ಬೆಂಗಳೂರು: ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ವೀರಾಪುರ, ಸಿದ್ಧಗಂಗೆಯ ಮಹಾಯೋಗಿ ಶಿವಕುಮಾರ ಸ್ವಾಮೀಜಿಗಳ ಹುಟ್ಟೂರು. ಶಿವಗಂಗೆಯ ಬೆಟ್ಟದ ತಪ್ಪಲಿನಲ್ಲಿರುವ ಈ ಹಳ್ಳಿಗೆ ನಾಡಿನ ಭೂಪಟದಲ್ಲಿ ವಿಶೇಷ ಸ್ಥಾನಮಾನವಿದೆ.
ವೀರಾಪುರದ ಹೊನ್ನೇಗೌಡ, ಗಂಗಮ್ಮ ದಂಪತಿಯ 13 ಮಕ್ಕಳಲ್ಲಿ ಒಬ್ಬರಾದ ಶಿವಣ್ಣ, ಏಪ್ರಿಲ್ 1, 1907 ರಲ್ಲಿ ಜನ್ಮ ತಳೆದರು. ವೀರಾಪುರ, ಪಾಲನಹಳ್ಳಿಯಲ್ಲಿ ಬಾಲ್ಯ ಕಳೆದ ನಂತರ ನಾಗವಲ್ಲಿಯಲ್ಲಿ ಮಾಧ್ಯಮಿಕ ಶಿಕ್ಷಣ. 1919ರಲ್ಲಿ ಕನ್ನಡ ಲೋಯರ್ ಸೆಕೆಂಡರಿ ಪರೀಕ್ಷೆ, 1921ರಲ್ಲಿ ಇಂಗ್ಲೀಷ್ ಲೋಯರ್ ಸೆಕೆಂಡರಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು. ಅಣ್ಣ ಲಿಂಗಪ್ಪನ ಜತೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜು ಸೇರ್ಪಡೆಯಾದ ಅವರು ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದರು.
ಈ ಸಂದರ್ಭದಲ್ಲಿ ಪ್ಲೇಗ್ ರೋಗ ಕಾಣಿಸಿಕೊಂಡು ಊರಿಗೆ ಹಿಂದಿರುಗುವಂತಾಯಿತು.
ಅಣ್ಣ ಲಿಂಗಪ್ಪ ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿ ಊರು ಸೇರಿದರು. ಆಗ ಊಟ, ವಸತಿಗಾಗಿ ಶ್ರೀಮಠದ ಆಶ್ರಯ ಬಯಸಬೇಕಾಯಿತು. ಉದ್ಧಾನ ಶಿವಯೋಗಿಗಳ ಉತ್ತರಾಧಿ ಕಾರಿಯಾಗಿ ನೇಮಕಗೊಂಡಿದ್ದ ಮರುಳಾರಾಧ್ಯ ಶ್ರೀಗಳ ಕಣ್ಣಿಗೆ ಆಗ ಶಿವಣ್ಣ ಬೀಳುತ್ತಾರೆ. 1927ರಲ್ಲಿ ಮೆಟ್ರಿಕ್ಯುಲೇಶನ್ ನಂತರ ಬಿ.ಎ., ಆನರ್ಸ್ ವ್ಯಾಸಂಗಕ್ಕೆ ಬೆಂಗಳೂರಿಗೆ ತೆರಳುತ್ತಾರೆ. ಸೆಂಟ್ರಲ್ ಕಾಲೇಜಿನಲ್ಲಿ ಭೌತಶಾಸ್ತ್ರ, ಗಣಿತ ಐಚ್ಛಿಕ ವಿಷಯವನ್ನು ತೆಗೆದುಕೊಂಡಿದ್ದರು. ಈ ಸಂದರ್ಭದಲ್ಲಿ 1930 ಜನವರಿ 16 ರಂದು ಮರುಳಾರಾಧ್ಯರ ಲಿಂಗೈಕ್ಯ ಸುದ್ದಿ ಶ್ರೀಮಠದಿಂದ ಬಂದಿತ್ತು. ಅಂದು ಮರುಳಾರಾಧ್ಯರ ಅಂತಿಮ ದರ್ಶನ ಪಡೆಯಲು ಶ್ರೀಕ್ಷೇತ್ರಕ್ಕೆ ಬಂದಿದ್ದ ಶಿವಣ್ಣ ಅಚಾನಕ್ ಆಗಿ ಹಿರಿಯ ಶ್ರೀಗಳಾದ ಉದ್ದಾನಶಿವಯೋಗಿಗಳ ಕಣ್ಣಿಗೆ ಬೀಳುತ್ತಾರೆ. ಬಳಿಕ 1930, ಮಾ.3ರಂದು ಸಿದ್ಧಗಂಗಾ ಕ್ಷೇತ್ರದ ಉತ್ತರಾಧಿಕಾರಿಯಾಗಿ ಶಿವಣ್ಣರನ್ನು ಆಯ್ಕೆ ಮಾಡಲಾಗುತ್ತದೆ. ಸನ್ಯಾಸ ದೀಕ್ಷೆ ಪಡೆದ ಶಿವಣ್ಣ ಶಿವಕುಮಾರ ಸ್ವಾಮಿಗಳಾಗುತ್ತಾರೆ.
ಮಠಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ ನಂತರ ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅನನ್ಯವಾದುದು. ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಅನೇಕ ಸಂಸ್ಥೆಗಳನ್ನು ಕಟ್ಟಿ ಮುನ್ನಡೆಸಿದ್ದ ಸ್ವಾಮೀಜಿಗಳು ಕೊನೆಯವರೆಗೂ ಶಿಕ್ಷಣವನ್ನು ಸೇವೆಯೆಂದೇ ತಿಳಿದಿದ್ದರೆ ಹೊರತು ಅದನ್ನು ವ್ಯಾಪಾರ-ಉದ್ಯಮ ಮಾಡಲು ಹೋಗಲೇ ಇಲ್ಲ.
ಉದ್ಧಾನ ಸ್ವಾಮೀಜಿಗಳಿಂದ ಪ್ರಾರಂಭವಾಗಿದ್ದ ಅನ್ನ-ಅರಿವುಗಳ ದಾಸೋಹವನ್ನು ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳು ಸರ್ವರನ್ನೂ ಒಳಗೊಂಡ ದಾಸೋಹವನ್ನಾಗಿ ವಿಸ್ತರಿಸಿದರು. ಸ್ವಾಮೀಜಿಗಳ ತುಮಕೂರಿನ ಸಿದ್ಧಗಂಗಾ ಮಠ ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳ ನೇತೃತ್ವದಲ್ಲಿ ಒಂದು ವಿಶ್ವವಿದ್ಯಾಲಯವೇ ಯಾಕೆ, ಒಂದು ಸರ್ಕಾರವೇ ಮಾಡಬೇಕಾಗಿರುವ ಕೆಲಸವನ್ನು ಮಾಡುತ್ತಾ ಬಂದಿದೆ. ಅಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದು ವಿವಿಧ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಗಳಲ್ಲಿರುವವರು ಇಂದು ವಿಶ್ವದಾದ್ಯಂತ ಇದ್ದಾರೆ. ಸ್ವಾಮೀಜಿಗಳು ಎಂದೂ ಹೆಚ್ಚು ಮಾತನಾಡಿದವರಲ್ಲ, ಮಾತಿಗಿಂತ ಮೌನದಲ್ಲಿಯೇ ಸಾಧನೆ ಮಾಡಿದವರು. ಅವರು ನುಡಿದಂತೆಯೇ ನಡೆದವರು. ಕಾಯಕ ಪ್ರಜ್ಞೆಯನ್ನು ಬಾಳಿ ಬದುಕಿದವರು. ಕೊನೆಗೂ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ಅವರೇ ಸಾಟಿ ಹೊರತು ಆ ಸ್ಥಾನದಲ್ಲಿ ಭವಿಷ್ಯದಲ್ಲಿಯೂ ಇನ್ನೊಬ್ಬರನ್ನು ಊಹಿಸುವುದು ಕಷ್ಟ.