ಕನ್ನಡದಲ್ಲಿ `ಕವಿರಾಜಮಾರ್ಗ’ ಒಂದು ಅದ್ಭುತ
ಮೈಸೂರು

ಕನ್ನಡದಲ್ಲಿ `ಕವಿರಾಜಮಾರ್ಗ’ ಒಂದು ಅದ್ಭುತ

July 5, 2018

ಕನ್ನಡ ಸಾಹಿತ್ಯ: ಅಧ್ಯಯನದ ಸವಾಲುಗಳು ಹಾಗೂ ಸಾಧ್ಯತೆಗಳು ಕುರಿತ 3 ದಿನಗಳ ಕಮ್ಮಟಕ್ಕೆ ಚಾಲನೆ ಭಾಷಾ ತಜ್ಞ ಪ್ರೊ.ಆರ್ವಿಯಸ್ ಸುಂದರಂ ಅಭಿಮತ

ಮೈಸೂರು: ಕನ್ನಡ ಸಾಹಿತ್ಯದಲ್ಲಿ ಅನೇಕ ಅದ್ಭುತಗಳಿವೆ. ಕವಿರಾಜ ಮಾರ್ಗವೇ ಒಂದು ಅದ್ಭುತ. ಕನ್ನಡದ ಬಗ್ಗೆ ಸಂಶೋಧನೆ ಅಷ್ಟು ಸುಲಭದ ಕೆಲಸವಲ್ಲ. ಆದರೆ ಕಲಿಯಲೇ ಬೇಕು. ಇಲ್ಲದಿದ್ದರೆ ಕನ್ನಡಕ್ಕೆ ಉಳಿಗಾಲವಿಲ್ಲ ಎಂದು ಮೈಸೂರಿನ ಭಾಷಾ ತಜ್ಞ ಪ್ರೊ.ಆರ್ವಿಯಸ್ ಸುಂದರಂ ಇಂದಿಲ್ಲಿ ಅಭಿಪ್ರಾಯಪಟ್ಟರು.

ಮೈಸೂರಿನ ಮಾನಸಗಂಗೋತ್ರಿಯ ಭಾರತೀಯ ಭಾಷಾ ಸಂಸ್ಥಾನದ ಸಂಭಾಂಗಣದಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಆಯೋಜಿಸಿರುವ` `ಕನ್ನಡ ಸಾಹಿತ್ಯ: ಅಧ್ಯಯನದ ಸವಾಲುಗಳು ಹಾಗೂ ಸಾಧ್ಯತೆಗಳು’ ಕುರಿತ ಕಮ್ಮಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕನ್ನಡದಲ್ಲಿ ಇಷ್ಟೊಂದು ವೈವಿಧ್ಯಮಯ ಸಾಹಿತ್ಯವಿದೆ. ಅದರಲ್ಲಿ ಸೌಂದರ್ಯವಿದೆ. ಸಾವಿರ ವರ್ಷಗಳಿಗೂ ಹೆಚ್ಚಿನ ವಿಶೇಷ, ವಿಶಿಷ್ಟ ಸಾಹಿತ್ಯ ಪಡೆದ ಕನ್ನಡ ಮತ್ತು ಕನ್ನಡ ಭಾóಷೆಯ ಹಿರಿಮೆಯನ್ನು ಕನ್ನಡ ಭಾಷಾ ಸಂಶೋಧಕರು ಮೊದಲು ತಿಳಿದುಕೊಳ್ಳಬೇಕು. ಮೊದಲು ಪದಚ್ಛೇದ ಹೇಗೆ ಎಂಬುದನ್ನು ಕಲಿಯುವುದು ಅಗತ್ಯ ಎಂದರು.

ಒಂದು ಸಾವಿರ ವರ್ಷದಿಂದ ನಿರಂತರವಾಗಿ ಈ ಕ್ಷಣದವರೆಗೂ ಸಾಹಿತ್ಯ ಸೃಷ್ಟಿ ಮಾಡುತ್ತಲೇ ಇರುವ ಬೆರಳೆಣಿಕೆಯಷ್ಟು ಭಾಷೆಗಳಲ್ಲಿ ಕನ್ನಡವೂ ಒಂದಾಗಿದೆ. ಕನ್ನಡದ ಒಂದೊಂದು ಹಂತದಲ್ಲಿ ಬಂದ ಪ್ರತಿಯೊಬ್ಬರು ಕೃತಿಯನ್ನು ವಿಶೇಷವಾದ ಸಾಹಿತ್ಯ ಸೃಷ್ಟಿ ಎನ್ನಬಹುದು. ಕನ್ನಡದ ಬಗ್ಗೆ ವೈಭವೀಕರಣದಿಂದ ಹೇಳಬೇಕಾದ ಅಗತ್ಯವಿಲ್ಲ. ಭಾಷೆ ಬಗ್ಗೆ ಮಾತನಾಡುವಾಗ ಕೆಲವು ಆಧಾರಗಳು ಸೇರುತ್ತವೆ. ಕ್ರಿ.ಪೂ. 1500 ವರ್ಷಗಳಿಂದಲೂ ಕೆಲ ಪದಗಳನ್ನು ಗುರ್ತಿಸಬಹುದಾಗಿದೆ ಎಂದು ಹೇಳಿದರು.
ಕನ್ನಡದ ಪುರಾತನ ಸಾಹಿತ್ಯದಲ್ಲಿ ಒಂದೊಂದು ಪದ್ಯಕ್ಕೂ ಅದರದೇ ಆದ ನಡೆ, ಲಕ್ಷಣ ಇದೆ. ಇವೆಲ್ಲವನ್ನೂ ತಿಳಿದುಕೊಂಡರೆ ಹಳಗನ್ನಡ ಅರ್ಥವಾಗುತ್ತದೆ. ಇಲ್ಲಿಯವರೆಗೂ ಪ್ರಾಕೃತ ಶಾಸನದಲ್ಲಿ ಇರುವ ಕನ್ನಡ ಪದಗಳ ವಿಶ್ಲೇಷಣೆ ನಡೆದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಂಸ್ಕøತಕ್ಕಿಂತ ಕನ್ನಡ ದೊಡ್ಡ ಬಾಷೆ. ಸಂಸ್ಕøತದಲ್ಲಿ ಏನೇನಿದೆಯೋ ಅವೆಲ್ಲವೂ ಕನ್ನಡದಲ್ಲಿದೆ. ಸಂಸ್ಕøತದಲ್ಲಿ ಸಾಕಷ್ಟು ವೈವಿಧ್ಯತೆಗಳಿದ್ದು, ಅದಕ್ಕಿಂತ ಹೆಚ್ಚಿನ ವೈವಿಧ್ಯತೆ ಕನ್ನಡದಲ್ಲಿದೆ. ಸಂಸ್ಕøತ ವಿದ್ವಾಂಸರಿಗೆ ಕನ್ನಡ ಗೊತ್ತಿರುವುದಿಲ್ಲ. ಆದರೆ ಕನ್ನಡ ವಿದ್ವಾಂಸರಿಗೆ ಸಂಸ್ಕøತವೂ ಗೊತ್ತಿರುತ್ತದೆ. ಇದು ವಿಶೇಷ. ಕನ್ನಡ ಸಂಶೋಧಕರಿಗೆ ಸಂಸ್ಕøತ, ಪ್ರಾಕೃತ, ತಮಿಳಿನ ಪರಿಚಯವಿರಬೇಕು. ಅನೇಕ ಭಾಷೆಗಳ ಪರಿಚಯ ನಮಗೆ ಇದ್ದಾಗ ಕನ್ನಡ ಇನ್ನಷ್ಟು ಸುಲಭವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಇತ್ತೀಚೆಗೆ ವಿಶ್ವದಲ್ಲಿ ಕನ್ನಡದ ಬಗ್ಗೆ ಆಸಕ್ತಿ ಬೆಳೆಯುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು, ಕವಿರಾಜಮಾರ್ಗ ಇಂಗ್ಲಿಷಿಗೆ ಬಂದಾಗ ಎಲ್ಲರ ಗಮನ ಕನ್ನಡದ ಬಗ್ಗೆ ಹೋಯಿತು. ಇದು ಕನ್ನಡ ಮತ್ತು ಭಾಷೆಯ ಅಭಿವೃದ್ದಿಗೆ ಪೂರಕ ವಾತಾವರಣ ಕಲ್ಪಸಿಕೊಟ್ಟಂತಾಗಿದೆ ಎಂದು ಅಭಿಪ್ರಾಯಪಟ್ಟರು.

50ಕ್ಕೂ ಹೆಚ್ಚು ಮಂದಿ ಕನ್ನಡ ಸಂಶೋಧಕ ವಿದ್ಯಾರ್ಥಿಗಳು ಭಾಗವಹಿಸಿದ್ದ ಮೂರು ದಿನಗಳ ಕಮ್ಮಟಕ್ಕೆ ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಪ್ರೊ.ಡಿ.ಜಿ.ರಾವ್ ಉದ್ಘಾಟನೆ ನೆರವೇರಿಸಿದರು. ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ.ಕೆ.ಆರ್.ದುರ್ಗಾದಾಸ್ ಅಧ್ಯಕ್ಷತೆ ವಹಿಸಿದ್ದರು. ಬಾಷಾ ಸಂಸ್ಥಾನದ ರೀಡರ್ ಮತ್ತು ಸಂಶೋಧನಾಧಿಕಾರಿ ಡಾ.ಎಲ್.ರಾಮಮೂರ್ತಿ, ಕಮ್ಮಟದ ಸಮಚಾಲಕ ಡಾ.ಸಣ್ಣಪಾಪಯ್ಯ ಇನ್ನಿತರರು ಉಪಸ್ಥಿತರಿದ್ದರು.

Translate »