ನೇಮಕಾತಿ ಆದೇಶ, ಪರಿಷ್ಕೃತ  ವೇತನಕ್ಕಾಗಿ ಸಂಗೀತ ವಿವಿ ಬೋಧಕೇತರ ಸಿಬ್ಬಂದಿ ಪ್ರತಿಭಟನೆ
ಮೈಸೂರು

ನೇಮಕಾತಿ ಆದೇಶ, ಪರಿಷ್ಕೃತ ವೇತನಕ್ಕಾಗಿ ಸಂಗೀತ ವಿವಿ ಬೋಧಕೇತರ ಸಿಬ್ಬಂದಿ ಪ್ರತಿಭಟನೆ

June 5, 2018

ಮೈಸೂರು: ವರ್ಷದ ಅವಧಿಗೆ ನೇಮಕಾತಿ ಆದೇಶ ಹಾಗೂ 6ನೇ ಪರಿಷ್ಕೃತ ವೇತನ ನೀಡಲು ಸರ್ಕಾರದ ಆದೇಶವಿದ್ದರೂ ಕುಲಸಚಿವ ಪ್ರೊ.ಆರ್.ರಾಜೇಶ್ ಅದಕ್ಕೆ ಅವಕಾಶ ನೀಡದೇ ನಮಗೆ ಉದ್ಯೋಗ ಅಭದ್ರತೆ ಸೃಷ್ಟಿ ಮಾಡಿದ್ದಾರೆ ಎಂದು ಆರೋಪಿಸಿ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ಬೋಧಕೇತರ ಸಿಬ್ಬಂದಿ ಸೋಮವಾರ ಪ್ರತಿಭಟನೆ ನಡೆಸಿದರು.

ವಿಶ್ವವಿದ್ಯಾನಿಲಯದ ಆವರಣದಲ್ಲಿ ಪ್ರತಿಭಟನೆ ನಡೆಸಿದ ಬೋಧಕೇತರ ಸಿಬ್ಬಂದಿ, 2017ರ ನ.1ರ ಸರ್ಕಾರದ ಆದೇಶದಂತೆ ವಿಶ್ವವಿದ್ಯಾನಿಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕೇತರ ಸಿಬ್ಬಂದಿಗೆ ಸರ್ಕಾರವು ಕಾಲಕಾಲಕ್ಕೆ ಪರಿಷ್ಕರಿಸಿರುವ ವೇತನವನ್ನು ವಿಶ್ವವಿದ್ಯಾನಿಲಯಗಳು ಅಳವಡಿಸಿಕೊಂಡು ಲಭ್ಯವಿರುವ ಅನುದಾನದಲ್ಲಿ ಭರಿಸಲು ನಿರ್ದೇಶನವಿದೆ. ಅದರಂತೆ ಮುಂದುವರೆಯಲು ವಿವಿಯ 24ನೇ ಪ್ರಶಾಸನ ಸಭೆಯಲ್ಲಿ ನಿರ್ಣಯಿಸಿದ್ದರೂ ವಿವಿಯ ಹಂಗಾಮಿ ಕುಲಪತಿ ಆರ್.ರಾಜೇಶ್ ಇದಕ್ಕೆ ತಡೆಯೊಡ್ಡಿದ್ದಾರೆ ಎಂದು ಆರೋಪಿಸಿದರು.

ವಿವಿಯ ಒಟ್ಟು 21 ಬೋಧಕೇತರ ಸಿಬ್ಬಂದಿಗೂ ಸರ್ಕಾರದ ಆದೇಶದನ್ವಯ ವಿದ್ಯಾರ್ಹತೆ ಮತ್ತು ಅನುಭವಕ್ಕೆ ಅನುಗುಣವಾಗಿ ಕಾಲಕಾಲಕ್ಕೆ ಪರಿಷ್ಕರಣೆಯಾಗುವ ಮೂಲವೇತನದ ಹಂತಕ್ಕೆ 10 ರೂ. ಕಡಿತಗೊಳಿಸಿ ಮೂಲವೇತನವನ್ನು ಪಾವತಿ ಮಾಡಬೇಕೆಂದು ಪ್ರಶಾಸನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಆದರೆ 2018ರ ಮೇ ತಿಂಗಳಿಂದ ನೇಮಕಾತಿ ಆದೇಶ ಹಾಗೂ ವೇತನ ನೀಡದೇ ಉದ್ಯೋಗ ಅಭದ್ರತೆ ಉಂಟು ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಂಡಿಕೇಟ್ ಸಭೆಯ ನಿರ್ಣಯ ಉಲ್ಲಂಘಿಸಿ 6 ತಿಂಗಳಿಗೆ ಮಾತ್ರ ನೇಮಕಾತಿ ಆದೇಶ ನೀಡಲಾಗಿದ್ದು, ಆ ಮೂಲಕ ಬೋಧಕೇತರ ಸಿಬ್ಬಂದಿಗೆ ಅನ್ಯಾಯ ಮಾಡಲಾಗುತ್ತಿದೆ. ಇದನ್ನು ಸರಿಪಡಿಸಲು ಹಂಗಾಮಿ ಕುಲಪತಿ ಆರ್.ರಾಜೇಶ್ ಅವರಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಸ್ಪಂದನೆ ಇಲ್ಲವಾಗಿದೆ. ಕೂಡಲೇ ಸಿಂಡಿಕೇಟ್ ಸಭೆ ಕರೆದು ನಮಗೆ ನ್ಯಾಯ ದೊರೆಕಿಸಿಕೊಡಬೇಕು ಎಂದು ಒತ್ತಾಯಿಸಿದರು.

ಭರವಸೆ ಮೇರೆಗೆ ಪ್ರತಿಭಟನೆ ಕೈಬಿಟ್ಟರು: ಮಧ್ಯಾಹ್ನ 2.30ಕ್ಕೆ ಪ್ರತಿಭಟನೆ ಆರಂಭಿಸಿದ ಬೋಧಕೇತರ ಸಿಬ್ಬಂದಿ ಎರಡು ತಾಸಿಗೂ ಹೆಚ್ಚು ಕಾಲ ಹಂಗಾಮಿ ಕುಲಪತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಆ ಬಳಿಕ ಸ್ಥಳಕ್ಕೆ ಬಂದ ಹಂಗಾಮಿ ಕುಲಪತಿ ಆರ್.ರಾಜೇಶ್, ಪ್ರತಿಭಟನಾನಿರತರ ಮನವಿ ಸ್ವೀಕರಿಸಿ ನಾಳೆ ಬೆಳಿಗ್ಗೆ 10 ಗಂಟೆಯೊಳಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಡಲಾಯಿತು. ಬೋಧಕೇತರ ಸಿಬ್ಬಂದಿಯಾದ ವಿಜಯ ಬಡಿಗೇರ, ಕೆ.ಹೆಚ್.ಹನುಮಂತರಾಜು, ಗುರುಸ್ವಾಮಿ ಸೇರಿದಂತೆ ಬಹುತೇಕ ಎಲ್ಲರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »