ರೈತರ ಸಾಲ ಮನ್ನಾಕ್ಕೆ ವಿಳಂಬ ಧೋರಣೆ ಖಂಡಿಸಿ ಮೈಸೂರಲ್ಲಿ ರೈತರ ಪ್ರತಿಭಟನೆ
ಮೈಸೂರು

ರೈತರ ಸಾಲ ಮನ್ನಾಕ್ಕೆ ವಿಳಂಬ ಧೋರಣೆ ಖಂಡಿಸಿ ಮೈಸೂರಲ್ಲಿ ರೈತರ ಪ್ರತಿಭಟನೆ

June 19, 2018

ಮೈಸೂರು:  ರೈತರ ಸಾಲಮನ್ನಾ ವಿಚಾರದಲ್ಲಿ ರಾಜ್ಯ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಸಾಲ ಮನ್ನಾ ವಿಚಾರವಾಗಿ ರೈತ ಸಂಘಟನೆಗಳ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿ 15 ದಿನಗಳ ಕಾಲಾವಕಾಶವನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪಡೆದಿದ್ದರು. ಆದರೆ ಇಂದಿಗೂ ಸಾಲ ಮನ್ನಾ ನಿರ್ಧಾರ ಕೈಗೊಳ್ಳದೇ ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

2009ರ ಏ.1ರಿಂದ 2017ರ ಡಿ.31ರ ಅವಧಿಯಲ್ಲಿ ಪಡೆದ ಸಾಲ ಮನ್ನಾ ಮಾಡುವ ಆಲೋಚನೆ ಕೈಬಿಟ್ಟು, 2009ರ ಹಿಂದಿನ ವರ್ಷಕ್ಕೂ ಹಾಗೂ 2018ರ ಜುಲೈವರೆಗೂ ಅನ್ವಯ ಆಗುವಂತೆ ಯೋಜನೆ ರೂಪಿಸಬೇಕು. ಸಾಲ ವಸೂಲಿಗಾಗಿ ಬ್ಯಾಂಕುಗಳು ಈಗಾಗಲೇ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಈ ಪ್ರಕರಣಗಳಿಗೂ ಸಾಲಮನ್ನಾ ಅನ್ವಯ ಆಗಬೇಕು. ಬ್ಯಾಂಕಿನಲ್ಲಿ ಸಾಲ ನವೀಕರಣವಾಗಿದ್ದರೂ ಇದುವರೆಗೂ ಉಳಿಸಿಕೊಂಡಿರುವ ಬೆಳೆ ಸಾಲವನ್ನೂ ಮನ್ನಾ ಮಾಡಬೇಕೆಂದು ಆಗ್ರಹಿಸಿದರು.

ಚಿನ್ನಾಭರಣಗಳನ್ನು ಬ್ಯಾಂಕುಗಳಲ್ಲಿ ಅಡಮಾನ ಇಟ್ಟು ಸಾಲ ಪಡೆದಿರುವ ರೈತರ ಸಾಲವನ್ನು ಕೂಡ ಮನ್ನಾ ಮಾಡಬೇಕು. ನಗರ ಪ್ರದೇಶಗಳ ಸುತ್ತಮುತ್ತಲಿನ ಹಳ್ಳಿಗಳ ರೈತರು ನಗರಪಾಲಿಕೆ ವ್ಯಾಪ್ತಿಯಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿಯೂ ಬೆಳೆ ಸಾಲ ಮಾಡಿದ್ದು, ಈ ರೈತರೂ ಸಾಲಮನ್ನಾ ಯೋಜನೆಗೆ ಒಳಪಡಬೇಕು. ಪಶು-ಪಾಲನೆಗಾಗಿ, ಟ್ರ್ಯಾಕ್ಟರ್, ಟಿಲ್ಲರ್, ಎತ್ತಿನ ಗಾಡಿ ಸಾಲವನ್ನೂ ಮನ್ನಾ ಮಾಡಬೇಕು. 4 ಲಕ್ಷ ರೂ. ಆಧಾರ ಹೊಂದಿರುವ ರೈತರ ಸಾಲ ಯೋಜನೆಗೆ ಅನ್ವಯವಾಗುವುದಿಲ್ಲ ಎಂಬುದನ್ನು ಕೈಬಿಟ್ಟು ಅವರಿಗೂ ಪ್ರಯೋಜನ ಆಗುವಂತೆ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಭತ್ತ ಬೆಳೆಗಾರರಿಗೆ ಅನುಕೂಲ ಕಲ್ಪಿಸಲು ಭತ್ತದ ಖರೀದಿ ಕೇಂದ್ರ ತೆರೆಯಬೇಕು. ನಂಜನಗೂಡು ತಾಲೂಕಿನ ಕಪಿಲಾ ನದಿ ವ್ಯಾಪ್ತಿಯಲ್ಲಿ ಪ್ರವಾಹದಿಂದ ಬೆಳೆ ನಷ್ಟವಾಗಿದ್ದು, ಕೂಡಲೇ ಕಂದಾಯ ಇಲಾಖೆಯಿಂದ ಸರ್ವೇ ನಡೆಸಿ ಎಕರೆಗೆ 20 ಸಾವಿರ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ರೈತ ಸಂಘದ ರಾಜ್ಯ ಮುಖಂಡರಾದ ಹೆಚ್.ಸಿ.ಲೋಕೇಶ್ ರಾಜೇ ಅರಸ್, ಎಂ.ಎಸ್.ಅಶ್ವಥ್ ನಾರಾಯಣ್ ರಾಜೇ ಅರಸ್, ಜಿಲ್ಲಾಧ್ಯಕ್ಷ ಹೊಸೂರ್ ಕುಮಾರ್, ಹೊಸಕೋಟೆ ಬಸವರಾಜು, ತಾಲೂಕುಗಳ ಅಧ್ಯಕ್ಷರಾದ ಪಿ.ಮರಂಕಯ್ಯ, ಸರಗೂರು ನಟರಾಜು, ಬೆಂಕಿಪುರ ಚಿಕ್ಕಣ್ಣ, ವಿದ್ಯಾಸಾಗರ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನೇತ್ರಾವತಿ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »