ಪರೀಕ್ಷೆ ಜೀವನದ ಪರೀಕ್ಷೆಯಲ್ಲ!
ಮೈಸೂರು

ಪರೀಕ್ಷೆ ಜೀವನದ ಪರೀಕ್ಷೆಯಲ್ಲ!

January 30, 2019

ನವದೆಹಲಿ: ಪರೀಕ್ಷೆ ಜೀವನದಲ್ಲಿ ಮಹತ್ವದಾಗಿದೆ. ಆದರೆ ಇದು ಜೀವನದ ಪರೀಕ್ಷೆಯಲ್ಲ. ಇದು ಕೇವಲ ಪಠ್ಯದ ಪರೀಕ್ಷೆ. ಹಾಗಾಗಿ ಮಕ್ಕಳು ಹೆಚ್ಚು ಒತ್ತಡಕ್ಕೆ ಸಿಲುಕಿ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಈ ವಿಚಾರದಲ್ಲಿ ಪೋಷಕರು ಮಕ್ಕಳನ್ನು ಸದಾ ಪ್ರೋತ್ಸಾಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ದೆಹಲಿಯ ತಾಲ್ ಕಠೋರಾ ಸ್ಟೇಡಿಯಂನಲ್ಲಿ ನರೇಂದ್ರ ಮೋದಿ `ಪರೀಕ್ಷೆ ಪೇ ಚರ್ಚಾ 2.0 ಸಂವಾದ ಕಾರ್ಯ ಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರ ಜೊತೆ ಸಂವಾದ ನಡೆಸಿದರು. ಪರೀಕ್ಷೆ ದೊಡ್ಡ ಸವಾಲು ಅಲ್ಲ. ಜೀವನದಲ್ಲಿ ದೊಡ್ಡ ದೊಡ್ಡ ಸವಾಲುಗಳನ್ನು ಎದುರಿಸಲು ಈ ಪರೀಕ್ಷೆಗಳು ನಮಗೆ ಸಹಾಯ ಮಾಡಲಿವೆ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿ ದರು. ಪರೀಕ್ಷಾ ಸಮಯದಲ್ಲಿ ಮಕ್ಕಳ ಮೇಲೆ ಯಾವುದೇ ಒತ್ತಡ ಹೇರದೆ ಜ್ಞಾನಾರ್ಜನೆಗೆ ಅವರಿಗೆ ಸಹಕರಿಸು ವಂತೆ ಪೋಷಕರಿಗೆ ಪ್ರಧಾನಿ ಸಲಹೆ ನೀಡಿದರು.

ಈ ವೇಳೆ ಪೋಷಕರೊಬ್ಬರು, `ಮಕ್ಕಳು ಈಗ ಜಾಸ್ತಿ ಮೊಬೈಲಿನಲ್ಲಿ ತಲ್ಲೀನರಾಗುತ್ತಿದ್ದಾರಲ್ಲಾ, ಏನು ಮಾಡು ವುದು?’ ಎಂದು ಪ್ರಶ್ನಿಸಿದರು. ಈ ಪ್ರಶ್ನೆಗೆ ಮೋದಿ, ಇದು ಸಮಸ್ಯೆಯೂ ಹೌದು, ಪರಿಹಾರವೂ ಹೌದು. ತಂತ್ರಜ್ಞಾನವನ್ನು ಬಳಸಲು ಮಕ್ಕಳನ್ನು ಪ್ರೋತ್ಸಾಹಿಸ ಬೇಕು. ಆದರೆ ಆ ತಂತ್ರಜ್ಞಾನದಿಂದ ಏನು ಉಪಯೋಗ ವಾಗುತ್ತದೆ ಎನ್ನುವುದನ್ನೂ ಅವರಿಗೆ ತಿಳಿಸಿಕೊಡಬೇಕು ಎಂದರು.

ನಾವು, ನಮ್ಮ ಮಕ್ಕಳು ತಂತ್ರಜ್ಞಾನದಿಂದ ದೂರವಿರಲಿ ಎಂದು ಬಯಸುತ್ತೇವೆ. ಹಾಗೇನಾದರೂ ಆದಲ್ಲಿ ಒಂದರ್ಥದಲ್ಲಿ ಅವರು ಪ್ರಪಂಚದಿಂದಲೇ ಹಿಂದೆ ಸರಿದಂತೆ ಆಗುತ್ತದೆ. ಹಾಗಾಗಿ ತಂತ್ರಜ್ಞಾನವನ್ನು ಬಳಸಲು ಮಕ್ಕಳನ್ನು ಪ್ರೋತ್ಸಾಹಿಸಬೇಕು. ಆದರೆ ಆ ತಂತ್ರಜ್ಞಾನದಿಂದ ಏನೇನು ಉಪಯೋಗವಾಗುತ್ತದೆ ಎನ್ನುವುದನ್ನು ಅವರಿಗೆ ಅರ್ಥೈಸಬೇಕು ಎಂದು ವಿವರಿಸಿದರು. ಪಾಲಕರು ಮಹತ್ವಾಕಾಂಕ್ಷಿಗಳಾಗಿದ್ದು, ಅವರು ಹಾಕುವ ಒತ್ತಡದಿಂದ ಪರಿಸ್ಥಿತಿ ಬದಲಾಗುತ್ತದೆ. ಹೀಗಾಗಿ ಒತ್ತಡ ಹಾಕದೇ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸುವ ಕೆಲಸವನ್ನು ಪೋಷಕರು ಮಾಡಬೇಕು ಎಂದರು.

ಮಕ್ಕಳನ್ನು ಬೇರೆಯವರ ಜೊತೆ ಹೋಲಿಕೆ ಮಾಡಬೇಡಿ. ಅವರ ಅಂಕಪಟ್ಟಿಯನ್ನು ನಿಮ್ಮ ವಿಸಿಟಿಂಗ್ ಕಾರ್ಡ್‍ನಂತೆ ನೋಡಬೇಡಿ ಎಂದು ಪಾಲಕರಿಗೆ ಕಿವಿಮಾತು ಹೇಳಿದರು. ನಾನು ಇಡೀ ದೇಶವನ್ನು ನನ್ನ ಕುಟುಂಬ ಎಂದು ಪರಿಗಣಿಸಿದ್ದೇನೆ. ಹಾಗಾಗಿ ಕೆಲಸದ ವೇಳೆ ನನಗೆ ಸುಸ್ತಾಗುವುದಿಲ್ಲ. ಸರಿಯಾದ ಸಮಯ ನಿರ್ವ ಹಣೆಯ ಜೊತೆ ಪ್ರತಿದಿನ ಅದೇ ಉತ್ಸಾಹದಲ್ಲಿ ಕೆಲಸ ಮಾಡುತ್ತೇನೆ. ಸಮಯವಿಲ್ಲ ಎಂದು ಹೇಳುವವರು ಸುಳ್ಳು ಹೇಳುತ್ತಿದ್ದಾರೆ ಎಂದೇ ಅರ್ಥ ಎಂದು ತಿಳಿಸಿದರು.

ಕಳೆದ ವರ್ಷವೂ ವಿದ್ಯಾರ್ಥಿಗಳ ಜೊತೆ ಮೋದಿ ಸಂವಾದ ನಡೆಸಿದ್ದರು. ಈ ವರ್ಷದ ಪರೀಕ್ಷಾ ಪೇ ಚರ್ಚಾ ಸಂವಾದದಲ್ಲಿ ರಾಜ್ಯದ 30 ವಿದ್ಯಾರ್ಥಿಗಳೂ ಸೇರಿದಂತೆ ಒಟ್ಟು 2 ಸಾವಿರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ರಷ್ಯಾ, ನೇಪಾಳ, ನೈಜೀರಿಯಾ, ದುಬೈ, ಭೂತಾನ್ ಹಾಗೂ ಸಿಂಗಾಪೂರದಲ್ಲಿ ಓದುತ್ತಿರುವವರೂ ವೀಡಿಯೋ ಕಾಲ್ ಮೂಲಕ ಪ್ರಶ್ನಿಸಿ ಉತ್ತರ ಪಡೆದುಕೊಂಡರು. ದೇಶಾದ್ಯಂತ ವಿದ್ಯಾರ್ಥಿಗಳಿಗಾಗಿ ಈ ಕಾರ್ಯಕ್ರಮದ ನೇರ ವೀಕ್ಷಣೆಗೆ `ದೂರದರ್ಶನ’ದ ಮೂಲಕ ವ್ಯವಸ್ಥೆ ಮಾಡಲಾಗಿತ್ತು. 2 ಇಂಗ್ಲೀಷ್ ವಾಹಿನಿಗಳೂ ನೇರ ಪ್ರಸಾರ ನಡೆಸಿದವು.

`ಗುರಿ ದೊಡ್ಡದೇ ಇರಲಿ’: `ಗುರಿ’ ಏಕೆ ದೊಡ್ಡದೇ ಇರಬೇಕು? ಸಣ್ಣ ಸಣ್ಣ ಗುರಿ ಇಟ್ಟುಕೊಳ್ಳಬಾರದೇ ಎಂಬ ಪ್ರೌಢಶಾಲೆ ವಿದ್ಯಾರ್ಥಿಯೊಬ್ಬನ ಪ್ರಶ್ನೆಗೆ ಪ್ರಧಾನಿ ಭಿನ್ನ ರೀತಿಯಲ್ಲಿ ಉತ್ತರ ದೊರಕಿಸಿಕೊಟ್ಟರು. ಸಣ್ಣ ಗುರಿ ಯಾರಿಗೆಲ್ಲಾ ಇಷ್ಟ? ಎಂದು ವಿದ್ಯಾರ್ಥಿಗಳನ್ನೇ ಪ್ರಶ್ನಿಸಿದಾಗ ಸಭಾಂಗಣದಲ್ಲಿದ್ದವರಲ್ಲಿ 2-3 ಮಂದಿ ಮಾತ್ರ ಕೈ ಎತ್ತಿದರು. `ದೊಡ್ಡ ಗುರಿ’ ಇಟ್ಟುಕೊಳ್ಳುವರಾರು ಎಂದಾಗ ಇಡೀ ಸಭಾಂಗಣದಲ್ಲಿದ್ದವರೆಲ್ಲಾ ಕೈ ಎತ್ತಿ ಸಹಮತ ತೋರಿದರು. ಬಳಿಕ ಪ್ರಧಾನಿ ನಗುತ್ತಲೇ, `ನೋಡಿದಿರಾ ಪ್ರಜಾಸತ್ತಾತ್ಮಕವಾದ ಉತ್ತರ ಸಿಕ್ಕಿತಲ್ಲ’ ಎಂದರು.

`ಗುರಿ’ ಎಂಬುದು ಸುಲಭಕ್ಕೆ ಕೈಗೆ ಎಟುಕವಂತಿರಬಾರದು. ಅದಕ್ಕಾಗಿ ನಾವು ಶ್ರಮಿಸುವಷ್ಟಾದರೂ ಎತ್ತರದ್ದಾಗಿರಬೇಕು. ಅದನ್ನು ಮುಟ್ಟಿದ ನಂತರ ಮತ್ತೊಂದು ದೊಡ್ಡ ಗುರಿ ಹಾಕಿಕೊಳ್ಳಬೇಕು ಎಂದು ಪ್ರೋತ್ಸಾಹಿಸಿದರು.

Translate »