ಕ್ರಷರ್ ಕಚೇರಿಯಲ್ಲಿ ದಾಂಧಲೆ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ಮಂಡ್ಯ

ಕ್ರಷರ್ ಕಚೇರಿಯಲ್ಲಿ ದಾಂಧಲೆ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

July 5, 2018

ಮಂಡ್ಯ: ಕ್ರಷರ್ ನಲ್ಲಿ ಸೋಲಿಂಗ್ (ಬೋಡ್ರಸ್ ಕಲ್ಲು)ತೆಗೆದು ಕೊಳ್ಳದ ವಿಚಾರಕ್ಕೆ ಸಂಬಂಧಿಸಿ ದಂತೆ ಐವರ ತಂಡವೊಂದು ಕ್ರಷರ್ ಕಚೇರಿಗೆ ನುಗ್ಗಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಘಟನೆ ಶ್ರೀರಂಗಪಟ್ಟಣ ತಾಲ್ಲೂಕು ಚನ್ನನಕೆರೆ ಬಳಿ ಮಂಗಳವಾರ ಸಂಜೆ ನಡೆದಿದೆ.

ಚನ್ನನಕೆರೆ ಬಳಿಯ ಕೆಎಸ್‍ಸಿ(ಕಾವೇರಿ ಸ್ಟೋನ್ ಕ್ರಷರ್) ಕಚೇರಿ ಮೇಲೆಯೇ ಐವರು ದಾಳಿ ಮಾಡಿದ್ದು ಸಿಬ್ಬಂದಿ ಸೋಮ ಅಲಿಯಾಸ್ ಸೋಮಶೇಖರ್ ಅವರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದಾಂಧಲೆ ನಡೆಸಿರುವ ಟಿ.ಎಂ. ಹೊಸೂರಿನ ಸುಧಾಕರ್ ಮತ್ತು ಐವರ ತಂಡವನ್ನು ಪ್ರಭಾವಿ ರಾಜಕಾರಣಿ ಯೊಬ್ಬರ ಬೆಂಬಲಿಗರು ಎನ್ನಲಾಗಿದೆ.

ಏನಿದು ವಿವಾದ: ಚನ್ನನಕೆರೆ ಗ್ರಾಮ ವ್ಯಾಪ್ತಿಯ ಸರ್ವೇ ನಂಬರ್‍ವೊಂದರ ಜಾಗದಲ್ಲಿ ರಘು ಅವರು ಕಾವೇರಿ ಸ್ಟೋನ್ ಕ್ರಷರ್ ನಡೆಸುತ್ತಿದ್ದು ಸೋಲಿಂಗ್(ಬೋಡ್ರಸ್ ಕಲ್ಲು) ತೆಗೆದುಕೊಳ್ಳುವ ವ್ಯವಹಾರ ನಡೆಸುತ್ತಿದ್ದರು.

ಮಂಗಳವಾರ ಟಿ.ಎಂ. ಹೊಸೂರಿನಿಂದ ಸುಧಾಕರ್ ಕಡೆಯವರು ಟ್ರಾಕ್ಟರ್‍ನಲ್ಲಿ ಸೋಲಿಂಗ್ ಕಲ್ಲುಗಳನ್ನು ತುಂಬಿಕೊಂಡು ಬಂದಿದ್ದರು. ಆದರೆ ಕ್ರಷರ್ ಕಚೇರಿಯ ಸಿಬ್ಬಂದಿ ಅವರ ಸೋಲಿಂಗ್‍ನ್ನು ತೆಗೆದುಕೊಳ್ಳಲು ನಿರಾಕರಿಸಿದ್ದರು. ಇದರಿಂದ ಕುಪಿತಗೊಂಡ ಸುಧಾಕರ್, ಮಹೇಶ್, ಸಿದ್ದೇಗೌಡ ಸೇರಿದಂತೆ ಐವರ ತಂಡ ಏಕಾಏಕಿ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ.

ಲೆಕ್ಕ ಬರೆದುಕೊಳ್ಳುತ್ತಿದ್ದ(ರೈಟರ್)ಸೋಮ ಅಲಿಯಾಸ್ ಸೋಮಶೇಖರ್ ಮತ್ತು ಇತರೆ ಸಿಬ್ಬಂದಿಯ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಈ ದೃಶ್ಯವು ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಸಂಬಂಧ ಸೋಮಶೇಖರ್ ನೀಡಿರುವ ದೂರನ್ನು ಅರಕೆರೆ ಪೊಲೀಸ್ ಠಾಣೆಯ ಪೊಲೀಸರು ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

Translate »