ಸ್ಕೌಟ್ಸ್ ಅಂಡ್ ಗೈಡ್ಸ್ ರಾಜ್ಯ ಮಟ್ಟದ 28ನೇ ಜಾಂಬೂರಿ ಈ ಬಾರಿ ಹಾಸನದಲ್ಲಿ ಆಯೋಜನೆ
ಮೈಸೂರು

ಸ್ಕೌಟ್ಸ್ ಅಂಡ್ ಗೈಡ್ಸ್ ರಾಜ್ಯ ಮಟ್ಟದ 28ನೇ ಜಾಂಬೂರಿ ಈ ಬಾರಿ ಹಾಸನದಲ್ಲಿ ಆಯೋಜನೆ

July 5, 2018

ಮೈಸೂರು:  ರಾಜ್ಯಮಟ್ಟದ 28ನೇ ಜಾಂಬೂರಿ ಉತ್ಸವವನ್ನು ಹಾಸನ ಜಿಲ್ಲೆಯಲ್ಲಿ ನಡೆಸಲು ಉದ್ದೇಶಿಸಲಾಗಿದ್ದು, ಉತ್ಸವದಲ್ಲಿ ಪಾಲ್ಗೊಳ್ಳುವ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಭಾರತೀಯ ಸೇನೆಯ ಕಾರ್ಯ ವೈಖರಿ, ಇಸ್ರೋ ಸಂಸ್ಥೆಯ ತಜ್ಞರಿಂದ ಮಾಹಿತಿ-ತಂತ್ರಜ್ಞಾನದ ಪರಿಚಯ ಮಾಡಿಕೊಡುವುದರೊಂದಿಗೆ ವಿವಿಧ ಹೊಸ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪ್ರಧಾನ ಆಯುಕ್ತ ಹಾಗೂ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ತಿಳಿಸಿದ್ದಾರೆ.

ಮೈಸೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅವರು `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಕಳೆದ ವರ್ಷ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಯಶಸ್ವಿಯಾಗಿ 17ನೇ ರಾಷ್ಟ್ರೀಯ ಜಾಂಬೂರಿ ಉತ್ಸವ ನಡೆದಿತ್ತು. ಈ ಸಾಲಿನ ರಾಜ್ಯಮಟ್ಟದ ಜಾಂಬೂರಿಯನ್ನು ಹಾಸನ ಜಿಲ್ಲೆಯಲ್ಲಿ ನಡೆಸುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕೋರಿದ್ದಾರೆ. ಇದಕ್ಕೆ ಸಮ್ಮತಿಸಿದ್ದು, ಹಾಸನದಲ್ಲಿ ಶೀಘ್ರದಲ್ಲಿ ಸ್ಥಳ ಗುರುತಿಸಲು ಕ್ರಮ ಕೈಗೊಳ್ಳಲಾಗುತ್ತದೆ. ನವೆಂಬರ್ ಮತ್ತು ಡಿಸೆಂಬರ್‍ನಲ್ಲಿ ನಡೆಯಲಿರುವ 28ನೇ ರಾಜ್ಯ ಮಟ್ಟದ ಜಾಂಬೂರಿ ಉತ್ಸವದಲ್ಲಿ ದೇಶಭಕ್ತಿ, ಮಾಹಿತಿ ತಂತ್ರಜ್ಞಾನದ ಪರಿಚಯದೊಂದಿಗೆ ಭಾರತೀಯ ಸೇನೆಯ ಕರ್ತವ್ಯ, ನಾಸಾದ ಚಟುವಟಿಕೆಗಳ ಬಗ್ಗೆಯೂ ಮಕ್ಕಳಿಗೆ ತಿಳಿಸಲಾಗುತ್ತದೆ ಎಂದು ಹೇಳಿದರು.

ಕಳೆದ ವರ್ಷ ಚಿಕ್ಕಬಳ್ಳಾಪುರದಲ್ಲಿ 27ನೇ ಜಾಂಬೂರಿ ಉತ್ಸವ ನಡೆದಿತ್ತು. ಮಕ್ಕಳಲ್ಲಿ ದೇಶ ಭಕ್ತಿ, ಸೇವಾ ಮನೋಭಾವ, ನೈತಿಕತೆ, ಕೌಶಲ್ಯವನ್ನು ತುಂಬುವುದಕ್ಕೆ ಜಾಂಬೂರಿ ಕಾರ್ಯಕ್ರಮದಲ್ಲಿ ವಿವಿಧ ಕಾರ್ಯಕ್ರಮ ರೂಪಿಸಲಾಗುತ್ತದೆ. ಏಳು ದಿನ ನಡೆಯಲಿರುವ ಈ ಉತ್ಸವದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 10 ಸಾವಿರ ಕಬ್ಸ್ ಆ್ಯಂಡ್ ಬುಲ್‍ಬುಲ್, ಸ್ಕೌಟ್ಸ್ ಮತ್ತು ಗೈಡ್ಸ್, ರೋವರ್ಸ್ ಮತ್ತು ರೆಂಜರ್ಸ್‍ಗಳು ಭಾಗವಹಿಸಲಿದ್ದಾರೆ ಎಂದರು.

ಯೋಧರಿಂದ ಸಾಹಸ ಪ್ರದರ್ಶನ: ದೇಶದಲ್ಲಿ ಗಡಿ ಕಾಯುವ ಯೋಧರು ಹೇಗೆ ಕಾರ್ಯನಿರ್ವಹಿಸುತ್ತಾರೆ?. ಚಳಿ, ಮಳೆ ಹಾಗೂ ಬೇಸಿಗೆಯಲ್ಲಿ ಭಾರತೀಯ ಯೋಧರು ಹೇಗೆ ಸೇವೆ ಸಲ್ಲಿಸಲಿದ್ದಾರೆ. ವೈರಿಗಳನ್ನು ಹಿಮ್ಮೆಟ್ಟಿಸುವುದು, ದಾಳಿ ಮಾಡುವ ಅಣಕು ಪ್ರದರ್ಶನವನ್ನು ಪ್ರದರ್ಶಿಸಲಿದ್ದಾರೆ. ಅಲ್ಲದೆ ವಿವಿಧ ಸಾಹಸ ಪ್ರದರ್ಶನವೂ ಇರಲಿದೆ. ಭಾರತೀಯ ಸೇನೆ ಬಳಸುವ ಶಸ್ತ್ರಾಸ್ತ್ರಗಳ ಪ್ರದರ್ಶನ ಏರ್ಪಡಿಸುವುದಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಇದರೊಂದಿಗೆ ಏರೋನಾಟಿಕ್ಸ್ ವತಿಯಿಂದ ಮೈನವಿರೇಳಿಸುವ ಏರೋ ಶೋ ನಡೆಯಲಿದೆ.

ಇಸ್ರೋದಿಂದ ವಿಜ್ಞಾನದ ಮಾಹಿತಿ: ಭಾರತೀಯ ಬಾಹ್ಯಕಾಶ ಸಂಸ್ಥೆ ವತಿಯಿಂದ ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಭಿವೃದ್ದಿ ಹಾಗೂ ನೂತನ ತಂತ್ರಜ್ಞಾನ ಆವಿಷ್ಕಾರಗಳ ಬಗ್ಗೆ ಬೆಳಕು ಚೆಲ್ಲಲಿದ್ದಾರೆ. ವಸ್ತು ಪ್ರದರ್ಶನವನ್ನು ನಡೆಸುವ ಮೂಲಕ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವುದರೊಂದಿಗೆ ಪ್ರೇರಣೆ ನೀಡಲಿದ್ದಾರೆ ಎಂದರು.

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕಳೆದ ವರ್ಷ ಯಶಸ್ವಿಯಾಗಿ 17ನೇ ರಾಷ್ಟ್ರೀಯ ಜಾಂಬೂರಿ ನಡೆದಿತ್ತು. ಈ ಉತ್ಸವದಲ್ಲಿ ದೇಶದ ವಿವಿಧ ರಾಜ್ಯಗಳಿಂದ 28 ಸಾವಿರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 2016ರ ಡಿಸೆಂಬರ್ 29 ಆರಂಭವಾಗಿ 2017ರ ಜನವರಿ 4ರಂದು ಮುಕ್ತಾಯವಾಗಿತ್ತು. ಅಂದಿನ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಉತ್ಸವವನ್ನು ಉದ್ಘಾಟಿಸಿದ್ದನ್ನು ಸ್ಮರಿಸಬಹುದಾಗಿದೆ.

Translate »