ಸಾವಯವ ಮಾವು ಮೇಳದಲ್ಲಿ ಒಂದೇ ಮಳಿಗೆ: ನೂಕು ನುಗ್ಗಲು
ಮೈಸೂರು

ಸಾವಯವ ಮಾವು ಮೇಳದಲ್ಲಿ ಒಂದೇ ಮಳಿಗೆ: ನೂಕು ನುಗ್ಗಲು

June 19, 2018

ಮೈಸೂರು: ಕೃಷಿ ಮಾರಾಟ ಅಧ್ಯಯನ ಕೇಂದ್ರದ ಆವರಣದಲ್ಲಿ ಇಂದಿನಿಂದ ಆರಂಭವಾದ ಎರಡು ದಿನಗಳ ಸಾವಯವ ಕೃಷಿ ಪದ್ಧತಿಯಡಿ ಬೆಳೆದಿರುವ ಮಾವಿನ ಹಣ್ಣಿನ ಮಾರಾಟ ಮೇಳದಲ್ಲಿ ಏಕೈಕ ಮಳಿಗೆಯಲ್ಲಿದ್ದ ಮಾವು ಖರೀದಿಸಲು ಜನ ಮುಗಿಬಿದ್ದರು.

ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟ, ಕೃಷಿ ಮಾರಾಟ ಅಧ್ಯಯನ ಸಂಸ್ಥೆ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಪ್ರಾಂತೀಯ ಸಹಕಾರ ಸಾವಯವ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಈ ಮೇಳದಲ್ಲಿ ಕೇವಲ ಒಂದೇ ಒಂದು ಮಳಿಗೆ ಮಾತ್ರ ತೆರೆಯಲಾಗಿತ್ತು. ಇದರಿಂದ ಮಾವು ಪ್ರಿಯರಿಗೆ ತೀವ್ರ ನಿರಾಸೆ ಉಂಟಾಯಿತು. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ವೀರಪ್ಪಶೆಟ್ಟಿ ಎಂಬ ಮಾವು ಬೆಳೆಗಾರರು ಗೂಡ್ಸ್ ಟೆಂಪೋದಲ್ಲಿ ವಿವಿಧ ತಳಿಯ 3 ಟನ್ ಮಾವಿನ ಹಣ್ಣುಗಳನ್ನು ತಂದು ಮಾರಾಟ ಮಾಡುತ್ತಿದ್ದಾರೆ. ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದಿರುವ ಬಾದಾಮಿ, ಮಲ್ಲಿಕಾ, ಲಾಲ್‍ಬಾಗ್, ಶುಗರ್‍ಬೇಬಿ, ತೋತಾಪುರಿ, ಮಲಗೋವ ತಳಿಯ ಹಣ್ಣುಗಳನ್ನು ಇಲ್ಲಿ ಮಾರಾಟಕ್ಕಿಡಲಾಗಿದೆ.

ಹಿರಿಯ ನಾಗರಿಕರೇ ಹೆಚ್ಚು: ಸಾವಯವ ಪದ್ಧತಿಯಲ್ಲಿ ಬೆಳೆದಿರುವ ಹಣ್ಣುಗಳನ್ನೇ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿದ ಹಿರಿಯ ನಾಗರಿಕರು ಮೈಸೂರಿನ ವಿವಿಧ ಬಡಾವಣೆಗಳಿಂದ ಮಾವಿನ ಹಣ್ಣನ್ನು ಖರೀದಿಸಲು ಕೃಷಿ ಅಧ್ಯಯನ ಕೇಂದ್ರಕ್ಕೆ ಆಗಮಿಸಿದ್ದರು. ಆದರೆ ಮೇಳದಲ್ಲಿದ್ದ ಏಕೈಕ ಮಳಿಗೆಯಲ್ಲಿ ತಮಗೆ ಇಷ್ಟ ಬಂದ ತಳಿಯ ಹಣ್ಣುಗಳನ್ನು ಖರೀದಿಸಿದರು.

ಅಸಮಾಧಾನ: ಟೆರಿಷಿಯನ್ ಕಾಲೇಜು, ಶಿಕ್ಷಕರ ಬಡಾವಣೆ ಹಾಗೂ ರಾಘವೇಂದ್ರನಗರ ಸೇರಿದಂತೆ ದೂರದ ಬಡಾವಣೆಗಳಿಂದ ಆಗಮಿಸಿದ್ದ ಹಿರಿಯ ನಾಗರಿಕರು ಒಂದೇ ಮಳಿಗೆ ಇರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದರು. ಪತ್ರಿಕೆಗಳಲ್ಲಿ ಮಾವು ಮೇಳ ಎಂದು ಪ್ರಕಟಣೆ ನೀಡಲಾಗಿದೆ. ಅದಕ್ಕನುಸಾರ ವ್ಯವಸ್ಥೆ ಮಾಡಬೇಕಲ್ಲವೆ? ಈ ವ್ಯವಸ್ಥೆ ನೋಡಿದರೆ ಅನುಮಾನ ಮೂಡುತ್ತದೆ. ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಮಳಿಗೆಗಳನ್ನು ತೆರೆಯಲು ಕ್ರಮ ಕೈಗೊಳ್ಳಬೇಕು. ಅಲ್ಲದೆ ಆಯೋಜಕರು ಬಂದು ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.

ಇಂದು ಬೆಳಿಗ್ಗೆ ತೋಟಗಾರಿಕಾ ಮಹಾ ವಿದ್ಯಾಲಯದ ಡೀನ್ ಡಾ.ಜಿ.ಜನಾರ್ಧನ್ ಮಾವು ಮೇಳಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಪ್ರಾಂತೀಯ ಸಹಕಾರ ಸಾವಯವ ಒಕ್ಕೂಟದ ಅಧ್ಯಕ್ಷ ಕೆ.ವಿ.ರೆಡ್ಡಪ್ಪ, ಆಕಾಶವಾಣಿ ಸಹಾಯಕ ನಿರ್ದೇಶಕ ಹೆಚ್.ಶ್ರೀನಿವಾಸ್, ಮೈಸೂರು ಕೃಷಿ ಮಾರಾಟ ಅಧ್ಯಯನ ಸಂಸ್ಥೆಯ ಪ್ರಾಚಾರ್ಯರಾದ ಡಾ.ರತ್ನಮ್ಮ, ಕೃಷಿ ಮಾರಾಟ ಇಲಾಖೆ ಉಪನಿರ್ದೇಶಕ ಎಂ.ನಂಜುಂಡಸ್ವಾಮಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Translate »