಶೈಕ್ಷಣ ಕ ಹಾಗೂ ಸಾಮಾಜಿಕ ಸಬಲೀಕರಣಕ್ಕೆ ಆದ್ಯತೆ ನೀಡಬೇಕು. ಗ್ರಾಮೀಣ ಪ್ರದೇಶದ ಯುವ ಜನರು ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಪ್ಪಿಸಲು ಕೃಷಿಗೆ ಪೂರಕವಾದ ಸಣ್ಣ ಕೈಗಾರಿಕೆಗಳನ್ನು ಆರಂಭಿಸುವ ಮೂಲಕ ಉದ್ಯೋಗ ಸೃಷ್ಟಿ ಮಾಡಬೇಕು ಎಂದು ತಿಳಿಸಿದ್ದಾರೆ.

ಕೃಷಿ ಉತ್ಪನ್ನಗಳನ್ನು ವ್ಯಾಲ್ಯೂಆಡಿಷನ್‍ಗೆ ಒಳಪಡಿಸಿ ಸ್ಪಷ್ಟ ನೀರಾ ನೀತಿ ಜಾರಿ ಮೂಲಕ ತೆಂಗು ಬೆಳೆಗಾರರ ರಕ್ಷಣೆಗೆ ಮುಂದಾಗಬೇಕು. ನೀರಾ ಉಪ ಉತ್ಪನ್ನಗಳಿಗೆ ಒತ್ತು ನೀಡಿ ಒಂದು ಉದ್ಯಮವಾಗಿ ಬೆಳೆಸಲು ನೀತಿ ರೂಪಿಸಬೇಕು. ಸಹಕಾರ ಮತ್ತು ಸರ್ಕಾರಿ ಸೌಮ್ಯದಲ್ಲಿರುವ ಸಕ್ಕರೆ ಕಾರ್ಖಾನೆಗಳನ್ನು ಈ ಕ್ಷೇತ್ರಗಳಲ್ಲೇ ಉಳಿಸಿಕೊಳ್ಳಬೇಕು. ಕಬ್ಬಿನ ಉಪ ಉತ್ಪನ್ನಗಳಿಗೆ ಹೆಚ್ಚು ಒತ್ತು ನೀಡಿ ಕಬ್ಬು ಬೆಳೆಗಾರರಿಗೆ ಹೆಚ್ಚು ಆದಾಯ ತರುವಂತಹ ನೀತಿ ರೂಪಿಸಬೇಕು. ಪ್ರತ್ಯೇಕ ಖುಷ್ಕಿ ಕೃಷಿ ನೀತಿ ರೂಪಿಸಿ, ಖುಷ್ಕಿ ಪ್ರದೇಶದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಸೌಲಭ್ಯ ಒದಗಿಸಬೇಕು. ಜೊತೆಗೆ ಪಂಪ್‍ಸೆಟ್‍ಗಳಿಗೆ ತಾರತಮ್ಯವಿಲ್ಲದೆ ಸಮರ್ಪಕ ವಿದ್ಯುತ್ ಪೊರೈಸಬೇಕು ಎಂದು ಒತ್ತಾಯಿಸಿದ್ದಾರೆ.

ಹಿಂದಿನ ಸರ್ಕಾರ ರಚಿಸಿದ ಕೃಷಿಬೆಲೆ ಆಯೋಗಕ್ಕೆ ಶಾಸನಾತ್ಮಕವಾದ ಅಧಿಕಾರ ನೀಡಿ, ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ದೊರಕುವಂತೆ ಮಾಡಬೇಕು. ತಾವು ಮೈಸೂರಿನ ಕಲಾಮಂದಿರದಲ್ಲಿ ನಡೆದ ಸಂವಾದದಲ್ಲಿ ಡಾ.ಸ್ವಾಮಿನಾಥನ್ ವರದಿ ಜಾರಿಗೆ ತರುವ ಭರವಸೆ ನೀಡಿದ್ದು, ಕಾವೇರಿ-ಕೃಷ್ಣಾ ಕೊಳ್ಳದಲ್ಲಿ ಬಾಕಿ ಇರುವ ಬೃಹತ್, ಮಧ್ಯಮ ಮತ್ತು ಸಣ್ಣ ನೀರಾವರಿ ಯೋಜನೆಗಳನ್ನು ಶೀಘ್ರ ಯಶಸ್ವಿ ಅನುಷ್ಠಾನಕ್ಕೆ ಒತ್ತು ನೀಡಬೇಕು. ಕೆರೆಗಳ ಪುನಶ್ಚೇತನಗೊಳಿಸಿ, ಮಳೆ ನೀರು ಇಂಗಿಸಿ ಅಂರ್ತಜಲ ವೃದ್ಧಿಸುವ ಕಾರ್ಯಕ್ರಮಗಳನ್ನು ರೂಪಿಸಬೇಕು. ಕಡಿಮೆ ನೀರಿನಿಂದ ಹೆಚ್ಚು ಫಸಲು ಬೆಳೆಯುವ ತಂತ್ರಜ್ಞಾನಗಳನ್ನು ಪರಿಚಯಿಸಬೇಕು. ನೈಸರ್ಗಿಕ ಕೃಷಿ ಹಾಗೂ ಸಿರಿಧಾನ್ಯ ಬೆಳೆಗಳಿಗೆ ಉತ್ತೇಜನ ನೀಡಿ, ಪರಿಸರ ಸಂರಕ್ಷಣೆಗೆ ಅಗತ್ಯ ಕಾರ್ಯಕ್ರಮ ರೂಪಿಸಬೇಕು. ಜೊತೆಗೆ ಪಡಿತರ ವಿತರಣೆಯಲ್ಲಿ ಸಿರಿಧಾನ್ಯ ನೀಡಬೇಕು. ಅಲ್ಲದೆ, ಶಾಲಾ ಬಿಸಿಯಾಟದಲ್ಲೂ ಸಿರಿಧಾನ್ಯ ಬಳಕೆಗೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

ಹಳ್ಳಿಗಳ ನೀರಾವರಿ ಅಚ್ಚುಕಟ್ಟಿನ ರಸ್ತೆ ಮತ್ತು ಹೊಲಕ್ಕೆ ಹೋಗುವ ರಸ್ತೆಗಳ ನಿರ್ಮಾಣಕ್ಕಾಗಿ ವಿಶೇಷ ಯೋಜನೆಗಳನ್ನು ರೂಪಿಸಬೇಕು. ಜಮೀನುಗಳ ದುರಸ್ತಿಗೆ ಕಾಲಮಿತಿ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕು. ತುರ್ತು ಕಾರಣಕ್ಕೆ ಜಮೀನು ಮಾರಾಟ ಮಾಡುವ ರೈತರಿಗೆ ಸ್ಕೆಚ್ ನೀಡಲು ಯಾವುದೇ ನಿರ್ಬಂಧವಿಲ್ಲದೆ, ದುರಸ್ತಿಗೆ ಅವಕಾಶ ಕಲ್ಪಿಸಬೇಕು. ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ವಿಳಂಬವಿಲ್ಲದಂತೆ ನೆರವೇರಿಸಲು ಕಟ್ಟುನಿಟ್ಟಿನ ಕ್ರಮ ವಹಿಸಿ, ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಸಮಾನ ಗೌರವ ನೀಡುವ ವಾತಾವರಣ ಸೃಷ್ಟಿಸಲು ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.

ಕೃಷಿ, ತೋಟಗಾರಿಕೆ, ಮೀನುಗಾರಿಕೆ ಮತ್ತು ರೇಷ್ಮೆ ವಿಷಯಗಳ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪ್ರವೇಶದಲ್ಲಿ ರೈತರ ಮಕ್ಕಳಿಗೆ ಇರುವ ಮೀಸಲಾತಿ ಸಂಖ್ಯೆಯನ್ನು ಶೇ.60ಕ್ಕೆ ಹೆಚ್ಚಳ ಮಾಡಬೇಕು. ಶಿಕ್ಷಣ ಮತ್ತು ಉದ್ಯೋಗದಲ್ಲಿ ಎಲ್ಲಾ ವರ್ಗದ ಗ್ರಾಮೀಣ ಮಕ್ಕಳಿಗೆ ಹೆಚ್ಚು ಮೀಸಲಾತಿ ಒದಗಿಸಲು ಕ್ರಮ ಕೈಗೊಳ್ಳಬೇಕು. ಕೇಂದ್ರದ ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯನ್ನು ರೈತರ ಹೊಲದಲ್ಲಿ ಕೆಲಸ ಮಾಡುವವರಿಗೂ ವಿಸ್ತರಿಸಬೇಕು ಎಂದು ಮನವಿ ಮಾಡಿದ್ದಾರೆ.

Translate »