25 ವರ್ಷ ಹುಟ್ಟೂರಿಗೆ ಕಾಲಿಡಲಿಲ್ಲ…!
ಮೈಸೂರು

25 ವರ್ಷ ಹುಟ್ಟೂರಿಗೆ ಕಾಲಿಡಲಿಲ್ಲ…!

January 22, 2019

ತುಮಕೂರು: ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ತಮ್ಮ ಜೀವನದಿಂದಲೇ ಎಲ್ಲರಿಗೂ ಆದರ್ಶವಾಗಿದ್ದವರು. ಆದರೆ ಅಂತಹ ಸ್ವಾಮೀಜಿಗಳೂ ತಮ್ಮ ಪೋಷಕರ ಮೇಲಿನ ಬೇಸರದಿಂದ 25 ವರ್ಷ ಹುಟ್ಟೂರಿಗೆ ಕಾಲಿಡಲಿಲ್ಲ ಎನ್ನುವುದು ಅಚ್ಚರಿಯ ಸತ್ಯ.

ಶಿವಕುಮಾರ ಸ್ವಾಮಿಗಳು ತಾವು ಹುಟ್ಟಿದ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ವೀರಾಪುರಕ್ಕೆ 25 ವರ್ಷ ಬಂದಿರಲಿಲ್ಲ.ತಮ್ಮ ಗುರುವಾಗಿದ್ದ ಉದ್ದಾನ ಶಿವಯೋಗಿಗಳ ಮೇಲಿನ ಅಪಾರ ಭಕ್ತಿ ಅವರ ಈ ನಿರ್ಧಾರದ ಹಿಂದಿತ್ತು. ಬಿಎ ಓದಿದ್ದ ಮಗ ಶಿವಣ್ಣ ಉನ್ನತ ಸರ್ಕಾರಿ ಅಧಿಕಾರಿಯಾಗಬೇಕು ಎನ್ನುವುದು ಅವರ ತಂದೆ ಪಟೇಲ್ ಹೊನ್ನೇಗೌಡ-ಗಂಗಮ್ಮ ಅವರ ಆಸೆಯಾಗಿತ್ತು.

ಆದರೆ ಉದ್ಧಾನ ಶಿವಯೋಗಿಗಳು ಶಿವಣ್ಣ ಸನ್ಯಾಸ ಸ್ವೀಕರಿಸಬೇಕು.ಜಗತ್ತಿಗೆ ಬೆಳಕಾಗ ಬೇಕೆಂದು ಸಂಕಲ್ಪಿಸಿದ್ದರು. ಮಗ ಸನ್ಯಾಸಿಯಾಗಲಿದ್ದಾನೆ ಎನ್ನುವುದು ತಿಳಿದು ಆ ದಂಪತಿ ಅಪಾರ ದುಃಖಿತರಾಗಿದ್ದರು. ಇದನ್ನು ತಿಳಿದ ಶ್ರೀಗಳ ಗುರು ಶಿವಯೋಗಿಗಳು ತಾವೇ ಸ್ವತಃ ವೀರಾಪುರಕ್ಕೆ ತೆರಳಿ ದಂಪತಿಗೆ ಸಾಂತ್ವನ ಹೇಳಲು ಪ್ರಯತ್ನಿಸಿದ್ದರು. ಆದರೆ ಶಿವಯೋಗಿಗಳಿಗೆ ತಾವು ಸಿಕ್ಕಬಾರದು ಎಂಬ ಉದ್ದೇಶದಿಂದ ಹೊನ್ನೇಗೌಡ ದಂಪತಿ ಮನೆಯಿಂದ ದೂರ ತೆರಳಿದ್ದರು. ಇದರಿಂದ ನೊಂದ ಗುರು ಶಿವಯೋಗಿ ಗಳು ಅಲ್ಲಿಂದ ಸಿದ್ದಗಂಗೆಗೆ ನಡೆದೇ ಬಂದಿದ್ದರು. ಮಠಕ್ಕೆ ಆಗಮಿಸಿ ತನ್ನ ಶಿಷ್ಯ ಶಿವಣ್ಣನಿಗೆ ನಡೆದಿದ್ದನ್ನು ವಿವರಿಸಿದ್ದಾರೆ. ಇದನ್ನು ಕೇಳಿದಾಗ ಗುರುಗಳ ಮೇಲೆ ಅಪಾರ ಭಕ್ತಿ ಇದ್ದ ಸ್ವಾಮೀಜಿಗೆ ಬಹಳ ಬೇಸರವಾಗಿತ್ತು. ತಮ್ಮ ಪೆÇೀಷಕರ ವರ್ತನೆ, ಶ್ರೀಗಳಿಗೆ ತೋರಿಸಿದ ಉದಾಸೀನ ಅವರಿಗೆ ಬಹಳ ನೋವು ನೀಡಿತು. ಇದರಿಂದಾಗಿ ಅವರು ವೀರಾಪುರಕ್ಕೆ ಹೋಗುವುದನ್ನೇ ಬಿಟ್ಟರು. ಸಿದ್ದಗಂಗೆ ಮಠದ ಪೀಠವೇರಿದ ಬಳಿಕ ಸಹ ಶಿವಕುಮಾರ ಶ್ರೀಗಳು ತಮ್ಮ ಜನ್ಮಸ್ಥಳಕ್ಕೆ ತೆರಳಲಿಲ್ಲ.

ಆದರೆ ವೀರಾಪುರ ಗ್ರಾಮಸ್ಥರು 1930ರಿಂದ 1955ರವರೆಗೂ ತಮ್ಮ ಗ್ರಾಮಕ್ಕೆ ಸ್ವಾಮೀಜಿ ಭೇಟಿ ನೀಡಬೇಕೆಂದು ಆಗ್ರಹಿಸುತ್ತಲೇ ಇದ್ದರು.ಆದರೆ ಸ್ವಾಮಿಗಳು ನಯವಾಗಿಯೇ ನಿರಾಕರಿಸಿದ್ದರು. ಕಡೆಗೊಮ್ಮೆ ಶ್ರೀಗಳ ಪೂರ್ವಾಶ್ರಮದ ಅಣ್ಣನ ಮಗ ವೀರಾಪುರದಲ್ಲಿ ಮನೆ ಕಟ್ಟಿದ್ದರು. ಆ ಮನೆ ಗೃಹ ಪ್ರವೇಶಕ್ಕೆ ಆತ ಶ್ರೀಗಳನ್ನು ಆಹ್ವಾನಿಸಿದ್ದರು. ಆದರೆ ಶ್ರೀಗಳು ಆಗಲೂ ಒಪ್ಪಿರಲಿಲ್ಲ. ಆಗ ಆತ “ಶಿವಯೋಗಿಗಳ ಅನುಗ್ರಹ ಸಿಕ್ಕದ ಆ ಮನೆಗೆ ನಾನೆಂದಿಗೂ ಪ್ರವೇಶಿಸಲಾರೆ. ಆ ಮನೆ ಪಾಳು ಬಿದ್ದರೂ ಸರಿ” ಎಂದು ಖಡಾಖಂಡಿತವಾಗಿ ನುಡಿದಿದ್ದರು. ಭಕ್ತನ ಭಕ್ತಿಗೆ ಸಹ ಅದ್ಭುತ ಶಕ್ತಿ ಇದೆ ಎಂದು ನಂಬಿದ್ದ ಶಿವಕುಮಾರ ಶ್ರೀಗಳು ತಾವು ಗೃಹಪ್ರವೇಶಕ್ಕೆ ಆಗಮಿಸಲು ಒಪ್ಪಿಕೊಂಡಿದ್ದರು. ಹೀಗೆ ತಾವು 25 ವರ್ಷ ಕಾಲದ ನಂತರ ತಮ್ಮ ಹುಟ್ಟೂರಿಗೆ ಆಗಮಿಸಿದ್ದರು.

Translate »