ಮಾಲೀಕನ ಮನೆಯಲ್ಲಿ ಕಾರ್ಮಿಕನಿಂದ ಕಳವು: ಐವರು ಅಂತರರಾಜ್ಯ ಖದೀಮರ ಬಂಧನ, 14.10 ಲಕ್ಷ ನಗದು, 50 ಗ್ರಾಂ ಚಿನ್ನ ವಶ
ಹಾಸನ

ಮಾಲೀಕನ ಮನೆಯಲ್ಲಿ ಕಾರ್ಮಿಕನಿಂದ ಕಳವು: ಐವರು ಅಂತರರಾಜ್ಯ ಖದೀಮರ ಬಂಧನ, 14.10 ಲಕ್ಷ ನಗದು, 50 ಗ್ರಾಂ ಚಿನ್ನ ವಶ

March 6, 2019

ಹಾಸನ: ಕೆಲಸ ನೀಡಿದ್ದ ಮಾಲೀಕರ ಮನೆಯಲ್ಲೇ ಲಕ್ಷಾಂತರ ರೂ. ನಗದು ಹಾಗೂ 1 ಕೆಜಿ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿದ್ದ ಐವರು ಆರೋಪಿಗಳನ್ನು ಹಾಸನ ನಗರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜಸ್ತಾನ್ ಮೂಲದ ಸಂತೋಷ್(24), ರತನ್‍ಸಿಂಗ್(48), ಇಂದ್ರಸಿಂಗ್(24), ರಾಮರಾಂ ದೇವಸಿ(28), ಮೀಟೂ ಸಿಂಗ್(25) ಬಂಧಿತ ಆರೋಪಿಗಳು. ಉಳಿದ ಲಕ್ಷ್ಮಣ್, ಆಕಾಶ್ ಮತ್ತು ಗಣಪತ್ ಎಂಬುವವರು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ನಗರದ ಅಜಾದ್ ರಸ್ತೆಯಲ್ಲಿರುವ ಆಂಥೋಣಿ ಅವರ ಮನೆಯಲ್ಲಿ ಕೆಲಸಕ್ಕೆ ಇದ್ದ ರಾಜಸ್ತಾನ್ ಮೂಲದ ಆಕಾಶ್, ಲಕ್ಷ್ಮಣ್ ಅವರು ತಮ್ಮ 6 ಜನ ಸ್ನೇಹಿತರೊಂದಿಗೆ ಸೇರಿ ಫೆ. 22ರಂದು ರಾತ್ರಿ ಮನೆಯಲ್ಲಿ ಮಾಲೀಕ ಆಂಥೋಣಿ ಒಬ್ಬರೇ ಇರುವ ಸಂದರ್ಭ ನೋಡಿಕೊಂಡು ಅವರ ಕೈ-ಕಾಲು ಕಟ್ಟಿ, ಬಾಯಿಗೆ ಪ್ಲಾಸ್ಟರ್ ಹಾಕಿ, ಬೀರುವಿನಲ್ಲಿದ್ದ ಒಂದು ಕೆಜಿ ಚಿನ್ನಾಭರಣ ಮತ್ತು 80 ಲಕ್ಷ ರೂ. ನಗದು ದೋಚಿಕೊಂಡು ಪರಾರಿ ಯಾಗಿದ್ದರು. ಈ ಬಗ್ಗೆ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸದರಿ ಪ್ರಕರಣವನ್ನು ಪತ್ತೆ ಹಚ್ಚಲು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಹಾಸನ ನಗರ ಪೊಲೀಸ್ ಠಾಣಾ ಪೊಲೀಸರಿಂದ ಒಂದು ನುರಿತ ತಂಡವನ್ನು ರಚಿಸಿ ತನಿಖೆ ನಡೆಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಅವರಿಂದ ಒಟ್ಟು 14.10 ಲಕ್ಷ ನಗದು ಸೇರಿ 50 ಗ್ರಾಂ ತೂಕದ ಎರಡು ಚಿನ್ನದ ಸರ ವಶಪಡಿಸಿಕೊಳ್ಳಲಾಗಿದೆ. ಉಳಿದ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರನ್ನು ಬಂಧಿಸಿ, ಬಾಕಿ ಚಿನ್ನಾಭರಣ ವಶಪಡಿಸಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಹಾಸನ ಉಪ ವಿಭಾಗದ ಡಿವೈಎಸ್‍ಪಿಗಳಾದ ಪುಟ್ಟಸ್ವಾಮಿ ಗೌಡ, ಸಿಪಿಐ ಸತ್ಯನಾರಾಯಣ, ಪಿಎಸ್‍ಐ ಪ್ರಮೋದ್‍ಕುಮಾರ್, ಎಎಸ್‍ಐ ಪಿ.ಸುರೇಶ್, ಸಿಬ್ಬಂದಿಗಳಾದ ಪುಟ್ಟಸ್ವಾಮಿ, ರವಿಕುಮಾರ್, ಪ್ರವೀಣ್, ಜಮೀಲ್‍ಅಹ್ಮದ್, ಹರೀಶ್, ಪ್ರಸನ್ನ ಕುಮಾರ್, ಪೀರ್‍ಖಾನ್ ಪಾಲ್ಗೊಂಡಿದ್ದರು. ಪತ್ತೆ ಕಾರ್ಯವನ್ನು ಪ್ರಶಂಶಿಸಿ ಪೊಲೀಸ್ ಇಲಾಖೆಯಿಂದ 25,000 ರೂ. ನಗದು ಬಹುಮಾನ ಘೋಷಿಸಲಾಗಿದೆ.

Translate »