ವಿದ್ಯುತ್ ಸಂಪರ್ಕ ಕಡಿತ ಖಂಡಿಸಿ ರೈತರ ಪ್ರತಿಭಟನೆ
ಚಾಮರಾಜನಗರ

ವಿದ್ಯುತ್ ಸಂಪರ್ಕ ಕಡಿತ ಖಂಡಿಸಿ ರೈತರ ಪ್ರತಿಭಟನೆ

August 22, 2018

ಚಾಮರಾಜನಗರ:  ಮನೆಯ ವಿದ್ಯುತ್ ಬಿಲ್ ಹಣ ಪಾವತಿಸಿಲ್ಲ ಎಂಬ ಕಾರಣಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವುದನ್ನು ಖಂಡಿಸಿ ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಆಗ್ರಹಿಸಿ ತಾಲೂಕಿನ ಅಮ್ಮನಪುರ ಗ್ರಾಮಸ್ಥರು ರೈತ ಸಂಘದ ನೇತೃತ್ವದಲ್ಲಿ ಗ್ರಾಮದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಗ್ರಾಮದ ಬಸ್ ನಿಲ್ದಾಣದ ಬಳಿ ಬೆಳಿಗ್ಗೆಯೇ ಜಮಾಯಿಸಿದ ಗ್ರಾಮಸ್ಥರು ಹಾಗೂ ರೈತ ಸಂಘದ ಕಾರ್ಯಕರ್ತರು ಸೆಸ್ಕ್ ವಿರುದ್ಧ ಘೊಷಣೆಗಳನ್ನು ಕೂಗುತ್ತ ಪ್ರತಿಭಟನೆ ಆರಂಭಿಸಿದರು. ರಸ್ತೆ ಮಧ್ಯೆದಲ್ಲಿಯೇ ಮಧ್ಯಾಹ್ನ ಅಡುಗೆ ತಯಾರಿಸಿ ಸೇವಿಸಿದರು. ನಂತರ ಸಂಜೆ ತನಕ ಪ್ರತಿಭಟನೆ ನಡೆಸಿದರು.

ರೈತರ ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಅಗಬೇಕು. ರೈತರ ಹಕ್ಕೋತ್ತಾಯಗಳು ಈಡೇರುವ ತನಕ ಯಾವುದೇ ತೆರಿಗೆಯನ್ನಾಗಲಿ ಅಥವಾ ವಿದ್ಯುತ್ ಬಿಲ್ ಪಾವತಿಸುವುದಿಲ್ಲ ಎಂದು ರೈತರು ತೀರ್ಮಾನ ಕೈಗೊಂಡು ಕರ ನಿರಾ ಕರಣಾ ಚಳುವಳಿ ನಡೆಸಿದ್ದರು.

ಹಾಗಾಗಿ ಅಮ್ಮನಪುರ ಗ್ರಾಮದ ಹಲವಾರು ಮಂದಿ ವಿದ್ಯುತ್ ಬಿಲ್ ಪಾವತಿಸಿರಲಿಲ್ಲ ಎನ್ನಲಾಗಿದೆ. ರೈತರ ಕರ ನಿರಾಕರಣ ಚಳುವಳಿಯ ಗಂಭೀರತೆ ಅರಿತ ಕಳೆದ ಅವಧಿಯ ಸರ್ಕಾರಕರ ನಿರಾಕರಣ ಚಳವಳಿ ನಡೆಸಿದ್ದ ಗ್ರಾಮಗಳ ವಿದ್ಯುತ್ ಬಾಕಿಯನ್ನು ಮನ್ನಾ ಮಾಡಿತ್ತು. ಆದರೆ ಬಾಕಿ ಮನ್ನಾ ಆದ ಗ್ರಾಮಗಳ ಪಟ್ಟಿಯಲ್ಲಿ ಅಮ್ಮನಪುರ ಸೇರಿರಲಿಲ್ಲ. ಹಾಗಾಗಿ ವಿದ್ಯುತ್‍ಬಿಲ್ ಬಂದಾಗಲೆಲ್ಲಾ ಬಾಕಿ ಹಣ ಸೇರ್ಪಡೆ ಆಗುತ್ತಲೇ ಇತ್ತು. ಇದ ರಿಂದ ಸೆಸ್ಕ್‍ನವರು ಬಾಕಿ ಉಳಿದಿರುವ ಮನೆಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದರು ಎನ್ನಲಾಗಿದೆ.

ಸುಮಾರು 35 ರಿಂದ 45 ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದನ್ನು ಖಂಡಿಸಿದ ಪ್ರತಿಭಟನಾಕಾರರು, ಈ ಕೊಡಲೇ ವಿದ್ಯುತ್ ಸಂಪರ್ಕ ಕಲ್ಪಿಸುವ ತನಕ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದರು.

ವಿಷಯ ತಿಳಿದು ಸೆಸ್ಕ್ ಅಧಿಕಾರಿಗಳು ಅಮ್ಮನಪುರ ಗ್ರಾಮಕ್ಕೆ ತೆರಳಿ ಮಾತುಕತೆ ನಡೆಸಿದರು. ಸೆಸ್ಕ್ ಅಧಿಕಾರಿಗಳು ವಿದ್ಯುತ್ ಬಿಲ್ ಹಣ ಪಾವತಿಸುವಂತೆ ಮನವಿ ಮಾಡಿದರು ಪ್ರತಿಭಟನಾಕಾರರು ಇದಕ್ಕೆ ಸೊಪ್ಪು ಹಾಕಲಿಲ್ಲ. ಈ ವೇಳೆ ಪ್ರತಿಭಟನಾಕಾರರು ಹಾಗೂ ಸೆಸ್ಕ್ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಬೇಕು. ತಮ್ಮ ಸಮಸ್ಯೆಯನ್ನು ಬಗೆಹರಿಸಬೇಕು. ಅಲ್ಲಿಯ ತನಕ ಪ್ರತಿಭಟನೆ ನಡೆಸುತ್ತೇವೆ ಎಂದು ಪಟ್ಟು ಹಿಡಿದ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಮುಂದುವರೆಸಿದ್ದರು. ಇದರಿಂದ ಪರಿಸ್ಥಿತಿಯ ಗಂಭೀರತೆ ಅರಿತ ಜಿಲ್ಲಾಧಿಕಾರಿಗಳು, ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ರೈತ ಸಂಘದ ಮುಖಂಡ ಎ.ಎಂ. ಮಹೇಶ ಜ್ಯೋತಿಗೌಡನಪುರ ಸಿದ್ದರಾಜು, ಹೆಬ್ಬಸೂರು ಬಸವಣ್ಣ ಶಾಂತಮಲ್ಲಪ್ಪ, ಶಿವಮಲ್ಲು, ಪ್ರಭುಸ್ವಾಮಿ, ಕಾತಹಳ್ಳಿ ಚಿನ್ನಸ್ವಾಮಿ ಮಹೇಶ್, ಸಿದ್ದಶೆಟ್ಟಿ, ಸಿದ್ದರಾಜು, ಮಹದೇವಸ್ವಾಮಿ ಸೇರಿದಂತೆ ಹಲವಾರು ಮಂದಿ ಪ್ರತಿಭಟನೆಯಲ್ಲಿ ಇದ್ದರು.

Translate »