ಬೇಗೂರು: ಹೋಬಳಿಯ ಎಲ್ಲಾ ಗ್ರಾಮಗಳ ರೈತರೂ ಪ್ರಧಾನಮಂತ್ರಿಯವರ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಪ್ರಥಮ ಕಂತಿನ 2 ಸಾವಿರ ರೂ ಪಡೆಯಲು ಅರ್ಜಿ ಸಲ್ಲಿಸಲು ಆರ್‍ಟಿಸಿ ಪಡೆಯಲು ತೀವ್ರ ನೂಕು ನುಗ್ಗಲಾಗಿದ್ದು ಬೆಳಗಿನಿಂದ ಸಂಜೆಯ ವರೆಗೂ ಕಾಯಬೇಕಾಗಿದೆ.
ಅರ್ಜಿಯೊಡನೆ ರೈತರು ಆರ್‍ಟಿಸಿ ಸಲ್ಲಿಸ ಬೇಕಾಗಿದ್ದು ಇದನ್ನು ಪಡೆದುಕೊಳ್ಳಲು ಮುಗಿ ಬೀಳುತ್ತಿದ್ದಾರೆÀ. ಹೋಬಳಿ ಕೇಂದ್ರವಾದ ಬೇಗೂರು ಗ್ರಾಮದ ಅಟಲ್ ಜನಸ್ನೇಹಿ ಕೇಂದ್ರದಲ್ಲಿ ಮಾತ್ರ ಆರ್ ಟಿ ಸಿ ದೊರಕು ತ್ತಿದೆ. ಸರ್ವರ್ ತೊಂದರೆ ಹಾಗೂ ಹೆಚ್ಚಿನ ಕೌಂಟರ್ ಇಲ್ಲದ ಪರಿಣಾಮ ಸಕಾಲದಲ್ಲಿ ದೊರಕದೆ ದಿನಗಟ್ಟಲೆ ಕಾಯಬೇಕಾಗಿದೆ. ಅಲ್ಲದೆ ಸುತ್ತಮುತ್ತಲಿನ ಎಲ್ಲಾ ಗ್ರಾಮಗಳ ರೈತರೂ ಇಲ್ಲಿಗೆ ಬರುತ್ತಿದ್ದು ಕಿಲೋಮೀಟರ್ ಉದ್ದಕ್ಕೆ ಸಾಲುಗಟ್ಟಿ ಬಿಸಿಲಿನಲ್ಲಿಯೇ ನಿಲ್ಲ ಬೇಕಾಗಿದೆ. ನಸುಕಿನಲ್ಲಿ ಮನೆಯಿಂದ ಹೊರಬರುವ ಸಾರ್ವಜನಿಕರು, ಮಹಿಳೆ ಯರು ಹಾಗೂ ವೃದ್ದರು ಸರದಿಯಲ್ಲಿ ಕಾದು ನಿಲ್ಲಬೇಕಾಗಿದೆ. ಆರ್ ಟಿ ಸಿ ವಿತರಣೆಗೆ ಹೆಚ್ಚಿನ ಕೌಂಟರ್ ಅಳವಡಿಸದ ಪರಿಣಾಮ ಬೆಳಗಿನಿಂದ ಸಂಜೆಯವರೆಗೂ ಕಾದು ನಿಲ್ಲಬೇಕಾಗಿದೆ. ಸರ್ಕಾರಿ ಕಚೇರಿಗಳಲ್ಲಿ 15 ರೂಪಾಯಿಗೆ ನೀಡುವ ಆರ್ ಟಿಸಿಯನ್ನು ಪಡೆಯಲು ಸರದಿಯಲ್ಲಿ ದಿನಗಟ್ಟಲೆ ನಿಂತು ಕಾಯುವ ವ್ಯವಧಾನ ಹಾಗೂ ಸಾಧ್ಯವಾಗದ ಸಾರ್ವಜನಿಕರು ಪ್ರತಿ ಆರ್ ಟಿಸಿಗೆ 20-30 ರೂಪಾಯಿ ಖಾಸಗಿ ಕಂಪ್ಯೂಟರ್ ಕೇಂದ್ರಗಳಲ್ಲಿ ನೀಡುತ್ತಿದ್ದಾರೆ.
ಎಲ್ಲಾ ಗ್ರಾಮಪಂಚಾಯಿತಿ ಕೇಂದ್ರಗಳಲ್ಲಿ ಆರ್‍ಟಿಸಿ ಕೊಡಲು ಸಾಧ್ಯವಿದ್ದರೂ ಎಲ್ಲಿಯೂ ವಿತರಣೆಗೆ ಮುಂದಾಗುತ್ತಿಲ್ಲ. ಪರಿಣಾಮ ವಾಗಿ ಎಲ್ಲಾ ಸಾರ್ವಜನಿಕರೂ ತಾಲೂಕು ಕಚೇರಿ ಹಾಗೂ ಅಟಲ್ ಜನಸ್ನೆಹಿ ಕೇಂದ್ರ ಗಳನ್ನೇ ಅವಲಂಬಿಸಬೇಕಾಗಿದ್ದು ಸಂಬಂಧ ಪಟ್ಟವರು ಹೆಚ್ಚುವರಿ ಕೌಂಟರ್ ತೆರೆದು ಶೀಘ್ರ ವಿತರಣೆಗೆ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.