ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಬಂಡಾಯ ಕಹಳೆ
ಮೈಸೂರು

ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಬಂಡಾಯ ಕಹಳೆ

December 24, 2018

ಬೆಂಗಳೂರು: ರಾಜ್ಯ ಸಂಪುಟ ಪುನರ್ ರಚನೆಯ ನಂತರ ಕಾಂಗ್ರೆಸ್‍ನಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಹಿರಿಯ ಕಾಂಗ್ರೆಸ್ ಮುಖಂಡ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಬಂಡಾಯದ ಕಹಳೆ ಊದಿದ್ದಾರೆ.

ಖಾಸಗಿ ಸುದ್ದಿವಾಹಿನಿಗೆ ವಿಶೇಷ ಸಂದರ್ಶನ ನೀಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ನಾನು ಬೇಡವಾಗಿದ್ದೀನಿ ಅನ್ನಿಸುತ್ತಿದೆ. ಇಬ್ಬರು ಮುಖಂಡರು ನನಗೆ ಮಂತ್ರಿ ಸ್ಥಾನ ತಪ್ಪಿಸಿದ್ದಾರೆ. ಸಂಪುಟ ಪುನರ್ ರಚನೆಯಲ್ಲಿ ಅನ್ಯಾಯವಾಗಿದೆ ಎಂದಿದ್ದಾರೆ. ಕೆಲವರು ಲಾಬಿ ಮಾಡಿ ತಮಗೆ ಬೇಕಾದವರಿಗೆ ಮಂತ್ರಿ ಸ್ಥಾನ ಕೊಟ್ಟಿದ್ದಾರೆ. ಕೆಲವರು ಜಗಳವಾಡಿ ಮಂತ್ರಿ ಸ್ಥಾನ ಪಡೆದುಕೊಂಡಿದ್ದಾರೆ. ಪಕ್ಷದಲ್ಲಿ ಮತ್ತು ಸರ್ಕಾರದಲ್ಲಿ ಮಾನದಂಡ ಸರಿಯಾಗಿರಬೇಕು. ಅದು ಸರಿಯಿಲ್ಲ ದಿದ್ದಾಗ ಹೇಳುತ್ತೇನೆ. ಪಕ್ಷದ ಹೈಕಮಾಂಡ್ ಅದನ್ನು ಸರಿಪಡಿಸಿಕೊಳ್ಳಬೇಕು ಎಂದ ಅವರು, ನಾನಂತೂ ಸುಮ್ಮನೆ ಕೂರುವುದಿಲ್ಲ. ಎಲ್ಲಾ ವಿಷಯ ಗಳನ್ನು ಮಾಧ್ಯಮದ ಮುಂದೆ ಹೇಳಲಾಗುವುದಿಲ್ಲ. ಮುಂದೆ ಏನೋ ಆಗುತ್ತೋ ಗೊತ್ತಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

ಕಾಲಚಕ್ರದಲ್ಲಿ ಕೆಲವರ ಕೈ ಮೇಲಾಗಿದೆ. ಹಾಗಂತ ಮುಂದೆಯೂ ಹೀಗೆ ಇರುವುದಿಲ್ಲ ಎಂದು ಎಚ್ಚರಿಕೆ ನೀಡಿದ ಅವರು, ಪಕ್ಷದಲ್ಲಿ ಅನ್ಯಾಯ ವಾದಾಗ ನೋಡುತ್ತಾ ಸುಮ್ಮನೆ ಕುಳಿತಿರುವ ಜಾಯಮಾನ ನನ್ನದಲ್ಲ ಎಂದಿದ್ದಾರೆ. ಇಬ್ಬರು ನಾಯಕರು ನನಗೆ ಮಂತ್ರಿ ಸ್ಥಾನ ತಪ್ಪಿಸಿದ್ದು, ಅವರು ಯಾರು ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ ಎಂದು ಹೇಳಿದ ಅವರು, ಮಂತ್ರಿ ಸ್ಥಾನ ಸಿಗದೇ ಹೋಗಿದ್ದಕ್ಕೆ ಆಕಾಶವೇನೂ ಕಳಚಿ ತಲೆಯ ಮೇಲೆ ಬಿದ್ದುಬಿಡುವುದಿಲ್ಲ. ಇದರಿಂದಾಗಿ ನನ್ನ ರಾಜಕೀಯ ಜೀವನವೇ ಮುಗಿದು ಹೋಯಿತು ಅಂದುಕೊಂಡರೆ ಅದು ಕೇವಲ ಭ್ರಮೆಯಷ್ಟೇ ಎಂದು ಅವರು ಹೇಳಿದರು. `ಯಾರನ್ನೋ ಮಂತ್ರಿ ಮಾಡಲು ಸರ್ಕಾರ ಇಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ ಅವರು, ಈ ಮಾತು ನನಗೆ ಅನ್ವಯಿಸುತ್ತದೆ. ನನಗೆ ಮಾತ್ರವಲ್ಲ, ನಾಲ್ಕು ಬಾರಿ ಸಚಿವರಾಗಿರುವ ಆರ್.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್, ಕೆ.ಜೆ.ಜಾರ್ಜ್, ಡಾ. ಜಿ.ಪರಮೇಶ್ವರ್ ಅವರುಗಳಿಗೂ ಅನ್ವಯಿಸಬೇಕಲ್ಲವೇ? ಎಂದು ಪ್ರಶ್ನಿಸಿದ ಅವರು, ಡಾ. ಜಿ.ಪರಮೇಶ್ವರ್ ಅವರಿಗೆ ತುಮಕೂರು ಮತ್ತು ಬೆಂಗಳೂರು ಜಿಲ್ಲೆಗಳ ಉಸ್ತುವಾರಿ ಯಾಕೆ ಕೊಟ್ಟಿದ್ದಾರೆ ಎಂಬುದು ಗೊತ್ತಿಲ್ಲ ಎಂದು ತಿವಿದರು.

ನನ್ನ ಮಗಳು ಮೊದಲ ಬಾರಿಗೆ ಶಾಸಕಿಯಾಗಿದ್ದಾಳೆ. ಎರಡನೇ ಬಾರಿ ಹಾಗೂ ಹೆಚ್ಚು ಬಾರಿ ಶಾಸಕರಾದವರನ್ನು ಬಿಟ್ಟು ನನ್ನ ಮಗಳಿಗೆ ಯಾಕೆ ಸಂಸದೀಯ ಕಾರ್ಯದರ್ಶಿ ಸ್ಥಾನ ಕೊಟ್ಟರೋ ಗೊತ್ತಿಲ್ಲ. ಆದರೆ ಆಕೆ ಆ ಸ್ಥಾನವನ್ನು ನಿರಾಕರಿಸಿದ್ದಾಳೆ. ಆಕೆಯ ತೀರ್ಮಾನ ಸರಿ ಎಂದೇ ಎನಿಸುತ್ತಿದೆ. ಇಲ್ಲದಿದ್ದರೆ ಮಗಳು ಸಂಸದೀಯ ಕಾರ್ಯದರ್ಶಿ ಸ್ಥಾನ ಪಡೆದದ್ದಕ್ಕೂ ನನ್ನ ಮೇಲೆಯೇ ತಪ್ಪು ಹೊರಿಸುತ್ತಿದ್ದರು ಎಂದು ಅವರು ಹೇಳಿದರು. ಕಾಂಗ್ರೆಸ್ ಪಕ್ಷ ಯಾರ ಆಸ್ತಿಯೂ ಅಲ್ಲ. ಲಕ್ಷಾಂತರ ಕಾರ್ಯಕರ್ತರು ಕಷ್ಟಪಟ್ಟು ಕಟ್ಟಿದ ಪಕ್ಷ ಅದು. ಇಲ್ಲಿ ಯಾರನ್ನು ಯಾರೂ ತಿಳಿಯಲು ಸಾಧ್ಯವಿಲ್ಲ. ಪಕ್ಷದಲ್ಲಿ ಮುಂದೆ ಏನು ಮಾಡಬೇಕು ಎಂಬುದೂ ನಮಗೂ ಗೊತ್ತಿದೆ ಎಂದ ರೆಡ್ಡಿ, ನಾನು ಕಟ್ಟಾ ಕಾಂಗ್ರೆಸ್ಸಿಗ. ಯಾವುದೇ ಕಾರಣಕ್ಕೂ ಬೇರೆ ಪಕ್ಷ ಸೇರುವುದಿಲ್ಲ. ಪಕ್ಷದಲ್ಲಿದ್ದುಕೊಂಡೇ ಎಲ್ಲವನ್ನೂ ಸರಿ ಮಾಡಲು ಪ್ರಯತ್ನಿಸುತ್ತೇನೆ. ಹಾಗಂತ ಗುಂಪುಗಾರಿಕೆ ಮಾಡುವುದಿಲ್ಲ. ದೆಹಲಿಗೂ ಹೋಗುವುದಿಲ್ಲ. ಸರ್ಕಾರ ರಚನೆಯಾದ 7 ತಿಂಗಳಲ್ಲಿ ನಾನು ಅಧಿಕಾರ ಬೇಕೆಂದು ಯಾರ ಬಳಿಯೂ ಹೋಗಲಿಲ್ಲ. ಯಾರ್ಯಾರೋ ಗುಂಪು ಕಟ್ಟಿಕೊಂಡು ಸಭೆ ನಡೆಸಿದರು. ನಾನು ಯಾವ ಗುಂಪಿನ ಸಭೆಗೂ ಹೋಗಲಿಲ್ಲ. ನನ್ನಷ್ಟಕ್ಕೇ ನಾನಿದ್ದೆ. ಹಾಗಂತ ನನ್ನನ್ನು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಅದಕ್ಕಾಗಿ ನನ್ನ ವ್ಯಾಪ್ತಿಯಲ್ಲಿ ನಾನು ಕೆಲಸ ಮಾಡುತ್ತೇನೆ ಎಂದು ಹೇಳಿದ ಅವರು, ಯಾವುದೇ ಕಾರಣಕ್ಕೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವುದಿಲ್ಲ. ಲೋಕಸಭೆ ಪ್ರವೇಶಿಸಲು ಯುವಕರಾಗಿರಬೇಕು. ನಾನು ಯುವಕನಲ್ಲ. ನನಗೆ ಹಿಂದಿಯೂ ಬರುವುದಿಲ್ಲ. ಹೀಗಿರುವಾಗ ನಾನ್ಯಾಕೆ ಲೋಕಸಭೆಗೆ ಸ್ಪರ್ಧಿಸಲಿ ಎಂದು ಅವರು ಪ್ರಶ್ನಿಸಿದರು.

Translate »