ಬೆಳಗಾವಿ: ಬೆಳಗಾವಿಯ ಸುವರ್ಣ ಸೌಧದಲ್ಲಿ ಸಭೆ ನಡೆಸಿ ಕಬ್ಬು ಬೆಲೆ ನಿಗದಿ ಹಾಗೂ ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಬರಬೇಕಾದ ಬಾಕಿ ಮುಂತಾದ ಸಮಸ್ಯೆಗಳನ್ನು ಇತ್ಯರ್ಥಪಡಿಸುವುದಾಗಿ ಹೇಳಿದ್ದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮಾತು ತಪ್ಪಿದ ಹಿನ್ನೆಲೆಯಲ್ಲಿ ರೈತರು ಇಂದು ತೀವ್ರ ಆಕ್ರೋಶ ಪ್ರದರ್ಶಿಸಿಸಿದರು.
ಹಲವೆಡೆ ರಸ್ತೆ ತಡೆ ನಡೆಸಿದ ರೈತರು, ಬೆಳ ಗಾವಿಯ ಜಿಲ್ಲಾಧಿಕಾರಿಗಳ ಕಚೇರಿಗೆ ಕಬ್ಬು ತುಂಬಿದ ಲಾರಿಗಳೊಂದಿಗೆ ಮುತ್ತಿಗೆ ಹಾಕಿ ದರು. ಸುವರ್ಣ ಸೌಧದ ಬೀಗ ಮುರಿದು ಅದರೊಳಗೆ ಲಾರಿಗಳನ್ನು ನುಗ್ಗಿಸಿ ಕಬ್ಬು ಸುರಿ ದರು. ಒಟ್ಟಾರೆ ಇಂದು ಬೆಳಗಾವಿಯಲ್ಲಿ ರೈತರ ರೋಷಾವೇಶ ಮುಗಿಲು ಮುಟ್ಟಿತ್ತು.
ಕಬ್ಬಿಗೆ ಬೆಲೆ ನಿಗದಿ ಮತ್ತು ಸಕ್ಕರೆ ಕಾರ್ಖಾನೆ ಗಳಿಂದ ಬರಬೇಕಾಗಿದ್ದ ಬಾಕಿ ಹಣ ಕೊಡಿಸ ಬೇಕೆಂದು ರೈತ ಮುಖಂಡರು ಆಗ್ರಹಿಸಿ ದರು. ಕೆಲವು ದಿನಗಳಿಂದ ಈ ಭಾಗದ ರೈತರು ಪ್ರತಿಭಟನೆ ನಡೆಸುತ್ತಿದ್ದರು. 2 ದಿನಗಳ ಹಿಂದೆ ಪ್ರತಿಭಟನಾನಿರತ ರೈತರೊಂದಿಗೆ ದೂರವಾಣಿ ಮುಖೇನ ಮಾತನಾಡಿದ ಮುಖ್ಯಮಂತ್ರಿಗಳು, ತಾವು ಬೆಳಗಾವಿಯ ಸುವರ್ಣ ಸೌಧದಲ್ಲಿ ರೈತರ ಸಭೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸುವುದಾಗಿ ಭರವಸೆ ನೀಡಿದ್ದರು. ಆದರೆ ಮಾತು ತಪ್ಪಿದ ಮುಖ್ಯ ಮಂತ್ರಿಗಳು ಮಂಗಳವಾರ ಬೆಂಗಳೂರಿ ನಲ್ಲಿ ಸಭೆ ನಡೆಸುವುದಾಗಿಯೂ, ಅಲ್ಲಿಗೇ ರೈತ ಪ್ರತಿನಿಧಿಗಳು ಬರಬೇಕು ಎಂದು ತಿಳಿಸಿದರು. ಇದರಿಂದ ಆಕ್ರೋಶಗೊಂಡ ರೈತರು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣಕ್ಕೆ ಕಬ್ಬು ತುಂಬಿದ ಲಾರಿಗಳೊಂದಿಗೆ ಆಗಮಿಸಿ ಮುತ್ತಿಗೆ ಹಾಕಿದರು. ಮತ್ತೊಂದೆಡೆ ಕೆಲವು ರೈತರು ಕಬ್ಬು ತುಂಬಿದ ಲಾರಿಗಳೊಂದಿಗೆ ಸುವರ್ಣ ಸೌಧಕ್ಕೆ ತೆರಳಿ ಗೇಟ್ ಬೀಗವನ್ನು ಮುರಿದು ಲಾರಿಗಳನ್ನು ಒಳಗೆ ನುಗ್ಗಿಸಿದರು. ಸುವರ್ಣ ಸೌಧದ ಆವರಣದಲ್ಲಿ ಕಬ್ಬು ಸುರಿದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಕಡಿಮೆ ಸಂಖ್ಯೆಯ ಪೊಲೀಸರಿದ್ದ ಕಾರಣ ರೈತರನ್ನು ತಡೆಯಲು ಸಾಧ್ಯವಾಗಲಿಲ್ಲ.
ತುಸು ಹೊತ್ತಿನಲ್ಲೇ ಹೆಚ್ಚಿನ ಸಂಖ್ಯೆಯ ಪೊಲೀಸರು ಸುವರ್ಣ ಸೌಧದ ಬಳಿ ಆಗಮಿಸಿದಾಗ ರೈತರು ಮತ್ತು ಪೊಲೀಸರ ನಡುವೆ ಭಾರೀ ಜಟಾಪಟಿ ನಡೆಯಿತು. ಇದೇ ವೇಳೆಯಲ್ಲೂ ಲಾರಿಯೊಂದು ಸುವರ್ಣ ಸೌಧದೊಳಕ್ಕೆ ನುಗ್ಗುತ್ತಿದ್ದಂತೆಯೇ ಪೊಲೀಸರು ಅದನ್ನು ತಡೆಯುವ ಉದ್ದೇಶದಿಂದ ಗೇಟ್‍ಗೆ ಹಾಕಿದ ಸರಪಳಿ ಲಾರಿ ಮೇಲೆ ನಿಂತಿದ್ದ ಮಹಿಳೆಯ ಕೊರಳಿಗೆ ಬಿದ್ದ ಘಟನೆಯೂ ನಡೆಯಿತು. ಈ ಸಂದರ್ಭದಲ್ಲಿ ಪ್ರತಿಭಟನಾ ನಿರತರು ಪೊಲೀಸ್ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಪರಿಸ್ಥಿತಿ ಹದಗೆಡುತ್ತಿರುವುದನ್ನು ಮನಗಂಡ ಹಿರಿಯ ಪೊಲೀಸ್ ಅಧಿಕಾರಿ ರೈತ ಮಹಿಳೆಯ ಕೊರಳಿನಲ್ಲಿದ್ದ ಚೈನ್ ತೆಗೆದು ಕ್ಷಮೆ ಯಾಚಿಸಿದರು. ಸುವರ್ಣ ಸೌಧಕ್ಕೆ ಲಾರಿ ನುಗ್ಗಿಸಿದ ಸಂಬಂಧ ರೈತ ಮಹಿಳೆ ಜಯಶ್ರೀ ಸೇರಿದಂತೆ 10 ಮಂದಿ ರೈತರ ವಿರುದ್ಧ ಎಫ್‍ಐಆರ್ ದಾಖಲಿಸಿದ ಪೊಲೀಸರು, ಅವರನ್ನು ಬಂಧಿಸಿದರು. ಆನಂತರವೂ ರೈತರ ಆಕ್ರೋಶ ಇನ್ನಷ್ಟು ಹೆಚ್ಚಿದ್ದರಿಂದ ಅವರೊಂದಿಗೆ ಸಂಧಾನ ನಡೆಸಿದ ಪೊಲೀಸ್ ಅಧಿಕಾರಿಗಳು ಬಂಧಿತರನ್ನು ಬಿಡುಗಡೆ ಮಾಡಿದರು.