- ಕಾರ್ಖಾನೆ ಕಚೇರಿಗೆ ಮುತ್ತಿಗೆ
- ಆತ್ಮಹತ್ಯೆಗೆ ಯತ್ನಿಸಿದ ರೈತ
- 14 ರೊಳಗೆ ಬಾಕಿ ಪಾವತಿಸುವ ಭರವಸೆ
ಭಾರತೀನಗರ: ರೈತರಿಗೆ ಕೊಡಬೇಕಾಗಿರುವ ಕಬ್ಬಿನ ಬಾಕಿ ಹಣ ಪಾವತಿಸಬೇಕು ಎಂದು ಆಗ್ರಹಿಸಿ ನಗರದ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯ ಕಚೇರಿಗೆ ಬುಧವಾರ ರೈತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಕಾರ್ಖಾನೆಯ ಕಚೇರಿ ಮುಂಭಾಗ ಸಮಾವೇಶಗೊಂಡ ರೈತಸಂಘದ ಕಾರ್ಯಕರ್ತರು ಆಡಳಿತ ಮಂಡಳಿಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಬೋರಾಪುರ ಶಂಕರೇಗೌಡ ಮಾತನಾಡಿ, ಕಾರ್ಖಾನೆಯ ಆಡಳಿತ ಮಂಡಳಿ ರೈತರನ್ನು ವಂಚಿಸುತ್ತಲೇ ಬರುತ್ತಿದೆ. ಕಬ್ಬು ಸರಬರಾಜು ಮಾಡಿ ಆರೇಳು ತಿಂಗಳು ಕಳೆದರೂ ಹಣ ಪಾವತಿ ಮಾಡಿಲ್ಲ. ರೈತರು ಕಬ್ಬು ಸರಬರಾಜು ಮಾಡಿದ 14 ದಿನದೊಳಗೆ ಹಣ ಪಾವತಿ ಮಾಡಬೇಕೆಂಬ ಆದೇಶವಿದೆ. ಆದರೂ, ಸಮರ್ಪಕವಾಗಿ ರೈತರಿಗೆ ಹಣ ಪಾವತಿ ಮಾಡುತ್ತಿಲ್ಲ. ಜಿಲ್ಲಾಧಿಕಾರಿಗಳು ಜೂ. 30ರೊಳಗೆ ಹಣ ಪಾವತಿ ಮಾಡಬೇಕು ಎಂದು ತಾಕೀತು ಮಾಡಿದರೂ ಅವರ ಮಾತಿಗೂ ಬೆಲೆ ಇಲ್ಲದಂತಾಗಿದೆ ಎಂದು ದೂರಿದರು.
ಈ ವೇಳೆ ಕಾರ್ಖಾನೆ ಆಡಳಿತ ಮಂಡಳಿ ಹಣ ನೀಡದಿರುವುದರಿಂದ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದ್ದೇನೆ ಎಂದು ರೈತನೊಬ್ಬ ಕಾರ್ಖಾನೆಯ ಅಧಿಕಾರಗಳ ಎದುರಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದರು. ಕೆಲವು ರೈತರು ಕಚೇರಿಗೆ ಬೀಗ ಜಡಿದು ಮುತ್ತಿಗೆ ಹಾಕಿದರು. ಸ್ಥಳಕ್ಕೆ ಆಗಮಿಸಿದ ಕಾರ್ಖಾನೆ ಉಪಾಧ್ಯಕ್ಷ ಎಸ್.ಬ್ರೀಟೋ ಮಾತನಾಡಿ, ಜು. 14ರೊಳಗೆ ರೈತರಿಗೆ ಸಂಪೂರ್ಣವಾಗಿ ಹಣ ಪಾವತಿ ಮಾಡುತ್ತೇವೆ. ಕಾರ್ಖಾನೆಗೆ ಬೀಗ ಹಾಕುವುದರಿಂದ ಯಾವುದೇ ಪ್ರಯೋಜನವಿಲ್ಲ. ರೈತರು ಮತ್ತು ಕಾರ್ಖಾನೆಯ ಸಂಬಂಧ ಉತ್ತಮವಾಗಿದ್ದರೆ ಇಬ್ಬರಿಗೂ ಅನುಕೂಲವಾಗುತ್ತದೆ ಎಂದು ಮನವೊಲಿಸಿದರು.
ಇದಕ್ಕೆ ಒಪ್ಪಿದ ರೈತರು ಇದು ಕಡೆಯ ಅವಕಾಶ. ಜು.14 ರೊಳಗೆ ಹಣ ಪಾವತಿ ಮಾಡದಿದ್ದರೆ ಉಗ್ರ ಚಳುವಳಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಂತರ ಸರ್ಕಲ್ ಇನ್‍ಸ್ಪೆಕ್ಟರ್ ಸಿ.ಪಿ.ನವೀನ್, ಸಬ್‍ಇನ್ ಸ್ಪೆಕ್ಟರ್ ಅಯ್ಯನಗೌಡ ಅವರು ರೈತರು ಹಾಗೂ ಕಾರ್ಖಾ ನೆಯ ಅಧಿಕಾರಿಗಳ ಸಭೆ ನಡೆಸಿ ಕಾರ್ಖಾನೆ ಅಧಿಕಾರಿ ಗಳು ರೈತರಿಗೆ ನೀಡಿರುವ ಮಾತಿನಂತೆ ಜು.14 ರೊಳಗೆ ಹಣಪಾವತಿಸಬೇಕು. ಇಲ್ಲದಿದ್ದರೆ ರೈತರ ದೂರುಗಳನ್ನು ಸ್ವೀಕರಿಸಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗು ವುದು ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡ ರಾದ ತೊರೆಚಾಕನಹಳ್ಳಿ ಶಂಕರೇಗೌಡ, ಸೋಷಿಪ್ರಕಾಶ್, ಪ್ರಭುಲಿಂಗು, ಮಾರಗೌಡನಹಳ್ಳಿ ಸತೀಶ್, ರಾಮಲಿಂಗೇ ಗೌಡ, ಡಿ.ಎ.ಕೆರೆ ಮಹೇಶ್, ಉಮೇಶ್, ಶ್ರೀಧರ್, ಕೆಂಪೇಗೌಡ, ಮಾದೇಗೌಡ, ಕಿರಣ್‍ಕುಮಾರ್, ರಮೇಶ್, ಎ.ಆರ್.ಅಂಬರ ಹಳ್ಳಿ ಆನಂದ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.