ಕಾವೇರಿ ಪ್ರಾಧಿಕಾರ, ನೀರು ನಿರ್ವಹಣಾ ಸಮಿತಿ ರಚನೆ: ಸುಪ್ರೀಂಕೋರ್ಟ್‍ನಲ್ಲಿ ಮೂಲ ದಾವೆ ಹೂಡಲು ಸರ್ವಪಕ್ಷ ಸಭೆಯಲ್ಲಿ ನಿರ್ಧಾರ
ಮೈಸೂರು

ಕಾವೇರಿ ಪ್ರಾಧಿಕಾರ, ನೀರು ನಿರ್ವಹಣಾ ಸಮಿತಿ ರಚನೆ: ಸುಪ್ರೀಂಕೋರ್ಟ್‍ನಲ್ಲಿ ಮೂಲ ದಾವೆ ಹೂಡಲು ಸರ್ವಪಕ್ಷ ಸಭೆಯಲ್ಲಿ ನಿರ್ಧಾರ

July 1, 2018

ಬೆಂಗಳೂರು: ಕಾವೇರಿ ನಿರ್ವಹಣಾ ಪ್ರಾಧಿಕಾರ ಹಾಗೂ ನದಿ ನೀರು ನಿರ್ವಹಣಾ ಸಮಿತಿ ರಚನೆ ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‍ನಲ್ಲಿ ಮೂಲ ದಾವೆ ಹೂಡಲು ಇಂದಿಲ್ಲಿ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ಸರ್ವ ಸಮ್ಮತ ತೀರ್ಮಾನ ತೆಗೆದುಕೊಳ್ಳಲಾಗಿದೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಕೇಂದ್ರ ಸರ್ಕಾರದ ಏಕಪಕ್ಷೀಯ ತೀರ್ಮಾನದ ವಿರುದ್ಧ ಪ್ರತಿಭಟನೆ ಹಾಗೂ ಕಾನೂನು ಹೋರಾಟ ಮಾಡುವ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು.

ಪ್ರಾಧಿಕಾರ ಜುಲೈ 2 ರಂದು ಕರೆದಿರುವ ಮೊದಲ ಸಭೆಗೆ ರಾಜ್ಯದ ಇಬ್ಬರು ಪ್ರತಿನಿಧಿಗಳು ಭಾಗವಹಿಸಿ, ಸರ್ಕಾರದ ನಿರ್ಧಾರವನ್ನು ಮತ್ತು ರಚನೆಗೆ ವಿರೋಧವನ್ನು ವ್ಯಕ್ತಪಡಿಸಲು ಅನುಮತಿ ನೀಡಿದೆ. ಸಭೆಯ ನಿರ್ಧಾರದಂತೆ ಸರ್ಕಾರದ ಪ್ರತಿನಿಧಿಗಳು ಸೋಮವಾರ ಸಭೆಯಲ್ಲಿ ಭಾಗವಹಿಸಿ, ದಾಖಲೆ ಮತ್ತು ಅಂಕಿ ಅಂಶಗಳ ಸಮೇತ ವಾಸ್ತವ ಸ್ಥಿತಿ ಮಂಡಿಸಲಿದ್ದಾರೆ.

ಅಷ್ಟೇ ಅಲ್ಲದೆ ಇದೇ ಸಂದರ್ಭದಲ್ಲಿ ಪ್ರಾಧಿಕಾರದ ರಚನೆ ಮತ್ತು ಸ್ವರೂಪದ ಬಗ್ಗೆಯೂ ಪತ್ರ ಮುಖೇನ ತಮ್ಮ ವಿರೋಧ ವ್ಯಕ್ತಪಡಿಸಲಿದ್ದಾರೆ.
ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬೃಹತ್ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್, ಕೇಂದ್ರ ಸರ್ಕಾರ ರಾಜ್ಯದ ಮನವಿಯನ್ನು ಪರಿಗಣಿಸದೆ, ಕಾವೇರಿ ನಿರ್ವಹಣಾ ಪ್ರಾಧಿಕಾರ ಹಾಗೂ ನದಿ ನೀರು ನಿರ್ವಹಣಾ ಸಮಿತಿ ರಚನೆ ಮಾಡಿದೆ. ಇದರಿಂದ ರಾಜ್ಯಕ್ಕೆ ಹೆಚ್ಚಿನ ನಷ್ಟವಾಗುತ್ತಿರುವುದರಿಂದ ನ್ಯಾಯಾಲಯದಲ್ಲಿ ಹೋರಾಟ ಮಾಡಲಿದ್ದೇವೆ. ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಿದ್ದೇವೆಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಜಲಸಂಪನ್ಮೂಲ ಸಚಿವ ನಿತೀನ್ ಗಡ್ಕರಿ ಅವರನ್ನು ಭೇಟಿ ಮಾಡಿದ ವೇಳೆ ಪ್ರಾಧಿಕಾರ ಮತ್ತು ಸಮಿತಿ ರಚನೆ ಮಾಡುವುದಕ್ಕೆ ಸಮಯಾವಕಾಶ ಕೇಳಿದ್ದೇವೆ.

ನಮ್ಮ ವಾದ ಆಲಿಸುವವರೆಗೂ ಕೇಂದ್ರವು ಯಾವುದೇ ರೀತಿಯ ತೀರ್ಮಾನ ತೆಗೆದುಕೊಳ್ಳಬಾರದೆಂಬುದು ನಮ್ಮ ಆಗ್ರಹವಾಗಿತ್ತು. ಆದರೆ, ನಮ್ಮ ಮನವಿಗೂ ಸ್ಪಂದಿಸದೆ ಅಧಿಸೂಚನೆ ಹೊರಡಿಸಿರುವುದು ಸರಿಯಲ್ಲ. ಹೀಗಾಗಿ ಕಾನೂನು ಹೋರಾಟ ಅನಿವಾರ್ಯ ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.

ನಮಗೆ ಯಾವ ರೀತಿ ಅನ್ಯಾಯವಾಗಿದೆ ಎಂಬುದನ್ನು ಅಧ್ಯಯನ ನಡೆಸಿದ ಬಳಿಕ ಸುಪ್ರೀಂಕೋರ್ಟ್‍ನಲ್ಲಿ ರಾಜ್ಯದ ಪರ ಪಾಲಿ ನಾರೀಮನ್ ತಂಡ ವಾದ ಮಂಡಿಸಲಿದೆ. ರಾಜ್ಯದ ಒಟ್ಟು 40 ಸಂಸದರು ಜೂನ್ 18ರಿಂದ ಆರಂಭವಾಗುವ ಲೋಕಸಭೆ ಅಧಿವೇಶನದಲ್ಲಿ ಕಾವೇರಿ ವಿಷಯದ ಬಗ್ಗೆ ಸದನದಲ್ಲಿ ಹೊರಾಟ ಮಾಡುವುದಾಗಿ ಆಶ್ವಾಸನೆ ನೀಡಿದ್ದಾರೆ. ಬಿಜೆಪಿ ಕೇಂದ್ರ ಸಚಿವ ಅನಂತ್‍ಕುಮಾರ್ ಸಹ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ ಎಂದರು.

ಕೇಂದ್ರದ ಏಕಪಕ್ಷೀಯ ನಿರ್ಧಾರ ಕುರಿತು ರಾಜ್ಯವು ನ್ಯಾಯಾಲಯದ ಮೊರೆ ಹೋಗಬೇಕೆಂಬ ಅಭಿಪ್ರಾಯವೂ ಸಭೆಯಲ್ಲಿ ವ್ಯಕ್ತವಾಗಿದ್ದು. ಹಿರಿಯ ನ್ಯಾಯವಾದಿ ನಾರಿಮನ್ ಅವರ ಜೊತೆ ಚರ್ಚಿಸಿದ ನಂತರ ರಾಜ್ಯವು ಕೇಂದ್ರದ ನಡೆಯ ವಿರುದ್ಧ ಸರ್ವೋಚ್ಛ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದರು.

ರಾಜ್ಯಕ್ಕಾಗಿರುವ ಅನ್ಯಾಯದ ವಿರುದ್ಧ ಪ್ರತಿಭಟನೆ ಮೂಲಕ ಕೇಂದ್ರವನ್ನು ಎಚ್ಚರಿಸಲು ನಿರ್ಧರಿಸಲಾಗಿದೆ. ನಮ್ಮ ಸಂಸದರು ಸಂಸತ್‍ನ ಒಳ, ಹೊರಗೆ ಹೋರಾಡಲಿದ್ದಾರೆ.30 ದಿನದ ಅಧಿವೇಶನದಲ್ಲಿ ನಮ್ಮ ವಾದವನ್ನು ನಾವು ಮಂಡಿಸಬೇಕು. ಸಂಸತ್ತಿನಲ್ಲಿ ನಮ್ಮ ಕೂಗು ಮುಟ್ಟಬೇಕಿದೆ. ಇದಕ್ಕೆ ರಾಜ್ಯದ ಸಂಸದರೆಲ್ಲ ಸಜ್ಜಾಗಿದ್ದಾರೆ. ಅವರಿಗೆ ಯಾವ ದಾಖಲೆ ಬೇಕೋ ಅದನ್ನು ನಾವು ಒದಗಿಸುತ್ತೇವೆ. ನ್ಯಾಯಾಲಯದಲ್ಲಿ ಮೂಲ ದಾವೆ ಹೂಡಲು ತೀರ್ಮಾನಿಸಿದ್ದೇವೆ ಎಂದರು.

ಪ್ರಾಧಿಕಾರ ಮತ್ತು ಸಮಿತಿ ರಚನೆ ನಿಯಮಾವಳಿ ಬದಲಾವಣೆಗೂ ಒತ್ತಾಯಿಸಬಹುದಾಗಿದೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ಅವರು, ರಾಜ್ಯಕ್ಕೆ ನ್ಯಾಯ ಒದಗಿಸಲು ಪಕ್ಷ ಭೇದ ಮರೆತು ಎಲ್ಲ ವಿಷಯಗಳ ಬಗ್ಗೆ ಸಂಬಂಧಪಟ್ಟ ಕೇಂದ್ರ ಸಚಿವರೊಂದಿಗೆ ಸಮಾಲೋಚಿಸುವ ಭರವಸೆ ನೀಡಿದ್ದಾರೆ.

ರಾಜ್ಯದ ಹಿತ ಕಾಪಾಡಲು ಎಲ್ಲ ರಾಜಕೀಯ ಪಕ್ಷಗಳು ಸರ್ವಾನುಮತದ ಬೆಂಬಲ ವ್ಯಕ್ತಪಡಿಸಿವೆ, ನೆಲ-ಜಲ ವಿಚಾರದಲ್ಲಿ ಸರ್ವಾನುಮತದ ಅಭಿಪ್ರಾಯಕ್ಕೆ ಬದ್ಧವಾಗಿರುವುದಾಗಿ ತಿಳಿಸಿವೆ.

ಕಾವೇರಿ ಜಲವಿವಾದ ಕುರಿತ ಸುಪ್ರೀಂ ಕೋರ್ಟ್ ತೀರ್ಪಿನಿಂದ ರಾಜ್ಯಕ್ಕೆ 14.75 ಟಿಎಂಸಿ ಹೆಚ್ಚುವರಿ ನೀರು ಸಿಕ್ಕಿರಬಹುದು, ಆದರೆ ಪ್ರಾಧಿಕಾರ ಮತ್ತು ಸಮಿತಿ ರಚನೆಯಿಂದ ಆಗಬಹುದಾದ ತೊಂದರೆ ಎದುರಿಸಲು ರಾಜಕೀಯ ಪಕ್ಷಗಳ ನಾಯಕರು ಹಾಗೂ ಕಾನೂನು ತಜ್ಞರು ಹಲವು ಸಲಹೆ ನೀಡಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.

ಸರ್ವಪಕ್ಷ ಸಭೆಗೆ ಮಾಜಿ ಮುಖ್ಯಮಂತ್ರಿ ಹಾಗೂ ಆಡಳಿತ ಪಕ್ಷಗಳ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಗೈರು ಹಾಜರಾಗಿದ್ದರು.

ಉಳಿದಂತೆ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್, ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ, ಸಂಸದರಾದ ಪ್ರತಾಪ್ ಸಿಂಹ, ಸದಾನಂದಗೌಡ, ವೀರಪ್ಪ ಮೊಯ್ಲಿ, ಡಿ.ಕೆ.ಸುರೇಶ್, ಮುದ್ದಹನುಮೇಗೌಡ, ಕುಪೇಂದ್ರರೆಡ್ಡಿ, ಕೆ.ಹೆಚ್.ಮುನಿಯಪ್ಪ, ಸಚಿವರಾದ ಸಿ.ಎಸ್.ಪುಟ್ಟರಾಜು, ಎನ್. ಮಹೇಶ, ಡಿ.ಸಿ.ತಮ್ಮಣ್ಣ, ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಶಿವಲಿಂಗೇಗೌಡ, ರಾಜ್ಯಸಭಾ ಸದಸ್ಯರಾದ ಸೈಯ್ಯದ್, ಕೆ.ಸಿ.ರಾಮಮೂರ್ತಿ, ಅಡ್ವೊಕೇಟ್ ಜನರಲ್ ಉದಯ ಹೊಳ್ಳ, ಮಾಜಿ ಶಾಸಕ ವೈ.ಎ. ನಾರಾಯಣಸ್ವಾಮಿ, ವಕೀಲ ಬ್ರಿಜೇಶ್ ಕಾಳಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.

Translate »