ಒಂದೇ ಕಾಮಗಾರಿಗೆ ಎರಡು  ಬಿಲ್: 1.40 ಕೋಟಿ ಗುಳುಂ
ಮೈಸೂರು

ಒಂದೇ ಕಾಮಗಾರಿಗೆ ಎರಡು ಬಿಲ್: 1.40 ಕೋಟಿ ಗುಳುಂ

January 30, 2019

ಮೈಸೂರು: ಒಂದೇ ಕಾಮಗಾರಿಗೆ 2 ಬಾರಿ ಬಿಲ್ ನೀಡುವ ಮೂಲಕ 1.40 ಕೋಟಿ ರೂ. ಭ್ರಷ್ಟಾಚಾರ ನಡೆಸಿರುವ ಸಂಗತಿ ಮೈಸೂರು ನಗರಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಬಯಲಾಗಿದೆ.

ನಗರಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣ ದಲ್ಲಿ ಮಂಗಳವಾರ ಮೇಯರ್ ಪುಷ್ಪಲತಾ ಜಗನ್ನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಒಂದೇ ಕಾಮಗಾರಿಗೆ 2 ಬಾರಿ ಬೋಗಸ್ ಬಿಲ್ ನೀಡಿ, 1.40 ಕೋಟಿ ರೂ. ಭ್ರಷ್ಟಾಚಾರ ನಡೆಸಿರುವ ಆರೋಪದಡಿ ವಲಯ ಕಚೇರಿ-1ರ ಸಹಾಯಕ ಆಯುಕ್ತ ಸುನಿಲ್ ಬಾಬು ಹಾಗೂ ಕಿರಿಯ ಇಂಜಿನಿಯರ್ ಮೋಹನ್ ಕುಮಾರಿ ಅವರಿಗೆ ನೋಟೀಸ್ ಜಾರಿ ಮಾಡಿ, ತಕ್ಷಣದಿಂದಲೇ ಈಗಿರುವ ಹುದ್ದೆಯಿಂದ ಬಿಡುಗಡೆಯಾಗಿ, ಪ್ರಧಾನ ಕಚೇರಿಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಬೇಕೆಂದು ಹಾಗೂ ಈ ಸಂಬಂಧ ಸದನ ತನಿಖಾ ಸಮಿತಿಯನ್ನು ರಚಿಸಿ, ತನಿಖಾ ವರದಿ ಬಂದ ನಂತರ ಸರ್ಕಾ ರಕ್ಕೆ ಮಾಹಿತಿ ನೀಡುವ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.

ಮೈಸೂರು ನ್ಯಾಯಾಲಯದ ಮುಂಭಾಗದಿಂದ ರಾಷ್ಟ್ರೀಯ ಹೆದ್ದಾರಿ 212ರವರೆಗೆ ಮಹಾತ್ಮ ಗಾಂಧಿ ರಸ್ತೆ ಅಭಿವೃದ್ಧಿಗೆ ಮಂಜೂರಾಗಿದ್ದ ಒಟ್ಟು 4 ಕೋಟಿ ರೂ. ಅನುದಾನದಲ್ಲಿ, ಅವ್ಯವಹಾರ ನಡೆದಿರುವ ಬಗ್ಗೆ ವಿರೋಧ ಪಕ್ಷ(ಬಿಜೆಪಿ)ದ ನಾಯಕ ಬಿ.ವಿ.ಮಂಜುನಾಥ್ ಸಭೆಯಲ್ಲಿ ಪ್ರಸ್ತಾಪಿಸಿದರಲ್ಲದೆ, ಈ ಬಗ್ಗೆ ಚರ್ಚೆ ನಡೆಸುವ ನಿಟ್ಟಿನಲ್ಲಿ ಸಭೆಯ ಅವಧಿಯನ್ನು ವಿಸ್ತರಿಸಬೇಕೆಂದು ಮನವಿ ಮಾಡಿಕೊಂಡರು. ಮನವಿಯನ್ನು ಪುರಸ್ಕರಿಸಿದ ಮೇಯರ್ ಪುಷ್ಪಲತಾ ಜಗನ್ನಾಥ್, ನಿಗದಿತ ಅವಧಿ(ಸಂಜೆ 7ಕ್ಕೆ)ಗಿಂತ ಮತ್ತೊಂದು ಗಂಟೆ ಸಭೆ ಮುಂದುವರಿಸಲು ವಿಶೇಷ ಅನುಮತಿ ನೀಡಿದರು.

ಭ್ರಷ್ಟಾಚಾರದ ಬಗ್ಗೆ ಮಾತು ಮುಂದುವರೆಸಿದ ಬಿ.ವಿ.ಮಂಜುನಾಥ್, ಕಳೆದ ವರ್ಷ ಮೈಸೂರಿನ ಸೌಂದರ್ಯೀಕರಣಕ್ಕಾಗಿ 50 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆಯಾಗಿತ್ತು. ಅದರಲ್ಲಿ ವಲಯ ಕಚೇರಿ-1ರ ವ್ಯಾಪ್ತಿಯ ಮೈಸೂರು ನ್ಯಾಯಾಲಯದ ಮುಂಭಾಗದಿಂದ ಅಗ್ರಹಾರದ ವೃತ್ತದ ಮೂಲಕ ರಾಷ್ಟ್ರೀಯ ಹೆದ್ದಾರಿ 212ರವರೆಗಿನ ಮಹಾತ್ಮಗಾಂಧಿ ರಸ್ತೆಯ ಆಯ್ದ ಭಾಗಗಳಲ್ಲಿ ರಸ್ತೆ ಹಾಗೂ ಪಾದಚಾರಿ ಮಾರ್ಗ ಅಭಿವೃದ್ಧಿಪಡಿಸುವ 4 ಕೋಟಿ ರೂ. ಕಾಮಗಾರಿಯನ್ನು ಗುತ್ತಿಗೆದಾರ ಕರೀಗೌಡ ಅವರಿಗೆ ವಹಿಸಲಾಗಿತ್ತು. ಮೊದಲ ಹಂತದಲ್ಲಿ ನ್ಯಾಯಾ ಲಯದ ಮುಂಭಾಗದಿಂದ ಅಗ್ರಹಾರ ವೃತ್ತದವರೆಗಿನ ಕಾಮಗಾರಿಗೆ ಸುಮಾರು 1.11 ಕೋಟಿ ರೂ., 2ನೇ ಹಂತದಲ್ಲಿ ಅಗ್ರಹಾರ ವೃತ್ತದಿಂದ ಕೆಳ ಸೇತುವೆ(ಅಂಡರ್ ಬ್ರಿಡ್ಜ್)ವರೆಗಿನ ಕಾಮಗಾರಿಗೆ ಸುಮಾರು 1.18 ಕೋಟಿ ರೂ. ಬಿಲ್ ನೀಡಲಾಗಿತ್ತು. ನಂತರದಲ್ಲಿ ಚುನಾವಣೆಗಳು ಎದುರಾದ ಹಿನ್ನೆಲೆಯಲ್ಲಿ ಮೂರನೇ ಹಂತದಲ್ಲಿ ಕೆಳ ಸೇತುವೆಯಿಂದ ರಾಷ್ಟ್ರೀಯ ಹೆದ್ದಾರಿ 212ರವರೆಗಿನ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಇತ್ತೀಚೆಗೆ ಅಗ್ರಹಾರ ವೃತ್ತ ಅಭಿವೃದ್ಧಿ ಬಗ್ಗೆ ಪ್ರಸ್ತಾಪಿಸಿದಾಗ 4 ಕೋಟಿ ರೂ. ಅಂದಾಜು ಮೊತ್ತದ ಕಾಮಗಾರಿ ಪೂರ್ಣಗೊಂಡಿದ್ದು, ಯಾವುದೇ ಹಣ ಉಳಿದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು.

ಈ ಬಗ್ಗೆ ಪರಿಶೀಲನೆ ನಡೆಸಿದಾಗ ಸುಮಾರು 1.41 ಕೋಟಿ ರೂ. ವೆಚ್ಚದಲ್ಲಿ 3ನೇ ಹಂತದ ಕಾಮಗಾರಿಯೂ ಪೂರ್ಣಗೊಂಡಿದೆ ಎಂದು ಬಿಲ್ ಬರೆದು, ಗುತ್ತಿಗೆದಾರ ಕರೀಗೌಡರಿಗೆ 80 ಲಕ್ಷ ರೂ. ಹಣವನ್ನು ಬಿಡುಗಡೆ ಮಾಡಿರುವುದು ಬೆಳಕಿಗೆ ಬಂದಿತು. ಈ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿದಾಗ ಮೊದಲ ಹಂತದಲ್ಲೇ ನ್ಯಾಯಾಲಯದ ಮುಂಭಾಗದಿಂದ ಅಗ್ರಹಾರದ ವೃತ್ತದವರೆಗೆ ನಡೆದಿದ್ದ ಕಾಮಗಾರಿಯಲ್ಲಿ 57 ಲಕ್ಷ ರೂ. ವೆಚ್ಚದ ಕೆಲಸಗಳು ಹಾಗೂ ಕೆಳ ಸೇತುವೆಯಿಂದ ರಾಷ್ಟ್ರೀಯ ಹೆದ್ದಾರಿವರೆಗೆ ಬೇರೊಂದು ಅನುದಾನದಲ್ಲಿ ಮಾಡಲಾಗಿದ್ದ ಡಾಂಬರೀಕರಣ ಕೆಲಸವನ್ನೂ ಮತ್ತೊಮ್ಮೆ 3ನೇ ಹಂತದ ಕಾಮಗಾರಿಗಳೆಂದು ನಮೂದಿಸಿ, ಬೋಗಸ್ ಬಿಲ್ ಬರೆದಿರುವುದು ಸ್ಪಷ್ಟವಾಯಿತು. ಅಲ್ಲದೆ ಒಟ್ಟು 4 ಕೋಟಿ ರೂ. ಅನುದಾನದಲ್ಲಿ ಇನ್ನೂ 40 ಲಕ್ಷ ರೂ. ಉಳಿಕೆ ಮೊತ್ತವನ್ನೂ ಮರೆಮಾಚಿದ್ದು ಗೊತ್ತಾಯಿತು. ಕಾಮಗಾರಿ ಬಗ್ಗೆ ಪರಿಶೀಲನೆ ಮಾಡುತ್ತಿರುವುದನ್ನು ತಿಳಿದ ಕಿರಿಯ ಇಂಜಿನಿಯರ್ ಮೋಹನ್ ಕುಮಾರಿ, ಪಾಲಿಕೆ ಪ್ರಧಾನ ಕಚೇರಿಯಿಂದ ಕಡತ ತರಿಸಿಕೊಂಡು. ದಾಖಲೆಗಳ ಬದಲಾವಣೆ ಮಾಡಿದ್ದಾರೆ. ಅಲ್ಲದೆ ಸಹಾಯಕ ಆಯುಕ್ತ ಸುನಿಲ್ ಬಾಬು, ಅಭಿವೃದ್ಧಿ ಅಧಿಕಾರಿಯ ಗಮನಕ್ಕೆ ಬಾರದಂತೆ ಸಹಿ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಭಾರೀ ಭ್ರಷ್ಟಾಚಾರದಲ್ಲಿ ಭಾಗಿಯಾಗಿ, ಆರೋಪದಿಂದ ಪಾರಾಗಲು ಪ್ರಯತ್ನಿಸಿದ ಅಧಿಕಾರಿಗಳಾದ ಸುನಿಲ್ ಬಾಬು ಹಾಗೂ ಮೋಹನ್‍ಕುಮಾರಿ ಅವರನ್ನು ತಕ್ಷಣವೇ ಅಮಾನತು ಮಾಡಬೇಕು. ಬೋಗಸ್ ಬಿಲ್ ಪಡೆದಿರುವ ಗುತ್ತಿಗೆದಾರ ಕರೀಗೌಡರನ್ನು ಕಪ್ಪುಪಟ್ಟಿ(ಬ್ಲಾಕ್‍ಲಿಸ್ಟ್)ಗೆ ಸೇರಿಸಬೇಕು. ಅವ್ಯವಹಾರ ನಡೆಸಿರುವ 1.40 ಕೋಟಿ ಹಣವನ್ನು ಸಂಬಂಧಪಟ್ಟವರಿಂದ ವಸೂಲಿ ಮಾಡಬೇಕೆಂದು ಬಿ.ವಿ.ಮಂಜುನಾಥ್ ಆಗ್ರಹಿಸಿದರು. ಮಾಜಿ ಮೇಯರ್‍ಗಳಾದ ಅಯೂಬ್‍ಖಾನ್, ಆರಿಫ್ ಹುಸೇನ್, ಸದಸ್ಯೆ ಸುನಂದ ಪಾಲನೇತ್ರ ಮತ್ತಿತರ ಸದಸ್ಯರು ಇದಕ್ಕೆ ಬೆಂಬಲ ಸೂಚಿಸಿದರು.

ಕಡೆಗೆ ಕಾಮಗಾರಿ ಅವ್ಯವಹಾರದ ಆರೋಪಕ್ಕೆ ಗುರಿಯಾಗಿರುವ ವಲಯ ಕಚೇರಿ-1ರ ಸಹಾಯಕ ಆಯುಕ್ತ ಸುನಿಲ್ ಬಾಬು ಹಾಗೂ ಕಿರಿಯ ಇಂಜಿನಿಯರ್ ಮೋಹನ್‍ಕುಮಾರಿ ಅವರು ಕೂಡಲೇ ಹಾಲಿ ಹುದ್ದೆಯಿಂದ ಬಿಡುಗಡೆಯಾಗಿ, ಪಾಲಿಕೆ ಪ್ರಧಾನ ಕಚೇರಿಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಬೇಕು. ಈ ಸಂಬಂಧ ತನಿಖೆ ನಡೆಸಲು ಸದನ ತನಿಖಾ ಸಮಿತಿಯನ್ನು ರಚಿಸಲಾಗುವುದು. ವರದಿ ಬಂದ ನಂತರದಲ್ಲಿ ಈ ಸಂಬಂಧ ಮುಂದಿನ ಕ್ರಮಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಮೇಯರ್ ಪುಷ್ಪಲತಾ ಜಗನ್ನಾಥ್ ನಿರ್ಣಯ ಪ್ರಕಟಿಸಿದರು.

ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್‍ಡೌನ್ ಕಟ್ಟಡಗಳನ್ನು ಪುನರ್ ನಿರ್ಮಾಣ

ಮೈಸೂರು: ಶಿಥಿಲಾವಸ್ಥೆಯಲ್ಲಿರುವ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್‍ಡೌನ್ ಕಟ್ಟಡಗಳನ್ನು ನೆಲಸಮಗೊಳಿಸಿ, ಪಾರಂಪರಿಕ ಮಾದರಿಯಲ್ಲೇ ಪುನರ್ ನಿರ್ಮಾಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮೈಸೂರು ನಗರ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಮುಖ್ಯಮಂತ್ರಿಗಳ ವಿಶೇಷ 100 ಕೋಟಿ ರೂ. ಅನುದಾನದಲ್ಲಿ ದೇವರಾಜ ಮಾರುಕಟ್ಟೆ ನವೀಕರಣ ಕಾಮಗಾರಿಯನ್ನು 2014ರಲ್ಲಿ ಕೈಗೊಳ್ಳಲಾಗಿತ್ತು. ಗುತ್ತಿಗೆ ಪಡೆದಿದ್ದ ಮೆ.ಸವಾನಿ ಕನ್ಸ್‍ಟ್ರಕ್ಷನ್ ಕಂಪನಿ 2016 ಆ.28ರಂದು ಕಾಮಗಾರಿ ನಡೆಸುತ್ತಿದ್ದ ಸಂದರ್ಭದಲ್ಲೇ ಉತ್ತರ ಭಾಗದ ಕಟ್ಟಡ ಕುಸಿದಿತ್ತು. ಅಂದಿನ ಮುಖ್ಯಮಂತ್ರಿ ಸಿದ್ದ ರಾಮಯ್ಯ ಸ್ಥಳ ಪರಿಶೀಲಿಸಿ, ಕಾಮಗಾರಿ ನಿಲ್ಲಿಸಲು ಸೂಚಿಸಿದ್ದ ಲ್ಲದೆ, ತಜ್ಞರ ಸಲಹೆ ಪಡೆದು ಮುಂದುವರೆಯುವಂತೆ ಸೂಚಿಸಿದ್ದರು. ನಂತರ ಪರಿಶೀಲನೆ ನಡೆಸಿದ್ದ ಟಾಸ್ಕ್‍ಫೋರ್ಸ್ ಸಮಿತಿ, ಕಟ್ಟಡವನ್ನು ಸಂಪೂರ್ಣವಾಗಿ ಕೆಡವಿ, ಮರು ನಿರ್ಮಾಣ ಮಾಡುವುದು ಸೂಕ್ತ ಎಂದು ಶಿಫಾರಸ್ಸು ಮಾಡಿತ್ತು. ಆದರೆ ಪಾರಂಪರಿಕ ತಜ್ಞರ ಸಮಿತಿ, ಪಾರಂಪರಿಕ ಕಟ್ಟಡವನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಕಾಮಗಾರಿ ಮುಂದುವರೆಸುವಂತೆ ಮಧ್ಯಂತರ ವರದಿ ನೀಡಿತ್ತು.

ಹಾಗೆಯೇ ಲ್ಯಾನ್ಸ್‍ಡೌನ್ ಕಟ್ಟಡದ ವಿಚಾರದಲ್ಲೂ ಟಾಸ್ಕ್ ಫೋರ್ಸ್ ಹಾಗೂ ಪಾರಂಪರಿಕ ತಜ್ಞರ ಸಮಿತಿಯಿಂದ ಭಿನ್ನ ಅಭಿಪ್ರಾಯ ವ್ಯಕ್ತವಾಗಿತ್ತು. ಈ ಎರಡೂ ತದ್ವಿರುದ್ಧ ಶಿಫಾರಸ್ಸಿನ ಸಂಬಂಧ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ ಅವರು, ಕೌನ್ಸಿಲ್‍ನಲ್ಲಿ ಮಂಡಿಸಿ ತೀರ್ಮಾನಿಸುವಂತೆ ಸೂಚಿಸಿದ್ದರು. ಹಾಗಾಗಿ ಪಾಲಿಕೆ ಆಯುಕ್ತರ ನಿರ್ದೇಶನದಂತೆ ಪಟ್ಟಣ ಯೋಜನೆ ಮತ್ತು ಸುಧಾರಣೆ ಗಾಗಿ ಸ್ಥಾಯಿ ಸಮಿತಿಯಲ್ಲಿ ಚರ್ಚೆ ನಡೆಸಿ, ನವೀಕರಣದ ಬದಲು ಕಟ್ಟಡವನ್ನು ನೆಲಸಮಗೊಳಿಸಿ, ಪುನರ್ ನಿರ್ಮಾಣ ಮಾಡುವುದು ಸೂಕ್ತ ಎಂದು ನಿರ್ಧರಿಸಿ, ಇಂದು ಕೌನ್ಸಿಲ್‍ನಲ್ಲಿ ಮಂಡಿಸಲಾಗಿತ್ತು. ಇದೀಗ ಕೌನ್ಸಿಲ್‍ನಲ್ಲೂ ಒಪ್ಪಿಗೆ ದೊರೆತಿದೆ.

Translate »