ಗಣಿ, ಕಂದಾಯ ಇಲಾಖಾಧಿಕಾರಿಗಳ ದಾಳಿ: 10ಕ್ಕೂ ಹೆಚ್ಚು ಅಕ್ರಮ ಜಲ್ಲಿ ಕ್ರಷರ್ ಗಳಿಗೆ ಬೀಗ
ಮಂಡ್ಯ

ಗಣಿ, ಕಂದಾಯ ಇಲಾಖಾಧಿಕಾರಿಗಳ ದಾಳಿ: 10ಕ್ಕೂ ಹೆಚ್ಚು ಅಕ್ರಮ ಜಲ್ಲಿ ಕ್ರಷರ್ ಗಳಿಗೆ ಬೀಗ

July 5, 2018

ಮಂಡ್ಯ:  ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ರಾಜ್ಯಸರ್ಕಾರ ಟೇಕಾಫ್ ಆಗುತ್ತಿರುವ ಬೆನ್ನಲ್ಲೇ ಜೆಡಿಎಸ್ ವಿರೋಧಿಗಳನ್ನು ಹಣಿಯುವ ಪ್ರಕ್ರಿಯೆ ಸದ್ದಿಲ್ಲದೆ ಶುರುವಾಗಿದೆ. ಇದರ ಭಾಗವಾಗಿ ಮೊನ್ನೆಯಷ್ಟೇ ನಾಗಮಂಗಲ ತಾಲೂಕಿನ ವಿವಿಧೆಡೆ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಬೆಂಬಲಿಗರಿಗೆ ಸೇರಿದಂತೆ 10ಕ್ಕೂ ಹೆಚ್ಚು ಅಕ್ರಮ ಕ್ರಷರ್ ಮತ್ತು ಗಣಿಗಾರಿಕೆಗಳಿಗೆ ಬೀಗ ಜಡಿಯಲಾಗಿದೆ.

ನಾಗಮಂಗಲ ತಾಲೂಕಿನ ವಿವಿಧೆಡೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಾಗಭೂಷಣ್ ಹಾಗೂ ಕಂದಾಯ ಇಲಾಖೆ ತಾಲೂಕು ತಹಶೀಲ್ದಾರ್ ಎಂ.ನಂಜುಂಡಯ್ಯ ನೇತೃತ್ವದ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿ ಅನುಮತಿ ಇಲ್ಲದೆ ನಡೆಯುತ್ತಿದ್ದ ಕ್ರಷರ್ ಗಳಿಗೆ ಬೀಗ ಮುದ್ರೆ ಹಾಕಿದರು.

ಮಾಜಿ ಸಚಿವ ಚಲುವರಾಯಸ್ವಾಮಿ ಅವರ ಸಹೋದರನ ಪುತ್ರ ಉಮೇಶ್ ಮಾಲೀಕತ್ವದ ಹೊನ್ನಾದೇವಿ ಸ್ಟೋನ್ ಕ್ರಷರ್ ಗೂ ಬೀಗ ಮುದ್ರೆ ಹಾಕಿ, ಕ್ರಷರ್ ಪ್ರಾರಂಭ ಮಾಡದಂತೆ ಎಚ್ಚರಿಕೆ ನೀಡಿ ಹೋಗಿದ್ದಾರೆ. ವಿಧಾನ ಪರಿಷತ್ ಮಾಜಿ ಸದಸ್ಯೆ ದಿವಂಗತ ವಿಮಲಾಗೌಡ ಅವರ ಪುತ್ರ ಜೀವನ್ ಪ್ರಕಾಶ್ ಮಾಲೀಕತ್ವದ ವಿಮಲ್ ಸ್ಟೋನ್ ಕ್ರಷರ್ ಗೂ ಬೀಗ ಮುದ್ರೆ ಹಾಕಿದ್ದು, 3 ಟಿಪ್ಪರ್‍ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ತಾಲೂಕಿನ ಹೊಣಕೆರೆ ಹೋಬಳಿ ಗಂಗಸಮುದ್ರ ಎಲ್ಲೆ ಯಲ್ಲಿರುವ ಎನ್.ಕೆ.ಸ್ಟೋನ್ ಕ್ರಷರ್ ಗೆ ಭೇಟಿ ನೀಡಿದ ತಂಡ, ಕ್ರಷರ್ ಕೆಲಸ ಮಾಡದ ಹಿನ್ನೆಲೆ ಯಾವುದೇ ಕ್ರಮ ತೆಗೆದು ಕೊಳ್ಳದೆ ಹಿಂತಿರುಗಿತು. ನಂತರ ಗೊಲ್ಲರಹಳ್ಳಿ ಬಳಿ ಇರುವ ಅಯ್ಯಪ್ಪ ಸ್ಟೋನ್ ಕ್ರಷರ್ ಗೆ ದಾಳಿ ಮಾಡಿದ ತಂಡಕ್ಕೆ ಟಿಪ್ಪರ್‍ಗಳಲ್ಲಿ ಜಲ್ಲಿ ಸಾಗಿಸುತ್ತಿರುವುದನ್ನು ನೋಡಿ ಕೂಡಲೇ 3 ಟಿಪ್ಪರ್‍ಗಳನ್ನು ಪೊಲೀಸರ ವಶಕ್ಕೆ ನೀಡಿ ದ್ದಲ್ಲದೆ ಕ್ರಷರ್ ಗೆ ಬೀಗ ಮುದ್ರೆ ಹಾಕಿತು.

ಅಲ್ಲಿಂದ ಬಂಕಾಪುರ ಗ್ರಾಮದಲ್ಲಿರುವ ಕರೀಗೌಡ ಮಾಲೀಕತ್ವದ ಹೆಚ್.ಸಿ.ಕೆ ಕ್ರಷರ್, ಎಇಇ ಶಿವರಾಜ್ ಪತ್ನಿ ಮಂಜುಳ ಹೆಸರಿನಲ್ಲಿರುವ ಚಿಗರಿ ಕ್ರಷರ್, ತಿರುಗನ ಹಳ್ಳಿ ಬಳಿ ಇರುವ ಚಂದ್ರು ಮಾಲೀಕತ್ವದ ಕ್ರಷರ್ ಗಳಿಗೆ ಬೀಗ ಮುದ್ರೆ ಹಾಕಿತು.
ಮಾಜಿ ಸಚಿವ ಎನ್.ಚಲುವರಾಯ ಸ್ವಾಮಿ ಅವರ ಸ್ವಗ್ರಾಮ ಇಜ್ಜಲಘಟ್ಟದ ಬಳಿ ಅವರ ಸಹೋದರನ ಪುತ್ರ ಉಮೇಶ್ ಮಾಲೀಕತ್ವದ ಹೊನ್ನಾದೇವಿ ಸ್ಟೋನ್ ಕ್ರಷರ್ ಗೆ ದಾಳಿ ಮಾಡಿ ಕ್ರಷರ್ ಗಳಿಗೆ ಬೀಗ ಮುದ್ರೆ ಹಾಕಿ, ಪ್ರಾರಂಭ ಮಾಡದಂತೆ ತಾಕೀತು ಮಾಡಿದೆ ಎನ್ನಲಾಗಿದೆ.

ನಂತರ ಬೆಳ್ಳೂರು ಹೋಬಳಿ ಕಬ್ಬಿನಕೆರೆ, ಕರಡಹಳ್ಳಿ, ಕರಿಜೀರಹಳ್ಳಿ ಗ್ರಾಮಗಳಲ್ಲಿರುವ ಕ್ರಷರ್ ಗಳು ಸೇರಿದಂತೆ ತಾಲೂಕಿನಲ್ಲಿರುವ ಎಲ್ಲಾ ಕ್ರಷರ್ ಗೆ ಬೀಗ ಮುದ್ರೆ ಹಾಕಿದ ಅಧಿಕಾರಿಗಳು. ಅಲ್ಲಿಯೇ ಇದ್ದ ನೌಕರ ವರ್ಗಕ್ಕೆ ನಾವು ಮತ್ತೆ ಭೇಟಿ ನೀಡುವವರೆಗೆ ಕ್ರಷರ್ ಗಳನ್ನು ಆರಂಭಿಸಿದರೆ ಶಾಶ್ವತವಾಗಿ ಬೀಗ ಮುದ್ರೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

‘ಗಣಿಗಾರಿಕೆಗೆ ಮಾತ್ರ ನಾವು ಅನುಮತಿ ನೀಡಿದ್ದೇವೆ. ಆದರೆ ಕ್ರಷರ್ ನಡೆಸುವುದಕ್ಕೆ ಯಾವುದೇ ಅನುಮತಿ ನೀಡಿಲ್ಲ. ಹಾಗಾಗಿ ಬೀಗ ಮುದ್ರೆ ಹಾಕಲಾಗಿದೆ’ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂಗರ್ಭ ಶಾಸ್ತ್ರಜ್ಞ ನಾಗಭೂಷಣ್ ‘ಮೈಸೂರು ಮಿತ್ರ’ನೊಂದಿಗೆ ಸ್ಪಷ್ಟಪಡಿಸಿದರು. ದಾಳಿ ವೇಳೆ ಉಪ ತಹಶೀಲ್ದಾರ್ ರಾಮಯ್ಯ, ಎಂಜಿನಿಯರ್ ಶ್ವೇತಾ, ಗ್ರಾಮಾಂತರ ಪೊಲೀಸ್ ಠಾಣೆ ಸಿಬ್ಬಂದಿ ಹಾಗೂ ಕಂದಾಯ ಇಲಾಖೆ ನೌಕರರು ಇದ್ದರು.

Translate »