ರಾಜ್ಯ ಸರ್ಕಾರಕ್ಕೆ ಲಲಿತ ಮಹಲ್ ಪ್ಯಾಲೇಸ್ ಹೋಟೆಲ್ ಹಸ್ತಾಂತರಿಸಿದ ಐಟಿಡಿಸಿ
ಮೈಸೂರು

ರಾಜ್ಯ ಸರ್ಕಾರಕ್ಕೆ ಲಲಿತ ಮಹಲ್ ಪ್ಯಾಲೇಸ್ ಹೋಟೆಲ್ ಹಸ್ತಾಂತರಿಸಿದ ಐಟಿಡಿಸಿ

May 27, 2018

ಮೈಸೂರು, ಮೇ 26(ಆರ್‍ಕೆ)- ಐಟಿಡಿಸಿ ಅಡಿ ನಿರ್ವಹಣೆಯಾಗುತ್ತಿದ್ದ ಮೈಸೂರಿನ ಲಲಿತ ಮಹಲ್ ಹೋಟೆಲನ್ನು ಶುಕ್ರವಾರ ರಾಜ್ಯ ಸರ್ಕಾರಕ್ಕೆ ಬೆಂಗಳೂರಲ್ಲಿ ಹಸ್ತಾಂತರಿಸಲಾಯಿತು.
ಬಂಡವಾಳ ಹಿಂತೆಗೆತ ನೀತಿಯಡಿ ಲಲಿತ ಮಹಲ್ ಪ್ಯಾಲೇಸ್ ಹೋಟೆಲ್ ಅನ್ನು ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಸುಪರ್ದಿಗೆ ವಹಿಸಲು ನಿರ್ಧಾರ ಕೈಗೊಳ್ಳಲಾಗಿತ್ತು. ಮೈಸೂರಿನ 2ನೇ ದೊಡ್ಡ ಅರಮನೆಯಾದ ಲಲಿತ ಮಹಲ್ ಅನ್ನು 1973 ರಲ್ಲಿ ರಾಜ್ಯ ಸರ್ಕರವು ಐಟಿಡಿಸಿಗೆ ಲೀಸ್ ಮೂಲಕ ಹಸ್ತಾಂತರಿಸಿತ್ತು.

ಈ ಹೋಟೆಲ್ ಅನ್ನು ಕೆಎಸ್‍ಟಿಡಿಸಿ ಅಂಗ ಸಂಸ್ಥೆಯಾದ ಜಂಗಲ್ ಲಾಡ್ಜ್ ಅಂಡ್ ರೆಸಾಟ್ರ್ಸ್‍ಗೆ ವಹಿಸುವ ಸಾಧ್ಯತೆ ಇದೆ. ಬಂಡವಾಳ ಹಿಂತೆಗೆತ ನೀತಿಯನುಸಾರ ಮೈಸೂರಿನ ಲಲಿತ ಮಹಲ್ ಪ್ಯಾಲೇಸ್ ಸೇರಿದಂತೆ ಕೇಂದ್ರ ಸರ್ಕಾರವು ಮೂರು ಐಟಿಡಿಸಿ ಹೋಟೆಲ್‍ಗಳನ್ನು ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಲು ನಿರ್ಧರಿಸಿತ್ತು.

ಈ ಬಗ್ಗೆ ಫೆಬ್ರವರಿ 7 ರಂದು ಆದೇಶ ಹೊರಡಿಸಲಾಗಿತ್ತಲ್ಲದೆ, ರಾಜ್ಯ ಸರ್ಕಾರ ಮತ್ತು ಐಟಿಡಿಸಿ ನಡುವೆ ಒಡಂಬಡಿಕೆಗೂ ಸಹಿ ಹಾಕಲಾಗಿತ್ತು. ಆ ಪ್ರಕಾರ ಐಟಿಡಿಸಿಗೆ ರಾಜ್ಯ ಸರ್ಕಾರವು 7.45 ಕೋಟಿ ರೂ.ಗಳನ್ನು ಪಾವತಿಸಬೇಕಾಗಿತ್ತು ಎನ್ನಲಾಗಿದೆ.

1973 ರಲ್ಲಿ ಲೋಕೋಪಯೋಗಿ ಇಲಾಖೆಯು ಲಲಿತ ಮಹಲ್ ಪ್ಯಾಲೇಸ್ ಹೋಟೆಲನ್ನು ಐಟಿಡಿಸಿಗೆ ಹಸ್ತಾಂತರಿಸಿತ್ತು. ನಂತರ 1974 ರಲ್ಲಿ ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಲಾಗಿದ್ದು, ಇದೀಗ ಸುಮಾರು 44 ವರ್ಷಗಳ ನಂತರ ಮತ್ತೆ ಹೋಟೆಲ್ ರಾಜ್ಯ ಸರ್ಕಾರದ ಸುಪರ್ದಿಗೆ ಬಂದಿದೆ.

Translate »