ಆಧಾರವಿಲ್ಲದೆ ನಮ್ಮ ಕುಟುಂಬ ಅಕ್ರಮ ಆಸ್ತಿ ಮಾಡಿದೆ ಎಂದು ಹೇಳಬೇಡಿ ಟೀಕಾಕಾರರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಎಚ್ಚರಿಕೆ ನುಡಿ
ಮೈಸೂರು

ಆಧಾರವಿಲ್ಲದೆ ನಮ್ಮ ಕುಟುಂಬ ಅಕ್ರಮ ಆಸ್ತಿ ಮಾಡಿದೆ ಎಂದು ಹೇಳಬೇಡಿ ಟೀಕಾಕಾರರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಎಚ್ಚರಿಕೆ ನುಡಿ

July 5, 2018

ಬೆಂಗಳೂರು: ದೇವೇಗೌಡರ ಕುಟುಂಬ ಅಪಾರ ಪ್ರಮಾಣದಲ್ಲಿ ಅಕ್ರಮ ಆಸ್ತಿ ಪಾಸ್ತಿ ಮಾಡಿದೆ ಎಂದು ದಾಖಲೆಗಳಿಲ್ಲದೆ ದೂರುವ ಪ್ರವೃತ್ತಿ ಸರಿಯಲ್ಲ, ಅಂತಹ ದೇನೇ ಇದ್ದರೂ ದಾಖಲೆಗಳನ್ನು ಒದಗಿಸಿ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ತಮ್ಮ ಟೀಕಾಕಾರರ ಮೇಲೆ ಎರಗಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಬಿಎಂಪಿಯ ಬಿಜೆಪಿ ನಾಯಕರೊಬ್ಬರು,ದೇವೇಗೌಡರ ಕುಟುಂಬ ಅಕ್ರಮವಾಗಿ ಅಪಾರ ಪ್ರಮಾಣದ ಆಸ್ತಿ ಮಾಡಿದೆ ಎಂದು ದೂರಿರುವ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿ ದರು. ದೇವೇಗೌಡರ ಕುಟುಂಬ ಹಾಗೇನಾದರೂ ಅಕ್ರಮ ಆಸ್ತಿ ಪಾಸ್ತಿ ಮಾಡಿದ್ದರೆ ಅದಕ್ಕೆ ಪೂರಕವಾದ ದಾಖಲೆಗಳನ್ನು ಒದಗಿಸಲಿ. ಸುಖಾ ಸುಮ್ಮನೆ ಹಿಟ್ ಅಂಡ್ ರನ್ ಕೇಸ್ ತರಹ ದೂರುವುದು ಸರಿಯಲ್ಲ. ಯಾರಿಗೂ ಗೌರವವೂ ಅಲ್ಲ ಎಂದರು. ನಮ್ಮ ಕುಟುಂ ಬದ ಮೇಲೆ ಅಂತಹ ಟೀಕೆಗಳು ಹೊಸತೇನಲ್ಲ. ಹಿಂದಿನಿಂದಲೂ ಇಂತಹ ಟೀಕೆಗಳನ್ನು ವ್ಯವಸ್ಥಿತವಾಗಿ ಮಾಡಿಕೊಂಡು ಬರಲಾಗುತ್ತಿದೆ. ಆದರೆ ಈ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದರು. ದೇವೇಗೌಡರ ಕುಟುಂಬ ಅಲ್ಲಿ ಆಸ್ತಿ ಮಾಡಿದೆ, ಇಲ್ಲಿ ಆಸ್ತಿ ಮಾಡಿದೆ ಎಂಬ ದೂರುಗಳು ಹೇಗೆ ಹೊಸತಲ್ಲವೋ ಅದೇ ರೀತಿ ಅದಕ್ಕೆ ಸಂಬಂಧಿಸಿದಂತೆ ನಡೆದ ತನಿಖೆಗಳೂ ಕಡಿಮೆಯಲ್ಲ. ಆದರೆ ಏನೇ ತನಿಖೆ ಮಾಡಿದರೂ ನಮ್ಮ ಕುಟುಂಬ ಅಕ್ರಮವಾಗಿ ಆಸ್ತಿ ಪಾಸ್ತಿ ಮಾಡಿದೆ ಎಂಬುದಕ್ಕೆ ದಾಖಲೆಗಳು ಸಿಕ್ಕಿಲ್ಲ ಎಂದರು.

Translate »