ಮೈಸೂರು: ಸುಗಮ ಸಂಚಾರಕ್ಕೆ ಅನುವು ಮಾಡುವ ನಿಟ್ಟಿನಲ್ಲಿ ಮೈಸೂರು ವಿವಿ ಕ್ರಾಫರ್ಡ್ ಭವನ ಹಿಂಭಾಗ ಹಾಗೂ ಕೆಆರ್‍ಎಸ್ ರಸ್ತೆಯಲ್ಲಿ ಹಾದು ಹೋಗಿರುವ ರೈಲ್ವೆ ಲೆವೆಲ್ ಕ್ರಾಸಿಂಗ್‍ಗಳಿಗೆ ಮೇಲ್ಸೆತುವೆ ಇಲ್ಲವೇ ಕೆಳಸೇತುವೆ ನಿರ್ಮಿಸುವ ಸಂಬಂಧ ಸಂಸದ ಪ್ರತಾಪ್ ಸಿಂಹ ಬುಧವಾರ ರೇಲ್ವೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಮೈಸೂರಿನ ಜಲದರ್ಶಿನಿ ಅತಿಥಿಗೃಹದ ಸಭಾಂಗಣದಲ್ಲಿ ಮೈಸೂರು ಮಹಾನಗರಪಾಲಿಕೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ರೈಲ್ವೆ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿ ಕಾಮಗಾರಿ ಆರಂಭಿಸಲು ಇರುವ ತೊಡಕು ನಿವಾರಣೆಗೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಚರ್ಚಿಸಿದರು.
ಪಾಲಿಕೆಯ ಉಪ ಆಯುಕ್ತ (ಅಭಿವೃದ್ಧಿ) ಜಿ.ಎಸ್.ಸುರೇಶ್ ಮಾತನಾಡಿ, ವಿವಿ ಕ್ರಾಫರ್ಡ್‍ಭವನದ ಸಮೀಪ ರೈಲ್ವೆ ಲೆವೆಲ್ ಕ್ರಾಸಿಂಗ್ ಅನ್ನು ತೆಗೆದು ಕೆಳ ಸೇತುವೆ ನಿರ್ಮಿಸಲು 36.67 ಕೋಟಿ ರೂ. ವೆಚ್ಚದ ಪ್ರಸ್ತಾವನೆ ಇದೆ. ಇದರಲ್ಲಿ 7.98 ಕೋಟಿ ರೂ. ರೈಲ್ವೆ ಇಲಾಖೆ ಮಂಜೂರು ಮಾಡಿದೆ. ಕೆಳ ಸೇತುವೆಗೆ ಪೂರಕವಾಗಿ ಮಾರ್ಗ ನಿರ್ಮಾಣ ಮಾಡಲು ಉಳಿದ ಹಣವನ್ನು ನಗರಪಾಲಿಕೆ ಭರಿಸಬೇಕಾಗಿದೆ. ಆದರೆ ನಗರಪಾಲಿಕೆಯಲ್ಲಿ ಇಷ್ಟೊಂದು ಹಣವನ್ನು ಭರಿಸಲು ಸಾಧ್ಯವಾಗದ ಕಾರಣ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ವಿವರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ಶೀಘ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡುವ ಸಾಧ್ಯತೆ ಇದ್ದು, ಆ ಬಳಿಕ ಅವರಿಗೆ ರಾಜ್ಯ ಸರ್ಕಾರದಿಂದ ಹಣ ಮಂಜೂರು ಮಾಡಿಸಲು ಮನವಿ ಸಲ್ಲಿಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಬಳಿಕ ರೈಲ್ವೆ ಇಲಾಖೆ ಡೆಪ್ಯುಟಿ ಚೀಫ್ ಇಂಜಿನಿಯರ್ ಬಿ.ರಮೇಶ್‍ಚಂದ್ರ ಮಾತನಾಡಿ, ಕೆಆರ್‍ಎಸ್ ರಸ್ತೆಯ ರೈಲ್ವೆ ಲೆವೆಲ್ ಕ್ರಾಸಿಂಗ್‍ನಲ್ಲಿ ರೈಲ್ವೆ ಮೇಲ್ಸೆತುವೆ ನಿರ್ಮಿಸಲು ಪ್ರಸ್ತಾವನೆ ತಯಾರಾಗಿತ್ತು. ಆದರೆ ಮುಡಾ ವ್ಯಾಪ್ತಿಯಲ್ಲಿದ್ದ ರಿಂಗ್ ರಸ್ತೆ ಇದೀಗ ರಾಷ್ಟ್ರೀಯ ಹೆದ್ದಾರಿಗೆ ಸೇರಿದೆ. ಕೆಲವು ಪ್ರದೇಶ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಮೇಲ್ಸೇತುವೆಗೆ ಬದಲಾಗಿ ಕೆಳ ಸೇತುವೆ ನಿರ್ಮಾಣಕ್ಕೆ 42 ಕೋಟಿ ರೂ. ವೆಚ್ಚವಾಗಲಿದೆ. ಈಗಾಗಲೇ ರೈಲ್ವೆ ಇಲಾಖೆಗೆ 10 ಕೋಟಿ ರೂ. ಬಿಡುಗಡೆಯಾಗಿದೆ ಎಂದು ವಿವರ ನೀಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಂಸದರು, ನಾನು ಒಂದೂವರೆ ವರ್ಷದಿಂದ ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದೆ. ಈಗ ಮೇಲ್ಸೇತುವೆ ಬದಲು ಕೆಳಸೇತುವೆ ನಿರ್ಮಾಣಕ್ಕೆ ಹಣ ಲಭ್ಯವಿದ್ದು, ಅನುಮತಿ ಪಡೆದು ಕಾಮಗಾರಿ ಕೈಗೆತ್ತಿಕೊಳ್ಳಲು ಕ್ರಮ ವಹಿಸಬೇಕೆಂದು ತಿಳಿಸಿದರು.
ರೈಲ್ವೆ ಕಾರ್ಯಾಗಾರ ವಿಸ್ತರಣೆ: ಮೈಸೂರಿನ ಅಶೋಕಪುರಂ ರೈಲ್ವೆ ಕಾರ್ಯಾಗಾರ ವಿಸ್ತರಣೆಗೆ 32 ಕೋಟಿ ರೂ. ಮಂಜೂರಾಗಿದೆ ಎಂದು ತಿಳಿಸಿದ ರಮೇಶ್‍ಚಂದ್ರ, ಈಗಾಗಲೇ ಪ್ರಾಥಮಿಕ ಹಂತ ಕೆಲ ಕಾಮಗಾರಿಗಳು ಶುರುವಾಗಿವೆ. ಈ ಯೋಜನೆಯಿಂದ ಈಗಿರುವುದಕ್ಕಿಂತ ಎರಡು ಪಟ್ಟು ಬೋಗಿಗಳನ್ನು ತಯಾರು ಮಾಡುವಷ್ಟು ಸಾಮಥ್ರ್ಯ ಹೊಂದಿದ ಕಾರ್ಯಾಗಾರ ಸಜ್ಜುಗೊಳ್ಳಲಿದೆ ಎಂದು ವಿವರಿಸಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯಪಾಲಕ ಅಭಿಯಂತರ ಚಂದ್ರಪ್ಪ, ನಗರಪಾಲಿಕೆ ಕಾರ್ಯಪಾಲಕ ಅಭಿಯಂತರ ಪಿ.ನಾಗರಾಜು, ರಾಜ್ಯ ಬಿಜೆಪಿ ಕಾರ್ಯದರ್ಶಿ ಎಂ.ರಾಜೇಂದ್ರ ಸೇರಿದಂತೆ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಮೈಸೂರು ವಿವಿ ಕ್ರಾಫರ್ಡ್ ಭವನದ ಹಿಂಭಾಗ ಹಾಗೂ ಕೆಆರ್‍ಎಸ್ ರಸ್ತೆಯಲ್ಲಿರುವ ರೈಲ್ವೆ ಲೆವೆಲ್ ಕ್ರಾಸಿಂಗ್‍ಗಳಲ್ಲಿ ರೈಲುಗಳು ಆಗಮಿಸಿದಾಗ ಈ ಮಾರ್ಗಗಳಲ್ಲಿ ಬರುವ ವಾಹನ ಸವಾರರು ಹಾಗೂ ಪಾದಚಾರಿಗಳು ಕೆಲಕಾಲ ಕಾಯಬೇಕಿರುವ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಎದುರಾಗುತ್ತಿರುತ್ತದೆ. ಅದರಲ್ಲೂ ಕೆಆರ್‍ಎಸ್ ರಸ್ತೆಯ ರೈಲ್ವೆ ಲೆವೆಲ್ ಕ್ರಾಸಿಂಗ್‍ನಲ್ಲಿ ಸಾಕಷ್ಟು ಸಂಚಾರಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ದೂರು ಕೇಳಿ ಬರುತ್ತಿದೆ. ಬೆಳಿಗ್ಗೆ ಸಂದರ್ಭದಲ್ಲಿ ಶಾಲಾ-ಕಾಲೇಜಿಗೆ ಈ ಮಾರ್ಗದಲ್ಲಿ ಸಾಗುವ ಮಕ್ಕಳಿಗೆ ತಡವಾಗುತ್ತಿದೆ. ಇವುಗಳನ್ನು ತಪ್ಪಿಸಲು ಬೈಪಾಸ್ ಸೇತುವೆ ನಿರ್ಮಾಣ ಸೂಕ್ತವಾಗಲಿದೆ.
-ಪ್ರತಾಪ್ ಸಿಂಹ, ಸಂಸದರು.