ಕಟ್ಟಡ ಮಾಲೀಕರೇ ಎಚ್ಚರ: ಮೈಸೂರಲ್ಲಿ ನಿಯಮ ಉಲ್ಲಂಘಿಸಿದರೆ ದುಪ್ಪಟ್ಟು ದಂಡ
ಮೈಸೂರು

ಕಟ್ಟಡ ಮಾಲೀಕರೇ ಎಚ್ಚರ: ಮೈಸೂರಲ್ಲಿ ನಿಯಮ ಉಲ್ಲಂಘಿಸಿದರೆ ದುಪ್ಪಟ್ಟು ದಂಡ

June 5, 2018

ಮೈಸೂರು: ಮಾಲೀಕರೇ ಎಚ್ಚರ! ನಕ್ಷೆ, ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸಿದರೆ ಮೈಸೂರು ಮಹಾನಗರ ಪಾಲಿಕೆಯು ದುಪ್ಪಟ್ಟು ದಂಡ ವಿಧಿಸುತ್ತದೆ.

ಸ್ಥಳೀಯ ಸಂಸ್ಥೆಯಿಂದ ಅನುಮೋದಿಸಿದ ನಕ್ಷೆಗೂ ನೀವು ಕಟ್ಟಿದ ಮನೆ ಅಥವಾ ವಾಣ ಜ್ಯ ಕಟ್ಟಡದ ವಿಸ್ತೀರ್ಣಕ್ಕೂ ವ್ಯತ್ಯಾಸ ಕಂಡು ಬಂದಲ್ಲಿ ಆಸ್ತಿ ತೆರಿಗೆ ಜೊತೆಗೆ ಎರಡು ಪಟ್ಟು ದಂಡ ತೆರಬೇಕಾಗುತ್ತದೆ.

ಕಟ್ಟಡದ ವಿಸ್ತೀರ್ಣ ಅಳತೆ ಮಾಡಿ ನಿಯಮ ಹಾಗೂ ನಕ್ಷೆ ಉಲ್ಲಂಘಿಸಿರುವ ಆಸ್ತಿಗಳ ಸರ್ವೆ ಕಾರ್ಯಕ್ಕೆ ಮೈಸೂರು ಮಹಾನಗರ ಪಾಲಿಕೆಯ ಎಲ್ಲಾ ವಲಯಾಧಿಕಾರಿಗಳು ಚಾಲನೆ ನೀಡಿದ್ದಾರೆ. ಈ ಕುರಿತು `ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿರುವ ಪಾಲಿಕೆ ಆಯುಕ್ತ ಕೆ.ಹೆಚ್. ಜಗದೀಶ, ನಗರಾಭಿವೃದ್ಧಿ ಇಲಾಖೆಯು ಕಳೆದ 2017ರ ಸೆಪ್ಟಂಬರ್‍ನಲ್ಲೇ ಈ ಕುರಿತು ಆದೇಶ ನೀಡಿದ್ದು, ಅನುಮೋದಿತ ನಕ್ಷೆ ಹಾಗೂ ಕಟ್ಟಡ ಪೂರ್ಣಗೊಂಡ ವರದಿ (ಸಿಆರ್)ಗೂ ವ್ಯತ್ಯಾಸ ಕಂಡು ಬಂದಲ್ಲಿ ಅಂತಹ ಕಟ್ಟಡಗಳ ಮಾಲೀಕರಿಂದ ಪ್ರಸ್ತುತ ಇರುವ ದಂಡದ ದುಪ್ಪಟ್ಟು ಹಣ ವಸೂಲಿ ಮಾಡುವಂತೆ ಸೂಚಿಸಿದೆ ಎಂದರು.

ಕರ್ನಾಟಕ ಮುನಿಸಿಪಾಲಿಟಿ ಕಾಯ್ದೆ 1976ರ ಕಲಂ 112(ಸಿ) ಪ್ರಕಾರ ಪರಿಶೀಲಿಸಿ ದಂಡ ವಸೂಲಿಗೆ ಕ್ರಮ ವಹಿಸುವಂತೆ ನಿರ್ದೇಶನ ಹೊರಡಿಸಲಾಗಿದ್ದು, ಈವರೆಗೆ ನಿಗಧಿಯಾಗಿದ್ದ ದಂಡದ ಎರಡು ಪಟ್ಟು ದಂಡ ಸಂಗ್ರಹ ಮಾಡುವಂತೆ ತಿಳಿಸಲಾಗಿದೆ ಎಂದು ಜಗದೀಶ್ ತಿಳಿಸಿದರು.

ಮೈಸೂರು ನಗರದಲ್ಲಿ ನಿವೇಶನ, ವಸತಿ ಕಟ್ಟಡ ಮತ್ತು ವಾಣ ಜ್ಯ ಸಂಕೀರ್ಣ ಹಾಗೂ ಕಂದಾಯ ಬಡಾವಣೆಗಳಲ್ಲಿ ಒಟ್ಟು 1,97,500 ಆಸ್ತಿಗಳಿವೆ. ಈಗಾಗಲೇ ಪಾಲಿಕೆ ಕಂದಾಯ ನಿರೀಕ್ಷಕರು ಶೇ. 80ರಷ್ಟು ಆಸ್ತಿಗಳ ಸಮೀಕ್ಷಾ ಕಾರ್ಯ ಪೂರ್ಣಗೊಳಿಸಿದ್ದು, ನಿಯಮ ಉಲ್ಲಂಘಿಸಿದ ಬಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

2002 ರಿಂದೀಚೆಗೆ ನಿರ್ಮಿಸಿದ ಕಟ್ಟಡಗಳ ಪರಿಶೀಲನೆÉ ಮಾಡಲಾಗುತ್ತಿದ್ದು, ಅವು ದುಪ್ಪಟ್ಟು ದಂಡದ ವ್ಯಾಪ್ತಿಗೆ ಬರುತ್ತವೆ. ವಾಡ್ರ್Àಗೆ ಒಬ್ಬರಂತೆ ಮೈಸೂರಿನ ಎಲ್ಲಾ 65 ವಾರ್ಡ್‍ಗಳಲ್ಲೂ ಪಾಲಿಕೆ ರೆವಿನ್ಯೂ ಇನ್ಸ್‍ಸ್ಪೆಕ್ಟರ್‍ಗಳು ಈಗಾಗಲೇ ಸಮೀಕ್ಷೆ ನಡೆಸುತ್ತಿದ್ದಾರೆ.

ಸಿಆರ್ ಪಡೆಯದಿರುವ ಕಟ್ಟಡಗಳನ್ನೂ ಸಹ ದಂಡ ವ್ಯಾಪ್ತಿಗೆ ತರಲಾಗುತ್ತಿದ್ದು, ಪಾಲಿಕೆಯ ಈ ಕ್ರಮವನ್ನು ಕೆಲ ಮಾಲೀಕರು ಪ್ರಶ್ನಿಸುತ್ತಿದ್ದಾರೆ. ಮುಡಾದಿಂದ ನಕ್ಷೆ ಅನುಮೋದನೆ ಪಡೆದು ಪಾಲಿಕೆಗೆ ಹಸ್ತಾಂತರವಾಗಿರುವ ಬಡಾವಣೆಗಳ ಕಟ್ಟಡ ಮಾಲೀಕರೂ ಸಹ ನಿಯಮ ಉಲ್ಲಂಘಿಸಿದ್ದರೆ ಎರಡರಷ್ಟು ದಂಡ ಪಾವತಿಸಬೇಕಾಗುತ್ತದೆ.

Translate »