ನಡೆದಾಡುವ ದೇವರು ಲಿಂಗೈಕ್ಯ
ಮೈಸೂರು

ನಡೆದಾಡುವ ದೇವರು ಲಿಂಗೈಕ್ಯ

January 22, 2019

ಬೆಂಗಳೂರು: ನಡೆದಾಡುವ ದೇವರು, ಶತಾಯುಷಿ, ತ್ರಿವಿಧ ದಾಸೋಹಿ, ಅಭಿನವ ಬಸವಣ್ಣ ಎಂದೇ ಹೆಸರುವಾಸಿಯಾಗಿದ್ದ ಸಿದ್ಧಗಂಗಾ ಮಠದ ಹಿರಿಯ ಶ್ರೀ ಡಾ. ಶಿವಕುಮಾರಸ್ವಾಮೀಜಿ ಇಂದು ಶಿವ ಸಾನಿಧ್ಯ ಸೇರಿದರು. ಕಳೆದ ಕೆಲವು ದಿನಗಳಿಂದ ಶ್ರೀಗಳು ಅಸ್ವಸ್ಥರಾಗಿದ್ದು, ಇಂದು ಬೆಳಿಗ್ಗೆ 11 ಗಂಟೆ 44 ನಿಮಿಷಕ್ಕೆ ಲಿಂಗೈಕ್ಯರಾದರು ಎಂದು ಮಠದ ಆಡಳಿತ ಮಂಡಳಿ ಪ್ರಕಟಿಸಿದೆ. ತಮ್ಮ 111ನೇ ವಯಸ್ಸಿ ನಲ್ಲೂ ಸೇವಾ ಚೈತನ್ಯದ ಚಿಲುಮೆಯಾಗಿದ್ದ ಶ್ರೀಗಳ ನಿಧನ ಸುದ್ದಿಯನ್ನು ಖುದ್ದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೇ ಮಠದ ಆವರಣದಲ್ಲಿ ಪ್ರಕಟಿಸಿದರು.

ಕ್ರಿಯಾಸಮಾಧಿಯ ಕಾರ್ಯಗಳು, ಅಂತಿಮ ಪೂಜಾ ವಿಧಿಗಳನ್ನು ಮಂಗಳವಾರ ಸಂಜೆ ನಾಲ್ಕೂವರೆಗೆ ನೆರವೇರಿಸಲಾಗುವುದು. ನಾಳೆ ಮಧ್ಯಾಹ್ನ 3 ಗಂಟೆವರೆಗೆ ಭಕ್ತರು ಅಂತಿಮ ದರ್ಶನ ಪಡೆಯಲು ಅವಕಾಶ ಮಾಡಿಕೊಡಲಾಗಿದೆ. ಶ್ರೀಗಳು ಲಿಂಗೈಕ್ಯರಾದ ಸುದ್ದಿ ಹೊರಬೀಳುತ್ತಿದ್ದಂತೆ ಲಕ್ಷಾಂತರ ಭಕ್ತರು ಅವರ ದರ್ಶನ ಪಡೆಯಲು ಶ್ರೀ ಕ್ಷೇತ್ರದ ಕಡೆ ಧಾವಿಸಿದರು. ಯಾವುದೇ ರೀತಿ ಅಹಿತಕರ ಘಟನೆಗಳು ನಡೆಯಬಾರದು ಮತ್ತು ಎಲ್ಲಾ ಕಾರ್ಯವೂ ಸುಸೂತ್ರವಾಗಿ ನಡೆಯಬೇಕೆಂಬ ಉದ್ದೇಶದಿಂದ ಮಠದ ಕೋರಿಕೆಯಂತೆ ಸರ್ಕಾರ ಬಿಗಿ ಬಂದೋಬಸ್ತ್ ಮಾಡಿದೆ.

ತ್ರಿವಿಧ ದಾಸೋಹದ ಮೂಲಕ ವ್ಯವಸ್ಥೆಯನ್ನು ಉದ್ದರಿಸಲು ಬದುಕನ್ನೇ ಮುಡಿಪಾಗಿಟ್ಟ ಶ್ರೀಗಳು, ಜಾತಿ ಮತಗಳ ಭೇದವಿಲ್ಲದೆ ವಿಶ್ವಮಾನ್ಯರಾಗಿದ್ದರು. ಸ್ವಾಮಿಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ನಾಳೆ ಸಾರ್ವತ್ರಿಕ ರಜೆ ಘೋಷಿಸಲಾಗಿದ್ದು, ಮೂರು ದಿನಗಳ ಕಾಲ ನಾಡಿನಾದ್ಯಂತ ಶೋಕಾಚರಣೆ ನಡೆಯಲಿದೆ.

ಪಟೇಲ್ ಹೊನ್ನೇಗೌಡ ಹಾಗೂ ಶ್ರೀಮತಿ ಗಂಗಮ್ಮ ದಂಪತಿ ಪುತ್ರರಾಗಿ ಜನಿಸಿದ ಇವರು, ಬೆಂಗಳೂರು ವಿವಿಯಲ್ಲಿ ಪದವಿ ವ್ಯಾಸಂಗ ಮಾಡಿದ್ದಲ್ಲದೆ ಸಂಸ್ಕೃತದಲ್ಲಿ ಪಾಂಡಿತ್ಯ ಗಳಿಸಿದ್ದರು. ಜೊತೆಗೆ ವಿಜ್ಞಾನ, ಸಮಾಜಶಾಸ್ತ್ರ ಸೇರಿದಂತೆ ವಿವಿಧ ನೆಲೆಗಳಲ್ಲಿ ಅವರ ವ್ಯಾಸಂಗದ ಎಲ್ಲೆ ವಿಸ್ತಾರಗೊಂಡಿತ್ತು. ತ್ರಿವಿಧ ದಾಸೋಹದ ಮೂಲಕ ಅಸಂಖ್ಯಾತರನ್ನು ಬೆಳೆಸಿದ ಶ್ರೀಗಳು ಸಿದ್ದಗಂಗಾ ಮಠವನ್ನು ಮಾತ್ರವಲ್ಲ, ಒಂದರ್ಥದಲ್ಲಿ ವ್ಯವಸ್ಥೆಯ ಮುಂದುವರಿಕೆಗೆ ದೊಡ್ಡ ಮಟ್ಟದ ಪ್ರೇರಣೆಯಾಗಿದ್ದರು. ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾಗಿದ್ದ ಶ್ರೀಗಳಿಗೆ 2007 ರಲ್ಲಿಯೇ ಕರ್ನಾಟಕ ಸರ್ಕಾರ ಪರಮೋಚ್ಛ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಇದಕ್ಕೂ ಮೊದಲು 1965ರ ವೇಳೆಗೆ ಅವರು ಗೌರವ ಡಾಕ್ಟರೇಟ್‍ಗೆ ಭಾಜನರಾಗಿದ್ದರು.

ನಾಡು ಗಂಭೀರ ಸಮಸ್ಯೆಗಳಿಗೆ ಗುರಿಯಾದಾಗಲೆಲ್ಲ ಅದನ್ನು ಸರಿದಾರಿಗೆ ತರಲು ಸೂಕ್ತ ಮಾರ್ಗದರ್ಶನ ನೀಡುತ್ತಿದ್ದ ಶ್ರೀಗಳು ಆ ಮೂಲಕ ವ್ಯವಸ್ಥೆಯ ಸ್ವಾಸ್ಥ್ಯವನ್ನು ಕಾಪಾಡುತ್ತಿದ್ದರು. ಕಳೆದ ಎರಡು ತಿಂಗಳಿನಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀಗಳಿಗೆ ನಿರಂತರವಾಗಿ ಚಿಕಿತ್ಸೆ ನೀಡಲಾಗಿತ್ತಾದರೂ ಇಂದು ಅವರ ಆರೋಗ್ಯ ಪರಿಸ್ಥಿತಿ ಬಿಗಡಾಯಿಸಿದ ಹಿನ್ನೆಲೆಯಲ್ಲಿ ತಕ್ಷಣವೇ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ನಾಡಿನ ಗಣ್ಯರಿಗೆ ಮಾಹಿತಿ ನೀಡಲಾಯಿತು.

ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿಯ ನಿರ್ಮಲಾನಂದನಾಥ ಶ್ರೀಗಳ ಮಾರ್ಗದರ್ಶನದಲ್ಲಿ ಮಠದ ಆವರಣದಲ್ಲೇ ಉನ್ನತ ಮಟ್ಟದ ಸಭೆ ನಡೆಸಲಾಯಿತು.

ಸಭೆಯಲ್ಲಿ ಮುಖ್ಯಮಂತ್ರಿಯವರು, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಗೃಹ ಸಚಿವ ಎಂ.ಬಿ. ಪಾಟೀಲ್, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ಕೇಂದ್ರ ಸಚಿವ ಸದಾನಂದಗೌಡ, ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಭಾಗವಹಿಸಿದ್ದರು. ಶ್ರೀಗಳ ಸಮ್ಮುಖದಲ್ಲಿ ತೆಗೆದುಕೊಂಡ ನಿರ್ಣಯದಂತೆ ರಾಜಕೀಯ ಮುಖಂಡರುಗಳು ನಂತರ ಮಾಧ್ಯಮ ಗೋಷ್ಠಿಯಲ್ಲಿ ಶ್ರೀ ಡಾ|| ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾಗಿದ್ದನ್ನು ಅಧಿಕೃತವಾಗಿ ಪ್ರಕಟಿಸಿದರು.

ಮಕ್ಕಳ ಭೋಜನ ನಂತ್ರ ಸುದ್ದಿ ಪ್ರಕಟಿಸಿ…!

ತುಮಕೂರು: ತ್ರಿವಿಧ ದಾಸೋಹದ ಮೂಲಕವೇ ಜಗತ್ತಿನಲ್ಲಿ ಸಿದ್ಧಗಂಗಾ ಮಠ ಪ್ರಖ್ಯಾತಿ ಪಡೆದಿದೆ. ಇನ್ನು ಮಠದ ಶ್ರೀಗಳಾದ ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯ ವೇಳೆಯೂ ಮಾನವೀಯತೆ ಮೆರೆದಿದ್ದಾರೆ. ಮಕ್ಕಳೆಂದರೆ ಶಿವಕುಮಾರ ಸ್ವಾಮೀಜಿಗಳಿಗೆ ಹೆಚ್ಚು ಮಮತೆ. ಬದುಕಿನ ಹೆಚ್ಚಿನ ಕ್ಷಣಗಳನ್ನು ಶ್ರೀಗಳು ಮಕ್ಕಳ ಜೊತೆಯೇ ಕಳೆದಿದ್ದರು. ಹೀಗಾಗಿ ತಾವು ಮೃತಪಟ್ಟ ಸುದ್ದಿಯನ್ನು ಮಕ್ಕಳು ಮಧ್ನಾಹ್ನದ ಭೋಜನ ಸ್ವೀಕರಿಸಿದ ನಂತರ ಪ್ರಕಟಿಸಬೇಕು ಎಂದು ಮೊದಲೇ ಮಠದ ಸಿಬ್ಬಂದಿಗೆ ತಿಳಿಸಿದ್ದರು ಎಂದು ಹೇಳಲಾಗುತ್ತಿದೆ. ಶಿವಕುಮಾರ ಸ್ವಾಮೀಜಿಗಳು ಬೆಳಿಗ್ಗೆ 11.44ಕ್ಕೆ ಶಿವೈಕ್ಯರಾಗಿದ್ದರೂ ಆ ಸುದ್ದಿಯನ್ನು ಶ್ರೀಗಳ ಆಶಯದಂತೆಯೇ ತಕ್ಷಣ ಪ್ರಕಟಿಸಲಿಲ್ಲ. ಮಧ್ಯಾಹ್ನ ವಿದ್ಯಾರ್ಥಿ ಗಳು ಭೋಜನ ಸ್ವೀಕರಿಸಿದ ಬಳಿಕವಷ್ಟೆ ಮಧ್ಯಾಹ್ನ 1.50ಕ್ಕೆ ಶ್ರೀಗಳು ಲಿಂಗೈಕ್ಯರಾದ ಸುದ್ದಿಯನ್ನು ಅಧಿಕೃತವಾಗಿ ಪ್ರಕಟಿಸಲಾಯಿತು.

ಪ್ರಶಸ್ತಿಗಳು: ಕಾಯಕ ಯೋಗಿ ಸಿದ್ದಗಂಗಾ ಶ್ರೀಗಳಿಗೆ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿದೆ. 100ನೇ ವರ್ಷದ ಹುಟ್ಟುಹಬ್ಬ ಮತ್ತು ಕರ್ನಾಟಕ ಸುವರ್ಣ ಮಹೋತ್ಸವ ಸಮಯದಲ್ಲಿ ಸರ್ಕಾರದಿಂದ ಕರ್ನಾಟಕ ರತ್ನ ಹಾಗೂ 2015ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡುವ ಮೂಲಕ ಭಾರತ ಸರ್ಕಾರ ಗೌರವಿಸಿತ್ತು.

ಬಸ್ ವ್ಯವಸ್ಥೆ
ಸಿದ್ಧಗಂಗಾ ಶ್ರೀಗಳ ಅಂತಿಮ ದರ್ಶನಕ್ಕೆ ಆಗಮಿಸಲು ಜಿಲ್ಲೆಯ ಪ್ರತಿ ಹಳ್ಳಿಗಳಿಂದಲೂ ಪೂರಕ ಬಸ್ ವ್ಯವಸ್ಥೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ಮಠದ ಆವರಣದಲ್ಲಿ ನಡೆದ ಉನ್ನತ ಮಟ್ಟದ ಸಭೆಯ ನಂತರ ತುಮಕೂರು ಜಿಲ್ಲೆಯಲ್ಲಿ ತಕ್ಷಣದಿಂದ ರಜೆ ಘೋಷಣೆ ಮಾಡಿದ ಅವರು, ಶ್ರೀಗಳ ದರ್ಶನ ಪಡೆಯಲು ಭಕ್ತರು ಸಂಯಮ ದಿಂದ ವರ್ತಿಸಬೇಕು ಎಂದು ಮನವಿ ಮಾಡಿಕೊಂಡರು.

Translate »