ಜಿಟಿಡಿಯವರಿಗೆ ಇಂಧನ, ಲೋಕೋಪಯೋಗಿ ಖಾತೆ ನೀಡುವಂತೆ ಜೆಡಿಎಸ್ ಮುಖಂಡರ ಆಗ್ರಹ
ಮೈಸೂರು

ಜಿಟಿಡಿಯವರಿಗೆ ಇಂಧನ, ಲೋಕೋಪಯೋಗಿ ಖಾತೆ ನೀಡುವಂತೆ ಜೆಡಿಎಸ್ ಮುಖಂಡರ ಆಗ್ರಹ

June 5, 2018

ಮೈಸೂರು:  ಮುಂಬರುವ ಲೋಕಸಭಾ ಚುನಾವಣೆ ಯಲ್ಲಿ ಪಕ್ಷ ಸಂಘಟನೆಯ ಅವಶ್ಯಕತೆ ಇರುವುದರಿಂದ ಸಮ್ಮಿಶ್ರ ಸರ್ಕಾರದಲ್ಲಿ ಶಾಸಕ ಜಿ.ಟಿ.ದೇವೇಗೌಡರಿಗೆ ಪ್ರಬಲ ಇಲಾಖೆಗಳಾದ ಇಂಧನ ಅಥವಾ ಲೋಕೋಪಯೋಗಿ ಖಾತೆ ನೀಡುವಂತೆ ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಮನವಿ ಮಾಡಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ರಚನೆಯಾಗಿರುವ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಜಿ.ಟಿ.ದೇವೇಗೌಡ ಅವರಿಗೆ ಸಚಿವ ಸ್ಥಾನ ನೀಡುವುದಕ್ಕೆ ಪಕ್ಷದ ಹೈಕಮಾಂಡ್ ನಿರ್ಧರಿಸಿದೆ. ಮೈಸೂರು ಭಾಗದಲ್ಲಿ ಪ್ರಭಾವಿ ನಾಯಕರಾಗಿರುವ ಜಿಟಿಡಿ ಅವರಿಗೆ ಸಣ್ಣ ಪುಟ್ಟ ಖಾತೆ ನೀಡದೆ ಪ್ರಬಲ ಖಾತೆಗಳಾದ ಇಂಧನ ಅಥವಾ ಲೋಕೋಪಯೋಗಿ ಇಲಾಖೆಯನ್ನು ನೀಡ ಬೇಕು. ಇದರಿಂದ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಮೈಸೂರು ಜಿಲ್ಲೆಯಲ್ಲಿ ಜೆಡಿಎಸ್ ಐದು ಸ್ಥಾನದಲ್ಲಿ ಗೆಲುವು ಸಾಧಿಸಿರುವು ದರಿಂದ ಅಡಗೂರು ಹೆಚ್.ವಿಶ್ವನಾಥ್ ಹಾಗೂ ಸಾರಾ ಮಹೇಶ್ ಅವರಿಗೂ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಿ, ಪ್ರಮುಖ ಖಾತೆ ನೀಡಬೇಕು ಎಂದು ಒತ್ತಾಯಿಸಿದರು.

ಉಗ್ರ ಹೋರಾಟ: ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಅವರು ಜೆಡಿಎಸ್ ಪಕ್ಷವನ್ನು ಪುಟ್ಗೋಸಿ ಪಕ್ಷ ಎಂದು ಲೇವಡಿ ಮಾಡುವ ಮೂಲಕ ಪಕ್ಷದ ಕಾರ್ಯಕರ್ತರ ಸ್ವಾಭಿಮಾನಕ್ಕೆ ಧಕ್ಕೆಯನ್ನುಂಟು ಮಾಡಿದ್ದಾರೆ. ಕೀಳು ಮಟ್ಟದಲ್ಲಿ ಮಾತನಾಡುವ ಮೂಲಕ ಬಿಜೆಪಿ ಸಂಸ್ಕøತಿಯನ್ನು ಪ್ರದರ್ಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅನಂತ್‍ಕುಮಾರ್ ಹೆಗಡೆ ವಿರುದ್ದ ಪಕ್ಷದ ವತಿಯಿಂದ ಉಗ್ರ ಹೋರಾಟ ನಡೆಸುವು ದಕ್ಕೆ ನಿರ್ಧರಿಸಲಾಗಿದೆ. ಮೈಸೂರಿಗೆ ಬಂದಾಗ ಮುತ್ತಿಗೆ ಹಾಕಲಾಗುತ್ತದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ರಾಜೇಂದ್ರ ಕುಮಾರ್, ನಾಗೇಶ್, ನವೀನ್, ಲಕ್ಷ್ಮೀನಾರಾ ಯಣ ಉಪಸ್ಥಿತರಿದ್ದರು.

Translate »