ಅಭಿವೃದ್ಧಿ ಕೆಲಸಗಳ ಪ್ರಸ್ತಾವನೆಗಳನ್ನು ಪ್ರಾಮಾಣ ಕವಾಗಿ ಅನುಷ್ಠಾನಗೊಳಿಸಿ
ಮೈಸೂರು

ಅಭಿವೃದ್ಧಿ ಕೆಲಸಗಳ ಪ್ರಸ್ತಾವನೆಗಳನ್ನು ಪ್ರಾಮಾಣ ಕವಾಗಿ ಅನುಷ್ಠಾನಗೊಳಿಸಿ

May 27, 2018

ಮೈಸೂರು:  ಹಿರಿಯರು, ಅನುಭವಸ್ಥರ ಮಾರ್ಗದರ್ಶನ ಹಾಗೂ ಅಭಿವೃದ್ಧಿ ಕೆಲಸಗಳ ಪ್ರಸ್ತಾವನೆಗಳನ್ನು ಪ್ರಾಮಾಣ ಕವಾಗಿ ಅನುಷ್ಠಾನಗೊಳಿಸುವ ಮೂಲಕ ಬಿಜೆಪಿಗೆ ಗೌರವ ತರುವಂತೆ ಚಾಮರಾಜ ಕ್ಷೇತ್ರದ ನೂತನ ಶಾಸಕ ಎಲ್.ನಾಗೇಂದ್ರ ಅವರಿಗೆ ಮಾಜಿ ವಿಧಾನ ಪರಿಷತ್ ಸದಸ್ಯ ಡಿ.ಮಾದೇಗೌಡರು ಕಿವಿಮಾತು ಹೇಳಿದ್ದಾರೆ.

ಭಾರತೀಯ ಜನತಾ ಪಾರ್ಟಿ ವತಿಯಿಂದ ಮೈಸೂರಿನ ವಿಜಯನಗರ ಒಂದನೇ ಹಂತದಲ್ಲಿರುವ ಸಪ್ತಪಧಿ ಕಲ್ಯಾಣ ಮಂಟಪದಲ್ಲಿ ಇಂದು ಏರ್ಪಡಿಸಿದ್ಧ ಚಾಮರಾಜ ಕ್ಷೇತ್ರದ ನೂತನ ಶಾಸಕ ಎಲ್.ನಾಗೇಂದ್ರ ಅವರಿಗೆ ಅಭಿನಂದನೆ ಹಾಗೂ ಕೃತಜ್ಞತೆ ಸಮರ್ಪಣಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಚಾಮರಾಜ ಕ್ಷೇತ್ರದ ಜನರು ಅಪಾರ ನಿರೀಕ್ಷೆಯೊಂದಿಗೆ ಪಕ್ಷದ ಸಾವಿರಾರು ಕಾರ್ಯಕರ್ತರ ಸಹಕಾರದಿಂದ ಆಯ್ಕೆಯಾಗಿರುವ ನಾಗೇಂದ್ರ ಅವರು ನಾಗರಿಕರ ಆಶೋತ್ತರಗಳಿಗೆ ಸ್ಪಂದಿಸಿ ಅಭಿವೃದ್ಧಿ ಕೆಲಸಗಳನ್ನು ಕಾರ್ಯರೂಪಕ್ಕೆ ತರಲು ಶ್ರಮಿಸಿ ಬಿಜೆಪಿಗೆ ಗೌರವ ತರಬೇಕೆಂದು ಸಲಹೆ ನೀಡಿದರು.

ಮಾಜಿ ಮೇಯರ್ ಸಂದೇಶಸ್ವಾಮಿ ಮಾತನಾಡಿ, ನಾನೂ ಸಹ ಎನ್‍ಆರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ನಿಂತು ಸೋತಿದ್ದೇನೆ. ಗೆದ್ದಿದ್ದರೆ ನೀವು ನನಗೂ ಅಭಿನಂದನೆ ಮಾಡುತ್ತಿದ್ದಿರೇನೋ ಎಂದು ಹೇಳುವ ಮೂಲಕ ಸಭಿಕರು ಜೈಕಾರ ಹಾಕುವಂತೆ ಮಾಡಿದರು.

ಇದೇ ವೇಳೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ನೂತನ ಶಾಸಕ ಎಲ್.ನಾಗೇಂದ್ರ ಅವರನ್ನು ಆತ್ಮೀಯವಾಗಿ ಅಭಿನಂದಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನನ್ನ 25 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಇದು ಅತ್ಯಂತ ಸಂತಸದ ದಿನ. ಕಾರ್ಪೋರೇಟರ್ ಆಗಿ, ಮೂಡಾ ಅಧ್ಯಕ್ಷರಾಗಿ ಮಾಡಿದ ಕೆಲಸವನ್ನು ಪರಿಗಣ ಸಿ ನನ್ನನ್ನು ಆಶೀರ್ವದಿಸಿದ ಕ್ಷೇತ್ರದ ಜನರು, ಪಕ್ಷದ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರಿಗೆ ನಾನು ಚಿರಋಣ ಯಾಗಿದ್ದೇನೆ ಎಂದರು.

ಈಗ ಕೆಲ ಕಾರಣಗಳಿಂದ ಪಕ್ಷ ಅಧಿಕಾರಕ್ಕೆ ಬರದೇ ಇರಬಹುದು. ಆದರೆ ಇನ್ನು ಆರೇ ತಿಂಗಳಲ್ಲಿ ಬಿ.ಎಸ್.ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗುವುದು ನೂರಕ್ಕೆ ನೂರು ಸತ್ಯ. ಕಾರ್ಯಕರ್ತರು ಮುಂಬರುವ ಎಂಎಲ್‍ಸಿ, ಕಾರ್ಪೊರೇಷನ್ ಹಾಗೂ ಎಂಪಿ ಚುನಾವಣೆಯಲ್ಲಿ ಉತ್ಸಾಹದಿಂದ ಕೆಲಸ ಮಾಡಿ ಪಕ್ಷದ ಅಭ್ಯರ್ಥಿಗಳನ್ನು ಜಯಶೀಲರನ್ನಾಗಿಸಬೇಕೆಂದು ನಾಗೇಂದ್ರ ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಕೊಟ್ಟ ಪಾಸ್‍ಪೋರ್ಟ್ ಸೇವಾ ಕೇಂದ್ರ, ಅಮೃತ ಯೋಜನೆಗಳು, ಬೆಂಗಳೂರು-ಮೈಸೂರು ಹೆದ್ದಾರಿ ಉನ್ನತೀಕರಣ, ರೈಲ್ವೆ ಜೋಡಿಹಳಿ ಮಾರ್ಗ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಟ್ಟು ಪಕ್ಷವನ್ನು ಮತ್ತಷ್ಟು ಸಂಘಟಿಸಬೇಕೆಂದು ಕರೆ ನೀಡಿದ ನಾಗೇಂದ್ರ, ಕ್ಷೇತ್ರದ ಜನರ ಆಶೋತ್ತರಗಳಿಗನುಸಾರ ಕೆಲಸ ಮಾಡುವ ಮೂಲಕ ಮತದಾರರ ಋಣ ತೀರಿಸುತ್ತೇನೆ ಎಂದರು.

 

Translate »