ಡಾ. ನಾಗೇಶ್ ವಿ.ಬೆಟಕೋಟೆ ಅವರಿಗೆ  ಸಂಗೀತ ವಿವಿ ಹಂಗಾಮಿ ಕುಲಪತಿ ಮಾಡದಿರುವುದಕ್ಕೆ ಆಕ್ಷೇಪ
ಮೈಸೂರು

ಡಾ. ನಾಗೇಶ್ ವಿ.ಬೆಟಕೋಟೆ ಅವರಿಗೆ  ಸಂಗೀತ ವಿವಿ ಹಂಗಾಮಿ ಕುಲಪತಿ ಮಾಡದಿರುವುದಕ್ಕೆ ಆಕ್ಷೇಪ

June 8, 2018

ಮೈಸೂರು: ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾನಿಲಯಕ್ಕೆ ಹಂಗಾಮಿ ಕುಲಪತಿಯಾಗುವ ಎಲ್ಲಾ ಅರ್ಹತೆ ಹೊಂದಿದ್ದ ಡಾ.ನಾಗೇಶ್ ವಿ.ಬೆಟಕೋಟೆ ಅವರನ್ನು ಅಸ್ಪøಶ್ಯ ಸಮುದಾಯದವರು ಎಂಬ ಕಾರಣಕ್ಕೆ ಅಕ್ರಮವಾಗಿ ಡಾ.ಆರ್.ರಾಜೇಶ್ ಅವರಿಗೆ ಹಂಗಾಮಿ ಕುಲಪತಿ ಸ್ಥಾನ ನೀಡಲಾಗಿದೆ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಆರೋಪಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ಆರ್.ರಾಜೇಶ್ ಅವರು ಸಮಾಜಶಾಸ್ತ್ರ ಉಪನ್ಯಾಸಕರಾಗಿ ಕೇವಲ ಎರಡು ವರ್ಷ ಪಾಠ ಮಾಡಿದವರಾಗಿದ್ದು, ಸಂಗೀತ, ನೃತ್ಯ ಮತ್ತು ಪ್ರದರ್ಶಕ ಕಲೆಗಳ ಬಗ್ಗೆ ಯಾವುದೇ ತಿಳಿವಳಿಕೆ ಅವರಿಗಿಲ್ಲ. ಡಾ.ನಾಗೇಶ್ ವಿ. ಬೆಟಕೋಟೆ ಅವರು ಪ್ರದರ್ಶಕ ಕಲೆಗಳ ಬೋಧನೆ ಮಾಡಿದ್ದು, ಇವರು ಡೀನ್ ಆಗಿ ಅನುಭವ ಹೊಂದಿದ್ದರೂ ಅಸ್ಪೃಶ್ಯರೆಂಬ ಕಾರಣಕ್ಕಾಗಿ ಹಂಗಾಮಿ ಕುಲಪತಿಯಾಗಿ ನೇಮಕ ಮಾಡದೇ ತಾರತಮ್ಯ ಎಸಗಲಾಗಿದೆ. ಇದರಲ್ಲಿ ಹಿಂದಿನ ಕುಲಪತಿ ಡಾ.ಸರ್ವಮಂಗಳಾ ಶಂಕರ್ ಅವರ ಸ್ವಜಾತಿ ವ್ಯಾಮೋಹ ಕೆಲಸ ಮಾಡಿದೆ ಎಂದು ಆಪಾದಿಸಿದರು.

ಡಾ.ಆರ್.ರಾಜೇಶ್ ಅವರು 10 ತಿಂಗಳ ಹಿಂದೆ ನಿಯೋಜನೆಯಡಿ ಬೆಂಗಳೂರು ವಿವಿಯಿಂದ ಸಂಗೀತ ವಿವಿಗೆ ಮೌಲ್ಯಮಾಪನ ಕುಲಸಚಿವರಾಗಿ ನೇಮಕಗೊಂಡಿದ್ದು, ಇವರನ್ನು ಹಂಗಾಮಿ ಕುಲಪತಿ ಸ್ಥಾನಕ್ಕೆ ನೇಮಕ ಮಾಡುವುದು ಸಂವಿಧಾನಾತ್ಮಕ ನಿಯಮಗಳಿಗೆ ವಿರುದ್ಧವಾಗುತ್ತದೆ ಎಂದರು. ಜೊತೆಗೆ ವಿವಿಯ ನೃತ್ಯ ಮತ್ತು ಸಂಗೀತ ವಿಷಯದ ಪರೀಕ್ಷೆಗೆ ಇಬ್ಬರು ದಲಿತ ವಿದ್ಯಾರ್ಥಿನಿಯರಿಂದ ಪರೀಕ್ಷಾ ಶುಲ್ಕ ಕಟ್ಟಿಸಿಕೊಂಡರೂ ಹಾಜರಾತಿ ಕೊರತೆ ನೆಪದಲ್ಲಿ ಪರೀಕ್ಷೆ ಬರೆಯಲು ಅನುಮತಿ ನೀಡಿಲ್ಲ. ಇನ್ನು ಅಕಾಡೆಮಿಕ್ ಕೌನ್ಸಿಲ್ ಮತ್ತು ಸಿಂಡಿಕೇಟ್‍ನಿಂದ ಅನುಮತಿ, ಸರ್ಕಾರದಿಂದ ಅನುಮೋದನೆ ಪಡೆಯದೇ ಬಸವ ಕಲ್ಯಾಣದ ಗೊರಹಟ್ಟ ಮಠದಲ್ಲಿ ಹೊಸ ಅಧ್ಯಯನ ಕೇಂದ್ರ ತೆರೆಯಲು ಅವಕಾಶ ಮಾಡಿಕೊಟ್ಟಿರುವ ಈ ಹಿಂದಿನ ಕುಲಪತಿ ಡಾ.ಸರ್ವಮಂಗಳಾ ಶಂಕರ್ ಅಧಿಕಾರ ದುರ್ಬಳಕೆ ಮಾಡಿದ್ದಾರೆ ಆರೋಪಿಸಿದರು.

ಅಲ್ಲದೆ, ಬಿಎ ಕೋರ್ಸ್‍ಗೆ ಕನಿಷ್ಠ ವಿದ್ಯಾರ್ಥಿಗಳು ದಾಖಲಾಗದಿದ್ದರೂ ತಮಗೆ ಬೇಕಾದವರಿಗೆ ಉದ್ಯೋಗ ಕೊಡಿಸುವ ಸಲುವಾಗಿ ಕೇವಲ ಒಬ್ಬ ವಿದ್ಯಾರ್ಥಿಯನ್ನು ದಾಖಲಿಸಿಕೊಂಡು ನಾಲ್ವರು ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ದೂರಿದ ಅವರು, ಯಾವುದೇ ಅರ್ಹತೆ ಇಲ್ಲದಿರುವ ಡಾ.ಆರ್. ರಾಜೇಶ್ ಅವರನ್ನು ಕುಲಪತಿ ಸ್ಥಾನದಿಂದ ಮುಕ್ತಗೊಳಿಸಿ, ಮಾತೃ ಸಂಸ್ಥೆಗೆ ಕಳುಹಿಸಬೇಕು ಎಂದು ಒತ್ತಾಯಿಸಿದರು. ಸಂಘಟನೆಯ ಖಜಾಂಚಿ ಕೆ.ವಿ.ದೇವೇಂದ್ರ, ಜಿಲ್ಲಾ ಸಂಘಟನಾ ಸಂಚಾಲಕ ಕಿರಂಗೂರು ಸ್ವಾಮಿ, ಮುಖಂಡ ದೇವಾಜು ಟಿ.ಕಾಟೂರ್ ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »