- ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಜು.10 ಗಡುವು
- ತಪ್ಪಿದರೆ ಅನಿರ್ಧಿಷ್ಟಾವಧಿ ಧರಣಿ ನಡೆಸಲು ಮೈಸೂರು ವಿವಿ ಸಂಶೋಧಕರ ಸಂಘ ನಿರ್ಧಾರ
ಮೈಸೂರು: ಮೈಸೂರು ವಿಶ್ವವಿದ್ಯಾಲಯದಲ್ಲಿ ಕಾನೂನು ಬಾಹಿರವಾಗಿ 124 ಬೋಧಕೇತರ ಸಿಬ್ಬಂದಿ ನೇಮಕ ಮಾಡಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಶಿಸ್ತು ಕ್ರಮ ಜರುಗಿಸಬೇಕೆಂದು ಮೈಸೂರು ವಿಶ್ವವಿದ್ಯಾನಿಲಯ ಸಂಶೋಧಕರ ಸಂಘ ಆಗ್ರಹಿಸಿದೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಅಧ್ಯಕ್ಷ ಡಿ.ಮಹದೇವಸ್ವಾಮಿ, ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ, ಹಣಕಾಸು ಇಲಾಖೆ ಹಾಗೂ ರಾಜ್ಯಪಾಲರ ಅನುಮತಿ ಪಡೆಯದೇ ಯಾವುದೇ ಅಧಿಸೂಚನೆ ಹೊರಡಿಸದೇ, ಪತ್ರಿಕೆಗಳಲ್ಲಿ ಜಾಹೀರಾತನ್ನೂ ನೀಡದೇ ಹಾಗೂ ಮೀಸಲಾತಿ ಅನುಸರಿಸದೇ ಮೈಸೂರು ವಿವಿ ಕುಲಪತಿಗಳಾಗಿದ್ದ ಪ್ರೊ. ಕೆ.ಎಸ್.ರಂಗಪ್ಪ, ಆಡಳಿತಾಂಗ ಕುಲಸಚಿವರಾಗಿದ್ದ ಪ್ರೊ. ಆರ್.ರಾಜಣ್ಣ ಮತ್ತು ಉಪ ಕುಲಸಚಿವರಾಗಿದ್ದ ವಿಷಕಂಠ, ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯ ಕಾನೂನು ಕಾಯ್ದೆ-2000 ಅನ್ನು ಉಲ್ಲಂಘಿಸಿ 124 ಬೋಧಕೇತರ ಸಿಬ್ಬಂದಿಯನ್ನು ನೇಮಕ ಮಾಡಿದ್ದರು ಎಂದು ಆರೋಪಿಸಿದ್ದಾರೆ.
ಈ ಸಂಬಂಧ ಸೂಕ್ತ ತನಿಖೆ ನಡೆಸುವಂತೆ ವಿವಿಯ ಹಿಂದಿನ ಹಂಗಾಮಿ ಕುಲಪತಿ ಪ್ರೊ. ದಯಾನಂದ ಮಾನೆ ಅವರು ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯಪಾಲರ ಆದೇಶದಂತೆ ತನಿಖೆ ನಡೆಸಿದ ಎಂ.ಆರ್.ನಿಂಬಾಳ್ಕರ್, ಡಾ.ಕುನುಬಾಯ್ ಮತ್ತು ಸಿ.ಮಾವನಿ ಅವರು ತನಿಖೆ ನಡೆಸಿ 124 ಬೋಧಕೇತರ ಸಿಬ್ಬಂದಿ ನೇಮಕ ಅಕ್ರಮ ಎಂದು ವರದಿ ನೀಡಿದ್ದರು.
ವರದಿಯನ್ನು ಆಧರಿಸಿ ರಾಜ್ಯಪಾಲರು ಅಕ್ರಮವೆಸಗಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ, ಅಕ್ರಮವಾಗಿ ನೇಮಕಗೊಂಡಿರುವ 124 ಬೋಧಕ ಸಿಬ್ಬಂದಿಯನ್ನು ತಕ್ಷಣವೇ ಕರ್ತವ್ಯದಿಂದ ವಜಾಗೊಳಿಸಬೇಕೆಂದು ಆದೇಶಿಸಿದ್ದರು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರೊ. ರಾಜಣ್ಣ ಅವರನ್ನು ಕುಲಸಚಿವರನ್ನಾಗಿ ನೇಮಕ ಮಾಡಬಾರದೆಂದು ಹೈಕೋರ್ಟ್ ಆದೇಶ ನೀಡಿದೆ. ಆದರೂ ರಾಜ್ಯ ಸರ್ಕಾರವು ಪ್ರೊ. ರಾಜಣ್ಣ ಅವರನ್ನು ಕುಲಸಚಿವರನ್ನಾಗಿ ನೇಮಕ ಮಾಡಿರುವುದು ನ್ಯಾಯಾಂಗ ನಿಂದನೆಯಾಗುತ್ತದೆ. ಆದ್ದರಿಂದ ಮೈಸೂರು ವಿವಿ ರಾಜ್ಯಪಾಲರ ಆದೇಶವನ್ನು ಪಾಲಿಸಬೇಕೆಂದು ಸಂಘವು ವಿವಿಯ ಹಂಗಾಮಿ ಕುಲಪತಿ ಪ್ರೊ. ಟಿ.ಕೆ.ಉಮೇಶ್ ಅವರಿಗೆ ಮನವಿ ಸಲ್ಲಿಸಿತ್ತು. ಆದರೆ ಕುಲಪತಿಗಳು ಇದರ ಬಗ್ಗೆ ಆಸಕ್ತಿ ವಹಿಸದೇ ಇರುವುದರಿಂದ ಜು.10ರೊಳಗಾಗಿ ರಾಜ್ಯಪಾಲರ ಆದೇಶವನ್ನು ವಿವಿ ಪಾಲಿಸದಿದ್ದರೆ ಜು.11ರಂದು ಸಂಘವು ಮಾನಸ ಗಂಗೋತ್ರಿಯ ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಅನಿರ್ಧಿಷ್ಟಾವಧಿ ಧರಣ ಹಮ್ಮಿಕೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.