ಜನಮನ ಸೆಳೆದ ಮಾವು-ಹಲಸು ಮೇಳ
ಹಾಸನ

ಜನಮನ ಸೆಳೆದ ಮಾವು-ಹಲಸು ಮೇಳ

June 8, 2018
  • ಮಾವು ಕೊಳ್ಳಲು ಮುಗಿ ಬಿದ್ದ ಗ್ರಾಹಕರು, ಕಡಿಮೆ ದರದಲ್ಲಿ ಕಾರ್ಬೈಡ್ ಮುಕ್ತ ಹಣ್ಣುಗಳ ಮಾರಾಟ
  • 3 ದಿನದಲ್ಲಿ 10 ಟನ್ ಮಾವು, 0.5ಟನ್ ಹಲಸು ಮಾರಾಟ

ಹಾಸನ:  ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಆಯೋಜಿಸಿರುವ ಮಾವು, ಹಲಸು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತ ವಾಗುತ್ತಿದ್ದು, ಮೇಳವೂ ಜನ-ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.ತೋಟಗಾರಿಕೆ ಇಲಾಖೆ ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಹಾಗೂ ಹಾಸನ ಜಿಲ್ಲಾ ಮಾವು ಬೆಳೆಗಾರರ ಸಂಘದಿಂದ ಜೂ.5ರಿಂದ ಆರಂಭವಾಗಿರುವ ಮೇಳದಲ್ಲಿ 10ಟನ್‍ನಷ್ಟು ಮಾವು ಮಾರಾಟವಾಗಿದೆ. ಇನ್ನೊಂದೆÀಡೆ ಹಲಸಿಗೂ ಅಷ್ಟೇ ಪ್ರಮಾಣದ ಬೇಡಿಕೆ ಸೃಷ್ಟಿಯಾಗಿದ್ದು, 0.5 ಟನ್‍ನಷ್ಟು ಹಣ್ಣನ್ನು ಗ್ರಾಹಕರು ಖರೀದಿಸಿದ್ದಾರೆ.

ಕಾರ್ಬೈಡ್ ಬಳಸದೆ ನೈಸರ್ಗಿಕವಾಗಿ ಹಣ್ಣಾದ ಮಾವಿನ ಹಣ್ಣನ್ನು ಶೇ.10 ರಿಂದ 15 ರಿಯಾಯಿತಿ ದರದಲ್ಲಿ ಮಾರಾಟ ಮಾಡ ಲಾಗುತ್ತಿರುವುದರಿಂದ ಹಣ್ಣುಗಳನ್ನು ಖರೀದಿಸಲು ಗ್ರಾಹಕರು ಮುಗಿ ಬೀಳುತ್ತಿದ್ದಾರೆ.

ವಿವಿಧ ತಳಿಯ ಹಣ್ಣುಗಳು: ಮೇಳದಲ್ಲಿ ಆಕ ರ್ಷಕ ರೂಪ, ಸ್ವಾದಿಷ್ಟ ರುಚಿಯ ಆಲ್ಫಾನ್ಸೊ, ರಸಪುರಿ, ಬಾದಾಮಿ, ನೀಲಂ, ಮಲಗೋವ, ಸಿಂಧೂರ, ತೋತಾಪುರಿ, ಮಲ್ಲಿಕಾ, ಕಲಮಿ, ಅಮ್ರ ಪಾಲಿ, ಬಂಗನ್ ಪಲ್ಲಿ, ರಾಮರಸ, ಮಾಣ ಬಟ್, ನಾಜೂರ್ ಬಾದಾಮ್, ರುಮಾನಿ, ವಾರಾಜ, ದಶೇರಿ, ಸ್ವರ್ಣರೇಖಾ, ಜನಾರ್ಧನ್ ಪಸಂದ್, ಬನೇಶನ್, ಜಹಂಗೀರ್ ಸೇರಿದಂತೆ ವಿವಿಧ ತಳಿಗಳ ಮಾವು ಹಾಗೂ ಹಲಸಿನ ಹಣ್ಣುಗಳನ್ನು ಒಟ್ಟು 16 ಮಳಿಗೆಗಳಲ್ಲಿ ಮಾರಾಟಕ್ಕೆ ಇಡಲಾಗಿದೆ.

ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಕೋಲಾರ, ರಾಮನಗರ, ಬೆಂಗಳೂರು ಹಾಗೂ ಜಿಲ್ಲೆಯ ವಿವಿಧೆಡೆಯಿಂದ ಸ್ಥಳೀಯ ಪ್ರಗತಿಪರ ಮಾವು ಹಾಗೂ ಹಲಸು ಬೆಳೆಯುವ ರೈತರು ಮೇಳದಲ್ಲಿ ಪಾಲ್ಗೊಂಡಿದ್ದು, ಮಧ್ಯವರ್ತಿಗಳ ಹಾವಳಿ ಇಲ್ಲದೆ ಗ್ರಾಹಕರಿಗೆ ನೇರವಾಗಿ ಹಣ್ಣುಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಗ್ರಾಹಕರಿಗೆ ಸ್ವಾದಿಷ್ಟಕರವಾದ ಹಣ್ಣುಗಳು ದೊರೆಯುವ ಜೊತೆಗೆ, ರೈತರಿಗೂ ಉತ್ತಮ ಬೆಲೆಯು ಸಿಗುತ್ತಿದೆÉ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಸಂಜಯ್ ‘ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದರು.

2ನೇ ಬಾರಿ ಆಯೋಜನೆ: ತೋಟಗಾರಿಕೆ ಇಲಾಖೆ ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಹಾಗೂ ಹಾಸನ ಜಿಲ್ಲಾ ಮಾವು ಬೆಳೆಗಾರರ ಸಂಘ ದಿಂದ ಜಿಲ್ಲೆಯಲ್ಲಿ 2 ಬಾರಿಗೆ ಮಾವು ಮೇಳ ವನ್ನು ಆಯೋಜನೆ ಮಾಡಲಾಗಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ ಸಾರ್ವಜನಿಕರ ಸ್ಪಂದನೆ ಉತ್ತಮವಾಗಿದೆ. ‘ಕಳೆದ ಬಾರಿ ಹಣ್ಣುಗಳ ಧಾರಣೆ ಅಧಿಕವಾಗಿತ್ತು. ಹಾಗಾಗಿ, ಸಾರ್ವಜನಿಕರು ಹಣ್ಣು ಗಳನ್ನು ಕೊಳ್ಳಲು ಅಷ್ಟೇನೂ ಉತ್ಸುಕತೆ ತೋರಲಿಲ್ಲ. ಈ ಬಾರಿ ಉತ್ತಮ ಇಳುವರಿ ಬಂದಿದ್ದು, ಗುಣ ಮಟ್ಟದ ಹಣ್ಣುಗಳನ್ನು ರೈತರು ನೇರವಾಗಿ ಪೂರೈಕೆ ಮಾಡುತ್ತಿದ್ದಾರೆ. ಜತೆಗೆ, ಕಡಿಮೆ ದರ ನಿಗದಿಪಡಿಸಿರುವುದರಿಂದ ವ್ಯಾಪಾರ ಕಳೆದ ವರ್ಷ ಕ್ಕಿಂತ ದುಪ್ಪಟ್ಟಾಗಿದ್ದು, ದಾಖಲೆ ಪ್ರಮಾಣದಲ್ಲಿ ಮಾವು ಮಾರಾಟವಾಗಲಿದೆ. ಮೇಳ ಸಂಪೂರ್ಣ ಯಶಸ್ವಿಯಾಗಲಿದೆ ಎಂದು ಅವರು ತಿಳಿಸಿದರು.

ವಿಸ್ತಾರಣೆ ಇಲ್ಲ: ಮಾವು ಮೇಳದಲ್ಲಿ ಸಾರ್ವ ಜನಿಕರ ಸ್ಪಂದನೆ ಉತ್ತಮವಾಗಿದ್ದರೂ ಕೂಡ ಮೇಳ ವಿಸ್ತರಣೆ ಮಾಡುವ ಬಗ್ಗೆ ಯಾವುದೇ ಆಲೋಚನೆ ಮಾಡಿಲ್ಲ. ಮೇಳದಲ್ಲಿ ಪಾಲ್ಗೊಂಡಿ ರುವ ರೈತರಿಗೆ ಮಳಿಗೆಯಲ್ಲಿ ಹಣ್ಣುಗಳನ್ನು ಮಾರಾಟ ಮಾಡಲು ಇಲಾಖೆಯಿಂದ ಸಂಪೂರ್ಣ ಉಚಿತವಾಗಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ವಿಸ್ತರಣೆ ಮಾಡುವುದರಿಂದ ಇಲಾಖೆಗೆ ಮೇಳದ ನಿರ್ವಹಣೆ ವೆಚ್ಚ ಅಧಿಕವಾಗುತ್ತದೆ. ಹಾಗಾಗಿ, 7 ದಿನಗಳಿಗೆ ಮಾತ್ರ ಮೇಳವನ್ನು ಸೀಮಿತಗೊಳಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದರು.

ಮಾವು ನಡುವೆ ಆಕರ್ಷಿಸಿದ ಸಸ್ಯ ಸಂತೆ

ಮಾವು ಮೇಳದಲ್ಲಿ ಈ ಬಾರಿ ತೋಟಗಾರಿಕೆ ಇಲಾಖೆಯಿಂದ ವಿಶೇಷವಾಗಿ ಸಸ್ಯ ಸಂತೆ ಆಯೋಜಿಸಲಾಗಿದ್ದು, ಇಲಾಖೆಯಿಂದ ಉತ್ಪನ್ನವಾಗುವ ಸಸ್ಯಗಳ ಪ್ರದರ್ಶನ ಹಾಗೂ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಮಾವು, ನಿಂಬೆ, ಅಡಿಕೆ, ತೆಂಗು, ತುಳಸಿ ಹಾಗೂ ಕರಿಬೇವು ಸೇರಿದಂತೆ ವಿವಿಧ ಜಾತಿಯ ಅಲಂಕಾರಿಕ ಗಿಡಗಳನ್ನು ಕಡಿಮೆ ದರದಲ್ಲಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ಮಾರಾಟ ಮಾಡಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಸಾರ್ವಜನಿಕರು ಹಾಗೂ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಸಸ್ಯಗಳನ್ನು ನೋಡಲು ಬರುವವರಿಗೆ ಸಸಿಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದರು.

ಮೇಳದಲ್ಲಿ ಮಾವಿನ ದರ(ಕೆ.ಜಿ.ಗೆ)

ಅಲ್ಫಾನ್ಸೋ- 80ರೂ, ಅಮ್ರಪಲ್ಲಿ- 60ರೂ, ಬಾದಾಮಿ- 60ರೂ, ಬೈಗನ್ ಪಲ್ಲಿ- 40ರೂ, ದಶೇರಿ- 80ರೂ, ಕಾಲ ಪಾಡ್- 60ರೂ, ಕೇಸರ್- 50ರೂ, ಮಲಗೋವಾ- 80ರೂ, ಮಲ್ಲಿಕ- 60ರೂ, ನೀಲಂ- 40ರೂ, ರಸಪುರಿ- 50ರೂ, ಸಕ್ಕರೆಗುತ್ತಿ- 80ರೂ, ಸೇಂದೂರು-30ರೂ, ತೋಥಾ ಪುರಿ- 20ರೂ., ಹಲಸು- 15ರೂ

ಸಾರ್ವಜನಿಕರಿಗೆ ಕಾರ್ಬೈಡ್ ಮುಕ್ತ ಹಣ್ಣುಗಳನ್ನು ಮಾರಾಟಕ್ಕೆ ಇಡಲಾಗಿದ್ದು, ಗ್ರಾಹಕರಿಗೆ ಗುಣಮಟ್ಟದ ಹಣ್ಣುಗಳನ್ನು ಕಡಿಮೆ ದರದಲ್ಲಿ ಕೊಳ್ಳಲು ವೇದಿಕೆ ಕಲ್ಪಿಸಲಾಗಿದೆ. ಸಾರ್ವಜನಿಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಮೇಳವನ್ನು ಮತ್ತಷ್ಟು ಉತ್ತಮವಾಗಿ ಆಯೋಜಿಸಲಾಗುವುದು.
-ಸಂಜಯ್, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ

Translate »