ಫೆಬ್ರವರಿ 8 ರಾಜ್ಯ ಬಜೆಟ್:  ಗ್ರಾಮೀಣ ಜೀವನಕ್ಕೆ ಆದ್ಯತೆ
ಮೈಸೂರು

ಫೆಬ್ರವರಿ 8 ರಾಜ್ಯ ಬಜೆಟ್: ಗ್ರಾಮೀಣ ಜೀವನಕ್ಕೆ ಆದ್ಯತೆ

January 30, 2019

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ 2019-20ನೇ ಸಾಲಿನ ಮುಂಗಡಪತ್ರದಲ್ಲಿ ಗ್ರಾಮೀಣ ಜನರ ಹಿತ, ಕುಡಿಯುವ ನೀರು ಹಾಗೂ ಕೃಷಿಗೆ ಸೀಮಿತವಾಗಿ ಕೆಲವು ಜನಪ್ರಿಯ ಯೋಜನೆಗಳನ್ನು ಪ್ರಕಟಿಸಲು ಮುಂದಾಗಿದ್ದಾರೆ.

ಫೆಬ್ರವರಿ 8 ರಂದು ವಿಧಾನಸಭೆಯಲ್ಲಿ ತಮ್ಮ ಎರಡನೇ ಮುಂಗಡಪತ್ರ ಮಂಡಿಸಲು ಬಹುತೇಕ ಸಿದ್ಧತೆ ಪೂರ್ಣ ಗೊಳಿಸಿರುವ ಮುಖ್ಯಮಂತ್ರಿ, ಈ ವಲಯಕ್ಕೆ ಹೆಚ್ಚಿನ ಆದ್ಯತೆ ಕೊಡುವಲ್ಲಿ ಕೃಷಿ ನೀರಾವರಿ ತಜ್ಞರ ಅಭಿಪ್ರಾಯ ಪಡೆದಿದ್ದಾರೆ. ಕಳೆದ ಹತ್ತು ದಿನಗಳಿಂದ ಮುಂಗಡ ಪತ್ರ ಸಿದ್ಧತೆ ಮಾಡಿಕೊಂಡಿರುವ ಮುಖ್ಯಮಂತ್ರಿಯ ವರು ಕೆಲವು ಇಲಾಖೆಗಳನ್ನು ಸಂಪೂರ್ಣವಾಗಿ ಕಡೆಗಣಿಸಿ ರುವುದಲ್ಲದೆ ಹರಿದು ಹಂಚಿ ಹೋಗುತ್ತಿದ್ದ ಹಣವನ್ನು ಕ್ರೋಢಿಕರಿಸಿ, ಒಂದೇ ಸೂರಿನಡಿ ವೆಚ್ಚ ಮಾಡುವ ನಿರ್ಧಾರಕ್ಕೂ ಬಂದಿದ್ದಾರೆ. ತಮ್ಮ ಚೊಚ್ಚಲ ಮುಂಗಡ ಪತ್ರದಲ್ಲಿ ಕೃಷಿ ಸಾಲ ಮನ್ನಾ ಮಾಡಿದ ಕುಮಾರಸ್ವಾಮಿ ಈ ಬಾರಿ ಗ್ರಾಮೀಣ ಜನತೆಯ ಕಷ್ಟ ಸುಖಗಳಿಗೆ ಸ್ಪಂದಿ ಸುವುದು ಮತ್ತು ಅವರನ್ನು ಆರ್ಥಿಕವಾಗಿ ಬಲಿಷ್ಠರನ್ನಾಗಿ ಮಾಡಲು ಯೋಜನೆ ರೂಪಿಸಿದ್ದಾರೆ. ಇವರು ಸಿದ್ಧಪಡಿ ಸಿರುವ ಯೋಜನೆಗಳಿಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುವ ಸಭೆ ಯಾವ ರೀತಿ ಸ್ಪಂದಿ ಸುತ್ತದೆ ಕಾದು ನೋಡಬೇಕಿದೆ.

ಕೃಷಿ ಸಾಲ ಮನ್ನಾ ಕಳೆದ ಬಾರಿ ಪ್ರಕಟಿಸಿದ್ದರೂ, ಅದು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ. ಬರುವ ಮುಂಗಡ ಪತ್ರದಲ್ಲಿ ಸಾಲ ಮನ್ನಾಗೆ ಅಗತ್ಯವಿರುವ ಪೂರ್ಣ ಹಣವನ್ನು ಒಂದೇ ಕಂತಿನಲ್ಲಿ ಪಾವತಿಸುವ ನಿರ್ಧಾರ ಪ್ರಕಟ ಮಾಡಲಿದ್ದಾರೆ. ಈ ಮೊದಲು ಮುಂದಿನ ನಾಲ್ಕು ವರ್ಷಗಳವರೆಗೂ ಸಾಲದ ಋಣ ತೀರಿಸಲು ಸಂಬಂಧಪಟ್ಟ ಬ್ಯಾಂಕುಗಳಿಗೆ ಪಾವತಿಸುವ ನಿರ್ಧಾರ ತೆಗೆದುಕೊಂಡಿದ್ದರು. ಆದರೆ ತಮ್ಮ ನಿರ್ಧಾರವನ್ನು ಬದಲಿಸಿ, ಈ ತೀರ್ಮಾನಕ್ಕೆ ಬಂದಿರುವುದು ಎದುರಾ ಗುತ್ತಿರುವ ಲೋಕಸಭಾ ಚುನಾವಣೆಯೇ ಕಾರಣ ಎನ್ನ ಲಾಗಿದೆ. ಕೃಷಿ ಸಾಲ ಮನ್ನಾ ಬಾಕಿ ಹಣ ಪೂರ್ಣವಾಗಿ ಪಾವತಿಸುವುದಲ್ಲದೆ, ರೈತರಿಗೆ ಮತ್ತಷ್ಟು ಸಂತಸದ ಸುದ್ದಿಗಳನ್ನು ನೀಡಲಿದ್ದಾರೆ. ಕ್ಲಸ್ಟರ್ ಫಾರ್ಮಿಂಗ್ ಯೋಜನೆ ಘೋಷಿಸಲು ಚಿಂತನೆ ನಡೆದಿದೆ. ಸಣ್ಣ ಹಿಡುವಳಿದಾರ ರೈತರಿಗೆ ಅನುಕೂಲವಾಗುವಂತೆ ಗುಂಪು ಕೃಷಿ ಯೋಜನೆಗೆ ಈಗಾಗಲೇ ಸಿಎಂ ಕುಮಾರಸ್ವಾಮಿ ಪ್ಲಾನ್ ರೂಪಿಸಿದ್ದಾರೆ ಎನ್ನಲಾಗಿದೆ. ಆ ಮೂಲಕ ಕೃಷಿ ವೆಚ್ಚ ಕಡಿಮೆಗೊಳಿಸಿ, ಉತ್ಪಾದನೆ ಹೆಚ್ಚಿಸುವುದು ಕ್ಲಸ್ಟರ್ ಫಾರ್ಮಿಂಗ್ ಮೂಲ ಉದ್ದೇಶವಾಗಿದೆ.

ಶೂನ್ಯ ಬಂಡವಾಳ ಕೃಷಿ ಸಂಬಂಧ ಹೊಸ ಕೃಷಿ ಪದ್ಧತಿಯನ್ನು ಘೋಷಿಸುವ ಸಾಧ್ಯತೆ ಇದೆ. ಈ ಮೂಲಕ ಕೃಷಿಕರ ಮೇಲಿನ ಹೊರೆ ಕಡಿಮೆಗೊಳಿಸಿ, ಆದಾಯ ಹೆಚ್ಚಿಸುವ ಯೋಜನೆಯನ್ನು ಈ ಬಾರಿ ಘೋಷಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆ ಮಾಲೀಕರು ಬಾಕಿ ಕೊಡದಿದ್ದಾಗ ಕಠಿಣ ಶಿಕ್ಷೆ, ದಂಡ ವಸೂಲಿ ಮಾಡುವ ನಿಟ್ಟಿನಲ್ಲಿ ಕಾಯ್ದೆ ಜಾರಿಗೆ ತರುವ ಬಗ್ಗೆಯೂ ಚಿಂತನೆ ನಡೆದಿದೆ. ಸ್ವಾಮಿನಾಥನ್ ವರದಿಯ ಅಂಶಗಳನ್ನು ಜಾರಿಗೊಳಿಸುವ ಬಗ್ಗೆಯೂ ಸಿಎಂ ಕುಮಾರಸ್ವಾಮಿ ಗಂಭೀರ ಯೋಚನೆಯಲ್ಲಿದ್ದಾರೆ ಎನ್ನಲಾಗುತ್ತಿದೆ. ಜತೆಗೆ ಮಹಿಳಾ ರೈತರಿಗೆ ಈ ಬಾರಿಯ ಬಜೆಟ್‍ನಲ್ಲಿ ವಿಶೇಷ ಪ್ಯಾಕೇಜ್ ಪ್ರಕಟಿಸುವ ಸಾಧ್ಯತೆಯೂ ಇದೆ. ಇದರೊಟ್ಟಿಗೆ ಬಡವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಹಲವು ಪ್ರಯತ್ನ ಮಾಡಿದ್ದಾರೆ.

ಜೊತೆಗೆ ಸದಾ ಬರಗಾಲಕ್ಕೆ ತುತ್ತಾಗುತ್ತಿರುವ ಕರ್ನಾಟಕದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಬಾರದೆಂಬ ಉದ್ದೇಶದಿಂದ ಜಲಮೂಲ ವೃದ್ಧಿಸಲು ನದಿ ಪಾತ್ರಗಳಿಂದ ಗ್ರಾಮೀಣ ಕೆರೆಗಳಿಗೆ ನೀರು ಒದಗಿಸಲು ಹೊಸ ಯೋಜನೆ ಪ್ರಕಟಗೊಳ್ಳುವುದಲ್ಲದೆ, ಅದಕ್ಕೆ ದೊಡ್ಡ ಪ್ರಮಾಣದಲ್ಲಿ ಹಣ ಒದಗಿಸಲಿದ್ದಾರೆ. ಗ್ರಾಮೀಣ ಪ್ರದೇಶದ ಜೊತೆಗೆ ನಗರ ಪ್ರದೇಶದ ಅಭಿವೃದ್ಧಿಗಾಗಿ ಮುಂಗಡಪತ್ರದಲ್ಲಿ ಗಮನ ಹರಿಸಲಿರುವ ಮುಖ್ಯಮಂತ್ರಿ, ಮಾಹಿತಿ ತಂತ್ರಜ್ಞಾನ ಉದ್ದಿಮೆದಾರರು ಸೇರಿದಂತೆ ಬಂಡವಾಳಶಾಹಿಗಳ ಸಹಭಾಗಿತ್ವದಲ್ಲಿ ಕಾರ್ಯಕ್ರಮ ರೂಪಿಸಲು ಮನಸ್ಸು ಮಾಡಿದ್ದಾರೆ.

Translate »