ಮಾರ್ಗದರ್ಶಕರ ನೇಮಿಸದ ಸಂಗೀತ ವಿವಿ ವಿರುದ್ಧ ಪಿಹೆಚ್‍ಡಿಗೆ ದಾಖಲಾದ ವಿದ್ಯಾರ್ಥಿಗಳ ಪ್ರತಿಭಟನೆ
ಮೈಸೂರು

ಮಾರ್ಗದರ್ಶಕರ ನೇಮಿಸದ ಸಂಗೀತ ವಿವಿ ವಿರುದ್ಧ ಪಿಹೆಚ್‍ಡಿಗೆ ದಾಖಲಾದ ವಿದ್ಯಾರ್ಥಿಗಳ ಪ್ರತಿಭಟನೆ

June 19, 2018

ಮೈಸೂರು:  ಕರ್ನಾಟಕ ಸಂಗೀತ ವಿವಿಯಲ್ಲಿ 2010-11ನೇ ಸಾಲಿನಲ್ಲಿ ಪಿಹೆಚ್‍ಡಿಗೆ ದಾಖಲು ಮಾಡಿಕೊಂಡಿದ್ದರೂ ಈವರೆಗೂ ಮಾರ್ಗದರ್ಶಕರನ್ನು ನೇಮಕ ಮಾಡದೇ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ವಿವಿಯಲ್ಲಿ ಪಿಹೆಚ್‍ಡಿಗೆ ದಾಖಲಾಗಿರುವ ಅಭ್ಯರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿದರು.

ಮೈಸೂರಿನ ಲಕ್ಷ್ಮೀಪುರಂನಲ್ಲಿರುವ ವಿವಿಯ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಕೆಎಸ್‍ಜಿಹೆಚ್ ಸಂಗೀತ ವಿವಿಯಲ್ಲಿ 2010-11ರ ಸಾಲಿನಲ್ಲಿ ನಮ್ಮನ್ನು ಪಿಹೆಚ್‍ಡಿಗೆ ದಾಖಲು ಮಾಡಿಕೊಳ್ಳಲಾಗಿದೆ. ನಿಯಮದಂತೆ ದಾಖಲಾತಿಗೆ ಶುಲ್ಕ ಕಟ್ಟಿಸಿಕೊಂಡು ಪ್ರವೇಶ ಪರೀಕ್ಷೆ ಸಹ ನಡೆಸಲಾಯಿತು. ಆದರೆ ವರ್ಷಗಳು ಕಳೆಯುತ್ತಿದ್ದರೂ ಈವರೆಗೂ ಮಾರ್ಗದರ್ಶಕರನ್ನು ನೇಮಕ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿವಿಯ ಹಂಗಾಮಿ ಕುಲಪತಿಗಳು ನಮ್ಮ ಸಮಸ್ಯೆ ಬಗೆಹರಿಸದೇ ಬೇಜವಾಬ್ದಾರಿಯಾಗಿ ಪ್ರತಿಕ್ರಿಯಿಸಿ ನಮ್ಮ ಭವಿಷ್ಯದೊಂದಿಗೆ ಆಟವಾಡುತ್ತಿದ್ದಾರೆ. ಕೆಲವು ವಿಷಯವಾರು ವಿಭಾಗಗಳಿಗೆ ಈಗಾಗಲೇ ಮಾರ್ಗದರ್ಶಕರನ್ನು ನೇಮಕ ಮಾಡಿದ್ದು, ಅದೇ ಮಾರ್ಗದರ್ಶಕರನ್ನು ಮುಂದುವರೆಸಬೇಕು. ಜೊತೆಗೆ ಉಳಿದ ವಿಭಾಗಗಳಿಗೂ ಕೂಡಲೇ ಮಾರ್ಗದರ್ಶಕರನ್ನು ನೇಮಿಸಿ, ಸಂಶೋಧನೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು. ಪಿಹೆಚ್‍ಡಿ ಅಭ್ಯರ್ಥಿಗಳಾದ ಕೊಟ್ರಪ್ಪ, ಗಣೇಶ್, ಶಕುಂತಲಾ, ಜುಮ್ಮನಗೌಡ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »