ಉನ್ನತ ಶಿಕ್ಷಣದಲ್ಲಿ ಕನ್ನಡ ಭಾಷೆ ಕಡೆಗಣನೆ ಖಂಡಿಸಿ ಮೈಸೂರಲ್ಲಿ ಸಾಹಿತಿಗಳು, ಅಧ್ಯಾಪಕರು,ಕನ್ನಡ ಪರ ಸಂಘಟನೆಗಳ ಪ್ರತಿಭಟನೆ
ಮೈಸೂರು

ಉನ್ನತ ಶಿಕ್ಷಣದಲ್ಲಿ ಕನ್ನಡ ಭಾಷೆ ಕಡೆಗಣನೆ ಖಂಡಿಸಿ ಮೈಸೂರಲ್ಲಿ ಸಾಹಿತಿಗಳು, ಅಧ್ಯಾಪಕರು,ಕನ್ನಡ ಪರ ಸಂಘಟನೆಗಳ ಪ್ರತಿಭಟನೆ

July 3, 2018

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ ಪ್ರಸಕ್ತ ಸಾಲಿನಿಂದ ಜಾರಿಗೆ ತರಲು ಉದ್ದೇಶಿಸಿರುವ `ಆಯ್ಕೆ ಆಧಾರಿತ ಗುಣಾಂಕ ಪದ್ಧತಿಯಲ್ಲಿ (ಚಾಯ್ಸ್‍ಬೇಸ್ಡ್ ಕ್ರೆಡಿಟ್ ಸಿಸ್ಟಂ-ಸಿಬಿಸಿಎಸ್)’ ಕನ್ನಡ ಭಾಷೆಯನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಕನ್ನಡ ಸಾಹಿತಿಗಳು, ಅಧ್ಯಾಪಕರು, ಕನ್ನಡ ಪರ ಹೋರಾಟಗಾರರು ಹಾಗೂ ವಿದ್ಯಾರ್ಥಿಗಳು ಸೋಮವಾರ ಭಾರೀ ಪ್ರತಿಭಟನೆ ನಡೆಸಿದರು. ಮೈಸೂರು ವಿವಿಯ ಕ್ರಾಫರ್ಡ್ ಭವನದ ಎದುರು ಮೈಸೂರು ವಿವಿ ಪದವಿ ಕಾಲೇಜುಗಳ ಕನ್ನಡ ಅಧ್ಯಾಪಕರ ಸಂಘದ ಆಶ್ರಯದಲ್ಲಿ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಸಿಬಿಸಿಎಸ್ ಪದ್ಧತಿಯಲ್ಲಿ ಕನ್ನಡಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಒತ್ತಾಯಿಸಿ ಕನ್ನಡಪರ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಕನ್ನಡ ಭಾಷೆಯನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಸಿಬಿಸಿಎಸ್ ಪದ್ಧತಿ ಜಾರಿಗೊಳಿ ಸಲು ಒತ್ತಾಯಿಸಿರುವ ಯುಜಿಸಿ ತನ್ನ ನಿಯಮಾವಳಿಯಲ್ಲಿ ಇಂಗ್ಲಿಷ್ ಭಾಷೆಗೆ ನೀಡಿರುವ ವಿಶೇಷ ಮಾನ್ಯತೆಯನ್ನು ದೇಶ ಭಾಷೆಗಳಿಗೆ ನೀಡಿಲ್ಲ. ಯುಜಿಸಿ ನಿಗದಿಪಡಿಸಿರುವ ಪಠ್ಯಕ್ರಮದಲ್ಲಿ ಶೇ.30ರಷ್ಟು ಮಾತ್ರ ಬದಲಾವಣೆ ಮಾಡಿಕೊಳ್ಳಲು ವಿವಿಗಳಿಗೆ ಅವಕಾಶ ನೀಡಲಾಗಿದೆ. ಯುಜಿಸಿ ಕೊಟ್ಟಿರುವ ಪಠ್ಯಕ್ರಮದಲ್ಲಿ ತಮಿಳು, ತೆಲುಗು ಮೊದಲಾದ ಭಾರತೀಯ ಭಾಷೆಗೆ ಆದ್ಯತೆ ನೀಡಲಾಗಿದೆ. ಆದರೆ ಕನ್ನಡ ಭಾಷೆಯ ಪ್ರಸ್ತಾಪವೇ ಇಲ್ಲ ಎಂದು ಕಿಡಿಕಾರಿದರು. ಪದವಿಗೆ ಭಾಷೆ ಅನಿವಾರ್ಯ ಅಲ್ಲ ಎಂಬುದು ಈ ಹೊಸ ಪದ್ಧತಿಯ ನಿಲುವಾಗಿದ್ದು, ಇದು ಅವೈಜ್ಞಾನಿಕ. ಇಂತಹ ಪದ್ಧತಿ ಜಾರಿಯಿಂದ ಕನ್ನಡ ಭಾಷೆ ಮೂಲೆಗುಂಪಾಗುತ್ತದೆ. ಹೊಸ ಪದ್ಧತಿ ಪ್ರಕಾರ ಬಿಎ, ಬಿಎಸ್‍ಸಿ ಸೇರಿದಂತೆ ಎಲ್ಲಾ ಪದವಿಗಳಲ್ಲಿ ಕನ್ನಡ ಭಾಷೆಯನ್ನು ನಿರ್ಲಕ್ಷ್ಯ ಮಾಡಲಾಗಿದೆ. ಪದವಿಗಳಿಗೆ ಭಾಷೆ ಕಡ್ಡಾಯವಿದ್ದರೂ ಅದು ಕೇವಲ ಎರಡು ಸೆಮಿಸ್ಟರ್‍ಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 2015ರ ಜೂನ್ 22ರಂದು ರಾಜ್ಯ ಸರ್ಕಾರ ಉನ್ನತ ಶಿಕ್ಷಣದಲ್ಲಿ ಕನ್ನಡವನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಆದರೆ ವಿಶ್ವವಿದ್ಯಾನಿಲಯ ಗಳು ಸರ್ಕಾರದ ಈ ಆದೇಶಕ್ಕೆ ಯಾವುದೇ ಮನ್ನಣೆ ನೀಡುತ್ತಿಲ್ಲ. ಇದನ್ನು ನೋಡಿಕೊಂಡು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮೌನಕ್ಕೆ ಶರಣಾಗಿದೆ ಎಂದು ಆರೋಪಿಸಿದರು.

ಸಿಬಿಸಿಎಸ್ ಪದ್ಧತಿ ಜಾರಿಗೆ ಮುನ್ನ ಮೈಸೂರು ವಿವಿ ಅಗತ್ಯ ಪೂರ್ವ ಸಿದ್ಧತೆ ಮಾಡಿಕೊಳ್ಳದ ಕಾರಣ ಇದೀಗ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳಲ್ಲಿ ಹಲವು ಗೊಂದಲಗಳು ಮನೆ ಮಾಡಿವೆ. ಸಿಬಿಎಸ್‍ಸಿ ಪದ್ಧತಿಯು ಲಕ್ಚರ್ ಟುಟೋರಿಯಲ್ ಮತ್ತು ಪ್ರಾಕ್ಟಿಕಲ್ ವಿಧಾನದಲ್ಲಿ ನಡೆಯುತ್ತದೆ. ಭಾಷಾ ವಿಷಯಕ್ಕೆ 3 ಕ್ರೆಡಿಟ್ ಹಾಗೂ 2+1 ಪಾಠವೆಂದು ನಿಗದಿ ಮಾಡಲಾಗಿದೆ. ಅಂದರೆ 2 ಗಂಟೆಗಳು ಒಂದು ಗಂಟೆ ಬೆಚಿೂೀಧನೆಗೆ ಸಮ ಎಂದು ಹೇಳಲಾಗಿದೆ. ಟುಟೋರಿಯಲ್ ಬೋಧನೆಯ ಅವಧಿ ಹಾಗೂ ಅದರ ಸ್ವರೂಪದ ಬಗ್ಗೆ ಕನ್ನಡ ಪರೀಕ್ಷಾ ಮಂಡಳಿ ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ. ಇದನ್ನು ಸರಿಪಡಿಸುವ ಗೋಜಿಗೆ ಹೋಗದೇ ಮೈಸೂರು ವಿವಿ ಮೌನ ತಾಳಿದೆ ಎಂದು ಆಪಾದಿಸಿದರು.

ಸ್ವಾಯತ್ತ ಕಾಲೇಜುಗಳಿಂದ ಕನ್ನಡ ನಿರ್ಲಕ್ಷ್ಯ: ಸಿಬಿಸಿಎಸ್ ಜಾರಿಗೊಳಿಸಿರುವ ಕೆಲವು ಸ್ವಾಯತ್ತ ಕಾಲೇಜುಗಳು ಕನ್ನಡ ಭಾಷೆಯನ್ನು ಉಪೇಕ್ಷೆ ಮಾಡಿವೆ. ಕರ್ನಾಟಕದ ಯಾವುದೇ ವಿವಿಯಾದರೂ ಸ್ವಾಯತ್ತ ಕಾಲೇಜುಗಳಲ್ಲಿ ಪದವಿ ಹಂತದಲ್ಲಿ ನಾಲ್ಕು ಸೆಮಿಸ್ಟರ್‍ಗಳಲ್ಲಿ ಬಿಎ, ಬಿಎಸ್‍ಸಿ, ಬಿಕಾಂ, ಬಿಸಿಎ ತಾರತಮ್ಯವಿಲ್ಲದೆ ಕನ್ನಡ ಭಾಷೆಯ ಬೋಧನೆ ಕಡ್ಡಾಯಗೊಳಿಸಬೇಕು. ಸಿಬಿಸಿಎಸ್‍ನಲ್ಲಿ ಕನ್ನಡ ಸೇರಿದಂತೆ ಮೊದಲಾದ ಭಾಷೆಗಳಿಗೆ 3 ಕ್ರೆಡಿಟ್ ಹಾಗೂ 3 ಗಂಟೆಗಳ ಬೋಧನೆ ನಿಗದಿ ಮಾಡಲಾಗಿದೆ. ಇದನ್ನು ಬದಲಿಸಿ 4 ಕ್ರೆಡಿಟ್ ಹಾಗೂ 4 ಗಂಟೆಯ ಬೋಧನಾ ಅವಧಿ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.

ಬೇಡಿಕೆ ಈಡೇರಿಸುವ ಭರವಸೆ: ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಮೈಸೂರು ವಿವಿ ಹಂಗಾಮಿ ಕುಲಪತಿ ಪ್ರೊ.ಉಮೇಶ್, ಎಲ್ಲ ಬೇಡಿಕೆಗಳು ನ್ಯಾಯ ಸಮ್ಮತವಾಗಿವೆ. ಪದವಿ ಕಾಲೇಜುಗಳಲ್ಲಿ 4 ಸೆಮಿಸ್ಟರ್‍ಗಳಲ್ಲಿ ಕನ್ನಡ ವಿಷಯವನ್ನು ಬೋಧಿಸುವುದನ್ನು ಕಡ್ಡಾಯಗೊಳಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು. ಸಾಹಿತಿಗಳಾದ ಡಾ.ಸಿ.ಪಿ.ಕೃಷ್ಣಕುಮಾರ್ (ಸಿಪಿಕೆ), ಡಾ.ಮಳಲಿ ವಸಂತಕುಮಾರ್, ಜನಪದ ತಜ್ಞ ಪ್ರೊ.ಹಿ.ಶಿ.ರಾಮಚಂದ್ರೇಗೌಡ, ಚಿಂತಕರಾದ ಪ್ರೊ.ಜಿ.ಹೆಚ್.ನಾಯಕ್, ಚ.ಸರ್ವಮಂಗಳಾ, ಹೋರಾಟಗಾರ ಪ.ಮಲ್ಲೇಶ್, ಚಿಂತಕ ಹಾಗೂ ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ.ಎಂ.ಕೃಷ್ಣೇಗೌಡ, ಲೇಖಕ ಬನ್ನೂರು ಕೆ.ರಾಜು, ಕಸಾಪ ಮಾಜಿ ಜಿಲ್ಲಾಧ್ಯಕ್ಷರಾದ ಎಂ.ಚಂದ್ರಶೇಖರ್, ಮಡ್ಡಿಕೆರೆ ಗೋಪಾಲ್, ಕನ್ನಡಪರ ಹೋರಾಟಗಾರ ಮೂಗೂರು ನಂಜುಂಡಸ್ವಾಮಿ, ಪದವಿ ಕನ್ನಡ ಅಧ್ಯಾಪಕರ ಸಂಘದ ಅಧ್ಯಕ್ಷ ಡಾ.ಹೆಚ್.ಆರ್.ತಿಮ್ಮೆಗೌಡ ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »